7
ಏಳು ವರ್ಷದಿಂದ ನಡೆಯದ ಜಿಲ್ಲಾ ಮಟ್ಟದ ಆರೋಗ್ಯ ರಕ್ಷಾ ಸಮಿತಿ ಸಭೆ

ಸಭೆ ಮಾಡುವುದನ್ನೇ ಮರೆತ ಸಚಿವರು!

Published:
Updated:
ಸಭೆ ಮಾಡುವುದನ್ನೇ ಮರೆತ ಸಚಿವರು!

ಚಿಕ್ಕಬಳ್ಳಾಪುರ: ಜಿಲ್ಲಾ ಆಸ್ಪತ್ರೆಯ ಕಾರ್ಯವೈಖರಿ ಪರಿಶೀಲಿಸಬೇಕಾದ, ಸಾರ್ವಜನಿಕರ ಕುಂದುಕೊರತೆಯನ್ನು ಆಲಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಆರೋಗ್ಯ ರಕ್ಷಾ ಸಮಿತಿಯ ಸಭೆ ಜಿಲ್ಲೆಯಲ್ಲಿ ಸುಮಾರು ಏಳು ವರ್ಷಗಳಿಂದ ನಡೆದೇ ಇಲ್ಲಾ!

ಈವರೆಗೆ ತಾಲ್ಲೂಕು ಮಟ್ಟದಲ್ಲಿ ಮಾತ್ರ ಅಲ್ಲೊಂದು, ಇಲ್ಲೊಂದು ಸಭೆ ನಡೆದಿವೆ. ಆದರೆ ನಿಯಮಿತವಾಗಿ ನಡೆಸಬೇಕಾದ ಸಭೆಗಳ ಬಗ್ಗೆ ಜನಪ್ರತಿನಿಧಿಗಳು ಆಸಕ್ತಿ ತೋರಿಸುತ್ತಿಲ್ಲ ಎನ್ನುವ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ಮನೆ ಮಾಡಿದೆ.

ಜಿಲ್ಲಾ ಆಸ್ಪತ್ರೆಗೆ ಸಂಬಂಧಿಸಿದಂತೆ ಸಭೆ ನಡೆದಿದ್ದು ತೀರಾ ಕಡಿಮೆ. ಆರೋಗ್ಯ ರಕ್ಷಾ ಸಮಿತಿ ಕಾರ್ಯಕಾರಿ ಸಮಿತಿ ಸಭೆಗಳು ಆಡಳಿತಾತ್ಮಕ ಕೆಲಸಗಳನ್ನು ಪರಿಶೀಲಿಸುತ್ತಿವೆ. ಆದರೆ ಸಾರ್ವಜನಿಕರ ಕುಂದುಕೊರತೆ ಆಲಿಸುವ ಸಭೆ ನಡೆಸಿಲ್ಲ. ಕಾಂಗ್ರೆಸ್ ಸರ್ಕಾರದ ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಈವರೆಗೆ ಜಿಲ್ಲೆಯು ಮೂರು ಉಸ್ತುವಾರಿ ಸಚಿವರನ್ನು ಕಂಡಿದೆ. ಈ ಪೈಕಿ ಯಾವ ಸಚಿವರೂ ಸಭೆ ನಡೆಸುವ ಗೋಜಿಗೆ ಹೋಗಿಲ್ಲ ಆರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರ ಹೇಳಿಕೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾದ ಬಳಿಕ ಮೊದಲ ಬಾರಿಗೆ 2013 ಜೂನ್‌ನಲ್ಲಿ ಆಹಾರ ಖಾತೆ ಸಚಿವರಾಗಿದ್ದ ದಿನೇಶ್ ಗುಂಡೂರಾವ್‌ ಅವರನ್ನು ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಬಳಿಕ 2014 ಫೆಬ್ರುವರಿಯಿಂದ ಆ ಜವಾಬ್ದಾರಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ವಾರ್ತಾ ಸಚಿವ ಆರ್. ರೋಷನ್ ಬೇಗ್ ಅವರು ಹೆಗಲೇರಿತು.

ಸದ್ಯ 2016ರ ಜೂನ್‌ನಿಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಈವರೆಗೆ ಜಿಲ್ಲಾ ಆಸ್ಪತ್ರೆಗೆ ಸಂಬಂಧಿಸಿದಂತೆ ನೂರಾರು ದೂರುಗಳು ಅವರ ಗಮನಕ್ಕೆ ಬಂದಿವೆ. ಆದರೂ ಅವರು ಒಂದೂವರೆ ವರ್ಷಗಳಾದರೂ ಒಂದೇ ಒಂದು ಸಭೆ ನಡೆಸಲು ಆಸಕ್ತಿ ತೋರಿಸಿಲ್ಲ.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ, ಸಾಮಾನ್ಯ ಸಭೆಗಳಲ್ಲಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಪ್ರತಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಲೇ ಬರುತ್ತಿವೆ. ಆದರೂ ಈವರೆಗೆ ಯಾವೊಬ್ಬ ಜನಪ್ರತಿನಿಧಿಯೂ ಮುಂದಾಗಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿಲ್ಲ ಎಂದು ಪ್ರಜ್ಞಾವಂತ ನಾಗರಿಕರು ದೂರುತ್ತಾರೆ.

‘ಜಿಲ್ಲಾ ಆಸ್ಪತ್ರೆಯೊಳಗಿನ ಅವ್ಯವಸ್ಥೆ, ಭ್ರಷ್ಟಾಚಾರ ಕುರಿತು ನಾವು ಅನೇಕ ಬಾರಿ ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆ ಆಯುಕ್ತರಿಗೆ ಅವರಿಗೆ ಲಿಖಿತವಾಗಿ ಮನವಿ ಕೊಟ್ಟಿದ್ದೇವೆ. ಆದರೆ ಏನೂ ಪ್ರಯೋಜನವಾಗಿಲ್ಲ. ಕಾಟಾಚಾರಕ್ಕೆ ಮನವಿ ತೆಗೆದುಕೊಂಡು ಭರವಸೆ ನೀಡುವ ಅಧಿಕಾರಿಗಳೇ ಕಟ್ಟುನಿಟ್ಟಾಗಿ ತಮ್ಮ ಕೆಲಸ ಮಾಡುತ್ತಿಲ್ಲ. ಹೀಗಾಗಿ ಇತ್ತೀಚೆಗೆ ಆರೋಗ್ಯ ಸಚಿವ ರಮೇಶ್‌ಕುಮಾರ್ ಅವರಿಗೆ ದೂರು ಸಲ್ಲಿಸಿದ್ದೇವೆ’ ಎಂದು ಸಮಾನ ಮನಸ್ಕರ ವೇದಿಕೆ ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ ಹೇಳಿದರು.

‘ಉಸ್ತುವಾರಿ ಸಚಿವರಿಗೆ ತಾನು ಅಂತಹದೊಂದು ಸಮಿತಿಗೆ ಅಧ್ಯಕ್ಷ ಎಂಬುದು ಗೊತ್ತಿದೆಯೋ ಇಲ್ಲವೋ? ಸಂಬಂಧಪಟ್ಟ ಅಧಿಕಾರಿಗಳಾದರೂ ಸಭೆ ಕರೆದು ಸಚಿವರಿಗೆ ಅವರ ಕರ್ತವ್ಯದ ನೆನಪು ಮಾಡಿಕೊಡಬೇಕಿತ್ತು. ಆದರೆ ಇವತ್ತಿಗೂ ಯಾವ ಜನಪ್ರತಿನಿಧಿಗಳೂ ಆಸ್ಪತ್ರೆಗೆ ಭೇಟಿ ನೀಡಿ ಜನರ ಅಹವಾಲು ಆಲಿಸುವ ಕೆಲಸ ಮಾಡಿಲ್ಲ. ಹೀಗಾಗಿ ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ಬೆಕ್ಕಿನ ಕೊರಳಿಗೆ ಗಂಟಿ ಕಟ್ಟುವವರು ಯಾರು’ ಎಂದು ಪ್ರಶ್ನಿಸಿದರು.

‘ಉಸ್ತುವಾರಿ ಸಚಿವರಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಕೇಳುವಷ್ಟು ತಾಳ್ಮೆ ಇಲ್ಲ. ಅವರು ಜಿಲ್ಲೆಗೆ ಔಪಚಾರಿಕ ಹಾಜರಿಗೆ ಭೇಟಿ ನೀಡುತ್ತಾರೆ ವಿನಾ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುತ್ತಿಲ್ಲ. ಇಷ್ಟು ದಿನವೇ ಸಭೆ ಸಡೆಸದವರಿಗೆ, ಇದೀಗ ಚುನಾವಣೆ ಸಮೀಪಿಸಿರುವುದರಿಂದ ಇಂತಹ ಸಭೆಗಳನ್ನು ನಡೆಸುವಷ್ಟು ಪುರುಸೊತ್ತು ಕೂಡ ಸದ್ಯ ಇರಲಿಕ್ಕಿಲ್ಲ ಎಂದು ಭಾವಿಸುತ್ತೇನೆ’ ಎಂದು ನಗರದ 8ನೇ ವಾರ್ಡ್‌ ನಿವಾಸಿ ಅವಿನಾಶ್‌ ಹೇಳಿದರು.

ಕುಂದುಕೊರತೆಗಳ ಒರತೆ

‘ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಕನಿಷ್ಠ ಕುಡಿಯುವ ನೀರು ಸಿಗುವುದಿಲ್ಲ. ವೈದ್ಯರು ರೋಗಿಗಳಿಗೆ ಹೊರಗಡೆ ಔಷಧಿ ಬರೆದು ಕೊಡುವುದನ್ನು ನಿಲ್ಲಿಸಿಲ್ಲ. ಲಂಚ ನೀಡದೆ ಹೆರಿಗೆ ನಡೆಯುವುದಿಲ್ಲ ಎಂಬ ಆರೋಪ ಸಾಮಾನ್ಯವಾಗಿದೆ

ಇಲಾಖೆಗೆ ಹೊರ ಗುತ್ತಿಗೆ ಪದ್ಧತಿಯಡಿ ನೇಮಕ ಮಾಡಿಕೊಂಡ 175 ಡಿ ಗುಂಪಿನ ನೌಕರರ ಬಳಿ ಮಧ್ಯವರ್ತಿಗಳ ಮೂಲಕ ₹ 25 ಸಾವಿರದ ವರೆಗೆ ಲಂಚಕ್ಕೆ ವಸೂಲಿ ಮಾಡುತ್ತಿದ್ದಾರೆ. ಜಿಲ್ಲೆಯಾದ್ಯಂತ ನೈರ್ಮಲ್ಯ ಕಾಪಾಡಿಕೊಳ್ಳುವಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ಅನೇಕ ಸಂಘಟನೆಗಳು ಸಾಕಷ್ಟು ಬಾರಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಕಾರ್ಯದರ್ಶಿ, ಆರೋಗ್ಯ ಸಚಿವರಿಗೆ ದೂರು ಸಲ್ಲಿಸಿವೆ.

ಕರ್ತವ್ಯ ಮರೆತ ಸ್ಥಾಯಿ ಸಮಿತಿ

‘ಆರೋಗ್ಯ ವ್ಯವಸ್ಥೆ ಮೇಲೆ ನೀಗಾ ಇಡಬೇಕಾದ್ದದ್ದು ಜಿಲ್ಲಾ ಪಂಚಾಯಿತಿ ಕರ್ತವ್ಯ. ಆದರೆ ಆಡಳಿತಾರೂಢ ಪಕ್ಷದ ಸದಸ್ಯರ ಬಣ ರಾಜಕೀಯದಿಂದಾಗಿ ಆ ಪಂಚಾಯಿತಿಯ ಆರೋಗ್ಯವೇ ಹದಗೆಟ್ಟು ಹೋಗಿದೆ. ಒಂದೂ ಕಾಲು ವರ್ಷಗಳ ವಿಳಂಬದ ನಂತರ ಸ್ಥಾಯಿ ಸಮಿತಿಗಳು ರಚನೆಯಾದರೂ ಅವು ಕೂಡ ತಮ್ಮ ಕರ್ತವ್ಯ ಮರೆತಿವೆ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಹೆಸರಿಗಷ್ಟೇ ಅಸ್ತಿತ್ವಕ್ಕೆ ಬಂದಿದೆ. ಅದು ಯಾವ ಆಸ್ಪತ್ರೆಗೂ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದ್ದು ಇಲ್ಲ’ ಎಂದು ಸಾಮಾಜಿಕ ಹೋರಾಟಗಾರ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

***

ನನಗೆ ಈ ವಿಚಾರ ಗೊತ್ತಿರಲಿಲ್ಲ. ಶೀಘ್ರದಲ್ಲಿಯೇ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ ಜನವರಿಯಲ್ಲಿ ಸಭೆ ಆಯೋಜಿಸುತ್ತೇವೆ

-ಡಾ.ರಮೇಶ್‌ ಬಾಬು, ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry