ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ ಪರಿಹಾರ ವಿತರಿಸಲು ಒತ್ತಾಯ

Last Updated 29 ಡಿಸೆಂಬರ್ 2017, 6:59 IST
ಅಕ್ಷರ ಗಾತ್ರ

ಕಾರವಾರ: ‘ಸೀ ಬರ್ಡ್ ನೌಕಾನೆಲೆಯ ನಿರಾಶ್ರಿತರಿಗೆ ನೀಡಬೇಕಿರುವ ಹೆಚ್ಚಿನ ಪರಿಹಾರವನ್ನು ಕೂಡಲೇ ವಿತರಿಸುವಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದ್ದೇನೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಯಿಂದಾಗಿ ಕಾರವಾರ- ಅಂಕೋಲಾ ಭಾಗದ ಒಟ್ಟು 4,032 ಕುಟುಂಬಗಳು ನಿರಾಶ್ರಿತವಾಗಿವೆ. ಅವುಗಳಿಗೆ ತಾತ್ಕಾಲಿಕ ಪರಿಹಾರ ಮಾತ್ರ ನೀಡಲಾಗಿತ್ತು. ಹೆಚ್ಚಿನ ಪರಿಹಾರಕ್ಕಾಗಿ ನಿರಾಶ್ರಿತರು ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಭೂ ಸ್ವಾಧೀನ ಕಾಯ್ದೆ 18 (1) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರಿಂದ, ಸ್ವಾಧೀನಪಡಿಸಿಕೊಂಡಿರುವ ಪ್ರತಿ ಗುಂಟೆ ಜಮೀನಿಗೆ ₹11,500 ಪರಿಹಾರ ನೀಡುವಂತೆ ಕೋರ್ಟ್ ಅಂತಿಮವಾಗಿ ತೀರ್ಪು ನೀಡಿದೆ. ಆದರೆ ಇದುವರೆಗೆ 750 ಪ್ರಕರಣಗಳಿಗೆ ಮಾತ್ರ ಹೆಚ್ಚಿನ ಪರಿಹಾರವನ್ನು ರಕ್ಷಣಾ ಇಲಾಖೆ ನೀಡಿದೆ ಎಂದು ತಿಳಿಸಿದರು.

‘ಸೆಕ್ಷನ್ 28 (ಎ) ಅಡಿಯಲ್ಲಿ ನ್ಯಾಯಾಲಯದಲ್ಲಿ 919 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 843 ಪ್ರಕರಣಗಳು ಹೆಚ್ಚಿನ ಪರಿಹಾರಕ್ಕೆ ಅರ್ಹತೆ ಪಡೆದುಕೊಂಡಿದೆ’ ಎಂದು ತಿಳಿಸಿದರು.

‘ಕುಮಟಾದ ಮಣಕಿಯಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿರುವ ಕಿರು ವಿಮಾನ ನಿಲ್ದಾಣವನ್ನು (ಏರ್‌ಸ್ಟ್ರಿಪ್) ಸಾರ್ವಜನಿಕ ವಿಮಾನಯಾನಕ್ಕೂ ಬಳಸಲು ಅವಕಾಶ ನೀಡಬೇಕು. ನೌಕಾ ಸೇನೆಯಲ್ಲಿ ಉದ್ಯೋಗಿಗಳಾಗಬಯಸುವ ಸ್ಥಳೀಯ ಯುವಕರಿಗೆ ಸೂಕ್ತ ಕೌಶಲ ತರಬೇತಿ ನೀಡಬೇಕು.

ಜತೆಗೆ ಸೀ ಬರ್ಡ್ ಎರಡನೇ ಹಂತದ ಯೋಜನೆಯಡಿ ಸೃಷ್ಟಿಯಾಗುವ ಉದ್ಯೋಗದಲ್ಲಿ ನಿರಾಶ್ರಿತ ಕುಟುಂಬಗಳ ಯುವಕರಿಗೆ ಆದ್ಯತೆ ನೀಡಬೇಕು ಎಂದು ರಕ್ಷಣಾ ಸಚಿವರಿಗೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು. ನಿರ್ಮಲಾ ಸೀತಾರಾಮನ್‌ ಗುರುವಾರ ನೌಕಾನೆಲೆಗೆ ಭೇಟಿ ನೀಡಿದ್ದರು.

ಕಾರವಾರ: ‘ಹೊನ್ನಾವರದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ಪರೇಶ್ ಮೇಸ್ತ ಅವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ ಎಂಬ ಕಾರಣಕ್ಕೆ ನೆರವು ನೀಡಿದ್ದೆ. ಪರೇಶರ ತಂದೆ ಕಮಲಾಕರ್ ಮೇಸ್ತ ಅವರು ಅದನ್ನು ಮರಳಿಸುವುದಾಗಿ ಹೇಳಿಕೆ ನೀಡಿದ್ದರು. ಆದರೆ, ಹಣ ಇನ್ನೂ ನನ್ನ ಕೈ ಸೇರಿಲ್ಲ. ನನ್ನ ಬೆಂಬಲಿಗರಿಗ್ಯಾರಿಗಾದರು ನೀಡಿದ್ದಾರೋ ತಿಳಿದಿಲ್ಲ’ ಎಂದು ಸಚಿವ ಆರ್.ವಿ. ದೇಶ‍ಪಾಂಡೆ ಹೇಳಿದರು.

‘ಪರೇಶ್‌ ಕುಟುಂಬದವರಲ್ಲಿ ಒಬ್ಬರಿಗೆ ಕೆ.ಡಿ.ಸಿ.ಸಿ ಬ್ಯಾಂಕ್‌ನಲ್ಲಿ ಕೆಲಸ ಕೊಡಿಸಲು ತಯಾರಿದ್ದೆವು. ಆದರೆ ಅದಕ್ಕೂ ಕೂಡ ಅವರು ಸ್ಪಂದಿಸುತ್ತಿಲ್ಲ. ಇದೆಲ್ಲವನ್ನೂ ಗಮನಿಸಿದರೆ ಅವರ ಹಿಂದೆ ಯಾವುದೋ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂಬುದು ತಿಳಿಯುತ್ತದೆ’ ಎಂದು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಅಮಾಯಕರ ವಿರುದ್ಧ ಕ್ರಮ ಇಲ್ಲ: ‘ಜಿಲ್ಲೆಯಲ್ಲಿ ನಡೆದ ಗಲಭೆಯಲ್ಲಿ ಬಿಜೆಪಿ, ಸಂಘ ಪರಿವಾರ ಮಾತ್ರ ಭಾಗಿಯಾಗಿವೆ. ಕಲ್ಲು ತೂರಾಟ ನಡೆಸಿದವರ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗಿದೆ ಹೊರತು, ಅಮಾಯಕರ ವಿರುದ್ಧ ಯಾವುದೇ ಪ್ರಕರಣಗಳನ್ನು ದಾಖಲಿಸಿಲ್ಲ. ಹಾಗೇನಾದರೂ ಇದ್ದಲ್ಲಿ ಬಿಜೆಪಿ ಅಂಥವರ ಪಟ್ಟಿ ನೀಡಲಿ’ ಎಂದು ದೇಶಪಾಂಡೆ ಸವಾಲು ಹಾಕಿದರು.

* * 

ನನ್ನ ಹೆಸರು ರಘುನಾಥ; ಅಂದರೆ ಪ್ರಭು ರಾಮನ ಅವತಾರ. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ಹೊರಟಿರುವ ಬಿಜೆಪಿಯವರು ಮೊದಲು ನನ್ನ ಆಶೀರ್ವಾದ ಪಡೆಯಬೇಕು
ಆರ್.ವಿ.ದೇಶಪಾಂಡೆ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT