7

ಮನೆ ಮನೆಗೆ ಹರಡುತ್ತಿರುವ ದೂಳು: ರೋಗಭೀತಿ

Published:
Updated:
ಮನೆ ಮನೆಗೆ ಹರಡುತ್ತಿರುವ ದೂಳು: ರೋಗಭೀತಿ

ಚಿತ್ತಾಪುರ: ಪಟ್ಟಣದ ಲಾಡ್ಜಿಂಗ್ ಕ್ರಾಸ್‌ನಿಂದ ಎಪಿಎಂಸಿ ಆವರಣದ ಪಕ್ಕದಿಂದ ರೈಲ್ವೆ ಮೇಲ್ಸೇತುವೆ ಮತ್ತು ರಸ್ತೆ ನಿರ್ಮಾಣ ಮಾಡುವ ಸ್ಥಳದಲ್ಲಿ ಲಾರಿಗಳ ಸಂಚಾರದಿಂದ ದಟ್ಟವಾಗಿ ಮೇಲೇಳುತ್ತಿರುವ ದೂಳಿನಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ದೂಳಿನ ಕಾಟದಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ ಎಂದು ಜನರು ಆತಂಕ ವ್ಯಕ್ತ ಮಾಡುತ್ತಿದ್ದಾರೆ.

ರೈಲ್ವೆ ಮೇಲ್ಸೇತುವೆಗೆ ಸಂಪರ್ಕ ಜೋಡಿಸುವ ಎತ್ತರ ಮಟ್ಟದ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆಯ ಎರಡೂ ಬದಿಯಿಂದ ಓರಿಯೆಂಟ್ ಸಿಮೆಂಟ್ ಕಂಪೆನಿಗೆ ದಿನವೂ ನೂರಾರು ಸಂಖ್ಯೆಯಲ್ಲಿ ಭಾರಿ ಗಾತ್ರದ ಲಾರಿಗಳ ಸಂಚಾರ ಹಗಲು– ರಾತ್ರಿ ನಡೆಯುತ್ತಿದೆ. ಲಾರಿಗಳ ಸಂಚಾರದಿಂದ ಮೇಲೇಳುವ ದೂಳು ರಸ್ತೆ ಪಕ್ಕದ ಮನೆಗಳಲ್ಲಿ ಹರಡಿ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ವಾಹನಗಳ ದಟ್ಟಣೆಯಿಂದ ಮನೆಯೊಳಗೆ ನುಗ್ಗುವ ದೂಳು ಬಟ್ಟೆ, ಆಹಾರ ಪದಾರ್ಥ, ಮನೆ ಬಳಕೆ ಸಾಮಾನುಗಳ ಮೇಲೆ ಹರಡಿ ಜನರು ಪಡಬಾರದ ಕಷ್ಟಪಡುತ್ತಿದ್ದಾರೆ. ಮನೆಯಲ್ಲಿನ ವೃದ್ಧರು, ನವಜಾತ ಶಿಶು, ಚಿಕ್ಕ ಮಕ್ಕಳಿಗೆ ತೀವ್ರ ಸಮಸ್ಯೆ ಉಂಟಾಗಿ ಉಸಿರಾಟದ ತೊಂದರೆಯಾಗುತ್ತಿದೆ. ಯಾರೂ ಈ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಾರಿಗಳ ಸಂಚಾರ ಸಮಯದಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಮೈತುಂಬಾ ದೂಳು ಹರಡಿ ಮನೆಗೆ ಹೋಗಿ ಬಟ್ಟೆ ಬದಲಾಯಿಸುವ ಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಚಳಿಗಾಲವಿದ್ದರೂ ದೂಳಿನ ಕಾಟ ಮಿತಿಮೀರಿದೆ. ಮುಂಬರುವ ಬೇಸಿಗೆಯಲ್ಲಿ ದೂಳಿನ ಸಮಸ್ಯೆ ದುಪ್ಪಟ್ಟಾಗಲಿದೆ. ಜನರಿಗೆ ದಮ್ಮು, ಕೆಮ್ಮು, ಡಸ್ಟ್ ಅಲರ್ಜಿಯಂತಹ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ಪಿ.ಡಬ್ಲು.ಡಿ ಇಲಾಖೆಯಿಂದ ಕೈಗೊಂಡಿರುವ ರೈಲ್ವೆ ಮೇಲ್ಸೇತುವೆ ಬಳಿ ರಸ್ತೆ ನಿರ್ಮಾಣ ಕಾಮಗಾರಿ ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದೆ. ಸಹಜವಾಗಿ ಮಣ್ಣಿನ ರಸ್ತೆಯಲ್ಲಿ ವಾಹನಗಳ ಸಂಚಾರದಿಂದ ದೂಳಿನ ಸಮಸ್ಯೆಯಾಗಿದೆ. ಶೇ 90ರಷ್ಟು ಸಮಸ್ಯೆ ಮತ್ತು ತೊಂದರೆಯು ಓರಿಯೆಂಟ್ ಸಿಮೆಂಟ್ ಕಂಪೆನಿಗೆ ಅಪಾರ ಸಂಖ್ಯೆಯಲ್ಲಿ ಹಗಲು–ರಾತ್ರಿ ಸಂಚರಿಸುವ ಲಾರಿಗಳಿಂದ ಉಂಟಾಗುತ್ತಿದೆ. ಕಂಪೆನಿಯ ಶ್ರೀನಿವಾಸ್ ಅವರನ್ನು ಸಂಪರ್ಕಿಸಿ ಮುರುಮ್ ಹಾಕಿಸಿ ದಿನವೂ ನೀರು ಸಿಂಪಡಣೆ ಮಾಡುವಂತೆ ಸೂಚಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಹಣಮಂತರೆಡ್ಡಿ ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ದೂಳಿನ ಸಮಸ್ಯೆ ಕುರಿತು ಓರಿಯೆಂಟ್ ಕಂಪೆನಿ ಅಧಿಕಾರಿ ಮತ್ತು ಪಿಡಬ್ಲ್ಯುಡಿ ಎಇಇ ಅವರನ್ನು ಕರೆಯಿಸಿ ನೀರು ಸಿಂಪಡಣೆ ಮಾಡುವಂತೆ ಸೂಚಿಸಲಾಗಿದೆ. ಅನ್ನಪೂರ್ಣಾ ಹೊತಿನಮಡಿ, ಅಧ್ಯಕ್ಷೆ, ಪುರಸಭೆ, ಚಿತ್ತಾಪುರ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry