ಕಾಮಿಡಿ ಮಾಡಲು ಕಿಲಾಡಿಗಳು ರೆಡಿ!

7

ಕಾಮಿಡಿ ಮಾಡಲು ಕಿಲಾಡಿಗಳು ರೆಡಿ!

Published:
Updated:
ಕಾಮಿಡಿ ಮಾಡಲು ಕಿಲಾಡಿಗಳು ರೆಡಿ!

ಮೊದಲ ಸೀಸನ್‌ನಲ್ಲಿಯೇ ಸಾಕಷ್ಟು ಜನಪ್ರಿಯತೆ ಗಳಿಸಿಕೊಳ್ಳುವುದರ ಜತೆಗೆ ಶಿವರಾಜ್‌ ಕೆ.ಆರ್‌. ಪೇಟೆ, ನಯನಾ ಅವರಂಥ ಹಲವು ಪ್ರತಿಭೆಗಳನ್ನು ಪರಿಚಯಿಸಿದ ಹಾಸ್ಯ ಕಾರ್ಯಕ್ರಮ ‘ಕಾಮಿಡಿ ಕಿಲಾಡಿಗಳು’. ಇದೀಗ ಹೊಸ ಬಗೆಯ ಮೃಷ್ಟಾನ್ನ ತಟ್ಟೆಯಿಟ್ಟುಕೊಂಡು ಮತ್ತೆ ಬರುತ್ತಿದೆ ‘ಕಾಮಿಡಿ ಕಿಲಾಡಿಗಳು 2’.

ಇದೇ ಶನಿವಾರ (ಡಿ.30)ರಿಂದ ಕಿಲಾಡಿಗಳ ಕಾಮಿಡಿ ಕಾರ್ಯಕ್ರಮದ ಎರಡನೇ ಸೀಸನ್‌ ಆರಂಭವಾಗುತ್ತಿದೆ. ಇನ್ನುಮುಂದೆ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ‘ನೋ ಟೆನ್ಷನ್‌, ಸ್ಮೈಲ್‌ ಪ್ಲೀಸ್‌’ ಎಂಬ ಟ್ಯಾಗ್‌ಲೈನ್‌ ಕೂಡ ಕಾರ್ಯಕ್ರಮದ ಉದ್ದೇಶವನ್ನು ಹೇಳುವಂತಿದೆ.

ಈ ಸಲದ ಷೋಗಾಗಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಆಡಿಷನ್‌ ನಡೆಸಿ ಅಲ್ಲಿನ ಪ್ರತಿಭಾವಂತರನ್ನು ಗುರ್ತಿಸಿ ಒಟ್ಟು ಹದಿನೈದು ಜನ ಸ್ಫರ್ಧಿಗಳನ್ನು ಆಯ್ಕೆ ಮಾಡಲಾಗಿದೆ.

 ಈ ಕಾರ್ಯಕ್ರಮ ಜನಪ್ರಿಯವಾಗುವಲ್ಲಿ ನಿರ್ಣಾಯಕರ ಪಾತ್ರವೂ ಅಷ್ಟೇ ಮುಖ್ಯವಾದದ್ದು. ಕಳೆದ ಸೀಸನ್‌ನಲ್ಲಿ ನಿರ್ಣಾಯಕರಾಗಿದ್ದ ಯೋಗರಾಜ ಭಟ್‌, ಜಗ್ಗೇಶ್‌ ಮತ್ತು ರಕ್ಷಿತಾ ಅವರೇ ಎರಡನೇ ಸೀಸನ್‌ನಲ್ಲಿಯೂ ಮುಂದುವರಿಯಲಿದ್ದಾರೆ.

ಯೋಗರಾಜ ಭಟ್ಟರಿಗಂತೂ ಈ ಕಾರ್ಯಕ್ರಮ ಸಾಕಷ್ಟು ಮಜಾ ಕೊಟ್ಟಿದೆಯಂತೆ. ‘ಅಷ್ಟಾಗಿ ಬೆಳಕಿಗೆ ಬಂದಿರದ ಪ್ರಾದೇಶಿಕ ಪ್ರತಿಭೆಗಳನ್ನು ಇಟ್ಟುಕೊಂಡು ಮಾಡುತ್ತಿರುವ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು’. ಹೊಸಬರು ಅಂದ ತಕ್ಷಣ ನನ್ನ ಕಿವಿ, ಕಣ್ಣು ಪಂಚೇಂದ್ರಿಯಗಳೂ ಜಾಗೃತವಾಗಿಬಿಡುತ್ತವೆ. ಅವರನ್ನು ಒಂದು ವೇದಿಕೆಯಲ್ಲಿ ನೋಡೋದೇ ಒಂದು ಮಜಾ. ಅವರ ಮುಗ್ಧತೆಯನ್ನು ನೋಡಿದಾಗ ತುಂಬಾ ನಗುವಂತೂ ಬರುತ್ತದೆ’ ಎನ್ನುತ್ತಾರೆ ಭಟ್ಟರು. ಉಕ್ಕಿಬರುವ ಈ ನಗುವೇ ಅವರನ್ನು ಎರಡನೇ ಸೀಸನ್‌ನ ಭಾಗವಾಗುವಂತೆ ಮಾಡಿದೆ.

‘ಕಳೆದ ಸೀಸನ್‌ನ ಎಲ್ಲ ಕಲಾವಿದರು ಇಂದಿನ ಕಾಲದ ಟೈಮಿಂಗ್‌, ಇಂದಿನ ನಮ್ಮ ಗುದ್ದಾಟಗಳನ್ನು ಹಾಸ್ಯವಾಗಿಸುವ ರೀತಿ ತುಂಬ ಇಷ್ಟವಾಯ್ತು. ನಗಿಸಬೇಕು ಎಂದರೆ ತುಂಬ ಚುರುಕಾದ ಹಾಸ್ಯಪ್ರಜ್ಞೆ ಬೇಕು. ಈ ಹೊಸ ಹುಡುಗರಲ್ಲಿ ಆ ಪ್ರತಿಭೆ ಇದೆ. ಅವರಿಂದ ನಾವು ಕಲಿಯುವುದೂ ಸಾಕಷ್ಟಿರುತ್ತದೆ. ಆರೆಂಟು ಜನ ಬರಹಗಾರರು, ನಿರ್ದೇಶನ, ವಾಹಿನಿಗಳ ಸ್ಪರ್ಧೆ, ಆ ಒದ್ದಾಟ ನೋಡುವುದು ನಾನೂ ಅದರ ಭಾಗವಾಗುವುದು ತುಂಬ ಮಜ ಕೊಡುತ್ತದೆ. ಆ ಕಾರಣಕ್ಕಾಗಿಯೇ ಈ ಕಾರ್ಯಕ್ರಮ ನನಗೆ ತುಂಬ ಇಷ್ಟ’ ಎಂದು ಅವರು ವಿವರಿಸುತ್ತಾರೆ.

ಇನ್ನೋರ್ವ ನಿರ್ಣಾಯಕಿ ರಕ್ಷಿತಾ ಅವರ ಅನುಭವವೂ ಇದಕ್ಕಿಂತ ತುಂಬ ಭಿನ್ನವಾಗಿಯೇನೂ ಇಲ್ಲ.  ‘ಕಾಮಿಡಿ ಕಿಲಾಡಿಗಳು’ ಮೊದಲ ಸೀಸನ್‌ ಆರಂಭವಾದಾಗ ಆ ಕಾರ್ಯಕ್ರಮವನ್ನು ಜನರು ಇಷ್ಟಪಡುತ್ತಾರೆ ಎಂಬ ನಂಬಿಕೆಯೇ ಅವರಿಗೆ ಇರಲಿಲ್ಲವಂತೆ.

‘ಆಗ ಡ್ರಾಮಾ ಜ್ಯೂನಿಯರ್ಸ್‌ ಕಾರ್ಯಕ್ರಮ ತುಂಬ ಜನಪ್ರಿಯವಾಗಿತ್ತು. ಈ ಕಾಮಿಡಿ ಕಾರ್ಯಕ್ರಮವನ್ನು ಯಾರು ನೋಡುತ್ತಾರೆ ಎಂದು ಅನಿಸುತ್ತಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ನಿರ್ಣಾಯಕಿಯಾಗಿ ಪಾಲ್ಗೊಂಡ ಒಂದೇ ವಾರದಲ್ಲಿ ಆ ಇಡೀ ತಂಡ ನನ್ನದೇ ಇನ್ನೊಂದು ಕುಟುಂಬ ಅನಿಸಲು ಶುರುವಾಯ್ತು. ನಮಗಷ್ಟೇ ಅಲ್ಲ, ಜನರಿಗೂ ತುಂಬ ಇಷ್ಟವಾಯ್ತು’ ಎಂದು ಖುಷಿಯಿಂದಲೇ ಹೇಳಿಕೊಳ್ಳುತ್ತಾರೆ ರಕ್ಷಿತಾ.

‘ಈಗ ಎರಡನೇ ಸೀಸನ್‌ ಬಗ್ಗೆ ಜನರಿಗೆ ಸಾಕಷ್ಟು ನಿರೀಕ್ಷೆಗಳಿವೆ. ಬಾಯಿಮಾತಿನ ಮೂಲಕವೇ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ. ಆದ್ದರಿಂದ ನಮ್ಮ ಮೇಲಿನ ಜವಾಬ್ದಾರಿ ದುಪ್ಪಟ್ಟಾಗಿದೆ’ ಎನ್ನುವ ಅವರಿಗೆ ಜನರ ನಿರೀಕ್ಷೆಯನ್ನು ಎರಡನೇ ಸೀಸನ್‌ ಹುಸಿಗೊಳಿಸುವುದಿಲ್ಲ ಎಂಬ ನಂಬಿಕೆಯಂತೂ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry