7
ಭರದಿಂದ ಸಾಗಿದ ಚಿಗಟೇರಿ ಸಾರ್ವಜನಿಕ ಆಸ್ಪತ್ರೆ ನವೀಕರಣ ಕಾಮಗಾರಿ

₹ 20 ಕೋಟಿ ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆಗೆ ‘ಚಿಕಿತ್ಸೆ’

Published:
Updated:
₹ 20 ಕೋಟಿ ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆಗೆ ‘ಚಿಕಿತ್ಸೆ’

ದಾವಣಗೆರೆ: ನಿತ್ಯ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಜಿಲ್ಲಾ ಆಸ್ಪತ್ರೆಯು ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರ್‌ ವಿಭಾಗದ ಅಧಿಕಾರಿಗಳಿಂದ ನವೀಕರಣದ ‘ಚಿಕಿತ್ಸೆ’ ಪಡೆಯಲು ತನ್ನನ್ನು ತಾನು ತೆರೆದುಕೊಂಡಿದೆ.

ಚಿಗಟೇರಿ ಮನೆತನದ ಧರ್ಮಪ್ರಕಾಶ ಮುರಿಗೆಪ್ಪ ಚಿಗಟೇರಿ ಅವರ ಆಸಕ್ತಿಯಿಂದ 1956ರಲ್ಲಿ ನಿರ್ಮಾಣವಾದ ಹಳೆಯ ಆಸ್ಪತ್ರೆ (ಮಹಿಳಾ ಮತ್ತು ಮಕ್ಕಳ ವಿಭಾಗ) ಇಂದಿಗೂ ಸುಸ್ಥಿತಿಯಲ್ಲಿದೆ. ಆದರೆ, 1976ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣವಾದ ಕಟ್ಟಡದ ಬಹುತೇಕ ಭಾಗ ಶಿಥಿಲಗೊಂಡಿದೆ.

ಆಸ್ಪತ್ರೆ ಕಟ್ಟಡದ ಕೆಲ ಪಿಲ್ಲರ್‌ ಗಳು ಶಿಥಿಲಗೊಂಡಿದ್ದು, ಇಲಾಖೆ ಯ ಎಂಜಿನಿಯರ್‌ಗಳು ಮರುಜೀವ ನೀಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ವಿಶಾಲವಾದ ಜಾಗದಲ್ಲಿ ಎರಡು ಅಂತಸ್ತಿನ ಕಟ್ಟಡವಿದ್ದು, ಕೆಲ ಭಾಗಗಳಲ್ಲಿ ನೆಲಹಾಸು ಹಾಗೂ ಗೋಡೆಗಳು ಬಿರುಕುಬಿಟ್ಟಿವೆ. ವಿದ್ಯುತ್‌ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಒಳಚರಂಡಿ ವ್ಯವಸ್ಥೆಯೂ ಹಾಳಾಗಿದೆ. ಆಸ್ಪತ್ರೆಯ ಬಹುತೇಕ ಬ್ಲಾಕ್‌ಗಳಲ್ಲಿಯೂ ಇದೇ ಸ್ಥಿತಿ ಇದೆ. ಅವುಗಳ ದುರಸ್ತಿ ಕಾರ್ಯವೂ ಭರದಿಂದ ಸಾಗಿದೆ.

₹ 20 ಕೋಟಿ ವೆಚ್ಚದ ಯೋಜನೆ: ಜಿಲ್ಲಾ ಆಸ್ಪತ್ರೆಯ ಬಹುತೇಕ ಭಾಗವು ಶಿಥಿಲವಾಗಿದ್ದು, ಇದಕ್ಕಾಗಿ ಈಗಾಗಲೇ ₹ 20 ಕೋಟಿ ವೆಚ್ಚದ ಕಾಮಗಾರಿಯ ನೀಲನಕ್ಷೆ ಸಿದ್ಧಗೊಂಡಿದೆ.

ಇಡೀ ಕಟ್ಟಡವನ್ನು ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ ಬ್ಲಾಕ್‌ ಎಂದು ಐದು ಬ್ಲಾಕ್‌ಗಳಾಗಿ ವಿಂಗಡಣೆ ಮಾಡಲಾಗಿದೆ. ಕಟ್ಟಡದ ಕೆಲ ಭಾಗದಲ್ಲಿ ಪಿಲ್ಲರ್‌ಗಳು ಶಿಥಿಲಗೊಂಡಿವೆ. ಸಿಮೆಂಟ್‌ ಚಾವಣಿ ಕುಸಿದಿದೆ. ಕೆಲ ವಾರ್ಡ್‌ಗಳ ಗೋಡೆಗಳ ಸಿಮೆಂಟ್‌ ಪದರ ಕಳಚಿದೆ. ವಿದ್ಯುತ್‌ ಸಂಪರ್ಕ ಹಾಳಾಗಿದ್ದರಿಂದ ವಿದ್ಯುತ್‌ ದೀಪ ಹಾಗೂ ಫ್ಯಾನ್‌ಗಳು ಕೆಲಸ ಮಾಡುತ್ತಿಲ್ಲ. ತಾಂತ್ರಿಕ ತಜ್ಞರ ಸಲಹಾ ಸಮಿತಿಯ ಮಾರ್ಗದರ್ಶನದಲ್ಲಿ ‌ಹಂತ ಹಂತವಾಗಿ ‌ಇಡೀ ಕಟ್ಟಡವನ್ನು ನವೀಕರಣ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರ್‌ ವಿಭಾಗದ ಮುಖ್ಯ ಅಧಿಕಾರಿ ಉದಯಶಂಕರ್‌ ಮಾಹಿತಿ ನೀಡುತ್ತಾರೆ.

ಮೊದಲ ಹಂತದ ಕಾಮಗಾರಿಗಾಗಿ ಸರ್ಕಾರವು ಈಗಾಗಲೇ ₹ 7 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, 6 ತಿಂಗಳಿನಿಂದ ನವೀಕರಣ ಕಾಮಗಾರಿಗಳು ನಡೆಯುತ್ತಿವೆ. ಕಟ್ಟಡದ ದಕ್ಷಿಣ ಬ್ಲಾಕ್‌ನ ಕಟ್ಟಡದಲ್ಲಿನ ಪಿಲ್ಲರ್‌ಗಳ ಮರು ಜೋಡಣೆ, ಸಿಮೆಂಟ್‌ ಪ್ಲಾಸ್ಟರಿಂಗ್‌ ಕಾಮಗಾರಿಗಳು ನಡೆಯುತ್ತಿವೆ ಎಂದು ಹೇಳುತ್ತಾರೆ ಅವರು.

2ನೇ ಹಂತದಲ್ಲಿ ಕಟ್ಟಡದ ಉಳಿದ ಬ್ಲಾಕ್‌ಗಳ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು. ಇದಕ್ಕಾಗಿ ಇನ್ನೂ ₹ 13 ಕೋಟಿ ಅನುದಾನದ ಅಗತ್ಯವಿದ್ದು, ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವವನ್ನೂ ಸಲ್ಲಿಸಲಾಗಿದೆ. 2018ರೊಳಗೆ ಇಡೀ ಕಟ್ಟಡವನ್ನು ದುರಸ್ತಿ ಮಾಡಿ, ಪುನರ್‌ಜೀವ ನೀಡಲಾಗುವುದು ಎನ್ನುತ್ತಾರೆ ಅವರು.

ಆಸ್ಪತ್ರೆಯ ನವೀಕರಣದ ಜವಾಬ್ದಾರಿಯನ್ನು ಆರೋಗ್ಯ ಇಲಾಖೆಯ ಎಂಜಿನಿಯರ್‌ ವಿಭಾಗದ ಅಧಿಕಾರಿಗಳು ವಹಿಸಿ ಕೊಂಡಿದ್ದು, ಮೊದಲ ಹಂತ ದಲ್ಲಿ ಆಸ್ಪತ್ರೆಯ ಕಟ್ಟಡದ 20 ಪಿಲ್ಲರ್‌ಗಳ ಮರುಜೋಡಣೆ ಕಾಮಗಾರಿ ಮುಗಿದಿದೆ. ಹಂತ ಹಂತವಾಗಿ ಉಳಿದ ವಾರ್ಡ್‌ಗಳನ್ನು ಬಿಟ್ಟುಕೊಡಲಾಗುವುದು ಎಂದು ಜಿಲ್ಲಾ ಆಸ್ಪತ್ರೆಯ ಅಧೀಕ್ಷಕಿ ಡಾ.ನೀಲಾಂಬಿಕೆ ಮಾಹಿತಿ ನೀಡುತ್ತಾರೆ.

ಚಿಗಟೇರಿ ಮನೆತನದ ಕೊಡುಗೆ

ಚಿಗಟೇರಿ ಮನೆತನದ ಧರ್ಮಪ್ರಕಾಶ ಮುರಿಗೆಪ್ಪ ಚಿಗಟೇರಿ ಅವರು ವಿಶಾಲವಾದ ನಿವೇಶನ ದಾನ ಮಾಡುವ ಮೂಲಕ ₹ 1 ಲಕ್ಷ ದೇಣಿಗೆಯನ್ನೂ ನೀಡಿದ್ದರು. ಮೈಸೂರು ರಾಜಮನೆತನದ ಜಯಚಾಮರಾಜ ಒಡೆಯರ್‌ ಕಟ್ಟಡದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಚಿಗಟೇರಿ ಮನೆತನದ ಹೆಸರಿನಲ್ಲಿ ನಿರ್ಮಾಣವಾದ ಆಸ್ಪತ್ರೆ ಇಂದಿಗೂ ಚಿಗಟೇರಿ ಆಸ್ಪತ್ರೆ ಎಂದೇ ರಾಜ್ಯದಲ್ಲಿ ಹೆಸರಾಗಿದೆ. ಅಂದು 150 ಹಾಸಿಗೆಗಳ ಸೌಲಭ್ಯ ಹೊಂದಿದ್ದ ಆಸ್ಪತ್ರೆಯು ಹಂತ ಹಂತವಾಗಿ ವಾರ್ಡ್‌ಗಳನ್ನು ವಿಸ್ತರಿಸಿಕೊಂಡಿತು. ನಂತರ 1974ರಲ್ಲಿ ಈಗ ಇರುವ ಕಟ್ಟಡವನ್ನು ನಿರ್ಮಿಸಲಾಯಿತು. ಸಾವಿರಕ್ಕೂ ಅಧಿಕ ಹಾಸಿಗೆಗಳನ್ನು ಒಳಗೊಂಡಿರುವ ಆಸ್ಪತ್ರೆ ಇದು.

***

₹ 7 ಕೋಟಿ ವೆಚ್ಚದಲ್ಲಿ ಮೊದಲ ಹಂತದಲ್ಲಿ ಶಿಥಿಲ ವಾಗಿರುವ ಪಿಲ್ಲರ್‌ಗಳ ಮರು ಜೋಡಣೆ ಮಾಡಲಾಗುತ್ತಿದೆ. 2018ರೊಳಗೆ ಆಸ್ಪತ್ರೆ ದುರಸ್ತಿ ಕಾರ್ಯ ಮುಗಿಯಲಿದೆ.

–ಡಿ.ಎಸ್‌.ರಮೇಶ್‌, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry