ಜಾಣ ಹೂಡಿಕೆಗೆ ಕನಕಪುರ ರಸ್ತೆ

7

ಜಾಣ ಹೂಡಿಕೆಗೆ ಕನಕಪುರ ರಸ್ತೆ

Published:
Updated:
ಜಾಣ ಹೂಡಿಕೆಗೆ ಕನಕಪುರ ರಸ್ತೆ

ನಕಪುರ ರಸ್ತೆ ಎಲ್ಲಿದೆ?’ ಈ ಪ್ರಶ್ನೆಯನ್ನು ಗೂಗಲ್‌ ಅಂಕಲ್‌ಗೆ ಕೇಳಿದಾಗ ಮೆಜೆಸ್ಟಿಕ್‌ನಿಂದ ಕನಕಪುರ ಪಟ್ಟಣದವರೆಗಿನ ಉದ್ದ ರಸ್ತೆ ತೆರೆಯ ಮೇಲೆ ಮೂಡಿತು. ಬನಶಂಕರಿಯಿಂದ ತಲಘಟ್ಟಪುರದವರೆಗಿನ ಪ್ರದೇಶದ ಈಚೆಗೆ ಬೆಳವಣಿಗೆಯನ್ನು ಪರಿಶೀಲಿಸುವ ಉದ್ದೇಶದಿಂದ ಈ 7.5 ಕಿ.ಮೀ. ರಸ್ತೆಯ ಎರಡೂ ಬದಿಯನ್ನು ಮಾತ್ರ ಕನಕಪುರ ರಸ್ತೆ ಎಂದು ಅರ್ಥೈಸಿಕೊಂಡು ಈ ಲೇಖನ ಬರೆಯಲು ಆರಂಭಿಸಿದೆ.

ಈ ಭಾಗದಲ್ಲಿ ಮಾತಿಗೆ ಸಿಕ್ಕ ಅನೇಕರು, ‘ಇಲ್ಲೇನಿತ್ತು ಕಣಮ್ಮ, 10 ವರ್ಷಕ್ಕೆ ಮೊದಲು ಬರೀ ಜಲ್ಲಿಕಲ್ಲು ತುಂಬಿಕೊಂಡ ಟಿಪ್ಪರ್‌ಗಳು ಓಡಾಡ್ತಿದ್ದವು. ಹಳ್ಳಿ ಥರ ಇತ್ತು. ಈಗ ನೋಡಿ, ಎತ್ತನೋಡಿದರೂ ಅಪಾರ್ಟ್‌ಮೆಂಟ್‌ಗಳು’ ಎಂದು ಉದ್ಗರಿಸಿದರು.

ಈ ಭಾಗದ ರಿಯಲ್ ಎಸ್ಟೇಟ್ ಬೆಳವಣಿಗೆಗೆ ಮುಖ್ಯ ಕಾರಣವಾಗಿರುವುದು ಸಾರಿಗೆ ಸಂಪರ್ಕ ಜಾಲದ ವಿಸ್ತರಣೆ. ಮೆಟ್ರೊ ರೈಲು ಮಾರ್ಗ ವಿಸ್ತರಣೆಯಾಗಿರುವುದರಿಂದ ದಶಕಗಳ ಹಿಂದೆ ಹಳ್ಳಿಯಂತಿದ್ದ ಕನಕಪುರ ರಸ್ತೆಯು ನಿಧಾನವಾಗಿ ಪಟ್ಟಣದ ಸೊಬಗು ಮೈದುಂಬಿಕೊಳ್ಳುತ್ತಿದೆ.  ಯಲಚೇನಹಳ್ಳಿಯಿಂದ ಕೇವಲ 30 ನಿಮಿಷಗಳೊಳಗೆ ಮೆಜೆಸ್ಟಿಕ್ ತಲುಪಬಹುದು.

ಪ್ರಸ್ತುತ ‘ಆರ್ಟ್‌ ಆಫ್ ಲಿವಿಂಗ್ ಆಶ್ರಮ’ದ ತನಕ ಮೆಟ್ರೊ ಕಾಮಗಾರಿ ನಡೆಯುತ್ತಿದ್ದು, ತಲಘಟ್ಟಪುರ, ಅಂಜನಾಪುರ ಟೌನ್‌ಶಿಪ್ ಭಾಗಕ್ಕೂ ಮೆಟ್ರೊ ಸೌಲಭ್ಯ ವಿಸ್ತರಣೆಯಾಗಲಿದೆ. ಇದರಿಂದಾಗಿ ಕನಕಪುರ ರಸ್ತೆಯ ರಿಯಲ್ ಎಸ್ಟೇಟ್ ಜಿಗಿತ ಕಾಣಲಿದೆ ಎನ್ನುತ್ತಾರೆ ರಿಯಲ್ ಎಸ್ಟೇಟ್ ತಜ್ಞರು.

ದಶಕದ ಹಿಂದೆ ನಗರದ ಹೊರವಲಯ ಪ್ರದೇಶವೆಂದೇ ಕನಕಪುರ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಗಣಿಸುತ್ತಿದ್ದರು. ಈಗ ಸಾರಕ್ಕಿ, ಜರಗನಹಳ್ಳಿ, ಯಲಚೇನಹಳ್ಳಿ, ಗಣಪತಿಪುರ, ಕೋಣನಕುಂಟೆ, ದೊಡ್ಡ ಕಲಸಂದ್ರ, ರಘುವನಹಳ್ಳಿ, ಅಂಜನಾಪುರ, ತಾತಗುಣಿ, ತಲಘಟ್ಟಪುರ ಬಿಬಿಎಂಪಿ ವ್ಯಾಪ್ತಿಗೆ ಬಂದಿವೆ. ಬಹುತೇಕ ಕಡೆ ದೊಡ್ಡದೊಡ್ಡ ಅಪಾರ್ಟ್‌ಮೆಂಟುಗಳು ತಲೆ ಎತ್ತಿವೆ. ಶೋಭಾ, ಪ್ರೆಸ್ಟೀಜ್, ಪುರವಂಕರ, ಬ್ರಿಗೇಡ್ ಮೊದಲಾದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪೆನಿಗಳು ಇಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.

ಕುಮಾರನ್ಸ್ ಹೈಸ್ಕೂಲ್, ಕೆಎಸ್‌ಐಟಿ, ಯಲ್ಲಮ್ಮ ದಾಸಪ್ಪ, ಜ್ಞಾನವಿಕಾಸ, ಇನ್‌ಸೈಟ್ ಅಕಾಡೆಮಿ, ದಯಾನಂದ ಸಾಗರ, ಜೈನ್ ಕಾಲೇಜು, ಎಪಿಎಸ್ ಕಾಲೇಜು, ಜ್ಯೋತಿ ಎಂಜಿನಿಯರಿಂಗ್ ಕಾಲೇಜು ಹೀಗೆ ಸಾಲುಸಾಲು ಶಿಕ್ಷಣ ಸಂಸ್ಥೆಗಳ ಸಮೂಹವೇ ಇದೆ. ಬನಶಂಕರಿ ದೇವಸ್ಥಾನ, ಆರ್ಟ್ ಆಫ್ ಲಿವಿಂಗ್, ಇಸ್ಕಾನ್ ಹೀಗೆ ಅನೇಕ ದೇವಾಲಯಗಳೂ ಇಲ್ಲಿವೆ.

‘ಈ ಭಾಗದಲ್ಲಿನ ಬಡಾವಣೆಗಳಲ್ಲಿ ಮೂಲಸೌಕರ್ಯಗಳು ಚೆನ್ನಾಗಿದ್ದು, ನೀರಿನ ಸಮಸ್ಯೆ ಇಲ್ಲ. 400 ಅಡಿಗೆ ಬೋರ್‌ವೆಲ್ ನೀರು ದೊರೆಯುತ್ತದೆ. ಸುತ್ತಮುತ್ತಲು ಇನ್ನೂ ಹಳ್ಳಿಯ ಹಸಿರು ಪರಿಸರವಿದ್ದು, ನಗರದ ಗದ್ದಲದಿಂದ ದೂರ ಇರುವುದರಿಂದ ಮನಸಿಗೆ ನೆಮ್ಮದಿ ಅನಿಸುತ್ತದೆ. ಮಕ್ಕಳಿಗೆ ಶಾಲಾ–ಕಾಲೇಜು, ಗೃಹಿಣಿಯರ ಶಾಪಿಂಗ್‌ಗೆ ಮೆಟ್ರೊ, ಡಿಮಾರ್ಟ್ ಕೂಡಾ ಇದೆ. ದೊಡ್ಡ ಆಸ್ಪತ್ರೆಗಳು ಇಲ್ಲದಿರುವುದು ಕೊರತೆ. ನಗರದ ಮಧ್ಯಭಾಗದಲ್ಲಿ ಕಚೇರಿ ಹೊಂದಿರುವವರು ಇಲ್ಲಿ ಮನೆ ಮಾಡಬಹುದು. ಪ್ರಯಾಣಕ್ಕೆ ಮೆಟ್ರೊ ಇರುವುದರಿಂದ ಸಮಸ್ಯೆಯಾಗದು’ ಎನ್ನುತ್ತಾರೆ ಗೃಹಿಣಿ ಅನುಪಮಾ.

‘ಕನಕಪುರ ರಸ್ತೆಯಲ್ಲಿ ಶೀಘ್ರದಲ್ಲೇ ಫೋರಂ ಮಾಲ್ ಕೂಡಾ ಬರಲಿದೆ. ಮಂತ್ರಿ ಸ್ಕ್ವೇರ್‌, ಗೋಲ್ಡನ್ ಗೇಟ್ ಹೀಗೆ ಹಲವರ ಪ್ರಾಪರ್ಟಿಗಳು ಇಲ್ಲಿವೆ. ಮೆಟ್ರೊ ರೈಲು ಸಂಪರ್ಕ ಬಂದ ಮೇಲೆ ಅಭಿವೃದ್ಧಿ ವೇಗವಾಗಿ ಆಗುತ್ತಿದೆ. ಇನ್ನೂ ಸ್ವಲ್ಪ ದಿನಗಳು ಹೋದಲ್ಲಿ ಕನಕಪುರ ರಸ್ತೆಯ ರಿಯಲ್ ಎಸ್ಟೇಟ್ ಭಾರಿ ಬದಲಾವಣೆ ಕಾಣಲಿದೆ. ಮನೆ ಮತ್ತು ನಿವೇಶನ ಕೊಳ್ಳಲು ಇದು ಸಕಾಲ. ಹೂಡಿಕೆಗೂ ಒಳ್ಳೆಯ ಕಾಲವಿದು. ಇನ್ನು ಆರು ತಿಂಗಳಿನಿಂದ ವರ್ಷದೊಳಗೆ ಮತ್ತೆ ಇಲ್ಲಿನ ರಿಯಲ್‌ ಎಸ್ಟೇಟ್‌ ಚೇತರಿಸಿಕೊಳ್ಳಲಿದೆ’ ಎನ್ನುತ್ತಾರೆ ವಿ2 ಹೋಲ್ಡಿಂಗ್ ಹೌಸಿಂಗ್ ಡೆವಲಪ್‌ಮೆಂಟ್ ಪ್ರೈವೆಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ಎಲ್. ವೆಂಕಟರಾಮ ರೆಡ್ಡಿ.

‘ಈ ರಸ್ತೆಯಲ್ಲೇ ಇಸ್ಕಾನ್ ದೇವಾಲಯವಿದೆ. ದೇವಾಲಯದ ಪಕ್ಕದಲ್ಲೇ 800 ಫ್ಲ್ಯಾಟ್‌ಗಳಿವೆ. ಶೀಘ್ರದಲ್ಲೇ ಇಸ್ಕಾನ್ ರೆಸ್ಟೊರೆಂಟ್ ಕೂಡಾ ಬರಲಿದೆ. ಈ ಪ್ರದೇಶದಲ್ಲಿ ಪಿ.ಜಿ.ಗಳು ಇದ್ದು, ಮಧ್ಯಮವರ್ಗದವರಿಗೆ ಇದು ಉತ್ತಮ ಆದಾಯ ಮೂಲವಾಗಿದೆ.ಈ ಭಾಗದಲ್ಲಿ ವಿಲ್ಲಾ ಸಂಸ್ಕೃತಿಯೂ ಆರಂಭವಾಗಿದೆ. ಐಷಾರಾಮಿ ವಿಲ್ಲಾಗಳೂ ಇಲ್ಲಿವೆ. ಎರಡೂವರೆ ಕೋಟಿ ರೂಪಾಯಿಯಿಂದ ವಿಲ್ಲಾಗಳ ದರಗಳು ಆರಂಭವಾಗುತ್ತವೆ’ ಎಂದು ಅಭಿಪ್ರಾಯಪಡುತ್ತಾರೆ ಅವರು.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry