3
ಆಸ್ತಿ ಮಾರಾಟ ಮಾಡಲು ಅನಿಲ್‌ ಅಂಬಾನಿ ನಿರ್ಧಾರ

ಆರ್‌ಕಾಂ ಸಾಲಕ್ಕೆ ಪರಿಹಾರ ಸೂತ್ರ

Published:
Updated:
ಆರ್‌ಕಾಂ ಸಾಲಕ್ಕೆ ಪರಿಹಾರ ಸೂತ್ರ

ಮುಂಬೈ: ಸಾಲದ ಸುಳಿಗೆ ಸಿಲುಕಿರುವ ರಿಲಯನ್ಸ್‌ ಕಮ್ಯುನಿಕೇಷನ್ಸ್‌ (ಆರ್‌ಕಾಂ) ಸಮಸ್ಯೆಗೆ ಸಂಸ್ಥೆಯ ಮುಖ್ಯಸ್ಥ ಅನಿಲ್‌ ಅಂಬಾನಿ ಅವರು ಹೊಸ ಪರಿಹಾರ ಸೂತ್ರ ಕಂಡುಕೊಳ್ಳಲು ಮುಂದಾಗಿದ್ದಾರೆ.

‘ಆರ್‌ಕಾಂ‘ನ ಉಳಿದಿರುವ ತರಂಗಾಂತರ, ಟವರ್‌ ಮತ್ತು  ಸ್ಥಿರಾಸ್ತಿ ಮಾರಾಟ ಮಾಡಿ ₹ 40 ಸಾವಿರ ಕೋಟಿಗಳನ್ನು ಸಾಲಗಾರರಿಗೆ ಮರುಪಾವತಿಸಿ ಬಿಕ್ಕಟ್ಟು ಬಗೆಹರಿಸಲು ಮುಂದಾಗಿದ್ದಾರೆ. ₹ 11,700 ಕೋಟಿ ಮರುಪಾವತಿಸದ ಕಾರಣಕ್ಕೆ ರಾಷ್ಟ್ರೀಯ ಕಂಪೆನಿ ಕಾಯ್ದೆ ನ್ಯಾಯ

ಮಂಡಳಿಗೆ ದೂರು ನೀಡಿದ್ದ ಚೀನಾ ಡೆವಲಪ್‌ಮೆಂಟ್‌ ಬ್ಯಾಂಕ್‌ ಕೂಡ ಈ ಪುನಶ್ಚೇತನ ಯೋಜನೆಗೆ ಸಮ್ಮತಿ ನೀಡಿದೆ. ಸ್ಥಳೀಯ ಮತ್ತು ವಿದೇಶದ 35 ಬ್ಯಾಂಕ್‌ಗಳು ಆರ್‌ಕಾಂ ಅನ್ನು ವಶಪಡಿಸಿಕೊಳ್ಳುವ ಡಿ. 28ರ ಗಡುವಿನ ಎರಡು ದಿನಗಳ ಮೊದಲೇ ಈ ಸಾಲ ಪರಿಹಾರ ಸೂತ್ರದ ಕುರಿತು ಒಪ್ಪಂದಕ್ಕೆ ಬರಲಾಗಿದೆ.

‘ಸಾಲ ನೀಡಿದ ಬ್ಯಾಂಕ್‌ಗಳಿಗೆ ಗಮನಾರ್ಹ ಮೊತ್ತದ ಸಾಲ ಮರುಪಾವತಿಗೆ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬರಲಾಗಿದೆ. ತರಂಗಾಂತರ, ಟವರ್‌ ಮತ್ತು ಸ್ಥಿರಾಸ್ತಿ ಖರೀದಿಸಲು ಅನೇಕರು ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಪುನಶ್ಚೇತನ ಯೋಜನೆ ಕಾರ್ಯರೂಪಕ್ಕೆ ಬಂದ ನಂತರ ’ಹೊಸ ಆರ್‌ಕಾಂ’ನ ಸಾಲದ ಹೊರೆಯು ₹ 45 ಸಾವಿರ ಕೋಟಿಗಳಿಂದ ₹ 6 ಸಾವಿರ ಕೋಟಿಗೆ ಇಳಿಯಲಿದೆ. ಸಂಸ್ಥೆಯ ಕೆಲಮಟ್ಟಿಗಿನ ಪಾಲು ಬಂಡವಾಳ ಖರೀದಿದಾರರನ್ನು ಸಂಸ್ಥೆಯು ಎದುರು ನೋಡುತ್ತಿದೆ. ಜೂನ್‌ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದು ಅನಿಲ್‌ ಅಂಬಾನಿ ತಿಳಿಸಿದ್ದಾರೆ.

ಷೇರು ಬೆಲೆ ಏರಿಕೆ

ಮುಂಬೈ ಷೇರುಪೇಟೆಗಳಲ್ಲಿ ‘ಆರ್‌ಕಾಮ್’ ಷೇರು ಬೆಲೆ ಸತತ ಎರಡನೇ ದಿನವೂ ಏರುಗತಿ ಕಂಡಿತು. ಸಂಸ್ಥೆಯನ್ನು ಸಾಲದ ಸುಳಿಯಿಂದ ಪಾರು ಮಾಡುವ ಪ್ರಯತ್ನಕ್ಕೆ ಹೂಡಿಕೆದಾರರಿಂದ ಉತ್ತೇಜಕರ ಪ್ರತಿಕ್ರಿಯೆ ದೊರೆಯುತ್ತಿದೆ. ಹೀಗಾಗಿ ಬುಧವಾರದ ವಹಿವಾಟಿನಲ್ಲಿ ಷೇರು ಬೆಲೆಯು  ‘ಬಿಎಸ್‌ಇ’ಯಲ್ಲಿ ಶೇ 34.74ರಷ್ಟು ಗಳಿಕೆ ಕಂಡಿತು. ಪ್ರತಿ ಷೇರಿನ ಬೆಲೆ ₹ 28.74ಕ್ಕೆ ಏರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry