7

1.26 ನಿಮಿಷದಲ್ಲಿ 300 ಗ್ರಾಂ ಕೇಕ್ ಸ್ವಾಹಾ

Published:
Updated:

ಮೈಸೂರು: ಮಾಗಿ ಆಹಾರ ಮತ್ತು ಕೇಕ್‌ ಉತ್ಸವದ ಅಂಗವಾಗಿ ಮಹಿಳೆಯರಿಗೆ ಆಯೋಜಿಸಿದ್ದ ಕೇಕ್‌ ತಿನ್ನುವ ಸ್ಪರ್ಧೆ ನೆರೆದವರಿಗೆ ಸಾಕಷ್ಟು ಮನರಂಜನೆ ನೀಡಿತು. ಸ್ಪರ್ಧಿಗಳು ನಾಮುಂದು ತಾಮುಂದು ಎಂದು ಕೇಕ್‌ ತಿನ್ನುತ್ತಿದ್ದರೆ, ನೆರೆದವರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

ಗುರುವಾರ ನಡೆದ ಸ್ಪರ್ಧೆಗೆ ಒಟ್ಟು 15 ಮಂದಿ ಹೆಸರು ನೋಂದಾಯಿಸಿದ್ದರು. 10 ಸ್ಪರ್ಧಿಗಳಿಗೆ ಮಾತ್ರ ಅವಕಾಶವಿರುವ ಕಾರಣ ಲಾಟರಿ ಎತ್ತುವ ಮೂಲಕ ಸ್ಪರ್ಧಿಗಳನ್ನು ನಿರ್ಧರಿಸಲಾಯಿತು.

ಸ್ಪರ್ಧಿಗಳಿಗೆ ತಲಾ 300 ಗ್ರಾಂನಷ್ಟು ‘ವೈಟ್‌ ಫಾರೆಸ್ಟ್‌’ ಕೇಕ್‌ ನೀಡಲಾಯಿತು. ನೀರಿನ ಬಾಟಲಿ ಕೂಡಾ ಪಕ್ಕದಲ್ಲಿ ಇಡಲಾಗಿತ್ತು. ಸಂಘಟಕರು ಸ್ಪರ್ಧೆ ಆರಂಭಿಸುತ್ತಿರುವಂತೆಯೇ ಎಲ್ಲರೂ ಗಬಗಬನೆ ತಿನ್ನತೊಡಗಿದರು.

ಬೋಗಾದಿಯ ಶಕುಂತಲಾ ಅವರು ಒಂದು ನಿಮಿಷ 26 ಸೆಕುಂಡುಗಳಲ್ಲಿ ಕೇಕ್‌ ತಿಂದು ಮೊದಲ ಸ್ಥಾನ ಪಡೆದರು. ಒಂದು ನಿಮಿಷ 34 ಸೆಕುಂಡುಗಳಲ್ಲಿ ಕೇಕ್ ತಿಂದ ವಿಜಯನಗರದ ರೂಪಾ ರಮೇಶ್‌ ಎರಡನೇ ಸ್ಥಾನ ಪಡೆದರೆ, ಸರಸ್ವತಿಪುರಂನ ಭಾಗೀರತಿ (1 ನಿಮಿಷ 36 ಸೆ.) ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ಲಾಟರಿ ಮೂಲಕ 10 ಸ್ಪರ್ಧಿಗಳನ್ನು ಆಯ್ಕೆ ಮಾಡಿದಾಗ ಶಕುಂತಲಾ ಹೆಸರು ಇರಲಿಲ್ಲ. ಆದರೆ ಒಬ್ಬರು ಸ್ಪರ್ಧಿ ಸ್ಥಳದಲ್ಲಿ ಹಾಜರಿರಲಿಲ್ಲ. ಇದರಿಂದ ಮತ್ತೆ ಲಾಟರಿ ಎತ್ತಿದಾಗ ಶಕುಂತಲಾ ಅವರಿಗೆ ಸ್ಪರ್ಧಿಸುವ ಅವಕಾಶ ಲಭಿಸಿತು. ಮೊದಲ ಸ್ಥಾನ ಪಡೆಯುವಲ್ಲೂ ಯಶಸ್ವಿಯಾದರು.

‘ಕಳೆದ ವರ್ಷವೂ ನಾನು ಮೊದಲ ಸ್ಥಾನ ಪಡೆದಿದ್ದೆ. ಮತ್ತೆ ಅಗ್ರಸ್ಥಾನ ದೊರೆತದ್ದು ಸಂತಸ ಉಂಟುಮಾಡಿದೆ’ ಎಂದು ಶಕುಂತಲಾ ಪ್ರತಿಕ್ರಿಯಿಸಿದರು. ಮೊದಲ ಮೂರು ಸ್ಥಾನಗಳು ನಿರ್ಣಯವಾಗುತ್ತಿದ್ದಂತೆಯೇ ಸಂಘಟ ಕರು, ‘ಇನ್ನುಳಿದವರು ಸಾವಧಾನದಿಂದ ತಿನ್ನಿ’ ಎಂದು ಹೇಳಿದರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ತಮಗೆ ನೀಡಿದ್ದ ಅಷ್ಟೂ ಕೇಕ್‌ ತಿಂದು ಮುಗಿಸಿದರು.

ಬುಧವಾರ ವಿದ್ಯಾರ್ಥಿ ಮತ್ತು ಪುರುಷರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದವು. ಶುಕ್ರವಾರ ಶಾಲಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸ್ಪರ್ಧೆ ನಡೆಯಲಿದೆ. ಮಾಗಿ ಉತ್ಸವದ ಅಂಗವಾಗಿ ಏರ್ಪಡಿಸಿರುವ ಮಾಗಿ ಆಹಾರ ಮತ್ತು ಕೇಕ್‌ ಉತ್ಸವಕ್ಕೆ ಎರಡನೇ ದಿನವೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry