ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲುಗಡೆ ಬೇಡಿಕೆ: ಸ್ಪಂದಿಸುವ ಭರವಸೆ

ವಿವಿಧ ಕಚೇರಿಗಳ ಉದ್ಘಾಟಿಸಿದ ದಕ್ಷಿಣ ಮಧ್ಯೆ ರೈಲ್ವೆ ವ್ಯವಸ್ಥಾಪಕ ವಿನೋದಕುಮಾರ
Last Updated 28 ಡಿಸೆಂಬರ್ 2017, 9:08 IST
ಅಕ್ಷರ ಗಾತ್ರ

ಸೇಡಂ: ‘ಸೇಡಂ ರೈಲ್ವೆ ನಿಲ್ದಾಣದಲ್ಲಿ ಕೆಲ ರೈಲುಗಳನ್ನು ನಿಲ್ಲಿಸುವಂತೆ ಒತ್ತಾಯಿಸುತ್ತಿರುವುದು ಸ್ವಾಗತಾರ್ಹ. ಇದರ ಕುರಿತು ಉನ್ನತಮಟ್ಟದಲ್ಲಿ ಚರ್ಚಿಸಿ ಬೇಡಿಕೆ ಈಡೇರಿಸುವ ಕೆಲಸ ಮಾಡುವೆ’ ಎಂದು ದಕ್ಷಿಣಮಧ್ಯೆ ರೈಲ್ವೆ ವ್ಯವಸ್ಥಾಪಕ ವಿನೋದಕುಮಾರ ಯಾದವ ಭರವಸೆ ನೀಡಿದರು.

ಪಟ್ಟಣದಲ್ಲಿನ ರೈಲ್ವೆ ನಿಲ್ದಾಣದ ವಿವಿಧ ಕಚೇರಿಗಳನ್ನು ಬುಧವಾರ ಲೋಕಾರ್ಪಣೆಗೊಳಿಸಿದ ನಂತರ ಅವರು ಸೇಡಂ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದರು.

‘ದೂರದಿಂದ ಪ್ರಯಾಣ ಬೆಳೆಸುವ ಅತಿ ವೇಗದ ರೈಲುಗಳನ್ನು ನಿಲ್ಲಿಸುವುದು ಅತ್ಯಂತ ಕಷ್ಟಕರ. ಅಂತಹ ರೈಲು ಒಂದು ನಿಮಿಷ ನಿಂತರೆ ಮುಂದೆ 10 ನಿಮಿಷದ ಸಮಯದ ಅಭಾವವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಸ್ಥಳೀಯವಾಗಿರುವ ಪ್ಯಾಸೆಂಜರ್, ಇಂಟರ್ಸಿಟಿ ಹಾಗೂ ಸೂಪರ್ ಫಾಸ್ಟ್ ರೈಲು ನಿಲುಗಡೆಯ ಕುರಿತು ಹೆಚ್ಚಿನ ಗಮನಹರಿಸಲಾಗುವುದು’ ಎಂದು ತಿಳಿಸಿದರು.

‘ಪ್ರತಿ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪ್ರಯಾಣಿಕರು ಅದಕ್ಕೆ ಸ್ಪಂದಿಸಬೇಕು. ಸಾರ್ವಜನಿಕರ ಆಸ್ತಿ ನಮ್ಮ ಆಸ್ತಿ ಎಂದು ತಿಳಿದು ಶುಚಿತ್ವದ ಕಡೆಗೆ ಗಮನಹರಿಸಬೇಕು. ಅಲ್ಲದೆ, ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಯ ಕುರಿತು ಸ್ಥಳೀಯ ವ್ಯವಸ್ಥಾಪಕರಿಗೆ ಸೂಚಿಸಿದ್ದೇನೆ. ಅವರು ಮುಂದಿನ ದಿನಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುತ್ತಾರೆ. ಇದರಿಂದ ಕಳ್ಳತನ ಸೇರಿದಂತೆ ಇನ್ನಿತರ ಅಪರಾಧ ಪ್ರಕರಣಗಳನ್ನು ತಡೆಯಲು ಸಾಧ್ಯವಾಗುತ್ತದೆ’ ಎಂದರು.

‘ಪಕ್ಕದ ತೆಲಂಗಾಣದಿಂದ ಅಕ್ರಮವಾಗಿ ರೈಲಿನಲ್ಲಿ ಸೇಂದಿಯನ್ನು ತಂದು ಸೇಡಂ ತಾಲ್ಲೂಕಿನಾದ್ಯಂತ ಮಾರಾಟ ಮಾಡಲಾಗುತ್ತದೆ’ ಎಂದು ಪತ್ರಕರ್ತರು ಗಮನ ಸೆಳೆದಾಗ, ‘ತೆಲಂಗಾಣದಿಂದ ಅಕ್ರಮ ಸೇಂದಿ ಸರಬರಾಜಾಗುತ್ತಿರುವ ಕುರಿತು ನನಗೆ ಈಗಲೇ ಗಮನಕ್ಕೆ ಬಂದಿದೆ. ಅದನ್ನು ತಡೆಗಟ್ಟುವ ಕೆಲಸ ಮಾಡುತ್ತೇನೆ’ ಎಂದು ಪ್ರತಿಕ್ರಿಯೆಸಿದರು.

‘ಸೇಡಂ ಪಟ್ಟಣದ ದಿನಗಳೆದಂತೆ ಅಭಿವೃದ್ಧಿ ಹೊಂದುತ್ತಿದ್ದು ಪ್ರಯಾಣಕ್ಕಾಗಿ ರೈಲಿನ ಮಾರ್ಗವನ್ನು ಅವಲಂಬಿಸಿದ್ದಾರೆ. ತಾಲ್ಲೂಕಿನಲ್ಲಿ ಅನೇಕ ಕಂಪೆನಿಗಳು ಇರುವುದರಿಂದ ಉನ್ನತ ಅಧಿಕಾರಿಗಳು, ಕಾರ್ಮಿಕರು ಸಹ ದೂರದ ಪ್ರಯಾಣಕ್ಕೆ ರೈಲ್ವೆಯನ್ನು ಅವಲಂಬಿಸಿದ್ದಾರೆ. ಅಲ್ಲದೆ, ವ್ಯಾಪಾರಕ್ಕಾಗಿ ಹೆಚ್ಚು ಹೈದರಾಬಾದ್ ಪ್ರದೇಶಕ್ಕೆ ತೆರಳುತ್ತಾರೆ. ಆದ್ದರಿಂದ ಕೆಲ ರೈಲುಗಳನ್ನು ಸೇಡಂ ನಿಲ್ದಾಣದಲ್ಲಿ ನಿಲ್ಲಿಸಬೇಕು’ ಎನ್ನುವ ಬೇಡಿಕೆಯೊಂದಿಗೆ ಅನೇಕ ಸಂಘಟನೆಗಳ ಪದಾಧಿಕಾರಿಗಳು ರೈಲ್ವೆ ಅಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.

ಈ ಹಿಂದೆ ಹಲವು ಬಾರಿ ಮನವಿ ಸಲ್ಲಿಸಿದರೂ ಬೇಡಿಕೆ ಈಡೇರಿರಲಿಲ್ಲ. ಆದರೆ, ಬುಧವಾರ ವಿನೋದಕುಮಾರ ಅವರು ಭೇಟಿ ಸಂದರ್ಭದಲ್ಲಿ ಬೇಡಿಕೆ ಈಡೇರಿಸುತ್ತಾರೆ ಎಂಬ ಆಶಾಭಾವನೆಯಲ್ಲಿ ಜನರು ಸೇರಿದ್ದರು. ಆದರೆ, ಅವರು ಭರವಸೆ ಮಾತ್ರ ನೀಡಿದ್ದರಿಂದ ಜನರಿಗೆ ನಿರಾಶೆಯಾಗಿದ್ದು ಕಂಡುಬಂತು.

ಸೇಡಂ ಬ್ಲಾಕ್ ಕಾಂಗ್ರೆಸ್ ಘಟಕ: ‘ಸೇಡಂ ರೈಲು ನಿಲ್ದಾಣದಲ್ಲಿ ಲೋಕಮಾನ್ಯ ತಿಲಕ್‌ ಮತ್ತು ಫಾಸ್ಟ್ ರೈಲನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ವರರಾವ ಮಾಲಿ ಪಾಟೀಲ ನೇತೃತ್ವದಲ್ಲಿ ವಿನೋದಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು. ಕಾಂಗ್ರೆಸ್ ಮುಖಂಡ ಅಬ್ದುಲ್ ಗಫೂರ್, ಅಶೋಕ ಸಾಹು ಇದ್ದರು.

ಬಿಜೆಪಿ ನಗರ ಘಟಕ: ಬಿಜೆಪಿ ನಗರ ಘಟಕ ಅಧ್ಯಕ್ಷ ಅನೀಲಕುಮಾರ ಐನಾಪೂರ ಅವರ ನೇತೃತ್ವದಲ್ಲಿ ಲೋಕಮಾನ್ಯ ತಿಲಕ, ಕಲಬುರ್ಗಿ-ಹೈದರಾಬಾದ್ ಇಂಟರ್ಸಿಟಿ, ಗರೀಬ್ ರಥ್, ಔರಂಗಾಬಾದ್, ತಿರುಪತಿ- ರಾಯಲಸೀಮಾ, ಪುಣೆ-ಸಿಕಂದರಾಬಾದ್, ಪುಣೆ-ಭುವನೇಶ್ವರಿ ಸೇರಿದಂತೆ ವಿವಿಧ ರೈಲುಗಳನ್ನು ನಿಲ್ಲಿಸಬೇಕು’ ಎಂದು ಮನವಿ ಸಲ್ಲಿಸಲಾಯಿತು. ಬಿಜೆಪಿ ಮುಖಂಡರಾದ ವಿಶ್ವನಾಥ ಪಾಟೀಲ ಕುರಕುಂಟಾ, ಶಿವಾನಂದ ಸ್ವಾಮಿ, ಶ್ರೀಮಂತ ಆವಂಟಿ, ರೇವಣಕುಮಾರ ಪಾಟೀಲ ಓಂಪ್ರಕಾಶ ಪಾಟೀಲ ಇದ್ದರು.

ನೃಪತುಂಗ ಸೇವಾ ಸಂಘ(ರಿ): ತಾಲ್ಲೂಕಿನ ಮಳಖೇಡ್ ಸ್ಟೇಷನ್ ರೋಡ್‌ನ ನೃಪತುಂಗ ಸೇವಾ ಸಂಘ(ರಿ)ದ ವತಿಯಿಂದ ಹುಬ್ಬಳಿ-ಎಲ್‌ಟಿಟಿ ರೈಲನ್ನು ಮಳಖೇಡ ರೋಡ ಸ್ಟೇಷನ್‌ನಲ್ಲಿ ನಿಲ್ಲಿಸುವಂತೆ ಮನವಿ ಸಲ್ಲಿಸಲಾಯಿತು. ಅಧ್ಯಕ್ಷ ಅರುಣಕುಮಾರ ಚವಾಣ್, ವಿಜಯಕುಮಾರ ರಾಠೋಡ, ಉಮೇಶ ಚವಾಣ್, ರಮೇಶ ಹಡಪದ, ಧನ್ನು ಚವಾಣ್, ಗೌತಂ ಚವಾಣ್, ಮಾರುತಿ ಪ್ಯಾಟಿ, ಚಂದ್ರಶೇಖರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT