ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ಯತೀತರು ಮತ್ತು ಅಪ್ಪ–ಅಮ್ಮ

ಮನುಷ್ಯನ ಹಾಗೆ ಪದವೂ ಅಪ್ಪ ಅಮ್ಮ ಇಲ್ಲದೆ ಹುಟ್ಟುವುದಿಲ್ಲ ಎಂಬುದನ್ನು ಕೇಂದ್ರ ಸಚಿವರು ಅರಿತು ಮಾತನಾಡಿದರೆ ಕ್ಷೇಮ
Last Updated 27 ಡಿಸೆಂಬರ್ 2017, 19:51 IST
ಅಕ್ಷರ ಗಾತ್ರ

‘ಅಪ್ಪ ಅಮ್ಮನ ಗುರುತು ಇಲ್ಲದಿರುವವರು ಜಾತ್ಯತೀತರು ಎಂದು ಕರೆಸಿಕೊಳ್ಳುತ್ತಿದ್ದಾರೆ’ (ಪ್ರ.ವಾ., ಡಿ.24) ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದ್ದಾಗಿ ವರದಿಯಾಗಿದೆ. ಒಂದು ಪದದ ವ್ಯುತ್ಪತ್ತಿ ನಮಗೆ ಗೊತ್ತಿಲ್ಲ ಎಂದಾಕ್ಷಣ ಅದರ ಅಪ್ಪ-ಅಮ್ಮ ಯಾರೆಂಬುದು ಗೊತ್ತಿಲ್ಲ ಎಂಬುದು ಅಜ್ಞಾನದ ಚರಮಸ್ಥಿತಿ. ಅಧಿಕಾರ ಸ್ಥಾನದಲ್ಲಿರುವವರು ಇದನ್ನು ಹೇಳಿದಾಗ ಸಹಜವಾಗಿಯೇ ಅವರ ಮಾತುಗಳಿಗೆ ತಲೆದೂಗುವುದಕ್ಕೆ, ತಲೆಯಾಡಿಸುವುದಕ್ಕೆ ಹೌದಪ್ಪಗಳಿರುತ್ತಾರೆ. ಆದರೆ ಸತ್ಯದೆದುರು ಇವೆಲ್ಲವೂ ಗೌಣ. ಅಪ್ಪ-ಅಮ್ಮ ಇಲ್ಲದಿರುವವರಿಗೆ ಅನಾಥರೆಂದು ಹೆಸರು. ಈ ದೇಶದಲ್ಲಿ ಸಾಕಷ್ಟು ಅನಾಥ ಮಕ್ಕಳಿದ್ದಾರೆ. ಅವರ ಅಪ್ಪ-ಅಮ್ಮ ಯಾರೆಂದು ಸಾಮಾನ್ಯವಾಗಿ ಗೊತ್ತಿರುವುದಿಲ್ಲ (ಗೊತ್ತಿರಬೇಕಾದ ಅಗತ್ಯವೂ ಇರುವುದಿಲ್ಲ). ಆದರೆ ಅಪ್ಪ ಅಮ್ಮ ಇದ್ದೇ ಇರುತ್ತಾರಲ್ಲ!

‘ಜಾತ್ಯತೀತ’ ಎಂಬುದು ಸಚಿವರಿಗೆ ಹೊಸ ಪದವಿರಬಹುದು. ಆದರೆ ಜ್ಞಾನಕೋಶಕ್ಕಲ್ಲ. ಭಾರತದ ಸಂವಿಧಾನದಲ್ಲೇ ಈ ಪದ ಸೇರಿಕೊಂಡಿದೆ. ಸಂಸದರಿಗೆ ಸಂವಿಧಾನದ ಪರಿಚಯವಿಲ್ಲದಿದ್ದರೆ ಪ್ರಜೆಗಳಾದರೂ ಏನು ಮಾಡಿಯಾರು? ಮನುಷ್ಯನ ಹಾಗೆ ಪದವೂ ಅಪ್ಪ ಅಮ್ಮ ಇಲ್ಲದೆ ಹುಟ್ಟುವುದಿಲ್ಲ ಎಂಬುದನ್ನು ಅರಿತು ಮಾತನಾಡಿದರೆ ಕ್ಷೇಮ (ವಾಗರ್ಥ ಪ್ರತಿಪಾದನೆಯಲ್ಲೂ ಇದನ್ನು ಹೇಳಲಾಗಿದೆ). ಜಾತಿ+ಅತೀತ ಎಂಬ ಎರಡು ಪದಗಳ ಜೋಡಣೆ ಇದು.

ತಿಳಿಯದ್ದನ್ನು ಇಲ್ಲವೆಂದು ಪ್ರಚಾರಮಾಡುವ ಮೊದಲು ಮತ್ತು ಬದಲು ಅದರ ಬಗ್ಗೆ ತಿಳಿದವರಿಂದ ಮಾಹಿತಿ ಪಡೆದುಕೊಳ್ಳುವುದು ಒಳ್ಳೆಯದು.

ಸೂಕ್ಷ್ಮವಾಗಿ Secularism ಎಂದು ಆಂಗ್ಲ ಭಾಷೆಯಲ್ಲಿ ಚಾಲ್ತಿಯಲ್ಲಿರುವ ಈ ಪದದ ಮಾಹಿತಿ ಹೀಗಿದೆ: ಮಧ್ಯಯುಗದ ತತ್ವಶಾಸ್ತ್ರಜ್ಞರ ಪ್ರಮೇಯ
ಗಳನ್ನು 16ನೇ ಶತಮಾನದ (ಮತ್ತು 17ನೇ ಶತಮಾನದ ಆರಂಭದ)ಲ್ಲಿ ಪ್ರಶ್ನಿಸಲಾಯಿತು. ನಿಕೋಲೋ ಮಷಿಯವಲ್ಲಿ ಎಂಬ ಪ್ರಖ್ಯಾತ ಫ್ಲೋರೆಂಟೀನ್ (ಇಟಲಿ) ರಾಜಕಾರಣಿಯು ಕ್ರೈಸ್ತ ಆದರ್ಶವಾದವನ್ನು ಧಿಕ್ಕರಿಸಿ ವಾಸ್ತವ ಅಧಿಕಾರ ರಾಜಕಾರಣವನ್ನು ಎತ್ತಿಹಿಡಿದ. ಮಷಿಯವಲ್ಲಿಯ ಚಿಂತನೆಗಳನ್ನು ಆಂಗ್ಲ ತತ್ವಶಾಸ್ತ್ರಜ್ಞ ಥಾಮಸ್ ಹಾಬ್ಸ್ ಸಾಮಾನ್ಯೀಕರಿಸಿದ. ಹಾಬ್ಸ್‌ನ ದೃಷ್ಟಿಯಲ್ಲಿ ಮನುಷ್ಯನ ಬದುಕೇ ‘ಅಧಿಕಾರಕ್ಕಾಗಿ ನಡೆಯುವ ಅವಿರತ ಹುಡುಕಾಟ’. ಈ ದೃಷ್ಟಿಕೋನವು ರಾಜಕೀಯವನ್ನು ಧರ್ಮದಿಂದ ಬೇರ್ಪಡಿಸಿದ್ದಕ್ಕಾಗಿ ‘ಜಾತ್ಯತೀತತೆ’ ಎಂದು ಪ್ರಸಿದ್ಧಿಯಾಯಿತು. ಈ ಚಿಂತನೆಗಳನ್ನು ಕಾನೂನಿನ ಸ್ವರೂಪಕ್ಕೆ ಇಳಿಸಿದ ಮೂವರು ಬರಹಗಾರರೆಂದರೆ ಜೋ ಬಾಡಿನ್ ಎಂಬ ಫ್ರೆಂಚ್ ಕಾನೂನು ತಜ್ಞ, ಜೊಹಾನ್ಸ್ ಅಲ್ತೂಸಿಯಸ್ ಎಂಬ ಜರ್ಮನ್ ರಾಜನೀತಿಜ್ಞ, ಮತ್ತು ಹ್ಯುಗೋ ಗ್ರೋಷಿಯಸ್ ಎಂಬ ಡಚ್ ನ್ಯಾಯವಾದಿ. ಅಂತರರಾಷ್ಟ್ರೀಯ ಕಾನೂನು ಇದನ್ನೇ ಆಧರಿಸಿದೆ.

ಡಿ.ಕೆ. ಭಾರದ್ವಾಜರ ಆಂಗ್ಲ-ಕನ್ನಡ ಅರ್ಥಕೋಶದಲ್ಲಿ Secularism ಎಂಬ ಪದಕ್ಕೆ ‘ರಾಜನೀತಿ, ನೀತಿ ಮತ್ತು ಶಿಕ್ಷಣಗಳು ಧರ್ಮ ಪ್ರಭಾವದಿಂದ ಬೇರ್ಪಡ ಬೇಕೆಂಬ ತತ್ವ; ಜಾತ್ಯಾತೀತತೆ’ ಎಂಬ ಅರ್ಥವನ್ನು ನೀಡಲಾಗಿದೆ. ಭಾರತದಲ್ಲಿ ಇದನ್ನೇ ಧರ್ಮನಿರಪೇಕ್ಷತೆ ಎಂದು ಕರೆಯುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತು ಹೊರತಂದ ಕನ್ನಡ ನಿಘಂಟುವಿನಲ್ಲಿ ಜಾತ್ಯತೀತ ಎಂಬ ಪದಕ್ಕೆ ಗುಣವಾಚಕವಾಗಿ ಜಾತಿಯನ್ನು ಮೀರಿದ;
ಜಾತಿ ಭಾವನೆಯನ್ನು ಬಿಟ್ಟ; ಎಂಬ ಹಾಗೂ ನಾಮಪದ ವಾಗಿ ಜಾತಿಯನ್ನು ಮೀರಿದವನು; ಜಾತಿಯ ದುರಭಿಮಾನವನ್ನು ಬಿಟ್ಟವನು ಎಂಬ ಅರ್ಥಗಳಿವೆ.

ಇಂತಹ ಪಾರಿಭಾಷಿಕ ಪದದ ಮೌಲ್ಯವನ್ನು ಗುರುತಿಸಿ ಗೌರವಿಸಬೇಕು. ಆದರೆ ನಮ್ಮ ರಾಜಕಾರಣಿಗಳು ಇದನ್ನು ತಮ್ಮ ನಾಲಿಗೆಯಲ್ಲಿ ಅಟ್ಟಾಡಿಸಿ
ಚಿಂದಿಮಾಡಿದ್ದಾರೆ, ಹಗುರಾಗಿಸಿದ್ದರೆ. ಈ ಪ್ರವೃತ್ತಿಯನ್ನು ಆರಂಭಿಸಿದವರು ಇಂದು ಮೂಲೆಗುಂಪಾಗಿರುವ ಹಿರಿಯ ಬಿಜೆಪಿ ರಾಜಕಾರಣಿ ಎಲ್.ಕೆ. ಅಡ್ವಾಣಿಯವರು. ಕಾಂಗ್ರೆಸ್ ಪಕ್ಷವನ್ನು ದೂಷಿಸುವ ಭರದಲ್ಲಿ ಅವರು ‘ಡೋಂಗೀ ಜಾತ್ಯತೀತತೆ’ (Pseudo secularism) ಎಂಬ ಪದವನ್ನು ಸೃಷ್ಟಿಸಿದರು. ಈ ಪದಕ್ಕೆ ಅವರೇ ಅಪ್ಪ, ಅಮ್ಮ ಎಲ್ಲವೂ. ಈಗ ಅವರ ರಾಜಕೀಯ ಮುಗಿದರೂ ಈ ಪದ ಉಳಿದುಕೊಂಡಿದೆ. ಅಯೋಧ್ಯಾ ಆಂದೋಲನದ ಸಂದರ್ಭದಲ್ಲಿ ಅಡ್ವಾಣಿಯವರು ಈ ಪದವನ್ನು ಹುಟ್ಟುಹಾಕಿದರು. ಅವರ ಅಭಿಪ್ರಾಯವನ್ನು ಗೌರವಿಸೋಣ. ಏಕೆಂದರೆ ಲೋಕೋ ಭಿನ್ನ ರುಚಿಃ. ಆದರೆ ಇದನ್ನು ರಾಜಕಾರಣದಿಂದ ಅನಾಮತ್ತಾಗಿ ಎತ್ತಿಕೊಂಡು ಎಲ್ಲ ಕಡೆ ಮಾತನಾಡುವವರಿಗೆ ಇದು ಬಿಟ್ಟಿ ಕೂಳಾಗಿದೆ. ಪರಿಣಾಮವಾಗಿ ಭಾಷೆ ನರಳುತ್ತಿದೆ.

ಜಾತ್ಯತೀತತೆ ಒಂದು ಗುಣಾತ್ಮಕ, ಧನಾತ್ಮಕ ವಿಚಾರ- ಧರ್ಮದ ಹಾಗೆ. ಅದನ್ನು ಅನುಷ್ಠಾನಗೊಳಿಸುವವರು, ಅದರ ಅರ್ಥವನ್ನು ತಿಳಿದಿರಬೇಕು. ಇಲ್ಲವಾದರೆ ಇಂದು ಧರ್ಮವು ಹೇಗೆ ದುರಾಡಳಿತಕ್ಕೆ ಒಳಪಟ್ಟಿದೆಯೋ ಹಾಗೆಯೇ ಜಾತ್ಯತೀತತೆಯೂ ರಾಜಕೀಯದ ದುಷ್ಟತನಕ್ಕೆ ಬಲಿಯಾದೀತು.

– ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಮಡಿಕೇರಿ

ಅಂಗಾಂಗ ಮಾರುಕಟ್ಟೆ?

‘ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರ ನಾಲಿಗೆ ಕತ್ತರಿಸಿ ತಂದವರಿಗೆ ₹1 ಕೋಟಿ ಬಹುಮಾನ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರೊಬ್ಬರು ‘ವೀರೋಚಿತ’ ಘೋಷಣೆ ಮಾಡಿದ್ದಾರೆ. ಇತ್ತೀಚೆಗೆ ಪದ್ಮಾವತಿ ಚಿತ್ರದ ವಿವಾದ ಭುಗಿಲೆದ್ದಾಗಲೂ ಕೆಲವರು ಇಂತಹ ಘೋಷಣೆ ಮಾಡಿದ್ದರು. ನಟಿಯ ಮೂಗಿಗೆ ₹ 2-3 ಕೋಟಿ ಬೆಲೆ ಕಟ್ಟಲಾಗಿತ್ತು! ಇತ್ತೀಚೆಗಂತೂ ಮಾನವ ಅಂಗಾಂಗಗಳಿಗೆ ಇಂತಹ ಇನಾಮುಗಳನ್ನು ಘೋಷಿಸುವುದು ಸಾಮಾನ್ಯವಾಗಿಬಿಟ್ಟಿದೆ. ಇದನ್ನೆಲ್ಲ ನೋಡಿದರೆ ನಾವು ಪ್ರಜಾಪ್ರಭುತ್ವ ದೇಶದಲ್ಲಿದ್ದೇವೆಯೇ ಅಥವಾ ಮಾನವ ಅಂಗಾಂಗಗಳ ಮಾರುಕಟ್ಟೆಯಲ್ಲಿದ್ದೇವೆಯೇ ಅನ್ನಿಸುತ್ತದೆ!

ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಏಳು ದಶಕಗಳಾದರೂ ವೈಚಾರಿಕ ವಿಭನ್ನತೆಯನ್ನು ಅದೇ ಸ್ತರದ ವೈಚಾರಿಕ ಮಟ್ಟದಲ್ಲಿ ಎದುರಿಸುವಂತಹ
ಪ್ರಜಾಸತ್ತಾತ್ಮಕ ಪ್ರಬುದ್ಧತೆಯನ್ನು ಸಾಧಿಸದೆ ಹಿಂಸಾತ್ಮಕ ಧೋರಣೆಯನ್ನು ಹೊಂದುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಪ್ರಜ್ಞಾನವಂತರು ಇದನ್ನು ಬಿಡಿ ಘಟನೆಗಳೆಂದು ಅಲಕ್ಷಿಸದೆ, ಇಂಥ ಪ್ರವೃತ್ತಿ ವಿರುದ್ಧ ಧ್ವನಿ ಎತ್ತಬೇಕಾಗಿದೆ.

–ಎ.ಜೆ. ಜಾವೀದ್, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT