ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ದೇಶ ಒಡೆಯದಿರಲಿ: ಸ್ವಾಮೀಜಿ

Last Updated 29 ಡಿಸೆಂಬರ್ 2017, 5:55 IST
ಅಕ್ಷರ ಗಾತ್ರ

ದೇವದುರ್ಗ: ‘ದೇಶದಲ್ಲಿ ಹಲವು ಧರ್ಮಗಳು ಇದ್ದು, ಇವು ದೇಶವನ್ನು ಒಡೆಯುವಂಥ ಕೆಲಸ ಮಾಡಬಾರದು ದೇಶವನ್ನು ಸದೃಢವಾಗಿ ಕಟ್ಟುವಂಥ ಕೆಲಸ ಆಗಬೇಕು. ಸಾಹಿತಿಗಳಿಂದ ಇತಿಹಾಸವನ್ನು ತಿರುಚುವಂಥ ಕೆಲಸ ಆಗಬಾರದು’ ಡಾ. ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್‌ ಮೈದಾನದಲ್ಲಿ ಗುರುವಾರ ಟಿಪ್ಪು ಸುಲ್ತಾನ್‌ ಸಂಘ ತಾಲ್ಲೂಕು ಘಟಕದ ವತಿಯಿಂದ ಟಿಪ್ಪು ಜಯಂತಿ ಅಂಗವಾಗಿ ಏರ್ಪಡಿಸಿದ್ದ ಸರ್ವಧರ್ಮ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದಂಥ ವೀರ ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಿದರೆ ದೇಶ ದ್ರೋಹದ ಬಿರುದು ಕಟ್ಟುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅವರು, ಮಹಾತ್ಮ ಗಾಂಧಿಜಿ ಅವರು ರಚಿಸಿದ ‘ಯಂಗ್‌ ಇಂಡಿಯಾ’ದಲ್ಲಿ ಟಿಪ್ಪು ಅವರು ದೇಶದ ವಜ್ರದಂತೆ ಎಂದು ಹೇಳಿಕೊಂಡಿದ್ದಾರೆ. ಹಾಗಾದರೆ ಗಾಂಧಿಜೀ ಅವರನ್ನು ಏನ್ನೆದು ಕರೆಯಬೇಕು’ ಎಂದು ಹೇಳಿದರು.

‘ಇತಿಹಾಸ ಹೇಳುವಂತೆ ಟಿಪ್ಪು ಸುಲ್ತಾನ್‌ ಅವರು ತನ್ನ ಆಡಳಿತದ ಅವಧಿಯಲ್ಲಿ ಹಿಂದೂ ಧರ್ಮದ ರೈತರಿಗೆ ಸುಮಾರು 1764 ಎಕರೆ ಜಮೀನನ್ನು ವಿತರಣೆ ಮಾಡಿದರೆ ಮುಸ್ಲಿಂ ಜನಾಂಗದ ರೈತರಿಗೆ ಕೇವಲ 343 ಎಕರೆ ಮಾತ್ರ ಜಮೀನು ವಿತರಣೆ ಮಾಡಿರುವ ಬಗ್ಗೆ ದಾಖಲೆಗಳು ಹೇಳುತ್ತವೆ. 140ಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳಿಗೆ ದಾನ ನೀಡಿದ್ದಾನೆ. ಟಿಪ್ಪುವಿನ ಬಗ್ಗೆ ಮಾತನಾಡಲು ನನ್ನನ್ನು ಎಲ್ಲಿಗೆ ಆಹ್ವಾನಿಸಿದರೂ ದಾಖಲೆಗಳೊಂದಿಗೆ ಬರುತ್ತೇನೆ’ ಎಂದು ಸವಾಲು ಹಾಕಿದರು.

‘ಶೃಂಗೇರಿ ಮಠವನ್ನು ನಾಶ ಮಾಡಿದವರು ಟಿಪ್ಪು ಸುಲ್ತಾನ್‌ ಅಲ್ಲ. ಅದಕ್ಕೆ ಕಾರಣರಾದವರು ಮರಾಠರು ಎಂಬುವುದನ್ನು ಈ ದೇಶದ ಮತ್ತು ಈ ನಾಡಿನ ಜನರು ಅರಿತುಕೊಳ್ಳಬೇಕು. ಟಿಪ್ಪುವಿನ ಸಾವಿಗೆ ನೇರವಾಗಿ ಕಾರಣರಾದವರು ದಿವಾನ್‌ ಪೂರ್ಣಯ್ಯ ಎಂಬುವುದು ಚರಿತ್ರೆ ಹೇಳುತ್ತದೆ. ಒಬ್ಬ ದೇಶ ಭಕ್ತನ ಪಾದರಕ್ಷೆಗಳಿಗೆ್ನು ಲಂಡನ್‌ನಲ್ಲಿ ಪ್ರತಿನಿತ್ಯ ಸಾವಿರಾರು ಜನರು ನಮಸ್ಕರಿಸುತ್ತಾರೆ ಎಂದರೆ ಭಾರತ ದೇಶದ ಜನರು ಆತನನ್ನು ದೇಶ ದ್ರೋಹಿ ಎಂದು ಕರೆಯುವುದು ಸರಿಯಲ್ಲ’ ಎಂದರು.

ಸಚಿವ ತನ್ವೀರ್‌ ಸೇಠ್‌ ಮಾತನಾಡಿ, ‘ಟಿಪ್ಪು ಅವರು ಜೀವನ ಚರಿತ್ರೆ ತೆರದ ಪುಸ್ತಕದಂತೆ ಎಂದ ಅವರು, ಶಿಕ್ಷಣ, ಕೃಷಿ ಮತ್ತು ಇತರ ಕ್ಷೇತ್ರಗಳಿಗೆ ಟಿಪ್ಪುವಿನ ಕೊಡುಗೆ ಇದೆ . ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ನಮ್ಮ ದೇಶದಲ್ಲಿ ಎಲ್ಲ ಧರ್ಮದ ಜನರು ಸೌಹಾರ್ದತೆಯ ಮೂಲಕ ಸುಖ, ಶಾಂತಿಯಿಂದ ಬದಕಲು ಕಲಿಯ
ಬೇಕಾಗಿದೆ. ದೇಶದ ಸಂವಿಧಾನವನ್ನು ಒಪ್ಪಿಕೊಂಡು ಚುನಾಯಿತಗೊಂಡಿರುವ ನಮ್ಮಂಥ ಜನಪ್ರತಿನಿಧಿಗಳು ಈಗ ಸಂವಿಧಾನವನ್ನು ಬದಲಿಸುವ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ’ ಎಂದರು.

ಸಂಸದ ಬಿ.ವಿ.ನಾಯಕ ಮಾತನಾಡಿ, ‘ಪಟ್ಟಣದಲ್ಲಿ ಟಿಪ್ಪು ಭವನ ನಿರ್ಮಾಣಕ್ಕಾಗಿ ಮುಸ್ಲಿಂ ಸಮಾಜದ ಮುಖಂಡರು ಮನವಿ ಮಾಡಿಕೊಂಡಿದ್ದು, ಕೂಡಲೇ ಅವರ ಭರವಸೆಯನ್ನು ಈಡೇರಿಸಲಾಗುವುದು’ ಎಂದರು.

ಶಾಸಕ ಕೆ. ಶಿವನಗೌಡ ನಾಯಕ, ಈದ್ಗಾ ಕಮಿಟಿ ಅಧ್ಯಕ್ಷ ಖಾಜಿ ಮೊಹ್ಮದ್‌ ಉಮರ್‌ಸಾಬ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ ಇಟಿಗಿ ಮಾತನಾಡಿದರು.
ಟಿಪ್ಪು ಸುಲ್ತಾನ್‌ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಯೂನುಸ್‌ ಶಾಹಪುರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿಖರ ಮಠದ ಕಪಿಲ ಸಿದ್ದರಾಮೇಶ್ವರ ಸ್ವಾಮೀಜಿ, ಡಾನ್‌ ಬಾಸ್ಕೋ ಸಂಸ್ಥೆಯ ಫಾದರ್‌ ವಿವೇಕ್‌, ಮುಪ್ತಿ ಮೊಹ್ಮದ್‌ ಇಕ್ಬಾಲ್‌ ಖಾಸ್ಮೀ ಸಾನ್ನಿಧ್ಯ ವಹಿಸಿದ್ದರು. ಡಾ. ರಾಜಾ ಹನುಮಣ್ಣ ನಾಯಕ, ರಾಜಶೇಖರ ನಾಯಕ, ಸಂಘದ ಮುಖಂಡರಾದ ಇಸಾಕ್‌ ಮೇಸ್ತ್ರಿ, ಅಬ್ದುಲ್‌ ಘನಿಸಾಬ ಬುವಾಜಿ, ಮಹಿಬೂಬಸಾಬ ಉದ್ದಾರ್‌, ಟಿ. ಜಅಕೀರ್‌ ಹುಸೇನ್‌, ಮುನೀರ್ ಪಾಶಾ, ಸುಲ್ತಾನ್‌ ಬಾಬು, ರಫಿಕ್‌ ಇದ್ದರು.

* * 

ಟಿಪ್ಪು ಜಯಂತಿ ಅಂಗವಾಗಿ ನಡೆದ ಸರ್ವಧರ್ಮ ಸಮಾವೇಶ ಸೌಹಾರ್ದತೆ ತೋರಿಸುತ್ತದೆ. ಎಲ್ಲ ಧರ್ಮದವರು ಶಾಂತಿಯಿಂದ ಬದುಕಲು ಕಲಿಯಬೇಕಾಗಿದೆ
ತನ್ವೀರ್‌ ಸೇಠ್‌, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT