ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಖಂಡಿ ಬಂದ್‌ ಸಂಪೂರ್ಣ ಯಶಸ್ವಿ

Last Updated 29 ಡಿಸೆಂಬರ್ 2017, 8:13 IST
ಅಕ್ಷರ ಗಾತ್ರ

ಜಮಖಂಡಿ: ವಿಜಯಪುರದ ದಲಿತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಘಟನೆಯನ್ನು ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಗುರುವಾರ ನೀಡಿದ್ದ ಜಮಖಂಡಿ ಬಂದ್‌ ಕರೆ ಸಂಪೂರ್ಣ ಯಶಸ್ವಿಯಾಯಿತು.

ಅಂಗಡಿ ಮುಂಗಟ್ಟು, ವ್ಯಾಪಾರ ಮಳಿಗೆಗಳು, ಹೋಟೆಲ್‌, ಶಾಲಾ–ಕಾಲೇಜು ಬಂದ್‌ ಆಗಿದ್ದವು. ಬೀದಿಬದಿ ವ್ಯಾಪಾರಸ್ಥರು ಕೂಡ ಇರಲಿಲ್ಲ. ಆಟೋರಿಕ್ಷಾಗಳು ಕೂಡ ರಸ್ತೆಗೆ ಇಳಿದಿರಲಿಲ್ಲ. ಮಧ್ಯಾಹ್ನ 3 ಗಂಟೆ ವರೆಗೆ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ನಗರದ ಅಲ್ಲಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆಯನ್ನು ಉಗ್ರಗೊಳಿಸಲಾಗಿತ್ತು.

ಬ್ಯಾನರ್‌, ಭಿತ್ತಿಫಲಕ ಹಿಡಿದುಕೊಂಡು ನಗರದ ಎ.ಜಿ. ದೇಸಾಯಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದ ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಸಂಚರಿಸಿ ಅಂಬೇಡ್ಕರ್‌ ವೃತ್ತದಲ್ಲಿ ಡಾ.ಅಂಬೇಡ್ಕರ್‌ ಪುತ್ಥಳಿಗೆ ಹಾಗೂ ಬಸವೇಶ್ವರ ವೃತ್ತದಲ್ಲಿ ಅಶ್ವಾರೂಢ ಬಸವಣ್ಣನ ಪುತ್ಥಳಿಗೆ ಗೌರವ ಸಲ್ಲಿಸಿದರು.

ನಂತರ ಅಲ್ಲಿಂದ ಮರಳಿ ಪ್ರಧಾನ ಅಂಚೆ ಕಚೇರಿ, ಸುವರ್ಣ ಚಿತ್ರಮಂದಿರ ಮಾರ್ಗವಾಗಿ ಸಾಗಿಬಂದು ಜಿ.ಜಿ. ಹೈಸ್ಕೂಲ್‌ ಎದುರು ಪ್ರಮುಖ ರಸ್ತೆಯ ಮೇಲೆ ನಿರ್ಮಿಸಿದ್ದ ವೇದಿಕೆಯಲ್ಲಿ ಬಹಿರಂಗ ಸಭೆ ಜರುಗಿಸಿದರು.

ವಿಜಯಪುರದಲ್ಲಿ ನಡೆದ ದುಷ್ಕೃತ್ಯದಿಂದ ಬುದ್ಧ, ಬಸವ, ಅಂಬೇಡ್ಕರ್‌ರವರ ಅನುಯಾಯಿಗಳು, ಪ್ರಜ್ಞಾವಂತರು, ಪ್ರಗತಿಪರ ಚಿಂತಕರು, ಸಾಹಿತಿಗಳು, ಬುದ್ಧಿಜೀವಿಗಳು ಹಾಗೂ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಕಿಡಿ ಕಾರಿದರು.

ದುಷ್ಕೃತ್ಯ ಎಸಗಿದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು. ಆರೋಪಿಗಳಿಗೆ ರಕ್ಷಣೆ ನೀಡಲು ಮುಂದಾಗುವ ವ್ಯಕ್ತಿಗಳನ್ನು ಗಡಿಪಾರು ಮಾಡಬೇಕು. ಪ್ರಕರಣದ ವಿಚಾರಣೆಗಾಗಿ ವಿಶೇಷ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ತಿಂಗಳೊಳಗಾಗಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಪಟ್ಟಿ ಸಲ್ಲಿಸಬೇಕು. ವಕಾಲತ್ತು ವಹಿಸಲು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಿ ಆರೋಪಿಗಳಿಗೆ ಜಾಮೀನು ಸಿಗದಂತೆ ಎಚ್ಚರ ವಹಿಸಬೇಕು.

ಈ ದುಷ್ಕೃತ್ಯಕ್ಕೆ ಸಹಕರಿಸಿದ ಮಹಿಳೆಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೊಂದ ಕುಟುಂಬಕ್ಕೆ ₹ 25 ಲಕ್ಷ ಪರಿಹಾರಧನ ನೀಡಬೇಕು. ನೊಂದ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು. ಸಂತ್ರಸ್ತ ಕುಟುಂಬಕ್ಕೆ 10 ಎಕರೆ ಜಮೀನು ನೀಡಬೇಕು ಎಂದು ಒತ್ತಾಯಿಸಿದರು.

ರವಿ ಬಬಲೇಶ್ವರ, ತೌಫೀಕ ಪಾರ್ಥನಳ್ಳಿ, ಯಮನಪ್ಪ ಗುಣದಾಳ, ಶಿವಲಿಂಗ ಗೊಂಬಿಗುಡ್ಡ, ರಫೀಕ ಬಾರಿಗಡ್ಡಿ, ಶಾಹಿರಾಜ ಶಿಂಧೆ, ಸಂಗಮೇಶ ಕಾಂಬಳೆ, ಭೀಮಸಿ ದೊಡಮನಿ, ಚಿದಾನಂದ ಜನವಾಡ, ತಮ್ಮಣ್ಣ ಮಾದರ, ರವಿ ದೊಡಮನಿ, ಕುಶಾಲ ವಾಘ್ಮೋರೆ, ಶರಣಕುಮಾರ ಕಂಬಾಗಿ, ಶಶಿಧರ ಮೀಸಿ, ಗೋಪಿನಾಥ ಮೀಸಿ, ಸುರೇಶ ನಡುವಿನಮನಿ, ದಿಲೀಪ ದಾಶ್ಯಾಳ, ಅಶೋಕ ಮೀಸಿ, ಸಂಜೀವ ಐಹೊಳಿ, ಸಂತೋಷ ಸುತಾರ, ರಾಜು ಪೋತದಾರ, ಶಂಕರ ಪೂಜಾರಿ, ಯಾಸೀನ ಲೋದಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಮನವಿ: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಶೀಲ್ದಾರ್‌ ಪ್ರಶಾಂತ ಚನಗೊಂಡ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆ ಸ್ಥಳೀಯ ವಕೀಲರ ಸಂಘ ಬೆಂಬಲ ನೀಡಿದ್ದರ ಹಿನ್ನೆಲೆಯಲ್ಲಿ ಗುರುವಾರದ ಕೋರ್ಟ್‌ ಕಲಾಪಗಳಿಂದ ವಕೀಲರು ದೂರ ಉಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT