3

ಎತ್ತಿನಹೊಳೆ ಕಾಮಗಾರಿಗೆ ತಡೆ, ನೀರು ಖಾತ್ರಿಗೆ ಪಟ್ಟು

Published:
Updated:
ಎತ್ತಿನಹೊಳೆ ಕಾಮಗಾರಿಗೆ ತಡೆ, ನೀರು ಖಾತ್ರಿಗೆ ಪಟ್ಟು

ಬೇಲೂರು: ಸ್ಥಳೀಯ ರೈತರಿಗೆ ಮಾಹಿತಿ ನೀಡದೆ ಏಕಾಏಕಿ ರಾತ್ರೋ-ರಾತ್ರಿ ಎತ್ತಿನಹೊಳೆ ಕಾಮಗಾರಿ ನಡೆಸಿದ್ದಾರೆ. ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಜೆಡಿಎಸ್ ಮುಖಂಡರು ಹಾಗೂ ರೈತರು ತಾಲ್ಲೂಕಿನ ಹಗರೆ ಸಮೀಪದ ಅಂಗಡಿಹಳ್ಳಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡಬೇಕು. ಹಳೇಬೀಡು ಹಾಗೂ ಮಾದೀಹಳ್ಳಿ ಹೋಬಳಿಗೆ ನೀರು ನೀಡಬೇಕು ಎಂದು ಒತ್ತಾಯಿಸಿದರು.

ಕಾಲುವೆ ಕಾಮಗಾರಿ ಕೆಲಸ ಮಾಡುತ್ತಿದ್ದ ಹಿಟಾಚಿ ಹಾಗೂ ಜೆಸಿಬಿ ವಾಹನಗಳನ್ನು ತಡೆದ ಪ್ರತಿಭಟನಾಕಾರರು, ‘ಕಾಮಗಾರಿ ನಡೆಸುವ ಮೊದಲು ನಮ್ಮ ಗ್ರಾಮಗಳ ಮೂಲಕ ಕಾಮಗಾರಿ ನಡೆಯುವ ನೀಲನಕ್ಷೆ ನೀಡಬೇಕು’ ಎಂದು ಆಗ್ರಹಿಸಿದರು.

‘ಬಹುತೇಕ ರೈತರು ಹೊಲ-ಗದ್ದೆಗಳಲ್ಲಿ ಪೈರುಗಳನ್ನು ಕಟಾವು ಮಾಡಿಲ್ಲ, ನೀವು ಏಕಾಏಕಿ ಬಂದು ಕಾಮಗಾರಿ ನಡೆಸಿದರೆ ಹೇಗೆ? ಈ ಬಗ್ಗೆ ಪೂರ್ಣ ಮಾಹಿತಿ ನೀಡಬೇಕು. ಅಧಿಕಾರಿಗಳು ಸ್ಥಳಕ್ಕೆ ಬರಬೇಕು’ ಎಂದು ಪಟ್ಟು ಹಿಡಿದರು.

‘ಕಾಲುವೆ ಮಾರ್ಗದಲ್ಲಿ ಬೆಲೆ ಬಾಳುವ ಮಾವು, ತೆಂಗು, ಹಲಸು ಮರಗಳು ಇದ್ದು, ಅವುಗಳಿಗೆ ಪರಿಹಾರ ನೀಡಿಲ್ಲ. ಅಲ್ಪ-ಸ್ವಲ್ಪ ಭೂಮಿ ಕಳೆದುಕೊಂಡವರು ಎಲ್ಲಿಗೆ ಹೋಗಿ ಜೀವನ ಮಾಡಬೇಕು ಎಂಬ ಬಗ್ಗೆ ಸಮಸ್ಯೆಗಳು ಇತ್ಯರ್ಥವಾಗುವ ತನಕ ನಾವು ಯಾವ ಕಾರಣಕ್ಕೂ ಎತ್ತಿನಹೊಳೆ ಕಾಮಗಾರಿ ಕೆಲಸ ನಡೆಯಲು ಬಿಡುವುದಿಲ್ಲ’ ಎಂದು ಪ್ರತಿಭಟನಾಕಾರರು ಹೇಳಿದರು.

ಸ್ಥಳೀಯ ರೈತರಾದ ರಾಜಮ್ಮ, ನಂಜಪ್ಪ, ಅಣ್ಣಪ್ಪ ಮಾತನಾಡಿ, ‘ನಮ್ಮ ಭೂಮಿಯ ಮೇಲೆ ಹಾದು ಹೋಗುವ ಎತ್ತಿನಹೊಳೆ ಕಾಮಗಾರಿ ಬಗ್ಗೆ ನಮಗೆ ಕನಿಷ್ಠ ಮಾಹಿತಿಯನ್ನೂ ನೀಡದೇ ಕಾಮಗಾರಿ ನಡೆಸುತ್ತಿದ್ದಾರೆ. ಗುತ್ತಿಗೆದಾರರ ಅಟ್ಟಹಾಸ ಹಾಗೂ ಅಧಿಕಾರಿಗಳ ಉಡಾಫೆ ವರ್ತನೆಯಿಂದಾಗಿ ನಮಗೆ ತೀವ್ರ ಅನ್ಯಾಯವಾಗಿದೆ. ಕೇಳಿದರೆ ಬೇದರಿಕೆ ಹಾಕುತ್ತಾರೆ. ನಮಗೆ ಯಾರ ಬೆಂಬಲವೂ ಇಲ್ಲದಂತಾಗಿದೆ. ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ಅಥಾವ ಪರ್ಯಾಯ ಭೂಮಿ ನೀಡುವ ಬಗ್ಗೆ ಇಲ್ಲಿಯತನಕ ಯಾವ ಅಧಿಕಾರಿಯೂ ಸಭೆ ನಡೆಸಿಲ್ಲ’ ಎಂದು ಅಳಲು ತೋಡಿಕೊಂಡರು.

ಎತ್ತಿನಹೊಳೆ ಯೋಜನೆ ಎಂಜಿನಿಯರ್ ಗುರುದತ್ತ ಹಾಗೂ ಜಯರಾಂ ಸ್ಥಳಕ್ಕೆ ಬಂದಾಗ ರೈತರು ಹಾಗೂ ಅವರ ನಡುವೆ ತೀವ್ರ ಮಾತಿನ ಚಕಮುಕಿ ನಡೆಯಿತು. ಮಧ್ಯ ಪ್ರವೇಶಿಸಿದ ಸಿಪಿಐ ಲೋಕೇಶ್ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಅಧಿಕಾರಿಗಳು ರೈತರ ಒತ್ತಾಯದಿಂದಾಗಿ ಕಾಮಗಾರಿ ಸ್ಥಗಿತಗೊಳಿಸಿದರು.

ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಕೆ.ಎಸ್.ಲಿಂಗೇಶ್ ಮಾತನಾಡಿ, ‘ಚಿಕ್ಕಬಳ್ಳಾಪುರ, ತುಮಕೂರು ಮೊದಲಾದ ಜಿಲ್ಲೆಗಳಿಗೆ ನೀರು ಹರಿಸುವ ಎತ್ತಿನಹೊಳೆ ಯೋಜನೆ ಬೇಲೂರು ತಾಲ್ಲೂಕಿನ ಐದು ಗ್ರಾಮ ಪಂಚಾಯಿತಿಗಳ ಮೂಲಕ ಹಾದು ಹೋಗುತ್ತದೆ. ಹೀಗಾಗಿ ತಾಲ್ಲೂಕಿನ 36 ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಈಗಾಗಲೇ ಪ್ರತಿಭಟನೆ ನಡೆಸಲಾಗಿದೆ. ಜಲಸಂಪನ್ಮೂಲ ಸಚಿವರು ನೀರು ನೀಡುತ್ತೇವೆ ಎಂಬ ಭರವಸೆ ನೀಡಿದ್ದಾರೂ ಇಲ್ಲಿಯವರೆಗೂ ಡಿಪಿಆರ್ ಆಗಿಲ್ಲ, ವಿಶೇಷವಾಗಿ ಕಾಲುವೆ ಹೋಗುವ ಮಾರ್ಗದ ರೈತರಿಗೆ ಪರಿಹಾರ ನೀಡಿಲ್ಲ’ ಎಂದು ದೂರಿದರು.

‘ಅರಸೀಕೆರೆ ಶಾಸಕರು ತಮ್ಮ ಪ್ರಭಾವ ಬಳಸಿ ಅಲ್ಲಿನ 36 ಕೆರೆಗಳಿಗೆ ನೀರು ತುಂಬಿಸಲು ಡಿಪಿಆರ್ ಮಾಡಿದ್ದಾರೆ. ಆದರೆ ನಮ್ಮ ಶಾಸಕರು ತಮ್ಮದೇ ಸರ್ಕಾರ ಇದ್ದರೂ ಬೇಲೂರು ತಾಲ್ಲೂಕಿಗೆ ನೀರು ತರಲು ಸಾಧ್ಯವಾಗಿಲ್ಲ. ಇನ್ನು ಕೆಲ ಕಾಂಗ್ರೆಸ್ ನಾಯಕರು ನಾವೇ ನೀರು ನೀಡುತ್ತವೆ ಎಂದು ಚುನಾವಣೆ ಗಿಮಿಕ್ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಜೆಡಿಎಸ್ ಮುಖಂಡರಾದ ಹಗರೆ ದಿಲೀಪ್‌ಕುಮಾರ್, ಕಾಂತರಾಜ್, ಈಶ್ವರ್, ರೈತರಾದ ಮಂಜೇಗೌಡ, ಚಂದ್ರೇಗೌಡ, ಹೂವರಾಜ, ಲೋಕುಮಾರ್, ರಾಣಿ, ಈಶ್ವರಪ್ಪ, ಸಾವಿತ್ರಮ್ಮ ಇದ್ದರು.

ಕಪ್ಪುಬಾವುಟ ಪ್ರದರ್ಶನ

‘ತೀವ್ರ ಬರಪೀಡಿತ ಹಳೇಬೀಡು-ಮಾದೀಹಳ್ಳಿ ಭಾಗಕ್ಕೆ ಎತ್ತಿನಹೊಳೆ ಮೂಲಕ ನೀರು ನೀಡುತ್ತೇವೆ ಎಂದು ಕೆಲ ಕಾಂಗ್ರೆಸ್ ನಾಯಕರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಅಲ್ಲದೇ ರೈತರಿಗೆ ಪರಿಹಾರ ನೀಡದೆ ರಾತ್ರೋರಾತ್ರಿ ಕಾಮಗಾರಿ ಆರಂಭಿಸಿದ್ದಾರೆ. ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಲತಾ ದಿಲೀಪ್‌ಕುಮಾರ್ ದೂರಿದರು.

ತಾಲ್ಲೂಕಿನ 5 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ಎತ್ತಿನಹೊಳೆಯಿಂದ ನೀರು ತುಂಬಿಸಬೇಕು. ಇಲ್ಲವಾದರೆ ಜನವರಿ 4 ರಂದು ಬೇಲೂರಿಗೆ ಬರಲಿರುವ ಮುಖ್ಯಮಂತ್ರಿ ಎದುರು ಕಪ್ಪುಬಾವುಟ ಪ್ರದರ್ಶನ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry