7
ಉರುಕಾತೇಶ್ವರಿ ದೇವಸ್ಥಾನದ ಗೊಂದಲ: ಮುಖಂಡರ ಹೇಳಿಕೆ

ಯಾವುದೇ ಟ್ರಸ್ಟ್ ಸ್ಥಾಪನೆ ಮಾಡಿಲ್ಲ

Published:
Updated:

ಚಾಮರಾಜನಗರ: ತಾಲ್ಲೂಕಿನ ಉಮ್ಮತ್ತೂರು ಉರುಕಾತೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಯಾವುದೇ ಟ್ರಸ್ಟ್‌ ಇಲ್ಲ ಎಂದು ಗ್ರಾಮದ ಮುಖಂಡರು ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಮುಖಂಡರು, ಕಾನೂನಿನ ಪ್ರಕಾರವಾಗಿ ದೇವಸ್ಥಾನದ ಹೆಸರಿನಲ್ಲಿ ಟ್ರಸ್ಟ್‌ ಸ್ಥಾಪನೆ ಮಾಡಿಕೊಂಡಿಲ್ಲ. ಉಮ್ಮತ್ತೂರು ಉರುಕಾತೇಶ್ವರಿ ಅಮ್ಮನವರ ಭಕ್ತ ಮಂಡಳಿ ಎಂಬ ಹೆಸರಿನಲ್ಲಿ ರಸೀದಿ ಮಾಡಿಕೊಂಡಿದ್ದಾರೆ. ಹೀಗಾಗಿ ಟ್ರಸ್ಟ್‌ನ ಪದಾಧಿಕಾರಿಗಳು ದೇವರ ಭಕ್ತಾದಿಗಳೇ ಹೊರತು, ದೇವಸ್ಥಾನದ ವ್ಯವಹಾರಗಳನ್ನು ನಿರ್ವಹಣೆ ಮಾಡುವವರಲ್ಲ ಎಂದರು.

ಈ ಹಿಂದೆ ಗೌಡರಾಗಿದ್ದ ಗುರುಮಲ್ಲಪ್ಪ ಅವರ ಬಳಿ ಇದ್ದ ದೇವಸ್ಥಾನದ ಕೀಯನ್ನು ತಹಶೀಲ್ದಾರ್‌ ಅವರಿಗೆ ಒಪ್ಪಿಸಲಾಗಿತ್ತು. ಗ್ರಾಮದ ಜನರು ಟ್ರಸ್ಟ್‌ ವಿರುದ್ಧ ಸಲ್ಲಿಸಿರುವ ದಾವೆ ಇತ್ಯರ್ಥವಾಗುವವರೆಗೂ ರೂಢಿ, ಸಂಪ್ರದಾಯ ಪಾಲನೆ ಮಾಡುವಂತೆ ನ್ಯಾಯಾಲಯ ಸೂಚಿಸಿದೆ. ಇದರಂತೆ ಕೀ ವಶಪಡಿಸಿಕೊಳ್ಳಲಾಗಿದ್ದ ಗೌಡಿಕೆ ಗುರುಮಲ್ಲಪ್ಪ ಅವರಿಗೆ ತಹಶೀಲ್ದಾರ್‌ ಅವರು ಕೀಯನ್ನು ಹಸ್ತಾಂತರಿಸಿದ್ದಾರೆಯೇ ಹೊರತು ಟ್ರಸ್ಟ್‌ಗೆ ಅಲ್ಲ ಎಂದು ವಕೀಲ ಎಸ್‌. ಗುರುಸ್ವಾಮಿ ತಿಳಿಸಿದರು.

ಟ್ರಸ್ಟ್‌ ನೋಂದಣಿ ಮಾಡಿಕೊಂಡ ಮಾಹಿತಿಯಲ್ಲಿ ಅದರ ದಿನಾಂಕವನ್ನೇ ನಮೂದಿಸಿಲ್ಲ. ಅಲ್ಲದೆ, ದೇವಸ್ಥಾನಕ್ಕೆ ಯಾವುದೇ ಆಸ್ತಿ ಇಲ್ಲ ಎಂದು ಟ್ರಸ್ಟ್‌ನಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ, ದೇವಸ್ಥಾನದ ಹೆಸರಿನಲ್ಲಿ 2 ಅಂತಸ್ತಿನ ಕಟ್ಟಡ, ರಥ ನಿಲ್ಲಿಸುವ ಜಾಗ ಮುಂತಾದ ಸ್ಥಿರ ಆಸ್ತಿಗಳಿವೆ. ಉಳಿತಾಯ ಖಾತೆಯಲ್ಲಿ ₹1.50 ಲಕ್ಷ ಮತ್ತು ಠೇವಣಿ ರೂಪದಲ್ಲಿ ₹2.50 ಲಕ್ಷವಿದೆ. ಟ್ರಸ್ಟ್‌ ರಚನೆಗೆ ಸ್ಥಾಪಕ ಧರ್ಮದರ್ಶಿಗಳು ತಲಾ ₹1,000 ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅದರ ಪ್ರಕಾರ ಟ್ರಸ್ಟ್‌ನಲ್ಲಿ ಸಂಗ್ರಹವಾದ ಹಣ ₹9,000 ಆಗಬೇಕಿತ್ತು. ಆದರೆ, ಟ್ರಸ್ಟ್‌ನ ಮೂಲ ಆಸ್ತಿ ಕೇವಲ ₹3,000 ಎಂದು ತೋರಿಸಲಾಗಿದೆ ಎಂದು ಆರೋಪಿಸಿದರು.

ದೇವಸ್ಥಾನದ ನಿರ್ವಹಣೆಯನ್ನು ನಡೆಸುವುದಾಗಿ ಟ್ರಸ್ಟ್‌ನ ಘೋಷಣೆ ಪತ್ರದಲ್ಲಿ ಹೇಳಲಾಗಿದೆ. ದೇವಸ್ಥಾನದ ಖರ್ಚು, ನಷ್ಟಗಳಿಗೆ ಪದಾಧಿಕಾರಿಗಳು ಹೊಣೆಗಾರರಲ್ಲ ಎಂದೂ ತಿಳಿಸಲಾಗಿದೆ. ಇದರ ಅರ್ಥ ಟ್ರಸ್ಟ್‌ ಸ್ಥಾಪನೆ ಮಾಡಿರು ವುದು ಹಣ ಸಂಪಾದನೆಗಾಗಿ ಎಂಬುದು ಸ್ಪಷ್ಟವಾಗುತ್ತದೆ ಎಂದು ದೂರಿದರು.

ದೇವಸ್ಥಾನಕ್ಕೂ ಗುರುಮಲ್ಲಪ್ಪ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಟ್ರಸ್ಟ್‌ಗೂ ಯಾವುದೇ ಸಂಬಂಧವಿಲ್ಲ. ತಹಶೀಲ್ದಾರ್‌ ಅವರು ಗ್ರಾಮಕ್ಕೆ ಭೇಟಿ ನೀಡಿ ಎಲ್ಲ ಜನಾಂಗದವರ ಸಭೆ ಕರೆದು ಸಮಾಲೋಚನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮದ ಗೌಡರಾದ ಡಿ. ಪುಟ್ಟಯ್ಯ, ಮುಖಂಡ ರಾದ ಉಮ್ಮತ್ತೂರು ನಾಗೇಶ್‌, ಟಿ. ಲಿಂಗರಾಜು, ಪಿ. ರಾಜಶೇಖರಮೂರ್ತಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry