7

ತಾಲ್ಲೂಕು ಕೇಂದ್ರಕ್ಕೆ ಅಣಿಯಾದ ಹುಣಸಗಿ

Published:
Updated:
ತಾಲ್ಲೂಕು ಕೇಂದ್ರಕ್ಕೆ ಅಣಿಯಾದ ಹುಣಸಗಿ

ಹುಣಸಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಬಜೆಟ್‌ನಲ್ಲಿ ಹುಣಸಗಿ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಿದ್ದರು. ಅದರಂತೆ ಹೊಸ ವರ್ಷದಿಂದ ಹುಣಸಗಿ ಪಟ್ಟಣ ನೂತನ ತಾಲ್ಲೂಕು ಕೇಂದ್ರವಾಗಿ ಕಾರ್ಯಾರಂಭಕ್ಕೆ ಸಿದ್ಧತೆ ನಡೆಸಿದೆ. 40 ವರ್ಷಗಳ ಹೋರಾಟದ ಫಲವಾಗಿ ಹುಣಸಗಿ ಪಟ್ಟಣವು ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ ಬೆಳೆಯುತ್ತಿರುವ ದೊಡ್ಡ ಪಟ್ಟಣಗಳಲ್ಲಿ ಹುಣಸಗಿಯು ಮುಂಚೂಣಿಯಲ್ಲಿದೆ. ಇದು ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಹೃದಯ ಭಾಗದಂತಿದೆ. ಅತಿ ದೊಡ್ಡ ತಾಲ್ಲೂಕು ಕೇಂದ್ರವಾಗಿದ್ದ ಸುರಪುರ ತಾಲ್ಲೂಕನ್ನು ಆಡಳಿತ ಮತ್ತು ಅಭಿವೃದ್ಧಿಯ ಹಿತದೃಷ್ಟಿಯಿಂದ ಬೇರ್ಪಡಿಸಿ ಹುಣಸಗಿ ಹೊಸ ತಾಲ್ಲೂಕು ಮಾಡಬೇಕು ಎಂದು ಸಾಕಷ್ಟು ಬಾರಿ ಹೋರಾಟ ನಡೆದಿದ್ದವು.

ಅಲ್ಲದೇ ಈ ಹಿಂದೆ ರಚಿಸಲಾಗಿದ್ದ 1977 ರ ಎಂ.ವಾಸುದೇವರಾವ ಸಮಿತಿ, ಟಿ.ಎಂ.ಹುಂಡೇಕಾರ ಸಮಿತಿ, ಪಿ.ಸಿ.ಗದ್ದಿಗೌಡರ್ ಸಮಿತಿ ಮತ್ತು ಇತ್ತಿಚಿನ ಎಂ.ಬಿ.ಪ್ರಕಾಶ ಉಪ ಸಮಿತಿಗಳಲ್ಲಿಯೂ ಹುಣಸಗಿ ತಾಲ್ಲೂಕು ಕೇಂದ್ರ ಮಾಡುವ ಕುರಿತಂತೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು ಎಂದು ಪಟ್ಟಣದ ಹಿರಿಯ ಮುಖಂಡ ನಾಗಣ್ಣ ಸಾಹು ದಂಡಿನ್‌ ಹೇಳುತ್ತಾರೆ.

ಎರಡು ಹೋಬಳಿ: ಈ ಹುಣಸಗಿ ತಾಲ್ಲೂಕಿನಲ್ಲಿ ಹುಣಸಗಿ ಮತ್ತು ಕೊಡೇಕಲ್ಲ ಎರಡು ಹೋಬಳಿ ಕೇಂದ್ರಗಳು ಬರಲಿದ್ದು, ಹುಣಸಗಿಯ 36 ಮತ್ತು ಕೊಡೇಕಲ್ಲ ವಲಯದ 37 ಹಳ್ಳಿಗಳು ತಾಲ್ಲೂಕು ವ್ಯಾಪ್ತಿಗೆ ಒಳಪಡುತ್ತವೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸುತ್ತವೆ.

ಹುಣಸಗಿ ವ್ಯಾಪ್ತಿಯ ವಜ್ಜಲ,  ಮಾಳನೂರ,  ಬಲಶೆಟ್ಟಹಾಳ, ಕನಗಂಡನಹಳ್ಳಿ, ಕೊಳಿಹಾಳ, ಅಗ್ನಿ, ಅಗತೀರ್ಥ, ಗುಂಡಲಗೇರಾ, ಕರಿಬಾವಿ, ಮುದನೂರ, ಕನ್ನೆಳ್ಳಿ, ಬೈಚಬಾಳ ಗ್ರಾಮಗಳು ಒಳಪಡಲಿವೆ. ಈ ಹೋಬಳಿಯಲ್ಲಿ ಅಂದಾಜು 70,649 ಜನಸಂಖ್ಯೆ ಇರುತ್ತದೆ.

ಕೊಡೇಕಲ್ಲ ಹೋಬಳಿಯ ರಾಜಕೋಳೂರ, ಗೆದ್ದಲಮರಿ, ಜುಮಾಲಪುರ, ರಾಜವಾಳ, ನಾರಾಯಣಪುರ, ಜೋಗುಂಡಬಾವಿ, ಮಾರನಾಳ, ಮತ್ತಿತರ ಗ್ರಾಮಗಳ 69,761 ಜನಸಂಖ್ಯೆ ಇದೆ.

ಹುಣಸಗಿ ತಾಲ್ಲೂಕು ರಾಜ್ಯದಲ್ಲಿ ಪ್ರತಿಷ್ಠಿತ ನೀರಾವರಿ ಯೋಜನೆಯಲ್ಲಿ ಒಂದಾಗಿರುವ ನಾರಾಯಣಪುರದ ಬಸವಸಾಗರ ಜಲಾಶಯ, ಕಾಲಜ್ಞಾನಿಯ ಕೊಡೇಕಲ್ಲ ಬಸವೇಶ್ವರ ದೇವಸ್ಥಾನ, ಮುದನೂರಿನ ಆದ್ಯ ವಚನಕಾರ ದೇವರ ದಾಸಿಮಯ್ಯ, ರಾಜನಕೋಳೂರ ಬುಡ್ಡರ ಮನೆಗಳು  ಈ ತಾಲ್ಲೂಕಿನ ವಿಶೇಷತೆಗಳಲ್ಲಿ ಒಂದಾಗಲಿವೆ.

ಕಚೇರಿಗಳು:  ಹುಣಸಗಿ ಪಟ್ಟಣದಲ್ಲಿ ಈಗಾಗಲೇ ತಾಲ್ಲೂಕಿನ ಬಹುತೇಕ ಕಚೇರಿಗಳು ಕೂಡಾ ಕಾರ್ಯ ನಿರ್ವಹಿಸುತ್ತಿವೆ. ಮುಖ್ಯವಾಗಿ ಹುಣಸಗಿ ವೃತ್ತ ಪೊಲೀಸ್ ಕಚೇರಿ, ಪತ್ರಾಂಕಿತ ಉಪ ಖಜಾನೆ ಅಧಿಕಾರಿಗಳ ಕಾರ್ಯಾಲಯ, ನೋಂದಣಿ ಕಚೇರಿ, ಜೆಸ್ಕಾಂ ಉಪವಿಭಾಗ, ಕೃಷ್ಣಾ ಭಾಗ್ಯ ಜಲ ನಿಗಮದ ಪ್ರಮುಖ ಕಚೇರಿಗಳು, ನಾರಾಯಣಪುರದಲ್ಲಿ ಮುಖ್ಯ ಎಂಜಿನಿಯರ್‌ ಕಚೇರಿ ಕಾರ್ಯ ನಿರ್ವಹಿಸುತ್ತಿವೆ.

ಇದಲ್ಲದೇ ಕೃಷ್ಣಾ ಭಾಗ್ಯಜಲ ನಿಗಮದ ಕ್ಯಾಂಪ್‌ನಲ್ಲಿ ಸುಮಾರು 41 ಸ್ಥಳಗಳನ್ನು ಗುರುತಿಸಲಾಗಿದೆ 20ಕ್ಕೂ ಹೆಚ್ಚು ಕಚೇರಿಗೆ ಅವಶ್ಯ ಸ್ಥಳ ಇದ್ದು, ಇನ್ನುಳಿದ ವಸಹಾತುಗಳಲ್ಲಿ ಸಣ್ಣ ಪುಟ್ಟ ದುರಸ್ತಿ ಮಾಡಿಕೊಳ್ಳಬೇಕಿದೆ ಎಂದು ಹುಣಸಗಿ ವಿಶೇಷ ತಹಶೀಲ್ದಾರ್‌ ಸುರೇಶ ಚವಲ್ಕರ್‌ ವಿವರಿಸಿದರು.

ಹುಣಸಗಿ ತಾಲ್ಲೂಕು ಕೇಂದ್ರ ವಾಗಬೇಕು ಎಂದು ಎಂ.ಬಿ.ಪ್ರಕಾಶ ಸಮಿತಿಗೆ 13 ಜನ ತಾಲ್ಲೂಕು ಪಂಚಾಯಿತಿ ಸದಸ್ಯರು, 20 ಗ್ರಾ.ಪಂ ಗಳು ಠರಾವು ಸೂಚಿಸಿ ಪತ್ರ ನೀಡಿ ಬೆಂಬಲ ಸೂಚಿಸಿದ್ದನ್ನು ಸ್ಮರಿಸಬಹು ಎಂದು ಎಪಿಎಂಸಿ ಸದಸ್ಯ ದೇವಣ್ಣ ಮಲಗಲದಿನ್ನಿ ಹಾಗೂ ಪಟ್ಟಣದ ಬಸಣ್ಣ ದೊರೆ ಹೇಳುತ್ತಾರೆ.

* * 

ಬಹುದಿನಗಳ ಹೋರಾಟದ ಫಲವಾಗಿ ಹುಣಸಗಿ ಪಟ್ಟಣವು ತಾಲ್ಲೂಕು ಕೇಂದ್ರವಾಗುತ್ತಿದೆ.  ಇದರಿಂದ ಪಟ್ಟಣದ ನಾಗರಿಕರಿಗೆ ಸಂತವಾಗಿದೆ

ನಾಗಪ್ಪಅಣ್ಣ,

ಅಡಿಕ್ಯಾಳ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry