7

ಜ.1ರ ವರೆಗೆ ‘ಟ್ರಿಣ್‌, ಟ್ರಿಣ್‌ ಸೈಕಲ್‌’ ಸೇವೆ!

Published:
Updated:

ಶ್ರೀರಂಗಪಟ್ಟಣ: ಮೈಸೂರಿನಲ್ಲಿ ನಡೆಯುತ್ತಿರುವ ಮಾಗಿ ಉತ್ಸವ ಅಂಗವಾಗಿ ಪಟ್ಟಣದಲ್ಲಿಯೂ ಟ್ರಿಣ್‌ ಟ್ರಿಣ್‌ ಸೈಕಲ್‌ ಸೇವೆ ಆರಂಭವಾಗಿದ್ದು, ಜ.1ರವರೆಗೂ ಲಭ್ಯವಿರಲಿದೆ. ಬೆಂಗಳೂರಿನ ‘ನಮ್ಮ ನಿಮ್ಮ ಸೈಕಲ್‌ ಫೌಂಡೇಷನ್‌’ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ‘ಐಲ್ಯಾಂಡ್‌ ಬೈಸಿಕಲ್‌ ಟೂರ್‌’ ಹೆಸರಿನಲ್ಲಿ ಈ ಸೇವೆ ಆರಂಭಿಸಲಾಗಿದೆ.

ಒಂದು ಸೈಕಲ್‌ಗೆ ಪ್ರತಿ ಗಂಟೆಗೆ ₹ 10 ಬಾಡಿಗೆ ನಿಗದಿಪಡಿಸಲಾಗಿದೆ. ಬೆಳಿಗ್ಗೆ 7ರಿಂದ ಸಂಜೆ 5ರ ವರೆಗೆ ಬಳಕೆಗೆ ಲಭ್ಯವಿದೆ. ಪ್ರಾಯೋಗಿಕವಾಗಿ ಈ ಸೇವೆಯನ್ನು ಆರಂಭಿಸಲಾಗಿದೆ.

ಸದ್ಯ 21 ಸೈಕಲ್‌ಗಳನ್ನು ಬಾಡಿಗೆಗೆ ಇಟ್ಟಿದ್ದು, ಬಾಡಿಗೆಗೆ ಪಡೆಯಲು ಬಯಸುವವರು ಗುರುತಿಗೆ ತಮ್ಮ ಆಧಾರ್‌ ಚೀಟಿ, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ದಾಖಲೆ ಕೊಡಬೇಕು. ‘ವಿದೇಶಿ ಪ್ರವಾಸಿಗರಿಗೂ ಸೈಕಲ್‌ ಸೇವೆ ಉಂಟು’ ಎಂದು ‘ನಮ್ಮ ನಿಮ್ಮ ಸೈಕಲ್‌ ಪೌಂಡೇಶನ್‌’ನ ಸಿಇಒ ಮುರಳಿ ತಿಳಿಸಿದ್ದಾರೆ.

‘ಈ ಸೈಕಲ್‌ ಸೇವೆಯನ್ನು ಇಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲ ಎಂದು ಪ್ರವಾಸೋದ್ಯಮ ಸಚಿವರ ಗಮನಕ್ಕೂ ತರಲಾಗಿದೆ. ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ’ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಹರೀಶ್‌ ಮಾಹಿತಿ ನೀಡಿದ್ದಾರೆ.

ಸೆಕೆಂಡ್‌ ಹ್ಯಾಂಡ್‌ ಸೈಕಲ್‌ ಬಳಕೆ: ಪಟ್ಟಣದಲ್ಲಿ ಸೇವೆ ಆರಂಭಿಸಿರುವ ‘ನಮ್ಮ ನಿಮ್ಮ ಸೈಕಲ್‌ ಫೌಂಡೇಷನ್‌’ ಹಳೆಯ ಸೈಕಲ್‌ಗಳನ್ನು ಸೇವೆಗೆ ಇರಿಸಿದೆ. 21 ಸೈಕಲ್‌ಗಳ ಪೈಕಿ 9 ಸೈಕಲ್‌ಗಳ ಸೀಟುಗಳು ಕಿತ್ತುಹೋಗಿವೆ ಮಡ್‌ಗಾರ್ಡ್‌ಗಳು ತಿರುಚಿವೆ. ಪೆಡಲ್‌ ತುಳಿದಾಗ ಕಟ್ರ್‌...ಕಟ್ರ್‌ ಶಬ್ದ ಬರುತ್ತಿದೆ.

‘ಪ್ರಾಯೋಗಿಕವಾಗಿ ಇವುಗಳನ್ನು ಬಳಕೆಗೆ ತರಲಾಗಿದೆ. ಜ.1ರ ನಂತರವೂ ಈ ಸೇವೆ ಇಲ್ಲಿ ಮುಂದುವರೆದರೆ ಹೊಸ ಸೈಕಲ್‌ ತರಿಸಲಾಗುವುದು’ ಎಂದು ಸಂಸ್ಥೆಯ ಮುರಳಿ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry