7

ಭವಿಷ್ಯದಲ್ಲಿ ಶಿರಾಕ್ಕೆ 4.5 ಟಿಎಂಸಿ ಅಡಿ ನೀರು

Published:
Updated:
ಭವಿಷ್ಯದಲ್ಲಿ ಶಿರಾಕ್ಕೆ 4.5 ಟಿಎಂಸಿ ಅಡಿ ನೀರು

ಶಿರಾ: ‘ಮುಂದಿನ ದಿನಗಳಲ್ಲಿ ಹೇಮಾವತಿ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಎತ್ತಿನಹೊಳೆಯಿಂದ ಶಿರಾ ತಾಲ್ಲೂಕು ತ್ರಿವೇಣಿ ಸಂಗಮವಾಗಲಿದೆ. 4.5 ಟಿಎಂಸಿ ನೀರು ದೊರೆಯಲಿದೆ. ಈ ಭಾಗದ ಜನರ ಬದುಕು ಹಸನಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ನಗರದಲ್ಲಿ ವಿವೇಕಾನಂದ ಕ್ರೀಡಾಂಗಣದಲ್ಲಿ ಗುರುವಾರ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಒಂದೇ ಕಾರ್ಯಕ್ರಮದಲ್ಲಿ ₹ 1105 ಕೋಟಿ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡುತ್ತಿರುವುದು ರಾಜ್ಯದ ಇತಿಹಾಸದಲ್ಲೇ ಇದೇ ಪ್ರಥಮ. ತುಮಕೂರು ಜಿಲ್ಲೆಗೆ ಸಂಬಂಧಪಟ್ಟಂತೆ ಹೇಮಾವತಿ, ಭದ್ರಾ ಹಾಗೂ ಎತ್ತಿನ ಹೊಳೆ ಈ ಮೂರು ನೀರಾವರಿ ಯೋಜನೆಗೆ ₹ 5 ಸಾವಿರ ಕೋಟಿ ಖರ್ಚು ಮಾಡಿದೆ. ಮೂರು ಯೋಜನೆಗಳಿಂದ ಈ ಜಿಲ್ಲೆಗೆ ಒಟ್ಟು 27 ಟಿಎಂಸಿ ನೀರು ಸಿಗುತ್ತದೆ’ ಎಂದು ಹೇಳಿದರು.

ಸದಾ ಬರಗಾಲಕ್ಕೆ ತುತ್ತಾಗುವ ಶಿರಾ ತಾಲ್ಲೂಕಿನಲ್ಲಿ ಬ್ಯಾರೇಜ್ ಮತ್ತು ಚೆಕ್ ಡ್ಯಾಂ ನಿರ್ಮಾಣ ಮಾಡುವ ಮೂಲಕ ಅಂತರ ಜಲವೃದ್ಧಿಗೆ ಜಯಚಂದ್ರ ಕಾರಣವಾಗಿದ್ದಾರೆ. ಅವರ ಅಭಿವೃದ್ಧಿ ಪರವಾದ ಚಿಂತನೆಯಿಂದ ತಾಲ್ಲೂಕಿನ ಚಿತ್ರಣ ಬದಲಾಗಿದೆ ಎಂದರು. 

‘ಸಚಿವ ಟಿ.ಬಿ.ಜಯಚಂದ್ರ ಈ ಭಾಗದ ಭಗೀರಥ. ಅವರ ಹೋರಾಟ ಹಾಗೂ ಪರಿಶ್ರಮದ ಫಲದಿಂದಾಗಿ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಬರುವಂತಾಯಿತು. ಇದರಿಂದಾಗಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಿಗೆ ಜಯಚಂದ್ರ ಮೇಲೆ ಸಿಟ್ಟಿದೆ’ ಎಂದರು.

ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ‘ಶಿರಾ ತಾಲ್ಲೂಕಿನಲ್ಲಿ ಫೆಬ್ರುವರಿಯಲ್ಲಿ ಭದ್ರಾ ಮೇಲ್ಡಂಡೆ ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಲಾಗುವುದು’ ಎಂದರು. ‘ಬರಪೀಡಿತ ಶಿರಾ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಬರುವುದರಿಂದ ಹೇಮಾವತಿ ಜೊತೆಗೆ ಭದ್ರಾ ನೀರು ಬರುವುದರಿಂದ ಈ ಭಾಗ ನೀರಾವರಿ ಪ್ರದೇಶವಾಗುವುದು’ ಎಂದರು.

‘ತಾಲ್ಲೂಕಿನಲ್ಲಿ 16 ಸಾವಿರ ನಿವೇಶನ ರಹಿತರನ್ನು ಗುರುತಿಸಲಾಗಿದೆ. ಇದರಲ್ಲಿ ಈಗ 8617 ಜನರಿಗೆ ನಿವೇಶನದ ಹಕ್ಕು ಪತ್ರ ನೀಡಲಾಗುವುದು. ಮುಂದಿನ ದಿನಗಳಲ್ಲಿ ಉಳಿದವರಿಗೆ ಸಹ ನಿವೇಶನದ ಹಕ್ಕು ಪತ್ರ ನೀಡಲಾಗುವುದು’ ಎಂದರು.

ಸಾಧನ ಸಂಭ್ರಮ ಸರ್ಕಾರಿ ಕಾರ್ಯಕ್ರಮವಾದರೂ ಅತಿಥಿಗಳು, ಪತ್ರಕರ್ತರು, ಸ್ವಯಂ ಸೇವಕರಿಗೆ ನೀಡಿದ್ದ ಬ್ಯಾಡ್ಜ್‌ನಲ್ಲಿ ಕಾಂಗ್ರೆಸ್ ಪಕ್ಷದ ಗುರುತಾದ ಕೈ ಚಿಹ್ನೆ ಇದಿದ್ದು ಚರ್ಚೆಗೆ ಕಾರಣವಾಯಿತು.

ಸಚಿವ ಆಂಜನೇಯ, ಸಂಸದ ಬಿ.ಎನ್.ಚಂದ್ರಪ್ಪ, ನಗರಸಭೆ ಅಧ್ಯಕ್ಷ ಅಮಾನುಲ್ಲಾ ಖಾನ್, ಉಪಾಧ್ಯಕ್ಷೆ ಶುಭಾ ಮಾರುತೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಲ್ಲಾಭಕ್ಕಾಷ್ ಪ್ಯಾರು, ಚಂಗಾವರ ಮಾರಣ್ಣ, ಕೆಪಿಸಿಸಿ ಸದಸ್ಯ ಸಂತೋಷ್ ಜಯಚಂದ್ರ, ತುಮಕೂರು ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಿ.ಸಿ.ಆಶೋಕ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ಎಪಿಎಂಸಿ ಅಧ್ಯಕ್ಷ ಬಿ.ಎಸ್.ಸತ್ಯನಾರಾಯಣ, ಎಂ.ಆರ್.ಶಶಿಧರ್ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎಸ್.ರವಿ, ಎಸ್.ಎನ್.ಕೃಷ್ಣಯ್ಯ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ, ಹಲುಗುಂಡೇಗೌಡ, ವಕೀಲ ಗುರುಮೂರ್ತಿ, ಯುವ ಕಾಂಗ್ರೆಸ್ ಅಧ್ಯಕ್ಷ ದಿವಾಕರ್ ಗೌಡ ಇದ್ದರು.

ಉಪ್ಪಿಟ್ಟು ಸವಿದ ಸಿ.ಎಂ

₹ 84 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಇಂದಿರಾ ಕ್ಯಾಂಟೀನ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಸಚಿವ ಟಿ.ಬಿ.ಜಯಚಂದ್ರ, ಆಂಜನೇಯ ಹಾಗೂ ಸಂಸದ ಬಿ.ಎನ್.ಚಂದ್ರಪ್ಪ ಅವರ ಜೊತೆ ಮುಖ್ಯಮಂತ್ರಿ ಉಪ್ಪಿಟ್ಟು ಮತ್ತು ಕೇಸರಿಬಾತ್ ತಿಂದರು. ಕಾಮಗಾರಿಗೆ ಚಾಲನೆ ನೀಡಿ ದುರ್ಗಮ್ಮ ದೇವಸ್ಥಾನದ ಕಾಮಗಾರಿ ವೀಕ್ಷಿಸಿ ಪೂಜೆ ಸಲ್ಲಿಸಿದರು. ನಂತರ ಮಲ್ಲಿಕ್ ರೆಹಾನ್ ದರ್ಗಾಕ್ಕೆ ಭೇಟಿ ನೀಡಿದರು.

ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ ಸಾಧನಾ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಇಲಾಖೆಗಳ ಸವಲತ್ತು ಹಾಗೂ ನಿವೇಶನದ ಹಕ್ಕು ಪತ್ರಗಳನ್ನು ಆರ್ಹ ಫಲಾನುಭವಿಗಳಿಗೆ ವಿತರಿಸಿದರು. ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಮೈಸೂರು ಪೇಟ ತೊಡಿಸಿ ಬೆಳ್ಳಿಯ ಗದೆ, ಕತ್ತಿ ನೀಡಿ ಸನ್ಮಾನಿಸಿದರು.

ಚರ್ಚೆಗೆ ಗ್ರಾಸವಾದ ಗೈರು

ತವರು ಜಿಲ್ಲೆಯಲ್ಲಿಯೇ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಶಾಸಕ ಕೆ.ಎನ್.ರಾಜಣ್ಣ ಗೈರು ಹಾಜರಿ ಚರ್ಚೆಯ ವಿಷಯವಾಗಿತ್ತು. ಆಹ್ವಾನ ಪತ್ರಿಕೆಯಲ್ಲಿ ಇಬ್ಬರ ಹೆಸರು ಇತ್ತು. ಸಚಿವ ಟಿ.ಬಿ.ಜಯಚಂದ್ರ ಹಾಗೂ  ಕೆ.ಎನ್.ರಾಜಣ್ಣ ಅವರ ನಡುವಿನ ಭಿನ್ನಾಭಿಪ್ರಾಯ ಇದೆ. ಇದು ಕಾರ್ಯಕರ್ತರಿಗೂ ತಿಳಿದ ವಿಷಯ. ಈ ಕಾರಣದಿಂದಲೇ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಚರ್ಚೆ ನಡೆಸುತ್ತಿದ್ದರು. ಅಲ್ಲದೆ ತಾಲ್ಲೂಕಿನವರೇ ಆದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್ ಸಹ ಗೈರಾಗಿದ್ದರು.

ರಾಜಣ್ಣ ಮನೆಯಲ್ಲಿ ಉಪಾಹಾರ

ತುಮಕೂರು ವಿಶ್ವವಿದ್ಯಾಲಯದ ವಸತಿಗೃಹದಲ್ಲಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಬೆಳಿಗ್ಗೆ 10 ಗಂಟೆಯಲ್ಲಿ ಕೆ.ಎನ್.ರಾಜಣ್ಣ ಅವರ ಮನೆಯಲ್ಲಿ ಉಪಾಹಾರ ಸೇವಿಸಿದರು. ನಂತರ ಹೆಲಿಪ್ಯಾಡ್‌ಗೆ ಬಂದು 11ರ ಸಮಯಕ್ಕೆ ಶಿರಾದತ್ತ ಪ್ರಯಾಣ ಬೆಳೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry