7

ಕೆರೆ ಸಂರಕ್ಷಣೆಗಾಗಿ ಬೀದಿಗಿಳಿದ ಹಿರಿಯ ನಾಗರಿಕರು

Published:
Updated:

ಹಾಸನ : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಮಂಗಳವಾರ ಸರಣಿ ಪ್ರತಿಭಟನೆಗಳು ನಡೆದವು. ಸತ್ಯಮಂಗಲ, ಚನ್ನಪಟ್ಟಣ ಹಾಗೂ ಹುಣಸಿನಕೆರೆ ಪುನಶ್ಚೇತನಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹಿರಿಯ ನಾಗರಿಕರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ವಿಜಯಪುರದ ದಲಿತ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಜಾಶಕ್ತಿ ಸಮಿತಿ ಧರಣಿ ನಡೆಸಿದರೆ, ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹಿರಿಯ ನಾಗರಿಕರ ವೇದಿಕೆ : ಹಿರಿಯ ನಾಗರಿಕರ ವೇದಿಕೆ, ಹಸಿರು ಭೂಮಿ ಪ್ರತಿಷ್ಠಾನ, ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ, ಬಿಜೆಪಿ ಜಿಲ್ಲಾ ಘಟಕ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ, ಜಿಲ್ಲಾ ವಕೀಲರ ಸಂಘ, ಡಾ. ರಾಜ್‌ ಕುಮಾರ್ ಅಭಿಮಾನಿಗಳ ಸಂಘ, ಕಟ್ಟಡ ಕಾರ್ಮಿಕರ ಸಂಘ, ದಲಿತ ಸಂಘರ್ಷ ಸಮಿತಿ, ರೈತ ಸಂಘ, ಬಾಳೆಹಣ್ಣು ವರ್ತಕರ ಸಂಘದವರು ಕೆರೆಗಳ ಪುನಶ್ಚೇತನಕ್ಕೆ ಆಗ್ರಹಿಸಿ ಹೇಮಾವತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ಬೀರನಹಳ್ಳಿ ಕೆರೆ ಮುಚ್ಚಿ ಕುವೆಂಪು ನಗರ ಬಡಾವಣೆ ನಿರ್ಮಿಸಲಾಗಿದೆ. ಬಸ್‌ ನಿಲ್ದಾಣ ಹಾಗೂ ಇತರೆ ಅಭಿವೃದ್ಧಿ ಹೆಸರಿನಲ್ಲಿ ಚನ್ನಪಟ್ಟಣ ಕೆರೆ ವಿರೂಪಗೊಳಿಸಲಾಗಿದೆ. ಸತ್ಯಮಂಗಲ ಕೆರೆ ಸೌಂದರ್ಯೀಕರಣ ನೆಪದಲ್ಲಿ ನೀರು ನಿಲ್ಲದಂತೆ ಮಾಡಲಾಗಿದೆ. ಕಟ್ಟಡದ ತ್ಯಾಜ್ಯ ಬಿಸಾಡಿ ಹುಣಸಿನಕೆರೆ ಕಲುಷಿತಗೊಳಿಸಲಾಗಿದೆ. ಹಾಗಾಗಿ ನಗರ ಸುತ್ತಮುತ್ತಲ ಹಳ್ಳಿಗಳಲ್ಲಿ ಅಂತರ್ಜಲ ಬರಿದಾಗುತ್ತಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಬಸ್ ನಿಲ್ದಾಣ, ಇತರೆ ಯೋಜನೆಗಳಿಗೆ ಬಳಕೆಯಾಗಿರುವ ಪ್ರದೇಶ ಹೊರತುಪಡಿಸಿ ಚನ್ನಪಟ್ಟಣ ಕೆರೆಯ ಉಳಿದಿರುವ ಜಾಗವನ್ನು ಪುನಶ್ಚೇತನಗೊಳಿಸಿ ಶುದ್ಧ ನೀರು ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ಸತ್ಯಮಂಗಲ ಕೆರೆ ಕೋಡಿಯನ್ನು ಎತ್ತರಿಸಿ, ಕೆರೆಗೆ ಮಳೆ ನೀರು ಸರಾಗವಾಗಿ ಹರಿದು ಬರುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಹುಣಸಿನಕೆರೆ ಶುದ್ಧೀಕರಣ ಮತ್ತು ಪುನಶ್ಚೇತನಕ್ಕೆ ಸಮಗ್ರ ಯೋಜನೆ ರೂಪಿಸಬೇಕು. ಸತ್ಯಮಂಗಲ, ಚನ್ನಪಟ್ಟಣ ಹಾಗೂ ಹಣಸಿನಕೆರೆಗಳ ಅಭಿವದ್ಧಿ ಹೆಸರಿನಲ್ಲಿ ಸರ್ಕಾರ ಮಾಡಿರುವ ಖರ್ಚು–ವೆಚ್ಚಗಳ ವಿವರವನ್ನು ಸಾರ್ವಜನಿಕರಿಗೆ ಪ್ರಕಟಿಸಬೇಕು. ಈ ಮೂರು ಕೆರೆಗಳಿಗೆ ಹೇಮಾವತಿ ಅಥವಾ ಯಗಚಿ ನದಿಯಿಂದ ನಾಲ್ಕು ವರ್ಷಕ್ಕೆ ಒಮ್ಮೆಯಾದರೂ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಹಿರಿಯ ನಾಗರಿಕರ ವೇದಿಕೆ ಸಂಚಾಲಕ ಬಿ.ಕೆ. ಮಂಜುನಾಥ್, ವೈ.ಎಸ್. ವೀರಭದ್ರಪ್ಪ, ಮಹಾಲಕ್ಷ್ಮಮ್ಮ, ಪ್ರತಿಷ್ಠಾನದ ಅಧ್ಯಕ್ಷ ಆರ್.ಪಿ. ವೆಂಕಟೇಶಮೂರ್ತಿ, ಮುಖಂಡ ಮಂಜುನಾಥ ದತ್ತ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರಿತಂ ಜೆ.ಗೌಡ, ಗ್ರಾಮಾಂತರ ಮಂಡಲದ ಅಧ್ಯಕ್ಷ ಅಗಿಲೆ ಯೋಗೇಶ್, ಮಾಜಿ ಶಾಸಕ ಬಿ.ವಿ. ಕರಿಗೌಡ, ಕರವೇ ಪ್ರವೀಣ್‌ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್, ಸಾಹಿತಿ ರೂಪಾ ಹಾಸನ, ಡಾ. ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಬಾಳ್ಳು ಗೋಪಾಲ್‌, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಕೆಪಿಆರ್ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್, ದಸಂಸ ಮುಖಂಡ ಎಚ್.ಕೆ. ಸಂದೇಶ್, ಬಾಳೇಹಣ್ಣು ವರ್ತಕರ ಸಂಘದ ಜಿಲ್ಲಾ ಅಧ್ಯಕ್ಷ ಸಮೀರ್ ಇದ್ದರು.

ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ: ರೈತರ ಕಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಹಾಗೂ ನಷ್ಟ ಅನುಭವಿಸಿರುವ ತೆಂಗು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಜಯ ಕರ್ನಾಟಕ ಸಂಘಟನೆ ಒತ್ತಾಯಿಸಿತು.

ಮುಂಬರುವ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಹೊಸ ಬಸ್ ನಿಲ್ದಾಣ ಸಮೀಪ ರೈಲ್ವೆ ಮೇಲ್ಸೇತುವೆ ಯೋಜನೆ ರಾಜಕೀಯ ಪಕ್ಷಗಳ ಕೆಸರೆರಚಾಟದಿಂದ ವಿಳಂಬವಾಗಿದೆ. ಆಡಳಿತದಲ್ಲಿ ಕನ್ನಡ ಭಾಷೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು. ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ದೀಪಕ್, ಜಿಲ್ಲಾ ಕಾರ್ಯಾಧ್ಯಕ್ಷ ಸಂಗಮ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry