ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಅಭಿವೃದ್ಧಿಗೆ ರೂ 3 ಸಾವಿರ ಕೋಟಿ ಅನುದಾನ: ರಘುಮೂರ್ತಿ

ಸಾಧನೆ ಸಂಭ್ರಮ ಯಾತ್ರೆಗೆ ಹರಿದು ಬಂತು ಜನ ಸಾಗರ
Last Updated 28 ಡಿಸೆಂಬರ್ 2017, 7:25 IST
ಅಕ್ಷರ ಗಾತ್ರ

ಚಳ್ಳಕೆರೆ: ಚಳ್ಳಕೆರೆ ಕ್ಷೇತ್ರದ ಅಭಿವೃದ್ಧಿಗೆ ನನ್ನ ಶಾಸಕ ಅವಧಿಯಲ್ಲಿ ಒಟ್ಟು 3 ಸಾವಿರ ಕೋಟಿ ಅನುದಾನ ಲಭ್ಯವಾಗಲಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಬುಧವಾರ ನಡೆದ ‘ನವ ಕರ್ನಾಟಕ ಸಾಧನೆ, ಸಂಭ್ರಮ ಯಾತ್ರೆ’ ಬಹಿರಂಗ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಮುಖ್ಯಮಂತ್ರಿಗಳು ಅಂದಾಜು ₹ 600 ಕೋಟಿ ಮೊತ್ತದ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಉದ್ಘಾಟನೆ, ಮೂಲೆಗಲ್ಲು ಕಾರ್ಯಕ್ರಮ ಹಾಗೂ ಶಂಕುಸ್ಥಾಪನೆ ಮಾಡಿದ್ದಾರೆ. ಇದರಲ್ಲಿ ಸರ್ಕಾರಿ ಬಸ್‌ನಿಲ್ದಾಣ, ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಕಟ್ಟಣ, ಮಿನಿ ವಿಧಾನಸೌಧ, ವಿವಿಧ ಜನಾಂಗಗಳ ಭವನಗಳು, ಪಟ್ಟಣ ವ್ಯಾಪ್ತಿ ರಸ್ತೆ, ಚರಂಡಿಗಳು, ಪ್ರವಾಸಿ ಮಂದಿರ ಮುಖ್ಯವಾಗಿದೆ ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಯಿಂದ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಕಾರ್ಯ ಹಾಗೂ ತುಂಗಭದ್ರಾ ಹಿನ್ನೀರು ಮೂಲಕ ಕ್ಷೇತ್ರ ಹಾಗೂ ತುರುವನೂರು ಹೋಬಳಿ ಗ್ರಾಮಗಳಿಗೆ ಅಂದಾಜು ₹ 2,150 ವೆಚ್ಚದ ಯೋಜನೆ ಶೀಘ್ರ ಅನುಷ್ಠಾನವಾಗಲಿದೆ. ಸಾಧನೆ ಮುಂದಿಟ್ಟುಕೊಂಡು ನಡೆಯುತ್ತಿರುವ ಈ ಕಾರ್ಯಕ್ರಮ ಐತಿಹಾಸಿಕವಾಗಿದೆ ಎಂದು ಹೇಳಿದರು.

ತಾಲ್ಲೂಕಿನ ಪರಶುರಾಂಪುರವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಬೇಕು. ಎಲ್ಲಾ ಅರ್ಹತೆ ಹೊಂದಿರುವ ಇದು ಕಾರಣಾಂತರದಿಂದ ಕೈಬಿಟ್ಟು ಹೋಗಿದೆ. ಯಾವುದೇ ವರದಿ ಇಲ್ಲದೇ ಅನೇಕ ನೂತನ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗಿದೆ. ಕೈಬಿಟ್ಟು ಹೋಗಿರುವ ಬಗ್ಗೆ ಹಲವು ಬಾರಿ ಸರ್ಕಾರದ ಗಮನಕ್ಕೆ ತರಲಾಗಿದೆ. ಗಡಿಯಲ್ಲಿರುವ ಗ್ರಾಮಗಳು ಜಿಲ್ಲೆ, ತಾಲ್ಲೂಕು ಕೇಂದ್ರದಿಂದ ಅಪಾರ ದೂರವಿರುವ ಈ ಹೋಬಳಿಗೆ ತಾಲ್ಲೂಕು ಕೇಂದ್ರ ಘೋಷಣೆಯಿಂದ ಮುಕ್ತಿ ಸಿಗಲಿದೆ ಎಂದು ಹೇಳಿದರು.

ಚಳ್ಳಕೆರೆ ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದಾರವಾಗಿ ಸ್ಪಂದಿಸಿದ್ದಾರೆ. ಸಚಿವ ಎಚ್‌. ಆಂಜನೇಯ ಅವರ ಸಹಕಾರ ಸಹ ಶ್ಲಾಘನೀಯ. ಇದರಿಂದ ಇಷ್ಟೊಂದು ಪ್ರಮಾಣದಲ್ಲಿ ಅನುದಾನ ಹರಿದು ಬಂದಿದೆ. ಒಟ್ಟು 62 ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಲೋಕಾರ್ಪಣೆ ಮಾಡಿದ್ದಾರೆ ಎಂದು ರಘುಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT