ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣಾಕ್ಷರದಲ್ಲಿ ಬರೆದಿಡುವ ಐತಿಹಾಸಿಕ ಕ್ಷಣ

ಚಳ್ಳಕೆರೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ
Last Updated 28 ಡಿಸೆಂಬರ್ 2017, 7:33 IST
ಅಕ್ಷರ ಗಾತ್ರ

ಚಳ್ಳಕೆರೆ: ₹ 600 ಕೋಟಿ ವೆಚ್ಚದ 62 ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರುವ ಮೂಲಕ ಚಳ್ಳಕೆರೆ ಸುವರ್ಣಾಕ್ಷರದಲ್ಲಿ ಬರೆದಿಡುವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಬುಧವಾರ ನಡೆದ ‘ಸಾಧನೆ ಸಂಭ್ರಮ’ ಕಾರ್ಯಕ್ರಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಅಭಿವೃದ್ದಿ ಕಾಮಗಾರಿಗಳನ್ನು ಉದ್ಘಾಟಿಸಿದ ನಂತರ ಸಮಾವೇಶದಲ್ಲಿ ಮಾತನಾಡಿದರು.

ಜನಪರ ಹಾಗೂ ಅಭಿವೃದ್ದಿ ವಿಚಾರಗಳತ್ತ ತೊಡಗಿಸಿಕೊಳ್ಳುವ ಶಾಸಕರು ಮಾತ್ರ ಗೆಲುವು ಸಾಧಿಸುತ್ತಾರೆ. ಅಂಥವರ ಸಾಲಿಗೆ ರಘುಮೂರ್ತಿ ಸೇರುತ್ತಾರೆ. 2010ರಲ್ಲಿ ಪಾದಯಾತ್ರೆಯ ವೇಳೆಯಲ್ಲಿ ನೋಡಿದ ಚಳ್ಳಕೆರೆಗೂ ಈಗಿನ ಚಳ್ಳಕೆರೆಗೂ ತುಂಬಾ ಬದಲಾವಣೆಯಾಗಿದೆ. ಅಷ್ಟರಮಟ್ಟಿಗೆ ಪಟ್ಟಣ ಬೆಳವಣಿಗೆಯಾಗಿದೆ ಎಂದು ಶ್ಲಾಘಿಸಿದರು.

ರಘುಮೂರ್ತಿ ಸರಳ ರಾಜಕಾರಣಿ. ಮಾತು ಕಡಿಮೆ. ಕೆಲಸ ಜಾಸ್ತಿ. ಇವರು ಹೆಚ್ಚು ಕೆಲಸ ಮಾಡುವವರ ಗುಂಪಿಗೆ ಸೇರುತ್ತಾರೆ. ಇಂಥವರು ಮತ್ತೆ ಆಯ್ಕೆಯಾಗಬೇಕು ಎಂದು ಮನವಿ ಮಾಡಿದರು.

‘15 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಸುಮಾರು ₹ 15 ಸಾವಿರದಿಂದ ₹ 20 ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳು ನಡೆದಿವೆ. ದಾವಣಗೆರೆಯಲ್ಲಿ ₹ 20 ಸಾವಿರ ಕೋಟಿ ಖರ್ಚಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 3 ತಾಲ್ಲೂಕುಗಳಿಂದ ₹ 1400 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದೇನೆ. ಯಾವ ಸರ್ಕಾರದ ಅವಧಿಯಲ್ಲೂ ಇಷ್ಟು ದೊಡ್ಡ ಪ್ರಮಾಣದ ಅಭಿವೃದ್ಧಿ ಕಾರ್ಯಗಳಾಗಿಲ್ಲ’ ಎಂದು ಅಂಕಿ ಅಂಶ ನೀಡಿದರು.

ಭರವಸೆ ಈಡೇರಿಕೆ.. ಬೇಡಿಕೆ ಪರಿಶೀಲನೆ :

‘ಚುನಾವಣೆ ವೇಳೆ ನೀಡಿದ 165 ಭರವಸೆಗಳಲ್ಲಿ 155 ಭರವಸೆ ಈಡೇರಿಸಿದ್ದೇವೆ’ ಎಂದು ಹೇಳುತ್ತಾ ಅನ್ನಭಾಗ್ಯದಿಂದ ಉಚಿತ ಅಕ್ಕಿ, ಕ್ಷೀರಭಾಗದಲ್ಲಿ ಮಕ್ಕಳಿಗೆ ಹಾಲು, ರೈತರಿಗೆ ಕೃಷಿ ಭಾಗ್ಯ.. ಹೀಗೆ ಎಲ್ಲ ವರ್ಗದವರಿಗೂ ಭಾಗ್ಯಗಳನ್ನು ನೀಡಿದ್ದೇವೆ. ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಯಾವುದಾದರೂ ಒಂದು ರಾಜ್ಯದಲ್ಲಿ ಇಂಥ ವ್ಯವಸ್ಥೆ ಇದೆಯಾ ಹೇಳಲಿ’ ಎಂದು ಸವಾಲು ಹಾಕಿದರು.

‘ಪರಶುರಾಂಪುರ ತಾಲ್ಲೂಕು ಆಗಬೇಕು ಎಂದು ರಘುಮೂರ್ತಿ ಮನವಿ ಮಾಡಿದ್ದಾರೆ. ಅವರು ಮನವಿ ಮಾಡುವ ವೇಳೆಗೆ ತಾಲ್ಲೂಕು ಘೋಷಣೆ ಪ್ರಕ್ರಿಯೆ ಮುಗಿದಿತ್ತು. ಮುಂದೆ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆಗ ಧರ್ಮಪುರ, ಪರಶುರಾಂಪುರ ಮತ್ತು ಭರಮಸಾಗರವನ್ನು ತಾಲ್ಲೂಕು ಕೇಂದ್ರಗಳನ್ನಾಗಿ ಘೋಷಿಸುತ್ತೇವೆ. ಮತ್ತೆ ರಘುಮೂರ್ತಿಯವರನ್ನು ಗೆಲ್ಲಿಸಿ, ನಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಕೂಡ್ಲಿಗಿ, ಮೊಳಕಾಲ್ಮುರು, ಚಳ್ಳಕೆರೆ ಮತ್ತು ಪಾವಗಡಕ್ಕೆ ಕುಡಿಯುವ ನೀರುಪೂರೈಸುವ ತುಂಗಭದ್ರಾ ಹಿನ್ನೀರಿನ ₹ 2,182 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ಕೊಟ್ಟಿದ್ದೇವೆ. ಶೀಘ್ರದಲ್ಲೇ ಟೆಂಡರ್ ಕರೆದು, ಕೆಲಸ ಆರಂಭಿಸುತ್ತೇವೆ ಎಂದು ಭರವಸೆ ನೀಡಿದರು.

‘ಚಳ್ಳಕೆರೆ ಪಟ್ಟಣದಲ್ಲಿ ₹110 ಕೋಟಿ ವೆಚ್ದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವಂತೆ ರಘುಮೂರ್ತಿ ಮನವಿ ಮಾಡಿದ್ದಾರೆ. ಖಂಡಿತಾ ಆ ಸೌಲಭ್ಯ ಕಲ್ಪಿಸೋಣ. ಹಾಗೆಯೇ ಚಳ್ಳಕೆರೆಯಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸಿ, ಕಡಿಮೆ ದರದಲ್ಲಿ ಉಪಹಾರ, ಊಟ ಪೂರೈಸಲಾಗುತ್ತದೆ’ ಎಂದರು.

ಇಷ್ಟೆಲ್ಲ ಸೌಲಭ್ಯ, ಸೌಕರ್ಯಗಳು ಮುಂದುವರಿಯಬೇಕಾದರೆ, ನಾವು ಅಧಿಕಾರಕ್ಕೆ ಬರಬೇಕು. ನೀವು ರಘುಮೂರ್ತಿಯವರನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕು. ಇವತ್ತಿನ ಕಾರ್ಯಕ್ರಮದಲ್ಲಿನ ಉತ್ಸಾಹ ನೋಡಿದರೆ ರಘುಮೂರ್ತಿ ಗೆಲುವು ಖಚಿತ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ಆಂಜನೇಯ, ಸಂಸದ ಬಿ.ಎನ್‌. ಚಂದ್ರಪ್ಪ, ಶಾಸಕರಾದ ಬಿ.ಜಿ. ಗೋವಿಂದಪ್ಪ, ಎನ್‌.ವೈ. ಗೋಪಾಲಕೃಷ್ಣ, ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ನಗರಸಭಾ ಅಧ್ಯಕ್ಷೆ ಬೋರಮ್ಮ, ಕೆಎಚ್‌ಡಿಸಿ ಅಧ್ಯಕ್ಷ ಗೋ. ತಿಪ್ಪೇಶ್‌, ಲಿಡ್‌ಕರ್‌ ಅಧ್ಯಕ್ಷ ಶಂಕರ್‌, ಡಿಸಿಸಿ ಅಧ್ಯಕ್ಷ ಫಾತ್ಯರಾಜನ್‌, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜಿಲ್ಲಾಪಂಚಾಯ್ತಿ ಸಿಇಒ ರವೀಂದ್ರ, ಜಿಲ್ಲಾಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

ಹಿನ್ನೀರು ಯೋಜನೆ...

ತುಂಗಭದ್ರಾ ಹಿನ್ನೀರು ಮೂಲಕ ಚಳ್ಳಕೆರೆ, ಮೊಳಕಾಲ್ಮುರು, ಕೂಡ್ಲೀಗಿ, ಪಾವಗಡ ತಾಲ್ಲೂಕುಗಳಿಗೆ ಕುಡಿಯುವ ನೀರಿನ ₹ 2182 ಕೋಟಿ ವೆಚ್ಚದ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ಶೀಘ್ರ ಟೆಂಡರ್‌ ಕೈಗೆತ್ತಿಗೊಳ್ಳಲಾಗುವುದು ಎಂದು ಸಿಎಂ ಹೇಳಿದರು. ತುಂಗಭದ್ರಾ ಯೋಜನೆ ಮೂಲಕ ಚಳ್ಳಕೆರೆ ತಾಲ್ಲೂಕಿನ 42, ಮೊಳಕಾಲ್ಮುರು ತಾಲ್ಲೂಕಿನ 20 ಕೆರೆಗಳಿಗೆ ನೀರುಣಿಸುವ ಕಾರ್ಯಕ್ಕೂ ಮಂಜೂರಾತಿ ನೀಡಿದೆ ಎಂದರು.

500 ಕೋಟಿ ಲಂಚ...!

ಕಳೆದ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎನ್‌.ವೈ. ಗೋಪಾಲಕೃಷ್ಣರ ಸೋಲಿಗೆ ವಿರೋಧಿಗಳು ಕುದಾಪುರ ವಿಜ್ಞಾನ ಕೇಂದ್ರಗಳ ಮಂಜೂರಾತಿಯಲ್ಲಿ ₹ 500 ಕೋಟಿ ‘ಕಿಕ್‌ಬ್ಯಾಕ್‌’ ಪಡೆದಿದ್ದಾರೆ ಎಂದು ಸುಳ್ಳು ಸುದ್ದಿ ಕಾರಣವಂತೆ. ಇಂತಹ ವದಂತಿ ಹೇಗೆ ಹಬ್ಬಿತು ? ಇದರಿಂದ ನೀವು ಸೋಲಬೇಕಾಯಿತೇ ? ಎಂದು ಸಿಎಂ ಎನ್‌ವೈಜಿ ಅವರನ್ನು ಭಾಷಣ ವೇಳೆ ಪ್ರಶ್ನಿಸಿದರು. ಇದಕ್ಕೆ ಎನ್‌ವೈಜಿ ಹೌದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT