7

‘ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿಕೆ ನೀಡುವ ನಾಯಕರನ್ನ ಎಂದೂ ನೋಡಿಲ್ಲ’

Published:
Updated:

ಕಾರವಾರ: ‘ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿಕೆ ನೀಡುವ ನಾಯಕರನ್ನು ನಾನು ಎಂದೂ ನೋಡಿಲ್ಲ. ಪ್ರಧಾನ ಮಂತ್ರಿಯ ಸ್ಥಾನಕ್ಕೆ ನೀಡುವ ಗೌರವದಂತೆ ಓರ್ವ ಮುಖ್ಯಮಂತ್ರಿಗೂ ಅದೇ ರೀತಿ ಕೊಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಆರ್.ವಿ.ದೇಶಪಾಂಡೆ ಹೇಳಿದರು.

ಗುರುವಾರ ಮಾಧ್ಯಮದವರೊಂದಿಗೆ ಇಲ್ಲಿ ಮಾತನಾಡಿದ ಅವರು, ‘ಅನೇಕ ಬಿಜೆಪಿ ನಾಯಕರು ನನ್ನ ಬಳಿ ಅವರ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಬಹಿರಂಗವಾಗಿ ಹೇಳುವ ಧೈರ್ಯ ಆ ನಾಯಕರಿಗಿಲ್ಲ. ಹೆಗಡೆಯವರ ವಿರುದ್ಧ ಕ್ರಮವಾಗಲಿ ಎಂದು ಅವರ ಪಕ್ಷದ ಕೆಲ ನಾಯಕರೇ ಕಾಯುತ್ತಿದ್ದಾರೆ’ ಎಂದರು.

‘ಅನಂತಕುಮಾರ್ ಹೆಗಡೆಯವರು ಮುಖ್ಯಮಂತ್ರಿಯ ಬಗ್ಗೆ ಟೀಕೆ ಮಾಡುವುದನ್ನು ಬಿಟ್ಟು ಆ ಸ್ಥಾನಕ್ಕೆ ಗೌರವ ನೀಡಬೇಕು. ಸಂವಿಧಾನದ ಬಗ್ಗೆ ಸಚಿವರಿಗೆ ಗೌರವ ಇರಬೇಕು. ಅದನ್ನು ತಿದ್ದುಪಡಿ ಮಾಡುವುದಾಗಲಿ, ಬದಲಿಸುವುದಾಗಲಿ ಅಗತ್ಯವಿಲ್ಲ. ಕೇಂದ್ರ ಸಚಿವ ಸ್ಥಾನ ಲಭಿಸಿ, ಅವರಿಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗ ಪಡಿಸಿಕೊಂಡು, ಕೌಶಲಾಭಿವೃದ್ಧಿ ಮಾಡಲಿ’ ಎಂದು ಕಿವಿಮಾತು ಹೇಳಿದರು.

‘ಯಡಿಯೂರಪ್ಪನವರು ಮಹದಾಯಿ ತನ್ನ ಕೈನಲ್ಲಿ ಇದೆ; ಗೋವಾ ಮುಖ್ಯಮಂತ್ರಿ ತನ್ನ ಅಂಗೈನಲ್ಲೇ ಇದ್ದಾರೆ ಎಂದು ಹೇಳುತ್ತಾರೆ. ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್ ಮಹದಾಯಿ ಬಗ್ಗೆ ಚರ್ಚೆ ಮಾಡಬೇಕಾದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆಯಬೇಕೋ ಅಥವಾ ಯಡಿಯೂರಪ್ಪನವರಿಗೆ ಬರೆಯಬೇಕೋ?’ ಎಂದು ಪ್ರಶ್ನಿಸಿರುವ ಅವರು, ‘ಇದು ಪಕ್ಷದ ವಿಚಾರವಲ್ಲ. ಮೂರು ರಾಜ್ಯದ ಮುಖ್ಯಮಂತ್ರಿಗಳು ಕುಳಿತು ಮಾತನಾಡಿ, ಬಗೆಹರಿಸಬೇಕಾಗಿದೆ’ ಎಂದು ಹೇಳಿದರು.

‘ಈ ವಿಚಾರವಾಗಿ ಪರಿಕ್ಕರ್ ಕೂಡ ತಪ್ಪು ಮಾಡಿದ್ದಾರೆ. ಕುಡಿಯುವ ನೀರಿಗಾಗಿ ರೈತರು ಪ್ರತಿಭಟನೆ ಮಾಡಿದ್ದಾರೆ. ಕಾಂಗ್ರೆಸ್ ಯಾಕೆ ಅವರಿಂದ ಪ್ರತಿಭಟನೆ ಮಾಡಿಸಬೇಕು? ಯಡಿಯೂರಪ್ಪನವರಿಗೆ ರೈತರನ್ನ ಎದುರಿಸಲು ಸಾಧ್ಯವಾಗಿಲ್ಲ. ಚುನಾವಣೆ ಹತ್ತಿರ ಬರುತ್ತಿದೆ ಎಂದು ಮಹದಾಯಿ ಹೆಸರಿನಲ್ಲಿ ರಾಜಕೀಯ ಮಾಡಬೇಡಿ’ ಎಂದು ಅವರು ಸಲಹೆ ನೀಡಿದರು.

’ನಾನು ದೇವಸ್ಥಾನಗಳಿಗೂ ಹೋಗುತ್ತೇನೆ. ಚರ್ಚ್‌, ಮಸೀದಿಗಳಿಗೂ ಹೋಗುತ್ತೇನೆ. ನಾನೂ ಹಿಂದು. ಇದನ್ನು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಅದೇ ರೀತಿ ಎಲ್ಲರಿಗೂ ತಮ್ಮ ಧರ್ಮದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳಲು ಅವಕಾಶ ಇರಬೇಕು. ಎಲ್ಲ ಧರ್ಮದಲ್ಲಿಯು ಒಳ್ಳೆಯವರು, ಕೆಟ್ಟವರು ಇದ್ದಾರೆ’ ಎಂದು ಹೇಳಿದರು.

* * 

ನನ್ನ ಹೆಸರು ರಘುನಾಥ; ಅಂದರೆ ಪ್ರಭು ರಾಮನ ಅವತಾರ. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ಹೊರಟಿರುವ ಬಿಜೆಪಿಯವರು ಮೊದಲು ನನ್ನ ಆಶೀರ್ವಾದ ಪಡೆಯಬೇಕು

ಆರ್.ವಿ.ದೇಶಪಾಂಡೆ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry