ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೆಕ್ಯುಲರ್’ ಮತ್ತು ಸಹಜ ಸಮುದಾಯ

Last Updated 28 ಡಿಸೆಂಬರ್ 2017, 19:40 IST
ಅಕ್ಷರ ಗಾತ್ರ

ಇತ್ತೀಚೆಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಸೆಕ್ಯುಲರ್‌ ವಾದದ ಬಗ್ಗೆ, ಸೆಕ್ಯುಲರ್‌ ವಾದಿಗಳ ಬಗ್ಗೆ ತುಚ್ಛವಾಗಿ ಮಾತನಾಡಿರುವುದು ಸುದ್ದಿಯಾಯಿತು. ಬಾಲಸುಬ್ರಹ್ಮಣ್ಯ ಕಂಜರ್ಪಣೆಯವರು ಸಚಿವರ ಬೇಜವಾಬ್ದಾರಿ ಹೇಳಿಕೆಯನ್ನು ಸಕಾರಣವಾಗಿಯೇ ವಿಮರ್ಶಿಸಿದರು (ಪ್ರ.ವಾ., ಚರ್ಚೆ, ಡಿ.28). ಆದರೆ, ಈ ವಿಮರ್ಶೆ ‘ಸಚಿವರ ಮಾತಿನ ಕ್ರಮ ಮತ್ತು ಬಳಸಿರುವ ಅವಾಚ್ಯ ಮಾತುಗಳು ಖಂಡನಾರ್ಹವಾಗಿವೆ’ ಎಂದು ಟೀಕಿಸುವುದನ್ನು ಬಿಟ್ಟರೆ, ಅವರ ಮಾತಿನ ವಸ್ತುಶಃ ಅರ್ಥವನ್ನು ಗಮನಿಸುವ ಮತ್ತು ವಿಮರ್ಶಿಸುವ ಕೆಲಸವನ್ನು ಮಾಡಿಲ್ಲ.

ಸಚಿವರಾದವರು ಅಂತಹ ಹೇಳಿಕೆಗಳನ್ನು ಕೊಡುವುದು ಬೇಜವಾಬ್ದಾರಿತನವೇ ಇರಬಹುದು. ಸಚಿವರ ಪಕ್ಷದವರು‌ ಕೋಮುವಾದಿಗಳೇ ಆಗಿರಬಹುದು. ಇದರ ಬಗ್ಗೆ ವಾದ ಮಾಡುವುದು ನನ್ನ ಉದ್ದೇಶವಲ್ಲ. ಇದರಾಚೆಗೆ ‘ಸೆಕ್ಯುಲರ್ ಸಮುದಾಯ’ ಎನ್ನುವಂಥಾ ಒಂದು ಸಮುದಾಯಕ್ಕೂ ಮತ್ತು ಸಹಜ ಸಮುದಾಯಗಳಾದ ಜಾತಿಗಳು ಮತ್ತು ಪಂಗಡಗಳಿಗೂ ಒಂದು ವ್ಯತ್ಯಾಸವಿದೆ ಎನ್ನುವ ಅಂಶವನ್ನು ಗುರುತಿಸುವುದು ಮುಖ್ಯ. ಅಶ್ಲೀಲವಾಗಿಯೋ ಅಥವಾ ಅಪ್ರಜ್ಞಾಪೂರ್ವಕವಾಗಿಯೋ ಅಂತೂ ಸಚಿವರ ಮಾತು ಈ ವ್ಯತ್ಯಾಸವನ್ನು ಗುರುತಿಸಿದೆ. ಆದರೆ ಕಂಜರ್ಪಣೆಯವರೂ ಸೇರಿದಂತೆ, ಯಾವ ಟೀಕಾಕಾರರೂ ಈ ವ್ಯತ್ಯಾಸವನ್ನು ಗಮನಿಸಿದಂತೆ ಕಂಡಿಲ್ಲ.

ಕಂಜರ್ಪಣೆ ಅವರು ತಮ್ಮ ಪತ್ರದಲ್ಲಿ ‘ಸೆಕ್ಯುಲರ್’ ಎಂಬ ಪರಿಕಲ್ಪನೆ ಪಶ್ಚಿಮದಲ್ಲಿ ಚಾರಿತ್ರಿಕವಾಗಿ ಬೆಳೆದುಬಂದ ವಿವರಣೆಯನ್ನು ನೀಡಿದ್ದಾರೆ. ಆದರೆ ಸೆಕ್ಯುಲರ್ ಎನ್ನುವ ಒಂದು ಪಾತಳಿ ಊರು-ಕೇರಿ, ನಾಡು-ಕಾಡು ಎನ್ನುವಷ್ಟೇ ಸ್ವಾಭಾವಿಕವಾಗಿ ಎಲ್ಲಿಯೋ ಇದೆ ಎಂದು ಅವರು ಒಪ್ಪಿಕೊಂಡುಬಿಟ್ಟಂತಿದೆ. ಆದರೆ, ಸೆಕ್ಯುಲರ್ (ಅಥವಾ ಸೆಕ್ಯುಲಮ್- ಅಂದರೆ, ಚರ್ಚಿನ ಶಾಸನದ ವ್ಯಾಪ್ತಿಗೆ ಮೀರಿದ್ದು) ಎನ್ನುವ ಒಂದು ಪಾತಳಿ ಮತ್ತು ಎಕ್ಲೇಸಿಯಮ್ (ಅಂದರೆ- ಚರ್ಚಿನ ಶಾಸನದ ವ್ಯಾಪ್ತಿಯಲ್ಲಿರುವುದು) ಎನ್ನುವ ಇನ್ನೊಂದು ಪಾತಳಿ ಎನ್ನುವ ರೀತಿಯ ಭೇದ ಕ್ರಿಶ್ಚಿಯನ್ ಥಿಯಾಲಜಿಯ ಒಳಗಿನ ಭೇದವೇ ಹೊರತು ವಾಸ್ತವಿಕ ಬದುಕಿನಲ್ಲಿ ಅಂತಹ ಯಾವ ಭೇದವೂ ಇಲ್ಲ. ಪ್ರಪಂಚವನ್ನು ವಾಸ್ತವಿಕವಾಗಿ ಸೆಕ್ಯುಲಮ್ ಮತ್ತು ಎಕ್ಲೇಸಿಯಮ್ ಎಂದು ವಿಂಗಡಿಸಲು ಬರುವುದಿಲ್ಲ. ಹಾಬ್ಸ್ ಆಗಲೀ, ಗ್ರಾಶಿಯಸ್ ಆಗಲಿ, ಇವರೆಲ್ಲರಿಗೆ ಈ ವಿಂಗಡಣೆ ತಮ್ಮ ಸಂಸ್ಕೃತಿಯ ಹಿನ್ನೆಲೆಯಲ್ಲಿ ಸ್ವಾಭಾವಿಕ ಎಂದೇ ತೋರುತ್ತದೆ. ಹಾಗೆಂದ ಮಾತ್ರಕ್ಕೆ ಅದು ವಾಸ್ತವಿಕ ಎಂದು ಒಪ್ಪಿಕೊಳ್ಳುವುದು ತರ್ಕರಹಿತ.

ಎರಡನೆಯದಾಗಿ, ಜಾತಿಗಳು ಮತ್ತು ಪಂಗಡಗಳು ನಿಜವಾದ ಸಮುದಾಯಗಳು. ಅಂದರೆ, ಒಂದು ಜೀವನಕ್ರಮವನ್ನು (ಸಂಸ್ಕಾರ
ಗಳು, ಪೂರ್ವಗ್ರಹಗಳು ಎಲ್ಲವನ್ನೂ ಒಳಗೊಂಡಂತೆ) ರೂಪಿಸುವ ಘಟಕಗಳು. ಸೆಕ್ಯುಲರ್ ಎನ್ನುವುದು ಆ ರೀತಿಯ ಸಂಸ್ಕಾರವಲ್ಲ. ಅದು ತಂತಮ್ಮ ಸಂಸ್ಕಾರಗಳಲ್ಲಿ ಬೆಳೆದುಬಂದ ಜನ, ಬೇರೆ ಸಂಸ್ಕಾರಗಳಲ್ಲಿ ಬೆಳೆದುಬಂದ ಜನರೊಡನೆ ತಿಕ್ಕಾಟ– ಮತಭೇದ ಆದಾಗ ಅದನ್ನು ಶಮನ ಮಾಡಲು ಬಳಸುವ ಕ್ರಮಗಳು ಯಾವ ರೀತಿ ಇರಬೇಕು ಎಂದು ಸೂಚಿಸುವ ಒಂದು ಮಾಪನ. ಈ ಮಾಪನವನ್ನೇ ಒಪ್ಪಿಕೊಂಡು ಬೇರೆಬೇರೆ ಸಮುದಾಯಗಳವರು ತಮ್ಮ ನಡುವಿನ ಮತಭೇದಗಳನ್ನು ಶಮನ ಮಾಡಿಕೊಳ್ಳಬೇಕು ಎನ್ನುವ ಯಾವ ನಿಯಮವೂ ಇಲ್ಲ. ಎಷ್ಟೋ ವೇಳೆ, ಸೆಕ್ಯುಲರ್ ಅಲ್ಲದ ಕ್ರಮಗಳಿಂದಲೇ ಪಂಗಡಗಳ ನಡುವಿನ ಮತಭೇದ ಶಮನವಾದದ್ದೇ ಹೆಚ್ಚು.

ಸೆಕ್ಯುಲರ್ ಸಮುದಾಯ ಎನ್ನುವ ಸಮುದಾಯವಿಲ್ಲ. ಸೆಕ್ಯುಲರ್ ಎನ್ನಬಹುದಾದ ಯಾವ ಸಂಸ್ಕಾರಗಳೂ ಇಲ್ಲ, ಇರಬೇಕಾಗಿಯೂ ಇಲ್ಲ. ಸಮುದಾಯದ ಅನುಭವ ಸರಿಯಾಗಿ ಅರ್ಥವಾಗದೇ ಇದ್ದವರು, ಮಿಕ್ಕ ಸಮುದಾಯಗಳಂತೆ ಸೆಕ್ಯುಲರ್ ಸಮುದಾಯವೂ ಇರುತ್ತದೆ ಎಂದು ಅಂದುಕೊಳ್ಳುವುದು ದೋಷಪೂರ್ಣ. ಸಚಿವರ ಮಾತಿನ ಉದ್ದೇಶ ಏನೋ ನನಗೆ ಗೊತ್ತಿಲ್ಲ. ಆದರೆ ಅವರ ವಿಮರ್ಶಕರಂತೂ ತಮ್ಮ ಕೆಲಸ ಸರಿಯಾಗಿ ಮಾಡುವಂತೆ ತೋರುತ್ತಿಲ್ಲ.

–ಎ. ಪಿ. ಅಶ್ವಿನ್ ಕುಮಾರ್, ಅಹಮದಾಬಾದ್‌

ಜಾತ್ಯತೀತರಿಂದಲೇ ಕುಂದು

‘ಜಾತ್ಯತೀತರು ಮತ್ತು ಅಪ್ಪ–ಅಮ್ಮ’ ಎಂಬ ಲೇಖನದಲ್ಲಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರು ಎಲ್.ಕೆ. ಅಡ್ವಾಣಿಯವರು ‘ಡೋಂಗಿ ಜಾತ್ಯತೀತತೆ’ ಎಂಬ ಪದವನ್ನು ಸೃಷ್ಟಿಸುವ ಮೂಲಕ ‘ಜಾತ್ಯತೀತ’ ಪದದ ಮೌಲ್ಯ ಕುಸಿಯುವಂತೆ ಮಾಡಿದರು ಎಂಬ ಅರ್ಥದ ಹೇಳಿಕೆ ನೀಡಿದ್ದಾರೆ. ಆದರೆ ಜಾತ್ಯತೀತ ಪದದ ಅರ್ಥಕ್ಕೆ ನಿಜವಾಗಿಯೂ ಧಕ್ಕೆ ಬಂದದ್ದು ಜಾತ್ಯತೀತರೆಂದು ಹೇಳಿಕೊಂಡ ರಾಜಕಾರಣಿಗಳಿಂದ.

ಕಾಂಗ್ರೆಸ್ ಪಕ್ಷ ತನ್ನ ರಾಜಕಾರಣದ ಅವಧಿಯ ಉದ್ದಕ್ಕೂ ಅಲ್ಪಸಂಖ್ಯಾತರ ತುಷ್ಟೀಕರಣವನ್ನೇ ಜಾತ್ಯತೀತ ಎಂದು ಬಿಂಬಿಸಿಕೊಂಡು ಬಂದಿದೆ. ಆ ಮೂಲಕ ಜಾತ್ಯತೀತ ಪದದ ಅರ್ಥವ್ಯಾಪ್ತಿಯನ್ನು ಕುಗ್ಗಿಸಿದೆ (ಹಾಗೆ ನೋಡಿದರೆ ಅದು ಅಲ್ಪಸಂಖ್ಯಾತರು ಎಂಬ ಪದವನ್ನೂ ಕೂಡ ಸೀಮಿತ ಅರ್ಥದಲ್ಲಿಯೆ ಬಳಸುತ್ತದೆ). ಆರ್‌ಜೆಡಿ, ಜೆಡಿಎಸ್ ನಂತಹ ಪ್ರಾದೇಶಿಕ ಪಕ್ಷಗಳ ನಾಯಕರು ಕೂಡ ‘ನಾವು ಜಾತ್ಯತೀತರು, ನಮಗೇ ವೋಟು ಹಾಕಿ’ ಎಂದು ಹೇಳಿ ಅಧಿಕಾರಕ್ಕೆ ಬಂದು ತಮ್ಮ ಕುಟುಂಬಗಳನ್ನಷ್ಟೇ ಉದ್ಧರಿಸಿಕೊಂಡರು. ಇಂತಹ ರಾಜಕಾರಣದಿಂದಲೂ ಜಾತ್ಯತೀತ ಪದ ಘನತೆಯನ್ನು ಕಳೆದುಕೊಂಡಿತು. ಹೆಗಡೆಯವರ ಹೇಳಿಕೆ ಖಂಡನಾರ್ಹ. ಅದರಲ್ಲಿ ಎರಡು ಮಾತಿಲ್ಲ. ಆದರೆ ಜಾತ್ಯತೀತ ಪದದ ಅರ್ಥ ಹಗುರಗೊಳ್ಳುವಲ್ಲಿ ತಮ್ಮನ್ನು ಜಾತ್ಯತೀತರೆಂದು ಕರೆದುಕೊಂಡ ನಾಯಕರ ಪಾಲೂ ಇದೆ.

–ಡಾ. ಅನಿಲ್ ಎಮ್. ಚಟ್ನಳ್ಳಿ, ಕಲಬುರ್ಗಿ

ಜಾತಿ ಎಂದರೆ...

ಸಚಿವ ಅನಂತಕುಮಾರ ಹೆಗಡೆ ಅವರಿಗೆ ‘ಜಾತಿ’ ಎಂಬುದರ ಮೂಲ ಅರ್ಥ ತಿಳಿದಿಲ್ಲ. ಸಂಸ್ಕೃತದಲ್ಲಿ ಜಾತಿ ಎಂದರೆ ‘ವೈವಿಧ್ಯ’ ಎಂದಿರುವ ಸ್ವಾಮಿ ವಿವೇಕಾನಂದರು, ‘ಜಗತ್ತಿನಲ್ಲಿ ಎಷ್ಟು ಜೀವಿಗಳಿವೆಯೋ ಅಷ್ಟು ಜಾತಿಗಳಿವೆ, ಎಂದಿದ್ದಾರೆ. ಜಾತಿ ಎಂಬುದು ಪ್ರತಿ ಜೀವಿಗೆ ನಿಸರ್ಗವು ಸಹಜವಾಗಿ ಕೊಟ್ಟಿರುವ ವಿಶಿಷ್ಟ ಕೊಡುಗೆ. ಅವಳಿ–ಜವಳಿಗಳು ಹುಟ್ಟಿದರೂ, ರೂಪದಲ್ಲಿ ಸಾಮ್ಯತೆ ಕಂಡುಬಂದರೂ ಅದು ಸ್ವಭಾವದಲ್ಲಿ ಕಂಡುಬರುವುದಿಲ್ಲ. ‘ಸ್ವಭಾವ’ ಎನ್ನುವುದು ನಿಸರ್ಗದ ಕೊಡುಗೆ. ಅದನ್ನು ಕಂಡುಕೊಂಡ ವಿವೇಕಾನಂದರು ಸ್ವಭಾವ’ವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಖಚಿತಪಡಿಸಿದ್ದಾರೆ.

ಗೌತಮ ಬುದ್ಧ, ‘ಯಾವ ಎರಡು ಕೂಡಿದರೆ ಮಕ್ಕಳು ಮರಿಗಳು ಆಗುತ್ತವೆಯೋ ಅವು ‘ಸಜಾತಿ’, ಯಾವ ಎರಡು ಕೂಡಿದರೆ ಮಕ್ಕಳು ಮರಿ ಆಗುವುದಿಲ್ಲವೋ ಅವು ‘ವಿಜಾತಿ’ ಎಂದಿದ್ದಾರೆ.

ಈಗ ನೋಡೋಣ, ಮನುಷ್ಯ ಕೃತಕವಾಗಿ ಸೃಷ್ಟಿಸಿಕೊಂಡಿರುವ ಯಾವುದೇ ಜಾತಿ ಮತಗಳಲ್ಲಿರುವ ಹೆಣ್ಣು ಗಂಡುಗಳು ಕೂಡಿದರೆ ಮಕ್ಕಳಾಗುವುದಿಲ್ಲವೆ? ಇದನ್ನೆ ಜಾತ್ಯತೀತತೆ ಎನ್ನುವುದು. ಸರ್ವರನ್ನೂ ಸಮಾನವಾಗಿ ಕಾಣಬೇಕೆನ್ನುವುದು.

ಬದಲಾವಣೆ ಆಗಬೇಕಾದದ್ದು ಭಾರತದ ಸಂವಿಧಾನಕ್ಕಲ್ಲ, ಮಾನವ ವಿರೋಧಿಗಳಾಗಿರುವ ಹೆಗಡೆಯಂಥವರು ಹಾಗೂ ಪರಿವಾರದ ಮನಸ್ಥಿತಿಗೆ.

–ಜ.ಹೊ. ನಾರಾಯಣಸ್ವಾಮಿ, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT