ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸಿಗೆ ಕನ್ನಡಿ ಹಿಡಿವ ‘ಮುಕುರ’

Last Updated 27 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಗಾಡಿ ಸ್ಟಾರ್ಟ್‌ ಮಾಡಿದರೆ ಸಾಕು, ಅನೇಕರಿಗೆ ನಿಯಮಗಳು ನೆನಪಾಗುವುದೂ ಇಲ್ಲ. ಸಂಚಾರ ನಿಯಮಗಳನ್ನು ಮುರಿದು ಇತರರ ಜೀವಕ್ಕೆ ಹಾನಿ ಮಾಡುವಾಗ ಮಾನವೀಯ ಗುಣಗಳನ್ನು ಮರೆತು ವರ್ತಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬೆಳವಣಿಗೆ ಗಮನಿಸಿದ ನಾಗೇಂದ್ರ ಕರೋಹಟ್ಟಿ ಅವರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲು ಕಿರುಚಿತ್ರವೊಂದನ್ನು ನಿರ್ಮಿಸಬೇಕು ಎನಿಸಿತು. ಅದರ ಫಲಿತವೇ ‘ಮುಕುರ’.

ಮುಕುರ ಎಂದರೆ ಸಂಸ್ಕೃತದಲ್ಲಿ ಕನ್ನಡಿ ಎಂದರ್ಥ. ಸಸ್ಪೆನ್ಸ್, ಹಾರರ್ ಶೈಲಿಯ ಕಥಾ ಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ‘ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬೇಡಿ’ ಎಂಬ ಸಂದೇಶವನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಹುಡುಗ, ಮುಗ್ಧ ಬಾಲಕಿಯ ಮೇಲೆ ಕಾರು ಹರಿಸುವ ಸನ್ನಿವೇಶದ ಸುತ್ತ ಕತೆ ಹೆಣೆಯಲಾಗಿದೆ.

ಕಾರು ಚಾಲನೆ ಮಾಡುವಾಗ ಮೊಬೈಲ್‍ನಲ್ಲಿ ಮಾತನಾಡುತ್ತಾ ಅಪಘಾತ ಮಾಡುವ ನಾಯಕ, ಸಹಾಯಕ್ಕೆ ಧಾವಿಸದೇ ಕಾರಿನ ಕನ್ನಡಿಯಲ್ಲಿ ಸ್ಥಳೀಯರನ್ನು ಕಂಡು ಭಯಭೀತನಾಗಿ ಅಲ್ಲಿಂದ ಕಾಲ್ಕೀಳುತ್ತಾನೆ. ಈ ಸನ್ನಿವೇಶವು ಆತನ ಮನದಲ್ಲಿ ಗಾಢವಾದ ಪರಿಣಾಮ ಬೀರಿ ಕನಸಿನಲ್ಲೂ ಕಾಡತೊಡಗುತ್ತದೆ. ಟಿ.ವಿ.ಯಲ್ಲಿ, ದಿನಪತ್ರಿಕೆಗಳಲ್ಲಿ ಅಪಘಾತದ ಸುದ್ದಿಗಳನ್ನು ನೋಡಿದಾಗ ಅವನಲ್ಲಿ ಪಾಪಪ್ರಜ್ಞೆ ಜಾಗೃತವಾಗಿ ಕೊರಗುತ್ತಾನೆ. ಕಾರಿನ ಕನ್ನಡಿಯಲ್ಲಿ ಅಪಘಾತದ ಸನ್ನಿವೇಶವನ್ನು ನಾಯಕ ಕಣ್ತುಂಬಿ ಕೊಂಡಿರುತ್ತಾನೆ.

ಸುಪ್ತ ಮನಸ್ಸಿನಲ್ಲಿ, ಪದೇಪದೇ ಅಪಘಾತದ ಸನ್ನಿವೇಶವು ಮರು ಕಳಿಸುವುದರಿಂದ ಮರುಗುತ್ತಾನೆ. ಮುಗ್ಧ ಬಾಲೆಯ ಸಾವಿಗೆ ತಾನೇ ಕಾರಣನೆಂದು ಕೊರಗುತ್ತಾ, ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ. ಪ್ರತಿ ಬಾರಿ ಕನ್ನಡಿಯನ್ನು ನೋಡಿದಾಗಲೂ ಸಹ, ಆ ಮುಗ್ಧ ಹುಡುಗಿಯೇ ಕಾಣತೊಡಗುತ್ತಾಳೆ. ದೆವ್ವದ ರೀತಿಯಲ್ಲಿ ಕಾಣುವ ಬಾಲಕಿಯನ್ನು ಕಂಡು ಕಾಲಕ್ರಮೇಣ ಮಾನಸಿಕ ಸ್ಥೈರ್ಯ ಕಳೆದುಕೊಳ್ಳುವ ನಾಯಕ. ‘ಸ್ಪೆಕ್ಟ್ರೋಫೋಬಿಯಾ’ ಎಂಬ ಮನೋವಿಕೃತಿಗೆ ಒಳಗಾಗಿ, ಮನೆಯಲ್ಲಿನ ಕನ್ನಡಿಯನ್ನು ಹೊಡೆದು ಹಾಕುತ್ತಾನೆ.

ಅಪಘಾತದಿಂದ ಪ್ರಾರಂಭವಾಗುವ ಚಿತ್ರ ಅಪಘಾತದಲ್ಲೇ ಕೊನೆಕೊಳ್ಳುತ್ತದೆ. ಅನುಭವಿ ನಟರನ್ನು ಹೊಂದಿರುವ ಚಿತ್ರತಂಡ, ಅಭಿನಯಕ್ಕೆ ಪ್ರಾಮುಖ್ಯತೆ ನೀಡಿದೆ. ಸನ್ನಿವೇಶಕ್ಕೆ ತಕ್ಕ ಹಿನ್ನೆಲೆ ಸಂಗೀತವನ್ನು ರಚಿಸಿದ್ದು, ನೋಡುಗರಲ್ಲಿ ಕುತೂಹಲ ಮೂಡಿಸುತ್ತದೆ. ಹಾರರ್ ಟಚ್‍ನೊಂದಿಗೆ ಕೆಲವು ತಿರುವುಗಳನ್ನೂ ಒಳಗೊಂಡಿದೆ. ಚಿತ್ರದುದ್ದಕ್ಕೂ ಕನ್ನಡಿಯನ್ನು ಪಾತ್ರಧಾರಿಯಂತೆ ಸೃಜನಶೀಲವಾಗಿ ಬಳಸಿಕೊಂಡಿದ್ದಾರೆ.

ಚಿತ್ರವು ಸಾಮಾಜಿಕ ಕಳಕಳಿಯಿಂದ ಕೂಡಿದ್ದು, ಚಿತ್ರದ ಬಹುತೇಕ ಸನ್ನಿವೇಶ ಗಳನ್ನು ಒಳಾಂಗಣದಲ್ಲೇ ಚಿತ್ರೀಕರಿಸಲಾಗಿದೆ. ಹೆಚ್ಚುವರಿ ಬೆಳಕನ್ನು ಬಳಕೆ ಮಾಡದೇ ಇರುವುದರಿಂದ, ಕೆಲವೊಮ್ಮೆ ಪಾತ್ರಧಾರಿಗಳ ಭಾವನೆಗಳು ನಿರ್ದಿಷ್ಟ ಮಟ್ಟದಲ್ಲಿ ಕಾಣಸಿಗುವುದಿಲ್ಲ. ಸನ್ನಿವೇಶಗಳ ನಡುವೆ ಬಂದು ಹೋಗುವ ದೃಶ್ಯಗಳು ಕಡಿಮೆ ಅವಧಿಗೆ ಕಡಿತಗೊಳಿಸಿದ್ದು, ಮನದಲ್ಲಿ ದಾಖಲಾಗುವುದಿಲ್ಲ. ಕಾಂಟ್ರಾಸ್ಟ್ ಮತ್ತು ಬ್ರೈಟ್‍ನೆಸ್ ವಿಚಾರವಾಗಿ ಕಲರಿಂಗ್ ಮಾಡುವ ತಂತ್ರ ಕೈಕೊಟ್ಟಿದೆ. ಆದರೆ, ಚಿತ್ರತಂಡದ ಸದಸ್ಯರಲ್ಲಿ ಸಿನಿಮಾ ವ್ಯಾಮೋಹ ಮತ್ತು ಪ್ರಯೋಗಶೀಲತೆ ಇರುವುದಕ್ಕೆ ಚಿತ್ರದಲ್ಲಿ ಸಾಕಷ್ಟು ಪುರಾವೆಗಳು ಸಿಗುತ್ತವೆ.

ಚಿತ್ರದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳುವ ನಿರ್ದೇಶಕ ನಾಗೇಂದ್ರ ಕರೋಹಟ್ಟಿ, ‘ಕನ್ನಡಿಯನ್ನು (ಮುಕುರ) ನೋಡಿದಾಗ ನಾವು ಯಾವ ಮುಖವಾಡ ಧರಿಸಿ ಜೀವಿಸುತ್ತಿದ್ದೇವೆ ಎಂಬ ಸತ್ಯ ಅರಿವಾಗುತ್ತದೆ. ತಪ್ಪಿನ ಅರಿವಿದದ್ದರೂ ಮತ್ತೆ ತಪ್ಪನ್ನು ಮಾಡಲು ಅವಕಾಶ ನೀಡಬಾರದು. ಸಂಚಾರ ನಿಯಮಗಳನ್ನು ಪಾಲಿಸದೇ ಹೋದರೆ ಏನಾಗಬಹುದು ಎಂಬುದನ್ನು ಚಿತ್ರದ ಮೂಲಕ ತಿಳಿಸಿದ್ದೇವೆ. ಕತೆಯಲ್ಲಿ ಬೇರೆ ಅಂಶಗಳಿದ್ದರೂ, ಮೂಲ ಆಶಯ ಸಾಮಾಜಿಕ ಕಾಳಜಿಯೇ ಆಗಿದೆ’ ಎನ್ನುತ್ತಾರೆ.

ಕಿರುದಾರಿ
ಕಿರುಚಿತ್ರದ ಹೆಸರು: ಮುಕುರ

ರಚನೆ, ನಿರ್ದೇಶನ: ನಾಗೇಂದ್ರ ಕರೋಹಟ್ಟಿ
ಸಂಕಲನ: ಉಜ್ವಲ್ ಗೌಡ
ವಿಎಫ್‍ಎಕ್ಸ್: ನಿತಿನ್
ಕಲರಿಂಗ್: ಗಣೇಶ ಮೂರ್ತಿ
ಛಾಯಾಗ್ರಹಣ: ಶರತ್ ನಾಯಕ್
ಶಬ್ಧಗ್ರಹಣ ಮತ್ತು ಸಂಗೀತ: ವಿಜಯ್ ರಾಜ್
ನಿರ್ಮಾಣ: ಆರಂಭ ತಂಡ
ತಾರಾಗಣ: ವಿನಯ್ ಪ್ರಸಾದ್, ರೋಹಿಣಿ ನಾಗೇಶ್, ಶ್ರೀಕಾಂತ್, ಪ್ರಣಯಮೂರ್ತಿ, ರಘುನಂದನ್, ಬೇಬಿ ಧೃತಿ.
ಕ್ಯಾಮೆರಾ: ಕ್ಯಾನನ್ 700ಡಿ, ಡಿಜೆಐ ಒಸ್ಮೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT