7

ಹೃದಯಶಿವನ ಸಂಕಷ್ಟ ಪರ್ವ!

Published:
Updated:
ಹೃದಯಶಿವನ ಸಂಕಷ್ಟ ಪರ್ವ!

ಒಂದು ಕೈಯನ್ನು ಕಿಸೆಯ ಒಳಗೆ ಇಟ್ಟುಕೊಂಡೇ ಇಡೀ ಚಿತ್ರದ ಕಥೆ ಬರೆದಿದ್ದೇನೆ’ ಹೀಗೆಂದು ತಮ್ಮ ಅಂಗಿಯ ಕಿಸೆಯನ್ನೊಮ್ಮೆ ಒತ್ತಿಕೊಂಡರು ಹೃದಯಶಿವ. ಅದು ಖಾಲಿಯೇ ಇದ್ದಂತಿತ್ತು. ‘ಅಂದರೆ ನಮ್ಮ ಬಳಿ ಎಷ್ಟು ಬಂಡವಾಳ ಇದೆ. ಆ ಮಿತಿಯೊಳಗೆ ಏನು ಮಾಡಬಹುದು ಎಂಬುದನ್ನೆಲ್ಲ ಪದೆ ಪದೆ ನೆನಪಿಸಿಕೊಂಡು ಅದಕ್ಕೆ ತಕ್ಕ ಹಾಗೆ ದೃಶ್ಯಗಳನ್ನು ಬರೆದಿದ್ದೇನೆ’ ಎಂದು ತಮ್ಮ ಮಾತು ಸರಿಯಾಗಿ ಅರ್ಥವಾಗಲಿಲ್ಲವೇನೋ ಎಂಬ ಅನುಮಾನದಲ್ಲಿ ವಿವರಿಸಿದರು. ‘ಹಾಗಂತ ಗುಣಮಟ್ಟದಲ್ಲಿ ಎಲ್ಲಿಯೂ ರಾಜಿ ಆಗಲಿಲ್ಲ’ ಎಂದು ಹೇಳಲೂ ಅವರು ಮರೆಯಲಿಲ್ಲ.

ಅದು ಹೃದಯ ಶಿವ ನಿರ್ದೇಶನದ ‘ಜಯಮಹಲ್‌’ ಸಿನಿಮಾ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮ. ಎಷ್ಟೋ ವರ್ಷಗಳ ಕಾಲ ಕಂಡ ಕನಸೊಂದು ನನಸಾಗುವ ಹಂತವನ್ನು ಸಮೀಪಿಸುತ್ತಿರುವ ಭಾವುಕತೆಯಲ್ಲಿ ಅವರ ಧ್ವನಿ ಕಂಪಿಸುತ್ತಿತ್ತು. ಮನಸ್ಸು ಕಷ್ಟದ ದಿನಗಳತ್ತ ಹೊರಳುತ್ತಿತ್ತು.

‘ನೂರಾರು ಸಿನಿಮಾ ಹಾಡುಗಳನ್ನು ಬರೆದ ಮೇಲೂ ನಾನೊಂದು ಒಳ್ಳೆಯ ಕಥೆ ತೆಗೆದುಕೊಂಡು ಹೋದಾಗ ಗಾಂಧಿನಗರದಲ್ಲಿ ಯಾರೂ ಕೇಳಿಸಿಕೊಳ್ಳಲು ಮುಂದೆ ಬರುತ್ತಿರಲಿಲ್ಲ. ನಾನೊಂದು ಸಿನಿಮಾ ಮಾಡಬಲ್ಲೆ ಎಂದು ಯಾರಿಗೂ ನಂಬಿಕೆ ಇರಲಿಲ್ಲ. ಇದರಿಂದ ನನಗೆ ತುಂಬ ಬೇಸರವಾಯ್ತು. ಸುಮ್ಮನೇ ಎಲ್ಲವನ್ನೂ ಬಿಟ್ಟು ಮುಂಬೈಗೆ ಹೊರಟುಬಿಟ್ಟೆ. ಅಲ್ಲಿ ಕಂಡ ಕಂಡ ಹಿಂದಿ ನಿರ್ದೇಶಕರು, ನಟರಿಗೆಲ್ಲ ಫೋನ್‌ ಮಾಡಿ ಬೈಸಿಕೊಳ್ಳುತ್ತಿದ್ದೆ. ಅವರ ಬಳಿ ಸಹಾಯಕನಾಗಿ ಕೆಲಸ ಕಲಿತುಕೊಳ್ಳಬೇಕು ಎಂಬ ಹಂಬಲ ನನ್ನದಾಗಿತ್ತು. ಕೊನೆಗೂ ಅಂಥದ್ದೊಂದು ಅವಕಾಶ ಸಿಕ್ಕಲೇ ಇಲ್ಲ. ನಿರಾಸೆಯಿಂದಲೇ ಬೆಂಗಳೂರಿಗೆ ಮರಳಬೇಕಾಯ್ತು. ಇಂಥದ್ದೊಂದು ಸಂದಿಗ್ಧದ ಸಂದರ್ಭದಲ್ಲಿ ನನ್ನ ಬಹುಕಾಲದ ಸ್ನೇಹಿತ ಎಂ. ರೇಣುಕಸ್ವರೂಪ್‌ ಬೆಂಬಲಕ್ಕೆ ನಿಂತರು. ನನ್ನ ಸಿನಿಮಾಕ್ಕೆ ಹಣ ಹೂಡಲು ಒಪ್ಪಿಕೊಂಡರು. ‘ಜಯಮಹಲ್‌’ ಹೀಗೆ ಆರಂಭವಾಯ್ತು’ ಎಂದು ಈ ಚಿತ್ರದ ಆರಂಭಿಕ ಹೆಜ್ಜೆಗಳನ್ನು ನೆನಪಿಸಿಕೊಂಡರು.

‘ಸಾಮಾನ್ಯವಾಗಿ ನಿರ್ದೆಶಕ ಅಂದ ಮೇಲೆ ಒಂದು ಆಫೀಸಿರುತ್ತದೆ. ಕಥೆ ಬರೆಯಲಿಕ್ಕೆ ಅಂತಲೇ ಹೋಟೆಲ್‌ಗಳಲ್ಲಿ ಇರುತ್ತಾರೆ. ಆದರೆ ನಾನು ಈ ಸಿನಿಮಾ ಚಿತ್ರಕಥೆ ಬರೆದಿದ್ದು ಲಾಲ್‌ಬಾಗ್‌ನಲ್ಲಿ ಕೂತು. ಸೆಂಟ್ರಲ್‌ ಕಾಲೇಜ್‌ ಮೈದಾನದಲ್ಲಿ ಕೂತು ತಿದ್ದಿದೆ. ಕಬ್ಬನ್‌ ಪಾರ್ಕ್‌ನಲ್ಲಿ ಸಂಭಾಷಣೆ ಬರೆದಿದ್ದೇನೆ. ಅವೆಲ್ಲ ಕಷ್ಟಗಳನ್ನು ಮರೆಸುವ ಹಾಗೆ ಸಿನಿಮಾ ಚೆನ್ನಾಗಿ ಬಂದಿದೆ’ ಎಂದು ಹೇಳಿ ಒಮ್ಮೆ ನಿರಾಳತೆಯ ನಿಟ್ಟುಸಿರು ಬಿಟ್ಟರು.

‘ಪೋಸ್ಟರ್ ನೋಡಿಯೇ ಇದೊಂದು ಹಾರರ್‌ ಸಿನಿಮಾ ಎಂದು ಹೇಳಬಹುದು. ಆದರೆ ಹಾರರ್‌ ಅಷ್ಟೇ ಅಲ್ಲ, ಜತೆಗೆ ಹಲವು ಭಿನ್ನ ಸಂಗತಿಗಳೂ ಈ ಚಿತ್ರದಲ್ಲಿದೆ’ ಎನ್ನುತ್ತಾರೆ ಹೃದಯಶಿವ. ತಮ್ಮ ಮಾತನ್ನು ಸಮರ್ಥಿಸುವ ಹಾಗೆಯೇ ಅವರು ಒಂದು ರೊಮಾಂಟಿಕ್ ಸಾಂಗ್‌ ಮತ್ತು ಇನ್ನೊಂದು ಬದುಕಿನ ನಶ್ವರತೆಯ ಕುರಿತಾಗಿ ಇರುವ ತತ್ವಪದ ಶೈಲಿಯ ಹಾಡನ್ನೂ ತೋರಿಸಿದರು.

ಕನ್ನಡದ ‘ಜಯಮಹಲ್‌’ ತಮಿಳಿನಲ್ಲಿಯೂ ತಯಾರಾಗುತ್ತಿದ್ದು ಅಲ್ಲಿ  ‘ಮಾತಂಗಿ’ ಎಂಬ ಶೀರ್ಷಿಕೆಯನ್ನು ಇಟ್ಟುಕೊಳ್ಳಲಾಗಿದೆ.

‘ಕಿಸೆಯಲ್ಲಿ ಅಲ್ಲ, ಹೃದಯದ ಮೇಲೆ ಕೈಯಿಟ್ಟುಕೊಂಡು ಪ್ರೀತಿಯಿಂದ ಕೆಲಸ ಮಾಡಿದ್ದಾರೆ ಹೃದಯಶಿವ. ಅವರಿಗೆ ನನ್ನಿಂದ ಸಾಧ್ಯವಾದಷ್ಟೂ ಯಾವುದೇ ತೊಂದರೆ ಆಗದ ರೀತಿಯಲ್ಲಿ ನೋಡಿಕೊಂಡಿದ್ದೇನೆ’ ಎಂದರು ನಿರ್ಮಾಪಕ ಎಂ. ರೇಣುಕಸ್ವರೂಪ್‌.

ಶುಭಾ ಪೂಂಜಾ, ನೀನಾಸಂ ಅಶ್ವತ್ಥ್‌, ಕೌಸಲ್ಯಾ, ಕರಿಸುಬ್ಬು ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ನಿರ್ದೇಶಕರೂ ಒಂದು ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಶ್ವತ್ಥ್‌ ಸೈಕಾಲಾಜಿ ಪ್ರೊಪೆಸರ್‌ ಪಾತ್ರದಲ್ಲಿ ನಟಿಸಿದ್ದರೆ, ಶುಭಾ ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಚಿತ್ರಕ್ಕೆ ಶುಭ ಹಾರೈಸಿ ಮಾತು ಮುಗಿಸಿದರು. ನಾಗಾರ್ಜುನ್‌ ಡಿ. ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತ ಈ ಚಿತ್ರಕ್ಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry