ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮನ ನೆರವಿಗೆ ಧಾವಿಸಿದ ಅಣ್ಣ

ರಿಲಯನ್ಸ್ ಕಮ್ಯುನಿಕೇಷನ್ಸ್‌ ಸಂಪತ್ತು ಖರೀದಿಸಿದ ರಿಲಯನ್ಸ್‌ ಜಿಯೊ
Last Updated 28 ಡಿಸೆಂಬರ್ 2017, 20:34 IST
ಅಕ್ಷರ ಗಾತ್ರ

ನವದೆಹಲಿ: ಅನಿಲ್‌ ಅಂಬಾನಿ ಒಡೆತನದ ಸಾಲದ ಸುಳಿಗೆ ಸಿಲುಕಿರುವ ರಿಲಯನ್ಸ್‌ ಕಮ್ಯುನಿಕೇಷನ್ಸ್‌ (ಆರ್‌ಕಾಂ) ತರಂಗಾಂತರ, ಟವರ್‌, ಆಪ್ಟಿಕಲ್‌ ಫೈಬರ್‌ ಜಾಲ ಮತ್ತು  ಇತರ ವೈರ್‌ಲೆಸ್‌ ಸಂಪತ್ತು ಖರೀದಿಸಲು ಅಣ್ಣ ಮುಕೇಶ್‌ ಅಂಬಾನಿ ಮುಂದಾಗಿದ್ದಾರೆ.

ಮುಕೇಶ್‌ ಮಾಲೀಕತ್ವದ ರಿಲಯನ್ಸ್‌  ಜಿಯೊ ಇನ್ಫೊಕಾಂ ಲಿಮಿಟೆಡ್‌ಗೆ (ಆರ್‌ಜಿಯೊ) ತನ್ನ ಆಸ್ತಿ ಮಾರಾಟ ಮಾಡುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ರಿಲಯನ್ಸ್‌ ಕಮ್ಯುನಿಕೇಷನ್ಸ್‌ (ಆರ್‌ಕಾಂ) ಗುರುವಾರ ಪ್ರಕಟಿಸಿದೆ. ಈ ಒಪ್ಪಂದ 2018ರ ಮಾರ್ಚ್‌ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಈ ಒಪ್ಪಂದದ ವಿವರಗಳನ್ನು ಎರಡೂ ಕಡೆಯವರು ಬಹಿರಂಗಪಡಿಸದಿದ್ದರೂ, ಬ್ಯಾಂಕಿಂಗ್‌ ಮೂಲಗಳ ಪ್ರಕಾರ, ಈ ವಹಿವಾಟು ₹ 24 ಸಾವಿರ ಕೋಟಿಗಳಿಂದ ₹ 25 ಸಾವಿರ ಕೋಟಿಗಳವರೆಗೆ ಇದೆ ಎಂದು ಅಂದಾಜಿಸಲಾಗಿದೆ.

‘ಆರ್‌ಕಾಂ’ಗೆ ಸೇರಿದ ಸಂಪತ್ತು ಮಾರಾಟ ಮಾಡಿ ಬ್ಯಾಂಕ್‌ಗಳ ₹ 40 ಸಾವಿರ ಕೋಟಿಗಳಷ್ಟು ಸಾಲ ಮರು ಪಾವತಿ ಮಾಡಲಾಗುವುದು. ಆರ್ಥಿಕ ಪುನಶ್ಚೇತನಕ್ಕೂ ಪರಿಹಾರ ಸೂತ್ರ ಕಂಡುಕೊಳ್ಳಲಾಗಿದೆ’ ಎಂದು ಅನಿಲ್‌ ಅಂಬಾನಿ ಅವರು ಮೊನ್ನೆಯಷ್ಟೇ ಹೇಳಿದ್ದರು.

ರಿಲಯನ್ಸ್‌ನ ಸ್ಥಾಪಕ ಧೀರೂಭಾಯಿ ಅಂಬಾನಿ ಅವರ  85 ಜನ್ಮ ದಿನಾಚರಣೆ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿದೆ. ‘ಆರ್‌ಕಾಂ’ ಒಟ್ಟಾರೆ ₹ 45 ಸಾವಿರ ಕೋಟಿಗಳಷ್ಟು ಸಾಲದ ಹೊರೆ ಹೊತ್ತುಕೊಂಡಿದೆ.

‘ಆರ್‌ಕಾಂ’ಗೆ ಸೇರಿದ ಸಂಪತ್ತು ಸ್ವಾಧೀನದಿಂದ, ತನ್ನ ಮನೆ – ಮನೆಗಳಿಗೆ ಫೈಬರ್‌, ವೈರ್‌ಲೆಸ್‌ ಸೇವೆ ಮತ್ತು ಉದ್ದಿಮೆ ಸೇವೆ ವಿಸ್ತರಿಸಲು ನೆರವಾಗಲಿದೆ ಎಂದು ‘ಜಿಯೊ’ ತಿಳಿಸಿದೆ. ವರ್ಷದ ಹಿಂದೆ 4ಜಿ ಸೇವೆ ಆರಂಭಿಸಿದ ನಂತರ ಜಿಯೊ ಗ್ರಾಹಕರ ಸಂಖ್ಯೆ ಅಲ್ಪಾವಧಿಯಲ್ಲಿ 16 ಕೋಟಿಗಳಿಗೆ ಏರಿಕೆಯಾಗಿದೆ.

ಕಾರ್ಯಾಚರಣೆ ವೆಚ್ಚ ಭರಿಸಲು ಸಾಧ್ಯವಾಗದ ಕಾರಣಕ್ಕೆ ‘ಆರ್‌ಕಾಂ’ ಒಂದು ತಿಂಗಳ ಹಿಂದೆ ತನ್ನ ಮೊಬೈಲ್ ಕರೆ ಸೇವೆ ಸ್ಥಗಿತಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT