ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಾರ ಶಾಲೆಯಲ್ಲಿ ವಿಜ್ಞಾನ ಜಾತ್ರೆ

Last Updated 29 ಡಿಸೆಂಬರ್ 2017, 6:30 IST
ಅಕ್ಷರ ಗಾತ್ರ

ಸಿಂದಗಿ: ಇಲ್ಲಿಯ ಶಾಂತವೀರ ನಗರದಲ್ಲಿನ ಮಂದಾರ ಪಬ್ಲಿಕ್ ಶಾಲೆ ಹಾಗೂ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಅಪರೂಪದ ಮಕ್ಕಳ ಕಲರವ ಕೇಳಿ ಬರುತ್ತಿತ್ತು. ಜಾತ್ರೆಯೋಪಾದಿಯಲ್ಲಿ ಮಕ್ಕಳು, ಪಾಲಕರು ಸಮಾವೇಶಗೊಂಡಿದ್ದರು. ಇದೊಂದು ವಿಜ್ಞಾನ ಜಾತ್ರೆಯೇ ಆಗಿತ್ತು.

ನೂರಾರು ಪುಟಾಣಿಗಳು ಭವ್ಯ ಮಂಟಪದಲ್ಲಿ ವಿವಿಧ ವಿಜ್ಞಾನ, ಇತಿಹಾಸ, ಸಾಹಿತ್ಯ, ಕಲೆಯನ್ನೊಳಗೊಂಡ ಪ್ರಾತ್ಯಕ್ಷಿಕೆಗಳೊಂದಿಗೆ ಸಾಲು, ಸಾಲಿನಲ್ಲಿ ನಿಂತುಕೊಂಡು ವೀಕ್ಷಕರಿಗೆ ಅರಳು ಹುರಿದಂತೆ ಪಟಪಟನೆ ವಿವರಣೆ ನೀಡುತ್ತಿದ್ದರು. ವಿಜ್ಞಾನ ಜಾತ್ರೆ ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಪಾಲಕರು, ಸಾರ್ವಜನಿಕರು ಸಮಾವೇಶಗೊಂಡಿದ್ದರು.
ಶಾಲೆಯ ಶಿಕ್ಷಕ–ಶಿಕ್ಷಕಿಯರ ಶ್ರಮವನ್ನು ಪಾಲಕರು ಗುಣಗಾನ ಮಾಡಿದರು.

ಪುಟಾಣಿ ಮಹಾದೇವ ಚಡಚಣ ಅವರ ‘ಅತಿ ವೇಗ, ತಿಥಿ ಬೇಗ’, ‘100 ವೇಗ ಬೇಡ, 108 ರಲ್ಲಿ ಬರಬೇಡ’ ಎಂಬ ಅಣಕು ಪ್ರದರ್ಶನ ಜನರ ಗಮನ ಸೆಳೆಯಿತು.
ಉದ್ಘಾಟನಾ ಸಮಾರಂಭ: ವಿಶ್ರಾಂತ ಉಪನ್ಯಾಸಕ ಶಾಂತೂ ಹಿರೇಮಠ ಪುಟಾಣಿಗಳು ಸಿದ್ಧಪಡಿಸಿದ ವಿಜ್ಞಾನ ಪ್ರಯೋಗಕ್ಕೆ ಬಟನ್ ಅದಮುವ ಮೂಲಕ ವಿಜ್ಞಾನ ಜಾತ್ರೆಯನ್ನು ಉದ್ಘಾಟಿಸಿದರು.

ಲೋಯೊಲಾ ಶಾಲೆಯ ಮುಖ್ಯಶಿಕ್ಷಕಿ ರೀನಾ ಡಿಸೋಜ ಮಾತನಾಡಿ, ‘ವಿಜ್ಞಾನ ಮತ್ತು ತಂತ್ರಜ್ಞಾನ ಬದುಕಿನ ಅವಿಭಾಜ್ಯ ಅಂಗ. ಶಿಕ್ಷಣ ಇರೋದೆ ಪರಿವರ್ತನೆಗಾಗಿ. ವ್ಯಕ್ತಿ ಬದಲಾದರೆ ಸಮಾಜ ಬದಲಾದಂತೆ. ವಿಜ್ಞಾನದ ಜೊತೆ ವ್ಯಕ್ತಿಗಳು ಬದಲಾಗಬೇಕು’ ಎಂದರು.

ಸಾನ್ನಿಧ್ಯ ವಹಿಸಿದ್ದ ಬ್ರಹ್ಮಕುಮಾರಿ ಪವಿತ್ರಾ ‘ಮೌಲ್ಯಗಳ ಜಾಗೃತಿಯೇ ವಿಜ್ಞಾನ. ವಿಜ್ಞಾನದಿಂದ ಆಂತರಿಕ ಪರಿವರ್ತನೆ ಸಾಧ್ಯ. ವಿಜ್ಞಾನಿಗಳು ಕೂಡ ಶಾಂತಿ, ಏಕಾಗ್ರತೆ, ಅಗೋಚರ ಶಕ್ತಿಯನ್ನು ಒಪ್ಪಿಕೊಳ್ಳುತ್ತಾರೆ’ ಎಂದರು.

ಪತ್ರಕರ್ತ ಮುರಗೇಶ ಹಿಟ್ಟಿ, ಕ್ರೀಡಾಧಿಕಾರಿ ಐ.ವೈ.ಲಕ್ಕುಂಡಿ ಮಾತನಾಡಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ಧಲಿಂಗ ಚೌಧರಿ ಅಧ್ಯಕ್ಷತೆ ವಹಿಸಿದ್ದರು. ಪಾಲಕರ ಪ್ರತಿನಿಧಿಗಳಾದ ಶರಣಪ್ಪ ಪಡಗಾನೂರ, ಗೊಲ್ಲಾಳಪ್ಪ ಮುರಗಾನೂರ, ಪತ್ರಕರ್ತ ಆನಂದ ಶಾಬಾದಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT