7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಹಳೆಯದನ್ನು ಸುಟ್ಟು, ಹೊಸ ಹುಟ್ಟಿಗೆ ಸಿದ್ಧತೆ

Published:
Updated:

ಬೆಳಗಾವಿ: ಕುಂದಾನಗರಿ ಬೆಳಗಾವಿಯ ಜನರು ಹೊಸ ವರ್ಷವನ್ನು ವಿನೂತನವಾಗಿ ಬರಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಗೋವಾ ಹಾಗೂ ಮಹಾರಾಷ್ಟ್ರದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಇಲ್ಲಿ, ವಿವಿಧ ಸಂಸ್ಕೃತಿಗಳು ಮೇಳೈಸಿವೆ. ಬೇರೆ ಜಿಲ್ಲೆಗಳವರು, ಹೊರರಾಜ್ಯಗಳವರು ಮಾತ್ರವಲ್ಲದೆ ವಿದೇಶಗಳಿಂದ ಬಂದವರೂ ಇಲ್ಲಿದ್ದಾರೆ. ಕಾಲೇಜುಗಳಲ್ಲಿ ವ್ಯಾಸಂಗಕ್ಕಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇಲ್ಲಿಗೆ ಬಂದಿದ್ದಾರೆ. ಎಲ್ಲರ ಸಂಸ್ಕೃತಿಯೂ ಸೇರಿ ವಿಶೇಷ ಮತ್ತು ವಿಭಿನ್ನವಾದ ಸಂಸ್ಕೃತಿಯ ಆಚರಣೆಗಳನ್ನು ಇಲ್ಲಿ ಕಾಣಬಹುದು. ಹೊಸ ವರ್ಷಾಚರಣೆ ಮೇಲೂ ಬೇರೆ ಪ್ರದೇಶದ ಸಂಸ್ಕೃತಿಗಳು ಪ್ರಭಾವ ಬೀರುತ್ತಿವೆ. ಹೀಗಾಗಿ, ಇಲ್ಲಿಯೂ ಸಂಭ್ರಮ ಕಂಡುಬರುತ್ತದೆ.

2017 ನ್ನು ಕಳೆಯಲು ಎರಡೇ ದಿನಗಳು ಬಾಕಿ ಉಳಿದಿದ್ದು, ಈಗಾಗಲೇ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ.

ಪ್ರಮುಖವಾಗಿ, ಕ್ಯಾಂಪ್ ಪ್ರದೇಶದಲ್ಲಿ ನಿರ್ಮಾಣಗೊಳ್ಳುವ ಓಲ್ಡ್‌ಮ್ಯಾನ್‌ಗಳು ಹೆಚ್ಚಾಗಿ ಆಕರ್ಷಿಸುತ್ತವೆ. ಅಲ್ಲಿ ಬ್ರಿಟಿಷರ ಕಾಲದಿಂದಲೂ ಈ ಆಚರಣೆ ನಡೆದುಕೊಂಡು ಬಂದಿದೆ. ವಿವಿಧ ರಸ್ತೆಗಳಲ್ಲಿ 15 ಅಡಿಗಳಿಂದ 25 ಅಡಿ ಎತ್ತರದವರೆಗೆ ಹಳೆ ಮನುಷ್ಯನ್ನು ಹೋಲುವ ಗೊಂಬೆಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಒಣ ಹುಲ್ಲು, ಬಿದಿರಿನ ಬೊಂಬು, ಹಳೆ ಪೇಪರ್, ಕಲರ್‌ ಪೇಪರ್, ಹಲವು ರೀತಿಯ ಬಣ್ಣಗಳಿಂದ ಈ ಓಲ್ಡ್‌ಮ್ಯಾನ್ ಸಿದ್ಧಪಡಿಸಲಾಗುತ್ತದೆ.

ಏನಿದು ಓಲ್ಡ್‌ಮ್ಯಾನ್‌?: ನಗರದ ಬಹುತೇಕ ಬಡಾವಣೆಗಳ ಗಲ್ಲಿಗಳಲ್ಲಿ ‘ಓಲ್ಡ್‌ ಮ್ಯಾನ್‌’ ಪ್ರತಿಕೃತಿಯನ್ನು ದಹಿಸುವುದು ಇಲ್ಲಿನ ಸಂಸ್ಕೃತಿಯಂತೆಯೇ ಆಗಿ ಹೋಗಿದೆ. ಹಿಂದೆ ಕೆಲವೇ ಕಡೆಗಳಲ್ಲಿ ನಡೆಯುತ್ತಿದ್ದ ಈ ಆಚರಣೆ ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾಗಿ ಹರಡಿದೆ. ವಿಭಿನ್ನವಾದ ಓಲ್ಡ್‌ಮ್ಯಾನ್‌ಗಳ ಪ್ರತಿಕೃತಿಗಳನ್ನು ಸಿದ್ಧಪಡಿಸಿ ಅದನ್ನು ಸುಡಲಾಗುತ್ತದೆ. ‘ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ಹೊಸ ಆಶಯಗಳೊಂದಿಗೆ ಮುಂದುವರಿಯಬೇಕು. ಕಹಿ ಘಟನೆಗಳನ್ನು ಮರೆತು ಮುನ್ನುಗ್ಗಬೇಕು. ಹಳೆಯದನ್ನು ಸುಟ್ಟು, ಹೊಸ ಹುಟ್ಟಿಗೆ ಮುನ್ನುಡಿ ಬರೆಯಬೇಕು’ ಎನ್ನುವುದು ಈ ಆಚರಣೆಯ ಉದ್ದೇಶವಾಗಿದೆ.

ಆಯಾ ಗಲ್ಲಿಯ ಅಥವಾ ಸ್ಥಳೀಯ ಮಕ್ಕಳು, ಯುವಕರು ಕೂಡಿಕೊಂಡು ಓಲ್ಡ್‌ಮ್ಯಾನ್‌ ಪ್ರತಿಕೃತಿಗಳನ್ನು ಸಿದ್ಧಪಡಿಸುತ್ತಾರೆ. ಇದಕ್ಕಾಗಿ ಸ್ಥಳೀಯರಿಂದ ಹಣವನ್ನು ಸಂಗ್ರಹಿಸುತ್ತಾರೆ. ಈ ಬಾರಿ ಕ್ಯಾಂಪ್‌ನ ಪೊಲೀಸ್‌ ಕ್ವಾರ್ಟಸ್‌ನಲ್ಲಿ ಓಲ್ಡ್‌ಮ್ಯಾನ್ ಅನ್ನು ‘ಬಾಹುಬಲಿ’ ಮಾದರಿಯಲ್ಲಿ ಸಿದ್ಧಪಡಿಸಲಾಗಿದೆ. ಪ್ರತಿಕೃತಿಗಳನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಸಿದ್ಧಪಡಿಸುವ ಸೃಜನಶೀಲತೆಯನ್ನೂ ಕೆಲವೆಡೆ ಸ್ಥಳೀಯರು ಪ್ರದರ್ಶಿಸುತ್ತಾರೆ. ಹೋದ ವರ್ಷ ಕ್ಯಾಂಪ್‌ ಪ್ರದೇಶದಲ್ಲಿ ‘ಕಪ್ಪು ಹಣ ಹಿಡಿದಿದ್ದ ಓಲ್ಡ್‌ಮ್ಯಾನ್‌’ ದಹಿಸಿ ಅಲ್ಲಿನವರು ಸಂಭ್ರಮಿಸಿದ್ದರು.

ಕಹಿ ನೆನಪುಗಳನ್ನು ಸುಡಲು: ‘ಹಿಂದಿನ ವರ್ಷದ ಕಹಿ ನೆನಪುಗಳನ್ನು ಓಲ್ಡ್‌ಮ್ಯಾನ್‌ ರೂಪದಲ್ಲಿ ಸುಟ್ಟು ಹೊಸ ವರ್ಷವನ್ನು ಇಲ್ಲಿನ ಜನರು ವಿಶಿಷ್ಟ ಮತ್ತು ವಿಭಿನ್ನ ರೀತಿಯಲ್ಲಿ ಸ್ವಾಗತಿಸಿ, ಸಂಭ್ರಮಿಸುತ್ತಾರೆ. 31ರ ಸಂಜೆಯಿಂದಲೇ ಆರಂಭಗೊಳ್ಳುವ ಹೊಸ ವರ್ಷಾಚರಣೆಯ ಚಟುವಟಿಕೆಗಳು ಮಧ್ಯರಾತ್ರಿ ಹಾಗೂ ಕೆಲವೆಡೆ ಬೆಳಗಿನ ಜಾವದವರೆಗೂ ಮುಂದುವರಿಯುತ್ತವೆ. ಓಲ್ಡ್‌ಮ್ಯಾನ್‌ ದಹಿಸುವ ಕಾರ್ಯಕ್ರಮದಲ್ಲಿ ಹಿರಿಯರು, ಕಿರಿಯರೆನ್ನದೇ ಎಲ್ಲರೂ ಸಂತಸದಲ್ಲಿ ಭಾಗಿಯಾಗುತ್ತಾರೆ’ ಎನ್ನುತ್ತಾರೆ ತಿಲಕವಾಡಿಯ ರಾಜು.

ಹೋಟೆಲ್‌, ಬಾರ್‌–ರೆಸ್ಟೋರೆಂಟ್‌, ರಿಕ್ರಿಯೇಷನ್‌ ಕ್ಲಬ್‌ಗಳು, ರೆಸಾರ್ಟ್‌ಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿರುತ್ತವೆ. ಅಲ್ಲಿಗೆ ಹೋಗಿ ಸಂಭ್ರಮಾಚರಣೆ ಮಾಡುವವರೂ ಉಂಟು. ಹೀಗಾಗಿ, ಇಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ನಿಗದಿಯಾದ ಹಣ ಪಾವತಿಸಿ ಟೇಬಲ್‌ ಕಾಯ್ದಿರಿಸಿದವರಿಗೆ ಮಾತ್ರ ಪ್ರವೇಶಾವಕಾಶ ಇರುತ್ತದೆ. ಕ್ಲಬ್‌ಗಳಲ್ಲಿ ಅಲ್ಲಿನ ಸದಸ್ಯರಿಗಷ್ಟೇ ಅವಕಾಶ ಇರುತ್ತದೆ. ದೊಡ್ಡ ಹೋಟೆಲ್‌, ರೆಸಾರ್ಟ್‌ಗಳಲ್ಲಿ ಮುಂಚಿತವಾಗಿ ಟೇಬಲ್‌ ಬುಕ್‌ ಮಾಡಬೇಕು. ಹೀಗೆ, ಹೋಟೆಲ್‌ಗಳಲ್ಲಿ ಹೋಗಿ ಆಚರಣೆ ಮಾಡುವ ಸಂಸ್ಕೃತಿಯೂ ಇಲ್ಲಿ ಬೆಳೆದಿದೆ. ಈಗಾಗಲೇ ಟೇಬಲ್‌ ಕಾಯ್ದಿರಿಸುವ ಪ್ರಕ್ರಿಯೆ ಆರಂಭವಾಗಿದೆ.

ಸಂಗೀತ, ಮನರಂಜನೆ: ಬೆಳಗಾವಿ ಕ್ಲಬ್‌ನಲ್ಲಿ ಸಂಗೀತ, ರಸಮಂಜರಿ ಹಾಗೂ ಲೈವ್‌ ಡಿಜೆ ಮ್ಯೂಸಿಕ್‌ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ಡಿಜೆಗಳನ್ನು  ಆಹ್ವಾನಿಸಲಾಗಿದೆ. ಲೇಸರ್‌ ಷೋ, ಮನರಂಜನಾ ಕಾರ್ಯಕ್ರಮಗಳು ಇರುತ್ತವೆ. ಅಂತೆಯೇ, ಇಫಾ, ಮೇರಿಯೆಟ್‌, ಸಂಕಂ, ಆದರ್ಶ ಪ್ಯಾಲೇಸ್‌ ಸೇರಿದಂತೆ ಹಲವು ಹೋಟೆಲ್‌ಗಳಲ್ಲೂ ವಿಶೇಷ ಕಾರ್ಯಕ್ರಮಗಳನ್ನು ಸಿದ್ಧಪಡಿಸಲಾಗಿದೆ. ಕೇಕ್‌ ಕತ್ತರಿಸುವ ಮೂಲಕ ನವವಸಂತವನ್ನು ಬರಮಾಡಿಕೊಳ್ಳುವುದೂ ಉಂಟು. ಹೀಗಾಗಿ, ಬೇಕರಿಗಳಲ್ಲಿ ಕೇಕ್‌ಗಳಿಗೆ ಬೇಡಿಕೆ ಕಂಡುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry