ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಂಡತಿಯೊಬ್ಬಳು ಖುಷಿಯಾಗಿದ್ದರೆ...

Last Updated 27 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ತಿಳಿ ಬಣ್ಣದ ಜಂಪ್‌ಸೂಟ್‌ನಲ್ಲಿ ಕಂಗೊಳಿಸುತ್ತಿದ್ದ ಸಾಗರಿಕಾ ಮೈಮೇಲೆ ತೆಳುವಾದ, ಹಗುರವಾದ ಆದರೆ ಆಕರ್ಷಕವಾದ ಪ್ಲಾಟಿನಂ ಆಭರಣಗಳ ಹೊಳಪಿತ್ತು. ಬಿಳಿ ಪ್ಯಾಂಟ್‌–ಶರ್ಟ್‌, ತಿಳಿ ಗುಲಾಬಿ ಬಣ್ಣದ ಚಕ್ಸ್‌ ಬ್ಲೇಸರ್‌ ತೊಟ್ಟಿದ್ದ ಜಹೀರ್‌ ಮೈಮೇಲೂ ಸೂಕ್ಷ್ಮವಾದ ತೆಳು ಆಭರಣಗಳಿದ್ದವು. ಆಗ ತಾನೆ ಬಿಡುಗಡೆಗೊಂಡ ಎವಾರ ಪ್ಲಾಟಿನಂ ಸಂಗ್ರಹದಿಂದ ಆಯ್ದ ಆಭರಣಗಳನ್ನು ಧರಿಸಿದ ನವ ದಂಪತಿಯ ಮುಖದ ಮೇಲೆ ಕಂಡೂ–ಕಾಣದ ಮಂದಹಾಸ ಕಳೆಗಟ್ಟಿತ್ತು.

ಇತ್ತೀಚೆಗಷ್ಟೆ ಹೊಸ ಜೀವನಕ್ಕೆ ಕಾಲಿಟ್ಟ ಈ ಯುವಜೋಡಿ, ಒಬ್ಬರಿಗೊಬ್ಬರು ಕೀಟಲೆ ಮಾಡುತ್ತ, ಒಬ್ಬರನ್ನೊಬ್ಬರು ಹೊಗಳುತ್ತ, ಹುಸಿಮುನಿಸು ತೋರುತ್ತಾ ತುಸು ಹೊತ್ತು ಹರಟೆಯ ಲಹರಿಯಲ್ಲಿ ಕಳೆದರು.

‘ಪ್ರೀತಿ, ಮದುವೆ, ದಾಂಪತ್ಯದ ಬಗ್ಗೆ ಸಾಕಷ್ಟು ಮಾತುಗಳಾಗಿವೆ’ ಎನ್ನುತ್ತಲೇ ಸಾಗರಿಕಾ ಮಾತುಗಳು ಮತ್ತೆ ಅದೇ ವಿಷಯದತ್ತ ವಾಲಿದವು.

‘ಪ್ರೀತಿ ಅನಂತರದ್ದು... ನಮ್ಮಿಬ್ಬರ ನಡುವೆ ಮೊದಲು ಮೂಡಿದ್ದು ಸ್ನೇಹವೇ. ನಿಜ ಹೇಳಬೇಕೆಂದರೆ ಹೊರಗಡೆ ಜನ ಮಾತಾಡುವವರೆಗೆ, ಸ್ನೇಹಿತರು ರೇಗಿಸುವವರೆಗೆ ಜಹೀರ್‌ ನನ್ನ ಸ್ನೇಹಿತ ಮಾತ್ರ ಆಗಿದ್ದರು...’ ಎಂದರು ಸಾಗರಿಕಾ.

ಪತ್ನಿ ಮಾತಾಡುವಾಗ ಅವಳನ್ನೇ ದಿಟ್ಟಿಸುತ್ತ, ಬಿಟ್ಟು ಹೋದ ವಿಷಯಗಳನ್ನು ಸೇರಿಸುತ್ತ, ನಡು–ನಡುವೆ ಕಾಫಿ ಹೀರುತ್ತ ಆ ಕ್ಷಣವನ್ನು ಮತ್ತೊಮ್ಮೆ ನೆನೆದು ಪುಳಕಿತರಾದರು ಜಹೀರ್‌.

‘ನಾವಿಬ್ಬರೂ ಸ್ನೇಹಿತರ ಗುಂಪಿನಲ್ಲೇ ಭೇಟಿಯಾಗುತ್ತಿದ್ದೆವು. ಖಾಸಗಿಯಾಗಿ ಮಾತನಾಡಲು ಅವಕಾಶವೇ ಸಿಗುತ್ತಿರಲಿಲ್ಲ. ಸಾಗರಿಕಾ ಎದುರು ಮನದ ಮಾತು ಹಂಚಿಕೊಳ್ಳಲು ಸಾಕಷ್ಟು ದಿನ ಕಾಯಬೇಕಾಯ್ತು. ಕೊನೆಗೊಂದು ದಿನ ನಾನೇ ಹೇಳಿದೆ, ‘ನಾವಿಬ್ಬರೂ ಭೇಟಿಯಾಗೋಣ... ನಾವಿಬ್ಬರೇ...’ ಎಂದು.

‘ಆದರೆ ಜಹೀರ್‌ ಮಾತು, ನಡವಳಿಕೆ, ಪ್ರೀತಿ ನನ್ನನ್ನು ಸೆಳೆದುಕೊಂಡಿದ್ದು ನಿಜ. ನಮ್ಮ ಸಂಬಂಧದ ಬಗ್ಗೆ ಜಹೀರ್‌ ತುಂಬಾ ಸಂವೇದನಾಶೀಲರಾಗಿದ್ದರು. ಬಹುಶಃ ನಮ್ಮ ಸಂಬಂಧ ಇಷ್ಟು ಗಟ್ಟಿಗೊಳ್ಳಲು, ಈ ಅರ್ಥ ಪಡೆಯಲು ಅವರೇ ಕಾರಣ...’
ಸಾಗರಿಕಾ ಇಷ್ಟು ಹೇಳಿದ್ದೇ ಸಾಕು, ಪತ್ನಿಯನ್ನು ಹೊಗಳುವುದರಲ್ಲಿ ತಾನು ಹಿಂದೆ ಬೀಳಬಾರದು ಎಂದುಕೊಂಡ ಜಹೀರ್‌ ಕೂಡಲೇ ‘ಅವಳ ಸೌಂದರ್ಯ, ಶಿಸ್ತು, ಅವಳು ನನ್ನನ್ನು ಕೇರ್‌ ಮಾಡುವ ರೀತಿಗೆ ನಾನು ಮೋಡಿಗೊಳಗಾದೆ’ ಎಂದು ಮಾತು ಸೇರಿಸಿದರು.

‘ಸಾಗರಿಕಾ ಸಂತೋಷವಾಗಿದ್ದರೆ ನನಗಷ್ಟೇ ಸಾಕು. ಹೆಂಡತಿಯೊಬ್ಬಳು ನಗುನಗುತ್ತಿದ್ದರೆ ಮಾತ್ರ ಜೀವನ ಸುಖಮಯ’ ಎಂದ ಜಹೀರ್‌ ಮಾತಿಗೆ ಸಾಗರಿಕಾ ಮನಬಿಚ್ಚಿ ನಕ್ಕರು. ನಂತರ ಇಬ್ಬರ ಮಾತುಗಳು ಆಭರಣಗಳ ಕಡೆಗೆ ಸಾಗಿತು.

‘ಯಾವತ್ತಿಗೂ ಆಭರಣಗಳ ಕಡೆಗೆ ನನ್ನ ಸೆಳೆತ ಇದ್ದಿದ್ದೇ. ಅದು ಎಲ್ಲಾ ಮಹಿಳೆಯರ ಹುಟ್ಟುಗುಣವಿರಬೇಕು. ಪ್ಲಾಟಿನಂ ಎಂದರೆ ನನಗೆ ವಿಶೇಷ ಆಕರ್ಷಣೆ. ಈ ಆಭರಣ ಪಾಶ್ಚಿಮಾತ್ಯ ಮತ್ತು ಭಾರತೀಯ ದಿರಿಸುಗಳೆರಡಕ್ಕೂ ಹೊಂದಿಕೊಳ್ಳುತ್ತದೆ’ ಎಂದರು ಸಾಗರಿಕಾ.

ಚಿನ್ನದ ಜಗತ್ತು ಬದಲಾಗಿದೆ
ಬಾಲ್ಯದಿಂದಲೂ ನಾನು ಚಿನ್ನದ ಜಗತ್ತು ನೋಡುತ್ತಾ ಬೆಳೆದವನು. ಚಿನ್ನ ಹಾಗೂ ಗ್ರಾಹಕರ ನಡುವಿನ ಬಾಂಧವ್ಯಕ್ಕೆ ಬೆಸುಗೆಯಾಗಿ ನಮ್ಮ ಕುಟುಂಬ ಸಾಗಿ ಬಂದಿದೆ. ‘ಆಭರಣ್‌’ ನಮ್ಮ ವ್ಯವಹಾರವಷ್ಟೇ ಅಲ್ಲ, ನಮ್ಮ ಬದ್ಧತೆ, ನಮ್ಮ ಜೀವನಕ್ರಮವೂ ಆಗಿದೆ. 1935ರಿಂದ ಜನರ ಆಸಕ್ತಿ, ಅಭಿರುಚಿ, ಆದ್ಯತೆಗಳಿಗೆ ಅನುಗುಣವಾಗಿ ಬದಲಾಗುತ್ತಾ, ಬೆಳೆಯುತ್ತ ಸಾಗಿ ಬಂದಿದೆ ಆಭರಣ್‌.

ಈಗ ಚಿನ್ನದ ಜಗತ್ತು ಬದಲಾಗಿದೆ, ಜನರೂ, ಅವರ ಆಸಕ್ತಿಗಳೂ ಬದಲಾಗಿವೆ. ಇಂದಿನ ಯುವಜನತೆಯ ಅಭಿರುಚಿಯನ್ನು ಗಮನಿಸಿ ಹೊಸ ರೀತಿಯ ಪ್ಲಾಟಿನಂ ಸಂಗ್ರಹವನ್ನು ಬಿಡುಗಡೆ ಮಾಡಲಾಗಿದೆ. ಆಭರಣಗಳ ವಿಚಾರದಲ್ಲಿ ಹೊಸತಲೆಮಾರು ಖಚಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಹಗುರವಾದ, ಆಕರ್ಷಕವಾದ ಎಲ್ಲಾ ಸಂದರ್ಭಗಳಿಗೂ ಹೊಂದಬಹುದಾದ ಆಭರಣಗಳು ಅವರ ಆಯ್ಕೆಯಾಗಿದೆ.
–ಪ್ರತಾಪ್‌ ಕಾಮತ್‌,
ವ್ಯವ್ಯಸ್ಥಾಪಕ ನಿರ್ದೇಶಕ, ಆಭರಣ್‌

*
ನನಗೆ ಗೊತ್ತಿರುವುದು ಕ್ರಿಕೆಟ್‌, ನಾನು ನಂಬಿರುವುದು ಕ್ರಿಕೆಟ್‌. ಈಗಲೂ ನಾನು ಕ್ರಿಕೆಟ್‌ನಿಂದ ದೂರ ಆಗಿಲ್ಲ. ನಿವೃತ್ತಿ ಯಾವತ್ತಿಗೂ ವೃತ್ತಿ ಬದುಕಿನ ಅಂತ್ಯವಲ್ಲ. ಈಗಲೂ ಕ್ರಿಕೆಟ್ ನನ್ನ ಪ್ಯಾಷನ್‌, ನನ್ನ ಶಕ್ತಿ.
–ಜಹೀರ್ ಖಾನ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT