7

ಕಾಯಕಲ್ಪ ಪ್ರಶಸ್ತಿ ಪಟ್ಟಿಯಲ್ಲಿ ಗಂಗಾವತಿ ಆಸ್ಪತ್ರೆ

Published:
Updated:
ಕಾಯಕಲ್ಪ ಪ್ರಶಸ್ತಿ ಪಟ್ಟಿಯಲ್ಲಿ ಗಂಗಾವತಿ ಆಸ್ಪತ್ರೆ

ಗಂಗಾವತಿ: ಸ್ವಚ್ಛತೆ, ಶೌಚಾಲಯ ವ್ಯವಸ್ಥೆ, ರೋಗಿಗಳ ಆರೈಕೆ, ಸಿಬ್ಬಂದಿ ಸ್ಪಂದನೆ, ಕುಡಿಯುವ ನೀರು, ವಿಶ್ರಾಂತಿ ಹೀಗೆ ಹತ್ತಾರು ವಿಭಾಗಗಳಲ್ಲಿ ಅತ್ಯುತ್ತಮ ನಿರ್ವಹಣೆ ತೋರುವ ಸರ್ಕಾರಿ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರ ನೀಡುವ ₹ 50 ಲಕ್ಷ ಮೊತ್ತದ ಕಾಯಕಲ್ಪ ಪ್ರಶಸ್ತಿಯ ಪಟ್ಟಿಯಲ್ಲಿ ಇಲ್ಲಿನ ಉಪವಿಭಾಗ ಆಸ್ಪತ್ರೆ ಸ್ಥಾನ ಪಡೆದಿದೆ.

ಪ್ರತಿ ವರ್ಷ ಕೇಂದ್ರ ಸರ್ಕಾರ ನೀಡುವ ಕಾಯಕಲ್ಪ ವಾರ್ಷಿಕ ಪ್ರಶಸ್ತಿಗೆ ರಾಜ್ಯದಿಂದ ಒಂದು ಜಿಲ್ಲಾಸ್ಪತ್ರೆ, ಒಂದು ತಾಲ್ಲೂಕು ಹಾಗೂ ಒಂದು ಸಮುದಾಯ ಆರೋಗ್ಯ ಕೇಂದ್ರಗಳಿಗೆ ತಲಾ ₹ 50 ಲಕ್ಷ ಮೊತ್ತದ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಎರಡನೇ ಸ್ಥಾನ ಪಡೆಯುವ ಆಸ್ಪತ್ರೆಗಳಿಗೆ ತಲಾ 20 ಲಕ್ಷ ರೂಪಾಯಿ ಮೊತ್ತ ಬಹುಮಾನ ಸಿಗಲಿದೆ.

ಇಲ್ಲಿನ ಸಾರ್ವಜನಿಕ ಉಪ ವಿಭಾಗ ಆಸ್ಪತ್ರೆಯ ಆಂತರಿಕ ಮೌಲ್ಯಮಾಪನ ಮತ್ತು ಆರೋಗ್ಯ ಇಲಾಖೆ ಸಮೀಕ್ಷೆಯಂತೆ ಎರಡು ಹಂತಗಳಲ್ಲೂ ಉತ್ತಮ ಅಂಕ ಪಡೆದಿದ್ದು, ಗುರುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ದಂತ ವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ. ಗುಣಶೀಲಾ ನೇತೃತ್ವದ ತಂಡ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದೆ.

ಆಸ್ಪತ್ರೆಯ ಒಳ, ಹೊರ ರೋಗಿಗಳನ್ನು ಮಾತನಾಡಿಸಿದ ತಂಡ, ಆಸ್ಪತ್ರೆಯಲ್ಲಿನ ಸೌಲಭ್ಯ, ವೈದ್ಯರ ಸ್ಪಂದನೆಯಂತ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿತು. ಬಳಿಕ ಆಸ್ಪತ್ರೆಯ ಸ್ವಚ್ಛತೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ತಂಡ, ರೋಗಿಗಳ ಬಳಕೆ ಇರುವ ಶೌಚಾಲಯ ಅವುಗಳ ಸ್ಥಿತಿಗಳ ಬಗ್ಗೆ ಚಿತ್ರ ಸಮೇತ ದಾಖಲೆ ಸಂಗ್ರಹಿಸಿತು. ಗರ್ಭೀಣಿಯರ ಕೋಣೆ, ಮದರ್ ಕಾಂಗೂರು ಕೇರ್ ಘಟಕಗಳಿಗೆ ಭೇಟಿ ನೀಡಿತು.

ಈ ಸಂದರ್ಭದಲ್ಲಿ ಹಾಜರಿದ್ದ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಈಶ್ವರ ಸವುಡಿ, ಆಸ್ಪತ್ರೆಯಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಅಳವಡಿಸಿರುವ ಹವಾನಿಯಂತ್ರಿತ ವ್ಯವಸ್ಥೆ, ಸಿಬ್ಬಂದಿ ಜಾಗೃತಿಗಾಗಿ ಧ್ವನಿ ವರ್ಧಕ (ಮೈಕ್ ಅನೌನ್ಸ್‌ ಮೆಂಟ್), ಸ್ಪೇಷಲ್ ರೂಂಗಳ ಮಾಹಿತಿ, ಚಿಕಿತ್ಸೆಗಾಗಿ ಈ ಹಿಂದೆ ಆಸ್ಪತ್ರೆಗೆ ಬರುತ್ತಿದ್ದ ರೋಗಿಗಳ ಸಂಖ್ಯೆ, ಆಧುನೀಕರಣವಾದ ಬಳಿಕ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾದ ಸಂಖ್ಯೆಯ ಮಾಹಿತಿ ನೀಡಿದರು.

ಈ ಬಗ್ಗೆ ಮಾತನಾಡಿದ ಡಾ.ಗುಣಶೀಲಾ, ‘ರಾಜ್ಯದ 175 ತಾಲ್ಲೂಕು ಆಸ್ಪತ್ರೆಗಳಲ್ಲಿ ಕೇವಲ 25 ಸರ್ಕಾರಿ ಆಸ್ಪತ್ರೆಗಳು ಅತ್ಯುತ್ತಮ ನಿರ್ವಹಣೆಯ ಮೂಲಕ ಜನಸ್ನೇಹಿಯಾಗಿವೆ. ಈ ಪೈಕಿ ಗಂಗಾವತಿಯ ಉಪ ವಿಭಾಗ ಆಸ್ಪತ್ರೆಯೂ ಪಟ್ಟಿಯ ಮೊದಲ ಐದು ಸ್ಥಾನದಲ್ಲಿದೆ. ಇಲ್ಲಿಗೆ ನಾವು ಭೇಟಿ ನೀಡಿದಾಗ ಸಿಕ್ಕಿರುವ ಅಂಕಗಳು ಗಂಗಾವತಿ ಆಸ್ಪತ್ರೆಯನ್ನು ಪ್ರಶಸ್ತಿಯ ಸುತ್ತಿನ ಮತ್ತಷ್ಟು ಹತ್ತಿರಕ್ಕೆ ಒಯ್ಯುವುದರಲ್ಲಿ ಸಂದೇಹವಿಲ್ಲ’ ಎಂದು ಹೇಳಿದರು.

ತಂಡದ ಸದಸ್ಯ ಹಾಗೂ ಆಹಾರ ಸುರಕ್ಷತಾ ಇಲಾಖೆಯ ಜಂಟಿ ಆಯುಕ್ತ ಡಾ. ಹರ್ಷವರ್ಧನ ಮಾತನಾಡಿ, ‘ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿನ ಕೆಎಂಸಿ (ಮದರ್ ಕಾಂಗೂರು ಕೇರ್) ಹಾಲುಣಿಸುವ ಸ್ಥಳ (ಮದರ್ ಫೀಡಿಂಗ್ ಏರಿಯಾ) ಮೊದಲಾದ ಸೌಲಭ್ಯಗಳು ಕಾರ್ಪೋರೇಟ್‌ ಆಸ್ಪತ್ರೆಗಳನ್ನು ಮೀರಿಸುವಂತಿವೆ. ಜನರನ್ನು ಸಮುದಾಯ ಆಸ್ಪತ್ರೆಗೆ ಸೆಳೆಯುವುದು ಸರ್ಕಾರದ ಆಶಯ ಇಲ್ಲಿ ಈಡೇರುತ್ತಿದೆ’ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿ ಡಾ. ಆಲಕಾನಂದ, ತಾಲ್ಲೂಕು ವೈದ್ಯಾಧಿಕಾರಿ ಗೌರಿಶಂಕರ್, ರಾಷ್ಟ್ರೀಯ ಆಯುಷ್ ಸಮಿತಿ ಯೋಜನಾ ನಿರ್ದೇಶಕ ಡಾ. ಅನಂತ ದೇಸಾಯಿ ಇದ್ದರು.

* * 

ಚಿಕಿತ್ಸೆಗೆ ನೋವಿನೊಂದಿಗೆ ದಾಖಲಾಗುವ ರೋಗಿಗಳು ನಗುಮುಖದಿಂದ ಹೊರಗೆ ಹೋಗುವಾಗ ಸಿಗುವ ಸಂತಸವೇ ನಮಗೆ ನಿತ್ಯದ ಪ್ರಶಸ್ತಿ.

ಡಾ. ಈಶ್ವರ ಸವುಡಿ ಆಡಳಿತ ವೈದ್ಯಾಧಿಕಾರಿ, ಉಪವಿಭಾಗ ಆಸ್ಪತ್ರೆ ಗಂಗಾವತಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry