7

ನಾಳೆ ವೈಕುಂಠ ಏಕಾದಶಿ

Published:
Updated:
ನಾಳೆ ವೈಕುಂಠ ಏಕಾದಶಿ

ವೈಕುಂಠ ಏಕಾದಶಿಯಂದು ಮಹಾವಿಷ್ಣು ಉತ್ತರ ದ್ವಾರದ ಮೂಲಕ ಮುಕ್ಕೋಟಿ ದೇವತೆಗಳಿಗೆ ದರ್ಶನ ನೀಡುತ್ತಾನೆ ಎಂಬುದು ನಂಬಿಕೆ. ಈ ದಿನ ವಿಷ್ಣು ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚು. ಉತ್ತರದ ದ್ವಾರವನ್ನು ವೈಕುಂಠ ದ್ವಾರ ಅರ್ಥಾತ್‌ ಸ್ವರ್ಗದ ಬಾಗಿಲು ಎಂದೇ ಕರೆಯಲಾಗುತ್ತದೆ. ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಮಾಡಿದವರನ್ನು ಮಹಾವಿಷ್ಣು ಹರಸುತ್ತಾನೆ ಎಂಬುದು ನಂಬಿಕೆ. ಹಾಗಾಗಿ ಎಲ್ಲ ವಿಷ್ಣು ದೇವಾಲಯಗಳಲ್ಲಿ ‘ವೈಕುಂಠ ದ್ವಾರ’ಗಳನ್ನು ನಿರ್ಮಿಸಲಾಗುತ್ತದೆ.

ಏಕಾದಶ ಎನ್ನುವುದು ಸಂಸ್ಕೃತ ಪದ. ಹೀಗೆಂದರೆ ಹನ್ನೊಂದು ಎಂದು ಅರ್ಥ. ಚೈತ್ರಾದಿ 12 ಮಾಸಗಳಲ್ಲಿ ಪ್ರತಿ ಕೃಷ್ಣಪಕ್ಷ ಮತ್ತು ಶುಕ್ಲಪಕ್ಷದ 11ನೇ ದಿನವನ್ನು ಏಕಾದಶಿ ಎನ್ನುತ್ತಾರೆ. ಏಕಾದಶಿಯ ದಿನ ಉಪವಾಸವಿದ್ದು, ಮಾರನೆಯ ದಿನ ಅಂದರೆ ದ್ವಾದಶಿಯಂದು ಬೆಳಿಗ್ಗೆ 9 ಘಂಟೆಯೊಳಗಾಗಿ ಪಾರಣೆ (ಊಟ) ಮಾಡುವ ಸಂಪ್ರದಾಯವಿದೆ. ಕೆಲವರು ಏಕಾದಶಿಯಂದು ಮೌನ ವ್ರತ ಸಹಾ ಆಚರಿಸುತ್ತಾರೆ.

‘ಈ ದಿನದಂದು ಯಾವ ಆಹಾರವನ್ನೂ ಸೇವಿಸದೆ, ಉಪವಾಸ ಮಾಡುವ ಸಂಪ್ರದಾಯವಿದೆ. ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ, ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ, ನಿರಾಹಾರ ವ್ರತವನ್ನು ಮಾಡುತ್ತಾರೆ. ರಾತ್ರಿಯಿಡೀ ಎಚ್ಚರವಿದ್ದು ದೇವರ ಧ್ಯಾನ ಮಾಡಬೇಕು’ ಎನ್ನುತ್ತಾರೆ ಕೋಟೆ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶೇಷಾದ್ರಿ.

ಏಕಾದಶಿ ಕಥೆ

‘ವೈಕುಂಠ ಏಕಾದಶಿಯ ಮಹತ್ವದ ಬಗ್ಗೆ ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖವಿದೆ. ಗೋಕುಲವೆಂಬ ನಗರದಲ್ಲಿ ವೈಖಾನಸನೆಂಬ ರಾಜರ್ಷಿಯ ದಿವ್ಯದೃಷ್ಟಿಗೆ ತನ್ನ ತಂದೆ ಸತ್ತ ಬಳಿಕ ನರಕವಾಸ ಅನುಭವಿಸುತ್ತಿರುವುದು ಗೋಚರಿಸುತ್ತದೆ. ತಂದೆಯ ಆತ್ಮಕ್ಕೆ ಮುಕ್ತಿ ಕೊಡಿಸುವ ಉಪಾಯವೇನಾದರೂ ಇದೆಯೇ ಎಂದು ರಾಜರ್ಷಿ ತನ್ನ ಪಂಡಿತರನ್ನು ಕೇಳುತ್ತಾನೆ. ಅದಕ್ಕೆ ಅವರು, ಯಜ್ಞ ದಾನಗಳಿಂದ ಮಾತ್ರ ಪರಿಹಾರ ಸಿಗುವುದಿಲ್ಲ. ಮಾರ್ಗಶಿರ ಶುಕ್ಷ ಪಕ್ಷದ ಏಕಾದಶಿ ಆಚರಣೆಯ ಫಲವಾಗಿ ಅವನ ತಂದೆಯು ನರಕದಿಂದ ಪಾರಾಗುವರೆಂದು ತಿಳಿಸುತ್ತಾರೆ. ಪಂಡಿತರ ಮಾತಿನಂತೆ ಏಕಾದಶಿ ವ್ರತ ಆಚರಿಸಿದ ನಂತರ ಅವನ ತಂದೆಯ ದೇಹವು ನರಕದಿಂದ ಮುಕ್ತಿ ಪಡೆದು ಮುಂದೆ ಬೇರೆ ದೇಹವು ಪ್ರಾಪ್ತವಾಗಿ ಸ್ವರ್ಗವನ್ನು ಸೇರಿದ’ ಎನ್ನುತ್ತಾರೆ ಶೇಷಾದ್ರಿ.

ವೈಕುಂಠ ಏಕಾದಶಿಯ ದಿನ ಉಪವಾಸವಿದ್ದು, ಭಗವಂತನ ವಿಶೇಷ ಸನ್ನಿಧಾನವಿರುವ ದೇವಸ್ಥಾನಗಳಿಗೆ ಹೋಗಿ ಭಕ್ತಿಯಿಂದ ದೇವರ ರೂಪವನ್ನು ತಮ್ಮ ಹೃದಯದಲ್ಲಿ ಸಂದರ್ಶಿಸುವವರಿಗೆ ಅವರ ಹಿಂದಿನ ಘೋರ ಪಾಪಗಳು ನೀಗುತ್ತವೆ ಎಂದು ಭಕ್ತರು ನಂಬುತ್ತಾರೆ.

ವಿವಿಧೆಡೆ ವೈಕುಂಠ ಏಕಾದಶಿ

ನಗರದ ವಿವಿಧ ದೇವಾಲಯಗಳಲ್ಲಿ ಶುಕ್ರವಾರ (ಡಿ.29) ವೈಕುಂಠ ಏಕಾದಶಿ ಪ್ರಯುಕ್ತ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮಹಾಲಕ್ಷ್ಮಿಪುರದ ಶ್ರೀನಿವಾಸ ದೇವಸ್ಥಾನ: ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ದೇವರ ದರ್ಶನಕ್ಕೆ ವ್ಯವಸ್ಥೆ ಇದೆ. ದೇವರಿಗೆ ವಜ್ರ ಕವಚಧಾರಣೆ ಹಾಗೂ ವಿಶೇಷ ಹೂವಿನ ಅಲಂಕಾರ ಮಾಡಲಾಗುತ್ತದೆ. ಹೊಸ ಚಿನ್ನದ ಕಿರೀಟದಿಂದ ದೇವರನ್ನು ಅಲಂಕರಿಸಲಾಗುವುದು. ವೈಕುಂಠ ಮಹಾದ್ವಾರವನ್ನು ನಿರ್ಮಿಸಲಾಗುತ್ತದೆ. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ.

ಹುಳಿಮಾವು ಶ್ರೀಸ್ಫೂರ್ತಿ ವಿನಾಯಕ ಸಹಿತ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನ: ವೈಕುಂಠ ಏಕಾದಶಿ ಮಹಾದರ್ಶನ ಮಹೋತ್ಸವ. ಪಂಚಾಮೃತ ಅಭಿಷೇಕ. ವೈಕುಂಠದ್ವಾರ ಪೂಜೆ. ಸ್ಥಳ–ಹುಳಿಮಾವು ಬನ್ನೇರುಘಟ್ಟ ರಸ್ತೆ. ಬೆಳಿಗ್ಗೆ 4

ಜೆ.ಪಿ.ನಗರ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ: ರಾತ್ರಿ 12.30ಯಿಂದ ವಿವಿಧ ಪೂಜೆ ಆರಂಭ. 9ನೇ ಅಡ್ಡರಸ್ತೆ, ಜೆ.ಪಿ. ನಗರ 2ನೇ ಹಂತ

ರಾಜಾಜಿನಗರದ ಶ್ರೀಕೈಲಾಸ ವೈಕುಂಠ ಮಹಾಕ್ಷೇತ್ರ: ಮುಂಜಾನೆ 3 ಗಂಟೆಗೆ ಸುಪ್ರಭಾತ ಸೇವೆಯೊಂದಿಗೆ ವೈಕುಂಠ ಏಕಾದಶಿಯ ಪೂಜಾವಿಧಿಗಳು ಆರಂಭವಾಗುತ್ತವೆ. ಬೆಳಿಗ್ಗೆ 6ರಿಂದ ವೈಕುಂಠ ದ್ವಾರದ ಮೂಲಕ ಭಕ್ತರ ಪ್ರವೇಶಕ್ಕೆ ಅವಕಾಶವಿದೆ

ಶ್ರೀಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯ: ಬೆಳಿಗ್ಗೆ 3ಕ್ಕೆ ಸುಪ್ರಭಾತ ಸೇವೆ, ವೈಕುಂಠ ದ್ವಾರಪೂಜೆ, 4ಕ್ಕೆ ತೋಮಾಲೆ ಸೇವೆ, ಅಲಂಕಾರ ಸೇವೆ, ವಸ್ತ್ರ ಸೇವೆ. ಸ್ಥಳ– ನವಮಂತ್ರಾಲಯ ಮಂದಿರ ಆವರಣ, ಬುಲ್‌ಟೆಂಪಲ್ ರಸ್ತೆ, ಬಸವನಗುಡಿ

ನಿರ್ಮಾಣ್‌ ದೇವಾಲಯಗಳ ವಿಶ್ವಸ್ಥ ಮಂಡಳಿ: ಶ್ರೀಪ್ರಸನ್ನ ವರದ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ. ಬೆಳಿಗ್ಗೆ 4.30ರಿಂದ ಪೂಜೆ. ಸ್ಥಳ– ನಿಸರ್ಗ ಬಡಾವಣೆ, ಕೊಪ್ಪಗೇಟ್‌ ಹತ್ತಿರ, ಬನ್ನೇರುಘಟ್ಟ

ಶ್ರೀವ್ಯಾಸರಾಜಮಠದಲ್ಲಿ ‘ಅಖಂಡ ಭಾಗವತ ಪ್ರವಚನ ಮಹೋತ್ಸವ: ಬೆಳಿಗ್ಗೆ 7.30ರಿಂದ ವಿವಿಧ ಪೂಜಾ ಕಾರ್ಯಕ್ರಮ ಆರಂಭ. ಸ್ಥಳ– ಬೆಣ್ಣೆ ಗೋವಿಂದಪ್ಪ ರಸ್ತೆ, ಬಸವನಗುಡಿ

ಕೋಟೆ ವೆಂಕಟರಮಣಸ್ವಾಮಿ ದೇಗುಲ: ಬೆಳಿಗ್ಗೆ 5.30ರಿಂದ ವಿವಿಧ ಸೇವೆಗಳು ಆರಂಭ. ಬೆಳಿಗ್ಗೆ 6ರಿಂದ 10ರವರೆಗೆ ದರ್ಶನ. ಸ್ಥಳ: ಕೋಟೆ, ಕಲಾಸಿಪಾಳ್ಯ ಖಾಸಗಿ ಬಸ್ ನಿಲ್ದಾಣ ಸಮೀಪ.

ವೆಂಕಟರಮಣ ದೇವಸ್ಥಾನ: ಬೆಳಿಗ್ಗೆ 5.30 ಅಭಿಷೇಕ. 6ಕ್ಕೆ ವೈಕುಂಠ ದ್ವಾರದ ದರ್ಶನ ಪ್ರಾರಂಭವಾಗುತ್ತದೆ. ಸ್ಥಳ: ಎಂ.ವಿ. ಗಾರ್ಡನ್‌, ಹಲಸೂರು.

ಇಸ್ಕಾನ್ ರಾಧಾಕೃಷ್ಣ ಮಂದಿರ: ನಸುಕಿನ 3ಕ್ಕೆ ಸುಪ್ರಭಾತ ಸೇವೆ, ಧೂಪ, ದೀಪ, ಚಾಮರ, ವ್ಯಂಜನ ಸೇವೆ. 3.45ಕ್ಕೆ ಅಭಿಷೇಕ ಮತ್ತು ಬ್ರಹ್ಮಸಂಹಿತಾ ಪಾರಾಯಣ, 5ಕ್ಕೆ ವೈಕುಂಠ ದ್ವಾರಕ್ಕೆ ಪೂಜೆ, 8ರಿಂದ 11ರವರೆಗೆ ದರ್ಶನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry