7
ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ಕೃಷ್ಣಮೂರ್ತಿ ಹನೂರು ವಿಷಾದ

ಆಧುನಿಕತೆಯಿಂದ ಜೀವನ ಸ್ವಾರಸ್ಯ ದೂರ

Published:
Updated:

ಚಾಮರಾಜನಗರ: ‘ಆಧುನಿಕತೆ ಬೆಳೆದಂತೆ ಯುವಜನರು ಅದರತ್ತ ಆಕರ್ಷಿತರಾಗುತ್ತಿದ್ದಾರೆ. ಇದರ ಪರಿಣಾಮ ಜೀವನದ ಸ್ವಾರಸ್ಯವನ್ನು ಅವರು ಕಳೆದುಕೊಳ್ಳುತ್ತಿದ್ದಾರೆ’ ಎಂದು ಸಾಹಿತಿ ಡಾ.ಕೃಷ್ಣಮೂರ್ತಿ ಹನೂರು ವಿಷಾದ ವ್ಯಕ್ತಪಡಿಸಿದರು.

ನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜಿನಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜೆಎಸ್‌ಎಸ್‌ ಕಾಲೇಜಿನಿಂದ ನಡೆದ ಸಾಧಕರೊಂದಿಗೆ ಸಂವಾದ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕತೆಯ ಪ್ರಭಾವಕ್ಕೆ ಒಳಗಾಗುತ್ತಿರುವ ಇಂದಿನ ಪೀಳಿಗೆಗೆ ಅದನ್ನು ಎದುರಿಸುವ ಬಗೆ ಯಾವುದು ಎನ್ನುವ ಪ್ರಶ್ನೆ ಕಾಡುತ್ತಿದೆ. ನಮ್ಮತನ, ನಮ್ಮ ತಂದೆ–ತಾಯಿ, ನಮ್ಮ ಊರು, ಪರಿಸರದ ಬಗ್ಗೆ ಕೀಳರಿಮೆ ಉಂಟಾಗುತ್ತಿದೆ. ಹೊಸಜಗತ್ತು ಕಲಿಸಿದ್ದನ್ನು ಸ್ವೀಕರಿಸಿಬಿಟ್ಟರೆ ನಮ್ಮ ಉದ್ಧಾರವಾಗುತ್ತದೆ ಎಂಬ ಧೋರಣೆಯೊಂದಿಗೆ ತಮ್ಮ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಆಧುನಿಕತೆಯನ್ನು ಅಗತ್ಯ ಬೇಕಾದಷ್ಟು ಮಾತ್ರ ಸ್ವೀಕರಿಸಬೇಕು. ನಾವು ಬೆಳೆದ ಪರಿಸರ, ಕಲಿತ ಶಾಲೆ, ಕಾಲೇಜುಗಳನ್ನು ಸದಾ ಸ್ಮರಿಸಿಕೊಳ್ಳಬೇಕು. ನಾವು ಎಲ್ಲಿಯೇ ಹೋದರೂ ನಮ್ಮತನವನ್ನು ಬಿಟ್ಟುಕೊಡಬಾರದು ಎಂದು ಸಲಹೆ ನೀಡಿದರು.

ಲೋಕವನ್ನು ಹಾಗೂ ತನ್ನತನವನ್ನು ಪ್ರೀತಿಸದೇ ಇರುವವನು ಬರಹಗಾರನಾಗಲು ಸಾಧ್ಯವಿಲ್ಲ. ಸಾಹಿತಿಯ ಜೀವನ ಹೊರಜಗತ್ತಿಗೆ ಅಧ್ವಾನವಾಗಿ ಕಂಡರೂ ಅವನ ಅಂತರಂಗದಲ್ಲಿ ಬಹುವಿಶಾಲವಾದ ಪ್ರೀತಿ ಇರುತ್ತದೆ ಎಂದು ತಿಳಿಸಿದರು.

ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಮಾತನಾಡಿ, ಮನುಷ್ಯನ ಜೀವನದಲ್ಲಿ ಎಲ್ಲದಕ್ಕಿಂತ ದೊಡ್ಡದು ಜ್ಞಾನ. ಸೌಂದರ್ಯ, ಅಧಿಕಾರ, ಶ್ರೀಮಂತಿಕೆ ಎಲ್ಲವೂ ಮಾಜಿ ಆಗುತ್ತದೆ. ಆದರೆ, ಜ್ಞಾನ ಮಾತ್ರ ಬಳಸಿದಷ್ಟೂ ಹೆಚ್ಚುತ್ತದೆ. ಜ್ಞಾನವೊಂದೇ ಜೀವನದಲ್ಲಿ ಕೊನೆಯವರೆಗೂ ಉಳಿಯುವ ಏಕೈಕ ಸಂಪತ್ತು ಎಂದು ಹೇಳಿದರು.

ಸ್ಥಳೀಯವಾಗಿ ಭಾಷೆಯನ್ನು ಉಳಿಸುತ್ತೇವೆ ಎನ್ನುವುದು ಕೇವಲ ಉದ್ವೇಗದ ಮಾತುಗಳಷ್ಟೇ. ನೆಲದ ಭಾಷೆಯನ್ನು ಕಲಿತವರಿಗೆ ಸರ್ಕಾರವು ಸಾಮಾಜಿಕ ಭದ್ರತೆ ನೀಡುವವರೆಗೂ ಅದನ್ನು ಕಾಪಾಡಿಕೊಳ್ಳುವುದು ಸಾಧ್ಯವಿಲ್ಲ ಎಂದರು.

ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಹಿತಿ ಪ್ರೊ. ಮಲೆಯೂರು ಗುರುಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿ. ನಾಗಣ್ಣ, ಜೆಎಸ್ಎಸ್ ಸಂಸ್ಥೆಯ ಪಿಆರ್‌ಒ ಆರ್.ಎಂ. ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹದೇವಯ್ಯ, ಪ್ರಾಂಶುಪಾಲ ಕೆ.ಎಂ. ವೀರಣ್ಣ ಹಾಜರಿದ್ದರು.

ಮಧ್ಯಾಹ್ನ ನಡೆದ ಕವಿಗೋಷ್ಠಿಯಲ್ಲಿ 16ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು.

***

ವಿಶ್ವ ಅರ್ಥವಾಗಬೇಕಾದರೆ ತಮ್ಮ ಊರು ತಿಳಿಯಬೇಕು. ತಂದೆ, ತಾಯಿಯನ್ನು ಗೌರವಿಸುವುದರಿಂದ ದೇಶವನ್ನು ಗೌರವಿಸುವ ಗುಣ ಬರುತ್ತದೆ.

-ಡಾ.ಕೃಷ್ಣಮೂರ್ತಿ ಹನೂರು, ಸಾಹಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry