3

ಕಥೆಯೆ ಹೀರೊ ವಿಧಿಯೆ ವಿಲನ್

Published:
Updated:
ಕಥೆಯೆ ಹೀರೊ ವಿಧಿಯೆ ವಿಲನ್

‘ನಾನು ಈ ಚಿತ್ರಕ್ಕೆ ಸಂಭಾಷಣೆ ಬರೆಯುವಾಗಲೇ ಅತ್ತಿದ್ದೇನೆ. ಚಿತ್ರ ನೋಡುವ ಪ್ರೇಕ್ಷಕರು ಕೂಡ ಅಳುತ್ತಾರೆ’ ಎಂದು ಮಾತಿಗಿಳಿದರು ‘ಶಿವು ‍ಪಾರು’ ಚಿತ್ರದ ನಿರ್ದೇಶಕ ಅಮೆರಿಕ ಸುರೇಶ್‌.

ಅಮೆರಿಕದಲ್ಲಿ ಎರಡು ದಶಕಗಳ ಕಾಲ ಸಾಫ್ಟ್‌ವೇರ್‌ ವೃತ್ತಿಯಲ್ಲಿದ್ದ ಅವರನ್ನು ಬಣ್ಣದ ಲೋಕ ಸೆಳೆದಿದ್ದು ಆಕಸ್ಮಿಕವಂತೆ. ಇದು ಜನ್ಮದಿಂದ ಪುನರ್ಜನ್ಮಕ್ಕೂ ಮುಂದುವರಿದ ರೋಮಾಂಚಕ ಪ್ರೇಮಕಥೆಯಂತೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ ನೊಗ ಹೊತ್ತಿರುವ ಸುರೇಶ್‌ ಅವರಿಗೆ ಸಿನಿಮಾಗಳ ಸೋಲು, ಗೆಲುವಿನ ಬಗ್ಗೆ ಸಂಶೋಧನೆ ನಡೆಸಿರುವ ಅನುಭವವೂ ಇದೆಯಂತೆ. ‘ಕಥೆಯೆ ಹೀರೊ ವಿಧಿಯೆ ವಿಲನ್’ ಎಂದು ತಾರಾಗಣದಲ್ಲಿ ನಮೂದಿಸಿ ಪ್ರೇಕ್ಷಕರನ್ನು ಸೆಳೆಯುವ ಗುರಿ ಅವರದು.

ತಮ್ಮ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸುದ್ದಿಗೋಷ್ಠಿಗೆ ಬಂದಿದ್ದ ಅವರು, ಪತ್ರಕರ್ತರ ಪ್ರಶ್ನೆಗಳಿಗೆ ಹಾಸ್ಯಭರಿತ ಮಾತುಗಳಲ್ಲಿಯೇ ಉತ್ತರಿಸಿದರು. ‘ಸಿನಿಮಾವೊಂದರ ಗೆಲುವಿಗೆ ಹಲವು ಕಾರಣಗಳಿವೆ. ಭಾವುಕ ಸನ್ನಿವೇಶ ಇರುವ ಚಿತ್ರಗಳು ಜನರಿಗೆ ಇಷ್ಟವಾಗಲಿವೆ. ಗೆಲುವಿನ ಪಟ್ಟಿಯಲ್ಲಿ ಇವುಗಳ ಸಂಖ್ಯೆಯೂ ದೊಡ್ಡದಿದೆ. ಹಾಗಾಗಿ, ನನ್ನ ಸಿನಿಮಾದಲ್ಲೂ ಭಾವುಕತೆಗೆ ಹೆಚ್ಚಿನ ಒತ್ತು ನೀಡಿದ್ದೇನೆ’ ಎಂದು ಗುಟ್ಟು ಬಿಟ್ಟುಕೊಟ್ಟರು.

ರಿಯಾಲಿಟಿ ಷೋವೊಂದರ ಚಿತ್ರೀಕರಣಕ್ಕೆ ಹೋದ ವೇಳೆ ಕಥೆ ಆರಂಭವಾಗು ತ್ತದೆಯಂತೆ. ಪ್ಯಾಟೆ ಹುಡ್ಗೀರ್ ಹಳ್ಳೀಗ್‌ ಬಂದ್ರು ಸೀಸನ್‌ 6 ಈ ಸಿನಿಮಾದಲ್ಲಿ ನಡೆಯುವುದು ವಿಶೇಷವಂತೆ. ಪ್ರೇಕ್ಷಕರೇ ಕರವಸ್ತ್ರ ತರಬೇಕು. ನಿಮ್ಮ ಕಣ್ಣೀರಿಗೆ ನಾವು ಜವಾಬ್ದಾರರಲ್ಲ ಎಂಬ ಷರತ್ತು ಕೂಡ ವಿಧಿಸಿದ್ದಾರೆ. ‘ನಾಯಕಿಯು ಹದಿನೈದು ನಿಮಿಷ ಅತ್ತಿದ್ದಾರೆ. ಜತೆಗೆ, ಐವತ್ತು ಸಹನಟಿಯರು ಅತ್ತಿದ್ದಾರೆ’ ಎಂದರು ಸುರೇಶ್‌.

ನಾಯಕಿ ದಿಶಾ ಪೂವಯ್ಯ, ‘ನನ್ನದು ಪಾರು ಪಾತ್ರ. ಪಾತ್ರದಲ್ಲಿ ಎರಡು ಶೇಡ್‌ ಇದೆ. ಕಥೆ ಕೇಳಿ ಆರಂಭದಲ್ಲಿ ಭಯಪಟ್ಟಿದ್ದೆ. ಚಿತ್ರದಲ್ಲಿ ಎಲ್ಲಿಯೂ ಅಶ್ಲೀಲತೆ ಇಲ್ಲ. ಇದೊಂದು ಕೌಟುಂಬಿಕ ಚಿತ್ರ’ ಎಂದರು.

ಸುರೇಶ್‌ ನಾಗಪ್ಪ ಬಂಡವಾಳ ಹೂಡಿದ್ದಾರೆ. ರಮೇಶ್‌ ಭಟ್‌, ಹೊನ್ನವಳ್ಳಿ ಕೃಷ್ಣ, ಚಿತ್ರಾ ತಾರಾಗಣದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry