7
ಕಾಟಾಚಾರ ಎಂಬಂತೆ ಭಾಸವಾದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ

ಮುಕ್ಕಾಲು ಗಂಟೆಯಲ್ಲೇ ಮುಗಿಯಿತು ಸಭೆ!

Published:
Updated:
ಮುಕ್ಕಾಲು ಗಂಟೆಯಲ್ಲೇ ಮುಗಿಯಿತು ಸಭೆ!

ಬಳ್ಳಾರಿ: ಹಿಂದಿನ ಸಾಮಾನ್ಯ ಸಭೆಯ ನಡಾವಳಿಗಳನ್ನುಅಧಿಕಾರಿಯೊಬ್ಬರು ಓದುತ್ತಾ ಹೋದಂತೆ ಮೇಯರ್‌, ಆಯುಕ್ತರು ಹಾಗೂ ಸದಸ್ಯರು ಸಮ್ಮತಿಸಲು ತಡಮಾಡಲಿಲ್ಲ. ಹಾಗೆಯೇ ತರಾತುರಿಯಲ್ಲಿ (45 ನಿಮಿಷ) ಸಭೆ ಮುಗಿಸುವುದನ್ನೂ ಮರೆಯಲಿಲ್ಲ. ಹೌದು, ಬುಧವಾರ ಪಾಲಿಕೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ಯಾವುದೇ ಗಂಭೀರ ಚರ್ಚೆಗಳಿಲ್ಲದೇ ಮುಕ್ಕಾಲು ಗಂಟೆಯಲ್ಲೇ ಮುಕ್ತಾಯಗೊಂಡಿತು.

‘ನಿವೇಶನಕ್ಕಾಗಿ ಸಹಾಯಧನ ಪಡೆಯುವ ಫಲಾನುಭವಿಗಳ ಪಟ್ಟಿಯನ್ನು ಮೇಯರ್‌, ಸದಸ್ಯರ ಗಮನಕ್ಕೆ ತರದೇ ಸಿದ್ಧಪಡಿಸಿದ ಅಧಿಕಾರಿಗಳ ಕ್ರಮವನ್ನು ಸದಸ್ಯ ಕರೆಕೊಡಪ್ಪ ಖಂಡಿಸಿದರು. ಮತ್ತೊಬ್ಬ ಸದಸ್ಯ ಕುಮಾರಸ್ವಾಮಿ ಕೂಡ ಇದಕ್ಕೆ ದನಿಗೂಡಿಸಿದರು. ಆಗ ಪ್ರತಿಕ್ರಿಯಿಸಿ ಅಧಿಕಾರಿ, ಇನ್ನು ಮುಂದೆ ಹೀಗಾಗದಂರೆ ನೋಡಿಕೊಳ್ಳುತ್ತೇನೆ ಎಂದು ಹೇಳಿ ಜಾರಿಕೊಂಡರು.

‘ನಗರದ ಗುಗ್ಗರಹಟ್ಟಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಧನಸಹಾಯ ನೀಡುತ್ತಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ’ ಎಂದು ಸದಸ್ಯೆ ಪರ್ವಿನ್‌ ಭಾನು ಸಭೆಯ ಗಮನಕ್ಕೆ ತಂದರು. ಮೇಯರ್‌ ಜಿ.ವೆಂಟರಮಣ ಮಾತನಾಡಿ, ಸಮಸ್ಯೆಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಸರ್ಕಾರೇತರ ಸಂಘಟನೆಗಳು ಜನರಲ್ಲಿ ವೈಯಕ್ತಿಕ ಶೌಚಾಲಯ ಕುರಿತು ಜಾಗೃತಿ ಮೂಡಿಸಬೇಕು. ಈ ರೀತಿ ಅರಿವು ಮೂಡಿಸಿ, ಶೌಚಾಲಯ ಕಟ್ಟಿಸಿಕೊಳ್ಳುವಂತೆ ಮಾಡಿದರೆ ಪ್ರತಿ ಶೌಚಗೃಹಕ್ಕೆ ₹ 150 ನೀಡಲಾಗುತ್ತದೆ’ ಎಂದು ತಿಳಿಸಿದರು.

‘ಪಾಲಿಕೆ ನೀರುಗಂಟಿಗಳಿಗೆ ಕನಿಷ್ಠ ವೇತನ ಪಾವತಿಸುತ್ತಿಲ್ಲ. 132 ಕೆಲಸಗಾರರರಿಗೆ ತಲಾ ₹ 10 ಸಾವಿರ ಸಂಬಳ ನೀಡಲಾಗುತ್ತಿದೆ. ಪಿಎಫ್‌, ಇಎಸ್‌ಐ ಕಡಿತಗೊಳಿಸುತ್ತಿರುವ ಮಾಹಿತಿಯೂ ಅವರಿಗೆ ಇಲ್ಲ. ಹಾಗಾಗಿ ಎಲ್ಲಾ ಮಾಹಿತಿಗಳನ್ನು ಸದಸ್ಯರ ಮುಂದೆ ಬಹಿರಂಗ ಪಡಿಸಬೇಕು ಎಂದು ಸದಸ್ಯ ಸುಧಾಕರ ದೇಸಾಯಿ ಪಟ್ಟು ಹಿಡಿದರು. ಆಯುಕ್ತ ಎಂ.ಕೆ.ನಲ್ವಡಿ ಮಧ್ಯಪ್ರವೇಶಿಸಿ, ವೇತನ ಸರಿಯಾಗಿ ನೀಡಲಾಗುತ್ತಿದೆ. ಈ ಕುರಿತು ಮಾಹಿತಿ ಪಟ್ಟಿ ನೀಡಲಾಗುವುದು’ ಎಂದರು. ‘ನೀರಿನ ತೆರಿಗೆ ವಸೂಲಿ ಮಾಡಲು ಸಿಬ್ಬಂದಿ ಕೊರತೆ ಇದೆ. ಸಿಬ್ಬಂದಿ ನೇಮಕ ಮಾಡಿಕೊಂಡರೆ ಪಾಲಿಕೆಯ ಆದಾಯ ಸಂಗ್ರಹ ಹೆಚ್ಚಲಿದೆ.

ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಸದಸ್ಯ ಕುಮಾರಸ್ವಾಮಿ ಆಗ್ರಹಿಸಿದರು. ‘ಡಿಸೆಂಬರ್‌ 4 ರಂದು ಬಿಡಿಎಎ ಸಭಾಂಗಣದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು. ಸರ್ಕಾರದಿಂದ ಅನುದಾನ ಬಂದಿರಲಿಲ್ಲ.

ಪಾಲಿಕೆ ವತಿಯಿಂದ ಧನಸಹಾಯ ಮಾಡುವಂತೆ ನಗರ ಶಾಸಕರು ಪತ್ರ ಬರೆದಿದ್ದಾರೆ’ ಎಂದು ಮೇಯರ್‌ ತಿಳಿಸಿದರು. ಆಗ ಪಾಲಿಕೆಯಿಂದ ₹5 ಲಕ್ಷ ನೀಡಲು ಎಲ್ಲ ಸದಸ್ಯರು ಸಮ್ಮತಿಸಿದರು.

ಮೇಯರ್‌, ಉಪ ಮೇಯರ್‌ ಇನ್ನೋವಾ ಕಾರುಗಳು ದುರಸ್ತಿಯಲ್ಲಿವೆ. ಹೊಸ ಕಾರುಗಳ ಖರೀದಿಗೆ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಅಲ್ಲಿಯವರೆಗೂ ಎರಡು ಬಾಡಿಗೆ ಏಸಿ ಕಾರಿಗೆ ತಲಾ ₹ 29 ಸಾವಿರದಂತೆ ಮಾಸಿಕ ಒಟ್ಟು ₹ 58 ಸಾವಿರ ಪಾವತಿಸಲು ಸದಸ್ಯರು ಒಪ್ಪಿಗೆ ಸೂಚಿಸಿದರು.

ಸುಮಾರು 30ಕ್ಕಿಂತ ಹೆಚ್ಚು ನಡಾವಳಿಗಳಿಗೆ ಸದಸ್ಯರು ಯಾವುದೇ ಆಕ್ಷೇಪ ಎತ್ತದೇ ಸಹಮತ ಸೂಚಿಸಿದರು. ಉಪಮೇಯರ್‌ ಉಮಾದೇವಿ, ಸದಸ್ಯರು, ಅಧಿಕಾರಿಗಳು ಇದ್ದರು.

ಐದು ಕಡೆ ಇಂದಿರಾ ಕ್ಯಾಂಟೀನ್‌

ನಗರದಲ್ಲಿ ಐದು ಕಡೆ ಇಂದಿರಾ ಕ್ಯಾಂಟಿನ್‌ ಸ್ಥಾಪಿಸಲಾಗುವುದು ಎಂದು ಮೇಯರ್‌ ಜಿ.ವೆಂಕಟ ರಮಣ ಹೇಳಿದರು. ಕನಕ ದುರ್ಗಮ್ಮ ದೇವಸ್ಥಾನ ಬಳಿ, ಎಪಿಎಂಸಿ ಕಾಂಪೌಂಡ್‌ ಒಳಗಡೆ, ಪಾಲಿಕೆ ಹಳೆಯ ಕಾರ್ಯಾಲಯ ಹತ್ತಿರ. ಟಿ.ಬಿ ಆಸ್ಪತ್ರೆ ಹಾಗೂ ಎಸ್ಪಿ ವೃತ್ತದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಆವರಣದಲ್ಲಿ ಕ್ಯಾಂಟೀನ್‌ ತೆರೆಯಲಾಗುವುದು’ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry