ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಮಕ್‌’ ಕೊಡಲು ಸುನಿ ಸಿದ್ಧ!

Last Updated 28 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

* ‘ಚಮಕ್‌’ ಸಿನಿಮಾದ ವಿಶೇಷತೆ ಏನು?

ಇದುವರೆಗೆ ನನ್ನ ಸಿನಿಮಾಗಳಲ್ಲಿ ಹ್ಯೂಮರ್‌ಗೇ ಜಾಸ್ತಿ ಒತ್ತು ಕೊಟ್ಟಿದ್ದೆ. ಆದರೆ ‘ಚಮಕ್‌’ನಲ್ಲಿ ಇರುವ ಪ್ರಮುಖ ಚಮಕ್‌ ಏನೆಂದರೆ ಇದು ಒಂದು ಎಮೋಷನಲ್‌ ಡ್ರಾಮಾ. ಆದರೂ ಜನರು ನನ್ನ ಸಿನಿಮಾಗಳಲ್ಲಿ ಹ್ಯೂಮರ್‌ ಅನ್ನೇ ನಿರೀಕ್ಷೆ ಮಾಡುತ್ತಾರೆ. ಅದನ್ನು ಬಿಟ್ಟು ಸಿನಿಮಾ ಮಾಡಲು ಹೋದರೆ ಏನಾಗುತ್ತದೆ ಎಂಬುದು ‘ಬಹುಪರಾಕ್‌’ನಲ್ಲಿ ಗೊತ್ತಾಗಿದೆ. ಆದ್ದರಿಂದ ಮೊದಲರ್ಧ ಆ ಹ್ಯೂಮರ್‌ ಅನ್ನು ಹಾಗೆಯೇ ಉಳಿಸಿಕೊಂಡಿದ್ದೇನೆ. ದ್ವಿತೀಯಾರ್ಧ ಭಾವನಾತ್ಮಕ, ಕೌಟುಂಬಿಕ ಕಥನ.

* ‘ಚಮಕ್‌’ ಕಥೆಯ ಎಳೆ ಎಂಥದ್ದು?

ಇದು ಹುಟ್ಟು, ಸಾವು, ಮಗು, ಎರಡು ವಿರುದ್ಧ ಸ್ವಭಾವಗಳ ಗಂಡು ಹೆಣ್ಣಿನ ನಡುವಿನ ಸಂಬಂಧದ ಸುತ್ತ ಹೆಣೆಯಲಾದ ಕಥೆ. ಒಂದೇ ಭೇಟಿಯಲ್ಲಿ ಹಿರಿಯರೆಲ್ಲ ಸೇರಿಕೊಂಡು ಮದುವೆ ನಿಶ್ವಯ ಮಾಡಿಬಿಡ್ತಾರೆ ನೋಡಿ, ಮದುವೆಯಾಗುತ್ತಿರುವವರ ನಿರೀಕ್ಷೆ, ಆಸೆಗಳೇ ಬೇರೆ ಇರುತ್ತವೆ. ವಾಸ್ತವ ಇನ್ನೂ ಬೇರೆ ಇರುತ್ತದೆ. ಹೀಗೆ ಅಂದುಕೊಂಡಿದ್ದು ಬಿಟ್ಟು ಬೇರೆಯದೇ ನಡೆಯುವುದೇ ಚಮಕ್‌. ಇಂಥ ಎಳೆಯನ್ನೇ ಇಟ್ಟುಕೊಂಡು ಮನರಂಜನೆ ಮತ್ತು ಭಾವುಕತೆಯನ್ನು ಸೇರಿಸಿ ಹೆಣೆದಿರುವ ಕಥೆ ಇದು.

ಇದು ಪೂರ್ತಿಯಾಗಿ ಕೌಟುಂಬಿಕ ಕಥನ. ಟೀವಿ ಧಾರಾವಾಹಿಗಳಲ್ಲಿ ಏನೇನೋ ಆಗುತ್ತಿರುತ್ತದೆ. ಒಂದು ಎಳೆಯನ್ನು ವಿಪರೀತ ಎಳೆದಾಡುತ್ತಿರುತ್ತಾರೆ. ಹಾಗೆ ಎಳೆಯದೇ ಅದೇ ಕಥೆಯನ್ನು ಚುರುಕಾಗಿ ಹೇಳಿದರೆ ಹೇಗಿರುತ್ತದೆಯೋ ಹಾಗಿದೆ ಈ ಸಿನಿಮಾ.

* ಒಂದು ಸಿನಿಮಾದ ಕಥೆ ಬರೆಯುವಾಗ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುತ್ತೀರಿ?

ಪ್ರತಿಸಲ ಹೊಸ ಸಿನಿಮಾ ಬಗ್ಗೆ ಯೋಚಿಸುವಾಗಲೂ ನನ್ನ ಮನಸ್ಸಿನಲ್ಲಿರುವುದು, ಏನಾದರೂ ಹೊಸತು ಕೊಡಬೇಕು ಮತ್ತು ಮನರಂಜನೆ ಇರಬೇಕು ಎನ್ನುವುದು. ಕಥೆ ಬರೆದು ಸ್ನೇಹಿತರಿಗೆ ಓದಲು ಕೊಡುವಾಗಲೂ ಇದನ್ನೇ ಕೇಳುತ್ತೇನೆ. ಚಮಕ್‌ ತುಂಬ ಹಿಂದೆಯೇ ಬರೆದಿಟ್ಟುಕೊಂಡ ಕಥೆ. ಆದರೆ ಈಗ ‘ಮದುವೆ’ ಎಂಬ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಪ್ರೀವೆಡ್ಡಿಂಗ್‌ ಅದೂ ಇದು ಏನೇನೋ ಬಂದಿದೆ. ನಾನು ಇದುವರೆಗೆ ಇಂಥ ಕೌಟುಂಬಿಕ ಕಥನದ ಸಿನಿಮಾ ಮಾಡಿರಲಿಲ್ಲ. ‘ಕರುಳಿನ ಕುಡಿ’ಯಂಥ ಸಿನಿಮಾಗಳನ್ನೆಲ್ಲ ಮಾಡುವುದಕ್ಕಾಗುವುದಿಲ್ಲ. ಆದರೆ ಇಂದಿನ ಕಾಲಕ್ಕೆ ತಕ್ಕ ಹಾಗೆ ಜನರ ಕಣ್ಣಿನಲ್ಲಿ ನೀರು ಮಿನುಗಿಸುವ ಪ್ರಯತ್ನವನ್ನು ಮಾಡಿದ್ದೇನೆ.

* ನಿಮ್ಮೊಳಗಿನ ನಿರ್ದೇಶಕನನ್ನು ಸಿನಿಮಾ ವ್ಯಾಪಾರದ ಲೆಕ್ಕಾಚಾರಗಳು ನಿಯಂತ್ರಿಸುತ್ತಿವೆ ಅನಿಸಿದ್ದಿದೆಯೇ?

ಅದು ಯಾವತ್ತೂ ಎಲ್ಲ ನಿರ್ದೇಶಕರಿಗೂ ಒಂದಲ್ಲ ಒಂದು ಬಗೆಯಲ್ಲಿ ಕಾಡಿಯೇ ಕಾಡುತ್ತದೆ. ನಮಗೆ ಏನೋ ಒಂದು ದೃಶ್ಯ ಕಲ್ಪನೆ ಇರುತ್ತದೆ. ಆದರೆ ಅದನ್ನು ನೋಡಿದ ಪ್ರೇಕ್ಷಕನ ಪ್ರತಿಕ್ರಿಯೆ ಹೇಗಿರುತ್ತದೆಯೋ ಎಂಬ ಭಯ ಇರುತ್ತದೆ. ಆ ಭಯದ ಕಾರಣಕ್ಕಾಗಿಯೇ ನಮ್ಮ ಅಭಿಲಾಷೆಗಳನ್ನು ಮೊಟಕುಗೊಳಿಸಿಕೊಳ್ಳುತ್ತೇವೆ.

ಉದಾಹರಣೆಗೆ ನಮ್ಮ ‘ಚಮಕ್‌’ ಚಿತ್ರದ ನಾಯಕ ಹೆರಿಗೆ ತಜ್ಞ. ಆದರೆ ವಿಧಿಯಿಲ್ಲದೇ ಅವನು ಸಿನಿಮಾದಲ್ಲಿ ಫೈಟ್‌ ಮಾಡ್ತಾನೆ. ಈ ಫೈಟ್‌ ಇರುವುದು ಜನರಿಗೋಸ್ಕರ, ಅಭಿಮಾನಿಗಳಿಗೋಸ್ಕರ. ಹಣ ಹೂಡಿದ ನಿರ್ಮಾಪಕನ ಹಿತಾಸಕ್ತಿಯೂ ನಿರ್ದೇಶಕನನ್ನು ನಿಯಂತ್ರಿಸುವುದಿದೆ. ಬಂಡವಾಳ ವಾಪಸ್‌ ತೆಗೆಯುವುದು ಅಷ್ಟೇ ಮುಖ್ಯ. ಒಂದು ಫೈಟ್‌ ಇದ್ದರೆ ಡಬ್ಬಿಂಗ್‌ ಹಕ್ಕುಗಳು 20 ಲಕ್ಷಗಳವರೆಗೆ ಹೋಗುತ್ತವೆ. ಮೂಲಕಥೆಗೆ ದಕ್ಕೆ ಆಗದ ಹಾಗೆ ಇಂಥ ಸಣ್ಣಪುಟ್ಟ ರಾಜಿ ಮಾಡಿಕೊಳ್ಳುವುದು ಅನಿವಾರ್ಯ.

* ‘ಚಮಕ್‌’ ಸಿನಿಮಾದ ಬಗ್ಗೆ ನಿಮ್ಮ ನಿರೀಕ್ಷೆ ಏನಿದೆ?

ಜನರು ಮೆಚ್ಚಿಕೊಳ್ಳುತ್ತಾರೆ ಎನ್ನುವ ನಂಬಿಕೆ ನನಗಿದೆ. ಒಟ್ಟಾರೆ ಸಿನಿಮಾದ ಕಥೆ ಕಾಡುವ ಹಾಗಿದೆ. ಹಾಗೆಯೇ ಪಾತ್ರಗಳನ್ನು ಜನರು ಎಂಜಾಯ್‌ ಮಾಡುತ್ತಾರೆ. ಕ್ಲೈಮ್ಯಾಕ್ಸ್‌ ಕೂಡ ತುಂಬ ಚೆನ್ನಾಗಿದೆ ಎಂದು ಆಪ್ತವಲಯದವರೂ ಅಭಿಪ್ರಾಯಪಟ್ಟಿದ್ದಾರೆ.

* ಗಣೇಶ್‌ ಅವರನ್ನೇ ಯಾಕೆ ಆಯ್ದುಕೊಂಡಿರಿ?

ಗಣೇಶ್‌ ಅವರನ್ನು ತೆರೆಯ ಮೇಲೆ ನೋಡುವುದೇ ಮಜಾ. ಅದರಲ್ಲಿಯೂ ಹೆರಿಗೆ ತಜ್ಞನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಥೆಯ ನಾಯಕನದು ತುಂಬ ಜಾಲಿಯಾಗಿ ಮಾತನಾಡಿಕೊಂಡು ಇರುವ ಪಾತ್ರ. ‘ಮುಂಗಾರು ಮಳೆ’ ಸಿನಿಮಾದ ನಂತರ ಇದೇ ಮೊದಲ ಬಾರಿಗೆ ಗಣೇಶ್‌ ಈ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಲ್ಲದೇ ಈ ಚಿತ್ರಕ್ಕೆ ನಾಯಕಿಯದೂ ತುಂಬ ಪ್ರಧಾನ ಪಾತ್ರ. ನಾಯಕಿಗಾಗಿ ತುಂಬ ಹುಡುಕಾಟ ನಡೆಸಿದೆವು. ಆಗಿನ್ನೂ ‘ಕಿರಿಕ್‌ ಪಾರ್ಟಿ’ ತೆರೆಕಂಡಿತ್ತು. ಆ ಚಿತ್ರದಲ್ಲಿ ರಶ್ಮಿಕಾ ನೋಡಿದ್ದೆ. ನನ್ನ ಚಿತ್ರದ ಪಾತ್ರಕ್ಕೆ ಹೊಂದಿಕೊಳ್ಳುತ್ತಾರೆ ಅನಿಸಿತ್ತು. ಅದಕ್ಕೆ ಅವರನ್ನೇ ನಾಯಕಿಯನ್ನಾಗಿ ಆಯ್ದುಕೊಂಡೆವು. ಇಬ್ಬರ ಜೋಡಿಯೂ ಚೆನ್ನಾಗಿದೆ.

* ಕನ್ನಡದಲ್ಲಿ ತಾರಾ ವರ್ಚಸ್ಸು ಮತ್ತು ಪ್ರಯೋಗಶೀಲತೆ ಎರಡನ್ನೂ ಹೊಂದಿಸುವ ಅಗತ್ಯ ಇದೆ ಅನಿಸುವುದಿಲ್ಲವೇ?

ನಮ್ಮಲ್ಲಿ ತಾರಾನಟರ ಪ್ರಯೋಗಶೀಲ ಪಾತ್ರಗಳನ್ನು ಜನರು ಒಪ್ಪಿಕೊಳ್ಳುತ್ತಿಲ್ಲ. ಹೊಸಥರದ ಸಿನಿಮಾಗಳು ಎಂದು ಹೇಳುವ ಬಹುತೇಕ ಎಲ್ಲ ಸಿನಿಮಾಗಳು ಹೊಸಬರನ್ನೇ ಹಾಕಿಕೊಂಡು ಮಾಡಿರುವ ಸಿನಿಮಾ. ಮಲಯಾಳಂ ಚಿತ್ರರಂಗದಲ್ಲಿ ತಾರಾನಟರು ಪ್ರಯೋಗಶೀಲ ಸಿನಿಮಾಗಳನ್ನು ಮಾಡುತ್ತಾರೆ. ಅವುಗಳನ್ನು ಜನರು ನೋಡುತ್ತಾರೆ.

ಅಲ್ಲದೇ ನಾವು ಪ್ರಯೋಗಶೀಲ ಸಿನಿಮಾ ಅಂದ ತಕ್ಷಣ ಕಡಿಮೆ ಬಜೆಟ್‌ ಸಿನಿಮಾ ಎಂದು ನಿಶ್ಚಯ ಮಾಡಿಕೊಂಡು ಬಿಡುತ್ತೇವೆ. ಇಂಥ ಕೆಲವು ಚೌಕಟ್ಟುಗಳಿಗೆ ಸೀಮಿತ ಆಗಿರುವುದರಿಂದಲೇ ನಾವು ಅಲ್ಲಲ್ಲೇ ಸುತ್ತುತ್ತಿದ್ದೇವೆ. ‘ಉಳಿದವರು ಕಂಡಂತೆ’ಯಂಥ ಸಿನಿಮಾ ಹಿಟ್‌ ಆಗಬೇಕಾಗಿತ್ತು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅದು ಹಿಟ್‌ ಆಗಿಲ್ಲ. ಯಾಕೆ ಎಂದು ಹೇಳುವುದು ಕಷ್ಟ.

ಈಗ ‘ಆಪರೇಷನ್‌  ಅಲಮೇಲಮ್ಮ’ ಸಿನಿಮಾ ಗರಿಷ್ಠ ಮೂರೂವರೆ ಕೋಟಿ ಗಳಿಕೆ ಮಾಡಿರಬಹುದು. ನಮ್ಮ ಬಂಡವಾಳಕ್ಕಿಂತ ದುಪ್ಪಟ್ಟು ಹಣ ಮಾಡಿದ್ದೇವೆ. ಆದರೆ ಯಾವುದೇ ಸ್ಟಾರ್‌ ನಟನ ಸೋತ ಸಿನಿಮಾಗಳ ಗಳಿಕೆ ಇದಕ್ಕಿಂತ ತುಂಬ ಜಾಸ್ತಿ ಇರುತ್ತದೆ. ಅಂದರೆ ಪ್ರಯೋಗಶೀಲ ಸಿನಿಮಾಗಳನ್ನು ನೋಡುವ ಜನರ ಸಂಖ್ಯೆಯೂ ಕಡಿಮೆಯೇ. ಪ್ರಯೋಗಶೀಲ ಸಿನಿಮಾಗಳಿಗೆ ಜನರ ಪ್ರತಿಕ್ರಿಯೆ ಆರಂಭದಲ್ಲಿ ಹೀಗೆಯೇ ಇರುತ್ತದೆ. ಆದರೆ ಸೋತರೂ ಮತ್ತೆ ಅದದೇ ಪ್ರಯತ್ನ ಮಾಡಿದಾಗ ಒಂದು ಪ್ರೇಕ್ಷಕವರ್ಗ ಬೆಳೆಯುತ್ತದೆ. ಅಂಥದ್ದೊಂದು ಪ್ರೇಕ್ಷಕವರ್ಗ ಬೆಳೆಸುವ ಪ್ರಯತ್ನ ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT