ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿನಯ ಸಂಪತ್ತು, ಈ ಸಂಪತ್

Last Updated 28 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ನಟನಾಗಿ ರಂಗಭೂಮಿಯಲ್ಲಿ ದೊರೆಯುವ ಖುಷಿ ಸಿನಿಮಾದಲ್ಲಿಲ್ಲ, ಸಿನಿಮಾದಲ್ಲಿ ಸಿಗುವ ಸಂಭಾವನೆ ರಂಗಭೂಮಿಯಲ್ಲಿಲ್ಲ...’  – ಇದು ನಟ ಸಂಪತ್‌ಕುಮಾರ್‌ ಅವರ ಮಾರ್ಮಿಕ ನುಡಿ.

ಒಂದೂವರೆ ದಶಕದಿಂದ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡವರು ಸಂಪತ್‌ಕುಮಾರ್.

ಬಿಡದಿ ಸಮೀಪದ ಸಣ್ಣಹಳ್ಳಿ ನಾರಾಯಣಪುರದಲ್ಲಿ ಹುಟ್ಟಿ ಬೆಳೆದ ಸಂಪತ್‌ಕುಮಾರ್‌ ಅವರಿಗೆ ಬಾಲ್ಯದಿಂದಲೂ ನಟನೆಯ ವ್ಯಾಮೋಹ ಇತ್ತು. ಬಡತನದಿಂದಾಗಿ ಅಭಿನಯದ ಆಸೆಯನ್ನು ಹತ್ತಿಕ್ಕಿಕೊಂಡೇ ಬೆಳೆದ ಸಂಪತ್‌ಗೆ ಅಭಿನಯದ ದೀಕ್ಷೆ ನೀಡಿದವರು ಅವರ ಇಂಗ್ಲಿಷ್ ಮೇಷ್ಟ್ರು ಸುದರ್ಶನ್ ಕುಮಾರ್.

‘ಅಭಿನಯ ತರಂಗ’ದಲ್ಲಿ ರಂಗಪಟ್ಟುಗಳನ್ನು ಕರಗತ ಮಾಡಿಕೊಂಡ ಸಂಪತ್, ‘ಮಂಟೇಸ್ವಾಮಿ ಕಥಾ ಪ್ರಸಂಗ’, ‘ರೋಮಿಯೋ ಜೂಲಿಯೆಟ್’, ‘ಗುಣಮುಖ’, ‘ಮೃಚ್ಛಕಟಿಕ’ದಂಥ ನಾಟಕಗಳ ಮೂಲಕ ರಂಗಭೂಮಿಯಲ್ಲಿ ಛಾಪು ಮೂಡಿಸಿದರು. ಇದೀಗ ಬೆಳ್ಳಿತೆರೆಯಲ್ಲಿಯೂ ನೆಲೆಯೂರುವ ಲಕ್ಷಣಗಳನ್ನು ತೋರುತ್ತಿದ್ದಾರೆ.

‘ಪಟಾಕಿ’, ‘ಶ್ರೀಕಂಠ’, ‘ಸಿನಿಮಾ ಮೈ ಡಾರ್ಲಿಂಗ್’, ‘ಕಿರಗೂರಿನ ಗಯ್ಯಾಳಿಗಳು’, ‘ಪುಷ್ಪಕವಿಮಾನ’ದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ‘ಮೂಕಹಕ್ಕಿ’ ಸಿನಿಮಾದಲ್ಲಿ ಮಾರ ಎನ್ನುವ ಅಲೆಮಾರಿ ಯುವಕನ ಪಾತ್ರದ ಮೂಲಕ ಮತ್ತೊಮ್ಮೆ ತಮ್ಮ ನಟನಾ ಪ್ರತಿಭೆ ಮೆರೆದಿರುವ ಸಂಪತ್‌ ಕೈಯಲ್ಲಿ ಇನ್ನೂ ಮೂರು ಚಿತ್ರಗಳಿವೆ.

‘ಕವಲುದಾರಿ’ (ನಿರ್ಮಾಪಕ: ಪುನೀತ್ ರಾಜ್‌ಕುಮಾರ್), ‘ಕೆಜಿಎಫ್‌’, ‘ವೂಲ್ಸ್ ಆಫ್  ಕಾನೂರು’ (ಕಾನೂರಿನ ತೋಳಗಳು) ಹೀಗೆ ಮೂರು ಭಿನ್ನ ಸಿನಿಮಾಗಳಲ್ಲಿ ವಿಶಿಷ್ಟ ಪಾತ್ರಗಳಲ್ಲಿ ಸಂಪತ್ ಕಾಣಿಸಿಕೊಳ್ಳಲಿದ್ದಾರೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮನ್ಸೂರೆ ನಿರ್ದೇಶನದ ಹೊಸ ಚಿತ್ರದಲ್ಲೂ ಅಭಿನಯಕ್ಕೆ ಅವಕಾಶ ಪಡೆದಿರುವ ಪ್ರತಿಭಾವಂತ ಸಂಪತ್. ಈ ಚಿತ್ರದಲ್ಲಿ ಶ್ರುತಿ ಹರಿಹರನ್ ಜತೆಯಾಗಿ ಮುಖ್ಯ ಪಾತ್ರವೊಂದರಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

‘ಮೂಕಹಕ್ಕಿ’ಯಲ್ಲಿ ಅಲೆಮಾರಿ ಜನಾಂಗವನ್ನು ಪ್ರತಿನಿಧಿಸುವ ಪಾತ್ರದಲ್ಲಿ ನಟಿಸಿರುವ ಸಂಪತ್, ಅದಕ್ಕಾಗಿ ತಿಂಗಳುಗಟ್ಟಲೇ ಅಲೆಮಾರಿಗಳ ಜತೆ ಕಾಲ ಕಳೆದು ಅಭ್ಯಾಸ ಮಾಡಿದ್ದರಂತೆ.

ನಾಗರಿಕ ಜಗತ್ತಿನಿಂದ ದೂರುವಿರುವ ಅಲೆಮಾರಿಗಳು, ನಾಗರಿಕರೊಂದಿಗೆ ಬೆರೆಯಲು ಯತ್ನಿಸಿದಾಗ ಉಂಟಾಗುವ ತಲ್ಲಣಗಳನ್ನು ಮಾರ ಪಾತ್ರದ ಮೂಲಕ ಸಂಪತ್ ಸಮರ್ಥವಾಗಿ ನಿಭಾಯಿಸಿದ್ದಾರೆ.

‘ನನ್ನೊಳಗಿನ ನಟ ಸದಾ ವೈವಿಧ್ಯ ಬಯಸುತ್ತಾನೆ. ಭಾರತದ ಈಗಿನ ರಾಜಕೀಯ, ಧಾರ್ಮಿಕ ಪರಿಸ್ಥಿತಿಗಳನ್ನು ಜನಸಾಮಾನ್ಯರಿಗೆ ಅರ್ಥ ಮಾಡಿಸಲು ಕಬೀರ, ಕನಕದಾಸನಂಥ ಪಾತ್ರಗಳನ್ನು ಮಾಡುವಾಸೆ. ನಮಗೆ ಕಾಣದಿರುವ ನೂರಾರು ಸೂಫಿ–ಸಂತರಿದ್ದಾರೆ. ಅಂಥ ಪಾತ್ರಗಳನ್ನು ತೆರೆಯ ಮೇಲೆ ತರುವುದು ಇಷ್ಟ. ಅಂತೆಯೇ ಐತಿಹಾಸಿಕ ಪಾತ್ರಗಳನ್ನೂ ಮಾಡಲು ಇಷ್ಟ’ ಎನ್ನುತ್ತಾರೆ ಸಂಪತ್.

ರಂಗಭೂಮಿಯ ಮೆಟ್ಟಿಲೇರುವ ಮುನ್ನ ಸೇಲ್ಸ್‌ಮ್ಯಾನ್‌, ಡ್ರೈವರ್, ಡೆಲಿವರಿ ಬಾಯ್... ಹೀಗೆ ಬದುಕಿನಲ್ಲೂ ಅನೇಕ ಪಾತ್ರಗಳನ್ನು ನಿಭಾಯಿಸಿರುವ ಸಂಪತ್‌ಗೆ ಜೀವನ ಕೊಟ್ಟ ಕಲಿಸಿಕೊಟ್ಟ ಪಾಠ ದೊಡ್ಡದು.

ನಟ ದೇವರಾಜ್ ಅವರಿಗೆ ಕೆಲಕಾಲ ಡ್ರೈವರ್‌ ಆಗಿಯೂ ಕೆಲಸ ಮಾಡಿರುವ ಸಂಪತ್, ‌ಜನಜಾಗೃತಿಗಾಗಿ ಬೀದಿನಾಟಕಗಳನ್ನೂ ಮಾಡಿದ್ದಾರೆ. ಸಿ. ಬಸವಲಿಂಗಯ್ಯ ಅವರ ಜತೆಗೂಡಿ ರಂಗಭೂಮಿಯ ಒಳ–ಹೊರಗುಗಳನ್ನು ಅರಿತಿರುವ ಅವರು, ಎಂಟು ನಾಟಕಗಳನ್ನೂ ನಿರ್ದೇಶಿಸಿದ್ದಾರೆ.

‘ಸಿನಿಮಾ ಮತ್ತು ರಂಗಭೂಮಿ ಎರಡರಲ್ಲೂ ನನಗೆ ಸಮಾನ ಆಸಕ್ತಿಗಳಿವೆ. ಆದರೆ, ಅಭಿನಯದ ದೃಷ್ಟಿಯಿಂದ ರಂಗಭೂಮಿ ನೀಡುವ ತೃಪ್ತಿ ಅನನ್ಯ. ರಂಗಭೂಮಿಯ ಕೆಲಸಗಳಿದ್ದಾಗ ಯಾವ ಸಿನಿಮಾಗಳನ್ನೂ ಒಪ್ಪಿಕೊಳ್ಳುವುದಿಲ್ಲ. ರಿಪೀಟ್ ಶೋಗಳಿದ್ದಾಗಲೂ ರಂಗಭೂಮಿಯಲ್ಲಿ ನಟಿಸುತ್ತೀನಿ. ರಂಗಭೂಮಿ ಮನಸು ತುಂಬಿದರೆ, ಸಿನಿಮಾ ಹೊಟ್ಟೆ ತುಂಬಿಸುತ್ತೆ. ಆದರೆ, ರಂಗಭೂಮಿಯೇ ನನ್ನ ಅಭಿವ್ಯಕ್ತಿ ಮಾಧ್ಯಮ’ ಎಂದು ದೃಢವಾಗಿ ನುಡಿಯುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT