7

ಅತ್ಯಾಧುನಿಕ ತಂತ್ರಜ್ಞಾನದ ಸಾಂಸ್ಕೃತಿಕ ಕೇಂದ್ರ

Published:
Updated:

ದಾವಣಗೆರೆ: ಜರ್ಮನ್‌ ತಂತ್ರಜ್ಞಾನವನ್ನು ಬಳಸಿಕೊಂಡು ₹ 20 ಕೋಟಿ ವೆಚ್ಚದಲ್ಲಿ ಎಸ್‌.ಎಸ್‌.ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರ ಕಟ್ಟಡ ನಿರ್ಮಿಸಲಾಗಿದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಬಿಐಇಟಿ ಕಾಲೇಜು ಆವರಣದಲ್ಲಿ ನೂತನವಾಗಿ ನಿರ್ಮಾಣ ವಾಗಿರುವ ಎಸ್‌.ಎಸ್‌ .ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಾಪೂಜಿ ಶಿಕ್ಷಣ ಸಂಸ್ಥೆಯ ಕಾಲೇಜುಗಳ ಗ್ರಂಥಾಲಯ, ಸಭಾಂಗಣಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ತೋಟಗಾರಿಕೆ ಇಲಾಖೆಯಲ್ಲಿ ಹೆಚ್ಚು ಕೆಲಸವಿರುತ್ತದೆ. ಕೃಷಿ ಇಲಾಖೆ ಮಂತ್ರಿಯಾಗುವುದಕ್ಕಿಂತ ತೋಟಗಾರಿಕೆ ಇಲಾಖೆ ಮಂತ್ರಿಯಾಗುವುದು ಉತ್ತಮ ಎಂದರು. ಪಾಲಿಕೆ ವ್ಯಾಪ್ತಿಯ 150 ಉದ್ಯಾನಗಳಲ್ಲಿ 60 ಉದ್ಯಾನಗಳನ್ನು ತೋಟಗಾರಿಕೆ ಇಲಾಖೆಯಿಂದ ಅಭಿವೃದ್ಧಿ ಪಡಿಸಲಾಗಿದೆ ಎಂದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ ಮಾತನಾಡಿ, ‘ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುವಲ್ಲಿ ಕರ್ನಾಟಕ ರಾಜ್ಯ ಹೆಸರಾಗಿದೆ. ದೇಶ, ವಿದೇಶಗಳಿಂದಲೂ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಇಲ್ಲಿಗೆ ಬರುತ್ತಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಗುಣಮಟ್ಟದ ತಾಂತ್ರಿಕ ಶಿಕ್ಷಣ ಇಲ್ಲಿ ದೊರೆಯುತ್ತಿದೆ’ ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ಆಯುಕ್ತ ಪ್ರಭಾಷ್‌ ಚಂದ್ರ ರೆ ಮಾತನಾಡಿ, ‘ತೋಟಗಾರಿಕೆಯಲ್ಲಿ ಉತ್ತರಪ್ರದೇಶ ರಾಜ್ಯ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. ನಮಲ್ಲಿ ಸುಮಾರು 20.32 ಲಕ್ಷ ಹೆಕ್ಟೇರ್‌ ತೋಟಗಾರಿಕೆ ಪ್ರದೇಶವಿದೆ’ ಎಂದು ಹೇಳಿದರು. ಈ ಬಾರಿ ಬಜೆಟ್‌ನಲ್ಲಿ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಇಲಾಖೆಗೆ ₹ 1,200 ಕೋಟಿ ಅನುದಾನ ನೀಡಲಾಗಿದೆ.

ಇದರಲ್ಲಿ ತೋಟಗಾರಿಕೆಗೆ ₹ 200 ಕೋಟಿ ಹಾಗೂ ಹನಿ ನೀರಾವರಿಗೆ ₹ 400 ಕೋಟಿ ಅನುದಾನ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ಆರ್‌.ರಮಾನಂದ, ಉಪಾಧ್ಯಕ್ಷ ಎಂ.ರೇವಣಸಿದ್ದಪ್ಪ, ಎಸ್‌.ಎಸ್‌.ಜಯಣ್ಣ, ಮಾಕನೂರು ಮಲ್ಲಿ ಕಾರ್ಜುನ, ಕಿರುವಾಡಿ ಗಿರಿಜಮ್ಮ, ವೈ.ವೃಷಭೇಂದ್ರಪ್ಪ, ಡಾ.ಎಚ್‌.ಬಿ. ಅರವಿಂದ್‌, ವಿರೂಪಾಕ್ಷಪ್ಪ ಇದ್ದರು. ಬಾಪೂಜಿ ವಿದ್ಯಾಸಂಸ್ಥೆಯ ಸದಸ್ಯ ಎ.ಎಸ್‌.ವೀರಣ್ಣ ಸ್ವಾಗತಿಸಿದರು.

ಬಿತ್ತನೆ ಬೀಜಗಳ ಕಿಟ್‌ ವಿತರಣೆ

ಹೊನ್ನಾಳಿ, ಹರಪನಹಳ್ಳಿ ಹಾಗೂ ಜಗಳೂರು ತಾಲ್ಲೂಕುಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಾಗಿ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರವನ್ನು ಲೋಕಾರ್ಪಣೆ ಮಾಡಿ, ಕೃಷಿಭಾಗ್ಯ ಯೋಜನೆಯಡಿ ತರಕಾರಿ ಬಿತ್ತನೆ ಬೀಜಗಳ ಕಿಟ್‌ಗಳನ್ನು ರೈತರಿಗೆ ವಿತರಿಸಿ ಹೊನ್ನಾಳಿಗೆ ತೆರಳಿದರು. ಇದೇ ಸಮಯದಲ್ಲಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯ

ಸ್ಮಾರ್ಟ್‌ ಸಿಟಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಈಗಾಗಲೇ ₹ 760 ಕೋಟಿ ಅನುದಾನ ಬಂದಿದೆ. ಇದಕ್ಕೆ ₹ 32 ಕೋಟಿ ಬಡ್ಡಿ ಕೂಡ ಬಂದಿದೆ. ಆದರೆ, ₹ 30 ಕೋಟಿ ಸಹ ಖರ್ಚಾಗಿಲ್ಲ. ಇತ್ತೀಚಿಗೆ ₹ 10 ಕೋಟಿ ವೆಚ್ಚದ ಕಾಮಗಾರಿಗೆ ಮಾತ್ರ ಟೆಂಡರ್‌ ಕರೆಯಲಾಗಿದೆ. ಯೋಜನೆ ಜಾರಿಯಲ್ಲಿ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜನತೆ 24X7 ನೀರು ಪೂರೈಸುವ ಸಂಬಂಧ ₹ 470 ಕೋಟಿ ವೆಚ್ಚದ ಜಲಸಿರಿ ಯೋಜನೆ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ಕೂಡ ಮುಗಿದಿವೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದು   ಬೇಸರ ವ್ಯಕ್ತಪಡಿಸಿದರು.

ದುಗ್ಗಮ್ಮನ ದರ್ಶನ ಪಡೆದ ಸಿ.ಎಂ

ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಳಿಗ್ಗೆ ನಗರ ದೇವತೆ ದುರ್ಗಾಂಬಿಕಾ ದೇವಿಯ ದರ್ಶನ ಪಡೆದು ತೆರಳಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry