7
ಕಾಮಗಾರಿ ಪೂರ್ಣಗೊಳಿಸಿ ಪ್ರಾಯೋಗಿಕವಾಗಿ ನೀರು ಹರಿಸಲು ಅಧಿಕಾರಿಗಳಿಗೆ ಸಿಎಂ ಸೂಚನೆ

ಮೇ ತಿಂಗಳೊಳಗೆ ಭದ್ರಾ ಮೇಲ್ದಂಡೆಗೆ ನೀರು

Published:
Updated:

ಚಿತ್ರದುರ್ಗ/ಹೊಳಲ್ಕೆರೆ: ಚಿತ್ರದುರ್ಗ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಬಿರುಸಿನಿಂದ ಸಾಗಿದ್ದು, ಮೇ ತಿಂಗಳೊಳಗೆ ನಾಲೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಹೊಳಲ್ಕೆರೆ ಪಟ್ಟಣದ ಕೊಟ್ರನಂಜಪ್ಪ ಪದವಿಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ಅಭಿವೃದ್ಧಿ ಪರ್ವದ ಸಾಧನಾ ಸಂಭ್ರಮ ಸಮಾವೇಶ, ಇಂದಿರಾಗಾಂಧಿ ಜನ್ಮಶತಮಾನೋತ್ಸವ, ಸಾಮೂಹಿಕ ವಿವಾಹ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಮಾಧ್ಯಮಗಳು ಆರೋಪಿಸುತ್ತಿವೆ. ಆದರೆ, ವಾಸ್ತವವೇ ಬೇರೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಗಿಂತಲೂ ಈಗ ಕಾಮಗಾರಿ ವೇಗ ಪಡೆದುಕೊಂಡಿದೆ ಎಂಬುದನ್ನು ಅಂಕಿಅಂಶಗಳು ಸಾಬೀತುಪಡಿಸುತ್ತವೆ ಎಂದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕಾಮಗಾರಿಗೆ ಎರಡು ಸಾವಿರ ಕೋಟಿ ಅನುದಾನ ನೀಡಿದೆ. ಸರ್ಕಾರದ ಬಳಿ ಹಣದ ಕೊರತೆಯಿಲ್ಲ. ಅಧಿಕಾರಿಗಳು ಕೇಳಿದಷ್ಟು ಹಣವನ್ನು ಸರ್ಕಾರ ಕೊಡಲು ಸಿದ್ಧವಿದೆ ಎಂದು ಘೋಷಿಸಿದರು.

‘ಯೋಜನಾ ವ್ಯಾಪ್ತಿಯಲ್ಲಿ 7 ಕಿ.ಮೀ ಸೂಕ್ಷ್ಮ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದ್ದು, ದಿನಕ್ಕೆ ಕೇವಲ ಮೂರು ಮೀಟರ್‌ ಕಾಮಗಾರಿ ಮಾತ್ರ ಮಾಡಲು ಸಾಧ್ಯ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂತಹ ಸವಾಲುಗಳ ಮಧ್ಯೆಯೂ ಈಗಾಗಲೇ 6.3 ಕಿ.ಮೀ ಪೂರ್ಣಗೊಂಡಿದೆ. ಬಾಕಿ 0.7 ಕಿ.ಮೀ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಮೇ ಒಳಗೆ ನೀರು ಹರಿಸಿಯೇ ತೀರುತ್ತೇವೆ’ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾದರೆ ಜಿಲ್ಲೆಯ ಸುಮಾರು 2.5 ಲಕ್ಷ ಎಕರೆ ಭೂಮಿಗೆ ಹನಿ ನೀರಾವರಿ ಸೌಲಭ್ಯ ಲಭ್ಯವಾಗಲಿದೆ. ಸುತ್ತಮುತ್ತಲಿನ ಕೆರೆಗಳು ತುಂಬಲಿವೆ. ಇಲ್ಲಿನ ರೈತರ ಬದುಕು ಹಸನಾಗಲಿದೆ ಎಂದು ಹೇಳಿದರು.

ರಾಜ್ಯ ಕಳೆದ 16 ವರ್ಷಗಳಲ್ಲಿ 13 ವರ್ಷ ಬರಗಾಲಕ್ಕೆ ತುತ್ತಾಗಿತ್ತು. ಬರದ ಗಂಭೀರತೆ ಅರಿತ ಸರ್ಕಾರ ಬರ ನೀಗಿಸಲು ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ ಆದ್ಯತೆ ನೀಡಿದ್ದು, ₹ 7 ಸಾವಿರ ಕೋಟಿ ವೆಚ್ಚ ಮಾಡಿದೆ. ಹಸಿವುಮುಕ್ತ ಕರ್ನಾಟಕದಂತೆಯೇ ಬರಮುಕ್ತ ಕರ್ನಾಟಕ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದರು.

ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಿ:

ರಾಜ್ಯದಲ್ಲಿ ಎರಡು ವರ್ಷ ಭೀಕರ ಬರಗಾಲ ಎದುರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಹಕಾರ ಸಂಘಗಳಲ್ಲಿರುವ ₹ 8 ಸಾವಿರ ಕೋಟಿ ಸಾಲ ಮನ್ನಾ ಮಾಡಿತು. ಕೇಂದ್ರ ಸರ್ಕಾರದ ವ್ಯಾಪ್ತಿಗೊಳಪಡುವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ 42 ಸಾವಿರ ಕೋಟಿ ಸಾಲ ಮನ್ನಾ ಮಾಡುವಂತೆ ಸರ್ವಪಕ್ಷ ಮುಖಂಡರ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ತೆರಳಿ ಮನವಿ ಮಾಡಿತು. ಈ ಸಂದರ್ಭ ಬಿಜೆಪಿ ನಾಯಕರೂ ಪ್ರಧಾನಿ ಎದುರು ತುಟಿ ಬಿಚ್ಚಲಿಲ್ಲ. ಈಗ ಡೋಂಗಿ ರೈತನಾಯಕರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಚಿತ್ರದುರ್ಗ ಬೃಹನ್ಮಠದ ಮುರುಘಾ ಶರಣರು, ಪ್ರಸನ್ನಾನಂದ ಸ್ವಾಮೀಜಿ, ಪುರುಷೋತ್ತಮಾನಂದ ಸ್ವಾಮೀಜಿ, ನಿಜಗುಣಾನಂದ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಷಡಕ್ಷರಮುನಿ ಸ್ವಾಮೀಜಿ ಉಪಸ್ಥಿತರಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಆಂಜನೇಯ, ಸಂಸದ ಬಿ.ಎನ್. ಚಂದ್ರಪ್ಪ, ಶಾಸಕ ಬಿ.ಜಿ. ಗೋವಿಂದಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜವಳಿ ಮೂಲಸೌಲಭ್ಯ ನಿಗಮದ ಅಧ್ಯಕ್ಷ ಗೋ. ತಿಪ್ಪೇಶ್, ಹೊಳಲ್ಕೆರೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಧನಂಜಯನಾಯ್ಕ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸವಿತಾ ಬಸವರಾಜ್, ಜಿಲ್ಲಾ ಪಂಚಾಯತಿ ಸಿಇಒ ಪಿಎನ್. ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಷಿ ಇದ್ದರು.

ಹೊಳಲ್ಕೆರೆ ತಾಲ್ಲೂಕಿನ ಕುರಿತು ಸಾಧನಾ ಸಂಭ್ರಮ ಕಿರುಹೊತ್ತಿಗೆಯನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದರು. ಕ್ಷೇತ್ರದಲ್ಲಿ 137 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಾಯಿತು. ಇಂದಿರಾಗಾಂಧಿ ಅವರ ಜನ್ಮ ಶತಮಾನೋತ್ಸವ ಅಂಗವಾಗಿ 100 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿತು.

ಸ್ವಧರ್ಮಕ್ಕೆ ನಿಷ್ಠೆ, ಪರಧರ್ಮದ ಬಗ್ಗೆ ಸಹಿಷ್ಣುತೆ ಇರಲಿ

ಯಾವುದೇ ಧರ್ಮ ಬೇರೊಂದು ಧರ್ಮವನ್ನು ದ್ವೇಷಿಸು ಎಂದು ಹೇಳುವುದಿಲ್ಲ. ಪ್ರಸ್ತುತ ಕೆಲವರು ಧರ್ಮ, ದೇವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಪರಧರ್ಮವನ್ನು ನಿಂದಿಸಿ ಸಮಾಜದ ಸ್ವಾಸ್ಥ್ಯ ಕದಡುತ್ತಿದ್ದಾರೆ. ಒಂದು ನಿರ್ದಿಷ್ಟ ಸಮುದಾಯವನ್ನು ಅವಹೇಳನ ಮಾಡುವವರು, ತುಚ್ಚವಾಗಿ ಕಾಣುವವರು ಧರ್ಮಾಂಧರು. ಸ್ವಧರ್ಮದ ನಿಷ್ಠೆ ಇರಬೇಕು. ಪರ ಧರ್ಮದ ಬಗ್ಗೆ ಸಹಿಷ್ಣುತೆ ಇರಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಹರಿಹಾಯ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ, ಟಿಪ್ಪಣಿಗಳು ಸಂಸದೀಯ ಭಾಷೆಯಲ್ಲಿ ಇರಬೇಕು. ಆಗಮಾತ್ರ ಪ್ರಜಾಪ್ರಭುತ್ವ ಆರೋಗ್ಯಯುತವಾಗಿರುತ್ತದೆ. ಆದರೆ ಅನಂತಕುಮಾರ ಹೆಗಡೆಯಂಥವರು ಅವಾಚ್ಯ, ಅಶ್ಲೀಲ, ಕೀಳು ಮಟ್ಟದ ಪದಗಳನ್ನು ಬಳಸುತ್ತಿದ್ದಾರೆ. ಇಂಥವರನ್ನು ಜನರು ಎಂದಿಗೂ ಬೆಂಬಲಿಸುವುದಿಲ್ಲ ಎಂದರು.\

ಸುಳ್ಳು ಹೇಳುತ್ತಿರುವ ಯಡಿಯೂರಪ್ಪ

ಗೋವಾ ಸರ್ಕಾರದ ಮನವೊಲಿಸಿ ತಿಂಗಳೊಳಗೆ ರಾಜ್ಯಕ್ಕೆ ಮಹದಾಯಿ ನದಿ ನೀರು ಹರಿಸುವುದಾಗಿ ಉತ್ತರ ಕರ್ನಾಟಕ ಭಾಗದ ಜನರಿಗೆ ಸುಳ್ಳುಹೇಳಿದ ಯಡಿಯೂರಪ್ಪ ವಿರುದ್ಧ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ಇದರಲ್ಲಿ ಕಾಂಗ್ರೆಸ್‌ ಕೈವಾಡವಿಲ್ಲ ಎಂದು ಸಿಎಂ ತಿಳಿಸಿದರು.

ಮಹದಾಯಿ ವಿವಾದ ಇರುವುದು ಗೋವಾ, ಕರ್ನಾಟಕ ಹಾಗೂ ಮಹಾರಾಷ್ಟ್ರಗಳ ನಡುವೆ. ಆದರೂ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹಾಗೂ ಬಿ.ಎಸ್‌.ಯಡಿಯೂರಪ್ಪ ನಾಟಕವಾಡುತ್ತಿದ್ದಾರೆ. ಶಿಷ್ಟಾಚಾರ ಉಲ್ಲಂಘಿಸಿ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. ಆದರೂ  ಸಭೆ ಕರೆಯುವಂತೆ ಪರಿಕ್ಕರ್‌ಗೆ ಸ್ವಾಭಿಮಾನ ಬಿಟ್ಟುಪತ್ರ ಬರೆದಿದ್ದೇನೆ. ಇದಕ್ಕೆ ಸ್ಪಂದನೆ ದೊರೆತಿಲ್ಲ ಎಂದು ಅಸಮಾಧನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry