7

ಪವರ್ ಸ್ಟೇಷನ್ ಕಾಮಗಾರಿ ಅಪೂರ್ಣ

Published:
Updated:
ಪವರ್ ಸ್ಟೇಷನ್ ಕಾಮಗಾರಿ ಅಪೂರ್ಣ

ಹೊಸಕೊಪ್ಪ ಶಿವು

ಕೋಣಂದೂರು: ಡಿಸೆಂಬರ್ ತಿಂಗಳಿನಲ್ಲೇ ಕೋಣಂದೂರು ಸುತ್ತಮುತ್ತ ವಿದ್ಯುತ್ ಕ್ಷಾಮ ತಲೆದೋರಿದೆ. ಇದರ ಜತೆಗೇ ಇಲ್ಲಿ ನಿರ್ಮಾಣವಾಗುತ್ತಿರುವ ಪವರ್ ಸ್ಟೇಷನ್‌ ಕಾಮಗಾರಿಯ ವಿಳಂಬದ ವಿಚಾರವೂ ಮತ್ತೆ ಚರ್ಚೆಗೆ ಬಂದಿದೆ.

ಕೋಣಂದೂರಿನಿಂದ 10 –15 ಕಿ.ಮೀ. ದೂರದಲ್ಲಿರುವ ಹಳ್ಳಿಗಳಾದ ಆಲೂರು ಹೊಸಕೊಪ್ಪ, ದೇಮ್ಲಾಪುರ, ಕೆಸಿನ ಮನೆ, ಹುತ್ತಳ್ಳಿ, ಯೋಗಿ ಮಳಲಿ, ಮಳಲೀಮಕ್ಕಿ, ಗಡಿಹೊನ್ನೆ, ಹಿರೇಕಲ್ಲಹಳ್ಳಿ, ಕಾರ್ಕೋಡ್ಲು, ವಾಟಗಾರು ಹಾರಂಬಳ್ಳಿಗಳಲ್ಲಿ ಸಂಜೆಯಾಗುತ್ತಿದ್ದಂತೆ ವಿದ್ಯುತ್ ದೀಪಗಳು ಮೊಂಬತ್ತಿ ದೀಪದಂತಹ ಬೆಳಕು ಬೀರುತ್ತವೆ. ಪರೀಕ್ಷೆ ಸಮೀಪಿಸುತ್ತಿರುವ ಈ ಸಂದರ್ಭಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಅಭ್ಯಾಸಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಕೃಷಿ, ವಿವಿಧ ಉದ್ಯಮಗಳಿಗೂ ಲೋ ವೋಲ್ಟೇಜ್ ಸಮಸ್ಯೆ ಉಂಟುಮಾಡುತ್ತಿದೆ.

ಇಲ್ಲಿ 10 ವರ್ಷಗಳ ಹಿಂದೆ ಪವರ್ ಸ್ಟೇಷನ್ ಕಾಮಗಾರಿ ಪ್ರಾಂಭವಾಯಿತು. ಆದರೆ, ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿಗಾಗಿ ತಂದಿರಿಸಿರುವ 100ಕ್ಕೂ ಅಧಿಕ ಸಿಮೆಂಟ್ ಮೂಟೆಗಳು ಗಟ್ಟಿಯಾಗಿ ಹೋಗಿವೆ. 25ಕ್ಕೂ ಅಧಿಕ ಆಯಿಲ್ ಟ್ಯಾಂಕ್‌ಗಳು ಮಳೆ, ಬಿಸಿಲಿನಲ್ಲಿ ಹಾಳಾಗುತ್ತಿವೆ. ಇದರ ಕಾವಲಿಗಾಗಿ ರಾತ್ರಿ ಹಗಲು ಒಬ್ಬೊಬ್ಬ ಕಾವಲುಗಾರರನ್ನು ನಿಯೋಜಿಸಲಾಗಿದೆ. ಘಟಕದಲ್ಲಿ ಅಳವಡಿಸಲು ತಂದಿರುವ ಅತ್ಯಾಧುನಿಕ ಯಂತ್ರಗಳು ಸುಸ್ಥಿತಿಯಲ್ಲಿಲ್ಲ.

ಪ್ರಮುಖ ವಾಣಿಜ್ಯ ಮತ್ತು ಶೈಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿರುವ ಕೋಣಂದೂರಿಗೆ ಉನ್ನತ ಮಟ್ಟದ ವಿದ್ಯುತ್ ಪೂರೈಸುವ ಪವರ್ ಸ್ಟೇಷನ್ ಅಗತ್ಯ ಇದೆ ಎನ್ನುತ್ತಾರೆ ಇಲ್ಲಿನ ನಿವಾಸಿ ಅಶೋಕ್.

‘ಪವರ್ ಸ್ಟೇಷನ್ ವಿಚಾರವಾಗಿ ಅನೇಕ ಬಾರಿ ಇಂಧನ ಇಲಾಖೆ ಮತ್ತು ಸಚಿವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ರೋಸಿ ಹೋಗಿದ್ದೇವೆ’ ಎನ್ನುತ್ತಾರೆ ಉದ್ಯಮಿ ಉಮೇಶ್.

ಈ ಘಟಕದ ಕಾಮಗಾರಿಯ ಜತೆಗೇ ಆರಂಭವಾದ ತಾಲ್ಲೂಕಿನ ಕಮ್ಮರಡಿ ಮತ್ತು ಪಕ್ಕದ ರಿಪ್ಪನ್‌ಪೇಟೆಯಲ್ಲಿನ ಪವರ್ ಸ್ಟೇಷನ್‌ಗಳು ಕಾರ್ಯಾರಂಭಗೊಂಡು ವರ್ಷಗಳೇ ಕಳೆದಿವೆ. ಆದರೆ, ಇಲ್ಲಿನ ಕಾಮಗಾರಿ ವಿಳಂಬವಾದುದೇಕೆ, ಇದುವರೆಗೂ ವಿನಿಯೋಗಿಸಿರುವ ಸಾರ್ವಜನಿಕರ ಹಣದ ಲೆಕ್ಕ ಕೊಡುವವರು ಯಾರು, ಕಾನೂನಿನ ತೊಡಕುಗಳು ಯಾವುವು, ಯೋಜನೆ ಸಿದ್ಧ ಪಡಿಸುವಾಗ ಕಾನೂನಿನ ತೊಡಕುಗಳ ಅರಿವು ಅಧಿಕಾರಿಗಳಿಗೆ ಇರಲಿಲ್ಲವೇ ಎಂಬುದು ಅವರ ಪ್ರಶ್ನೆಯಾಗಿದೆ.

* * 

ಅರಣ್ಯ ಇಲಾಖೆಯಿಂದ ಇದ್ದ ತೊಡಕುಗಳು ನಿವಾರಣೆಯಾಗಿವೆ. ಹೊಸದಾಗಿ ಟೆಂಡರ್ ಕರೆಯಲಾಗಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ.

ಕೆ.ಚಂಚನಗೌಡ, ಪ್ರಭಾರ ಕಾರ್ಯನಿರ್ವಾಹಕ ಅಭಿಯಂತರ, ಕೆ.ಪಿ.ಟಿ.ಸಿ.ಎಲ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry