7

ಅಬ್ದುಲ್‌ ಖದೀರ್‌ಗೆ ಜೆಡಿಎಸ್ ಗಾಳ!

Published:
Updated:

ಬೀದರ್: ಜೆಡಿಎಸ್ ಮುಖಂಡರು ವಿಧಾನಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಶೋಧ ಕಾರ್ಯ ಆರಂಭಿಸಿದ್ದು, ಬೀದರ್‌ ಕ್ಷೇತ್ರದಲ್ಲಿ ಅಬ್ದುಲ್‌ ಖದೀರ್‌ ಹಾಗೂ ಭಾಲ್ಕಿ ಕ್ಷೇತ್ರದಲ್ಲಿ ಡಿ.ಕೆ.ಸಿದ್ರಾಮ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿಸುವ ಪ್ರಯತ್ನ ನಡೆಸಿದ್ದಾರೆ.

ಒಂದು ವಾರದ ಹಿಂದೆ ಜೆಡಿಎಸ್‌ನ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಅವರು ಶಾಹಿನ್‌ ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಅಬ್ದುಲ್‌ ಖದೀರ್‌ ಅವರನ್ನು ಭೇಟಿ ಮಾಡಿ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿರುವ ಸುದ್ದಿ ನಗರದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಹೊಸ ಬೆಳವಣಿಗೆಯಿಂದಾಗಿ ಕಾಂಗ್ರೆಸ್‌ನಲ್ಲಿ ತಳಮಳ ಶುರುವಾಗಿದೆ. ಬಿಜೆಪಿ ಕಾರ್ಯಕರ್ತರಲ್ಲೂ ಚರ್ಚೆ ನಡೆಯುತ್ತಿದೆ.

‘ಅಬ್ದುಲ್‌ ಖದೀರ್‌ ಬಳಿಗೆ ಹೋಗಿದ್ದು ನಿಜ. ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿ ಅವರು ಒಪ್ಪಿಗೆಯನ್ನೂ ಸೂಚಿಸಿಲ್ಲ, ನಿರಾಕರಿ ಸಿಯೂ ಇಲ್ಲ. ವಿಚಾರ ಮಾಡಲು ಒಂದಿಷ್ಟು ಸಮಯಾವಕಾಶ ಕೊಡುವಂತೆ ಮನವಿ ಮಾಡಿದ್ದಾರೆ’ ಎಂದು ಬಂಡೆಪ್ಪ ಕಾಶೆಂಪುರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದಿನ ಚುನಾವಣೆಯಲ್ಲಿ ಖದೀರ್‌ ಸಹೋದರ ಅಬ್ದುಲ್‌ ಮನ್ನಾನ್‌ ಸೇಠ್ ಬೀದರ್‌ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಪಿ.ಜಿ.ಆರ್‌. ಸಿಂಧ್ಯ  ಅವರೊಂದಿಗೆ ಅಬ್ದುಲ್‌ ಖದೀರ್‌ ಉತ್ತಮ ಸಂಬಂಧ ಹೊಂದಿದ್ದಾರೆ. ಒಳ್ಳೆಯ ವ್ಯಕ್ತಿಗಳು ರಾಜಕೀಯಕ್ಕೆ ಬರಬೇಕು ಎನ್ನುವುದು ನನ್ನ ಆಶಯವಾಗಿದೆ’ ಎಂದು ಹೇಳಿದರು.

‘ಭಾಲ್ಕಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಲು ಡಿ.ಕೆ.ಸಿದ್ರಾಮ ಆಸಕ್ತಿ ತೋರುತ್ತಿದ್ದಾರೆ. ಔರಾದ್‌ ಕ್ಷೇತ್ರದಲ್ಲಿ ಯುವ ಮುಖಂಡ ವಿಶ್ವನಾಥ ದೀನೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಬಸವಕಲ್ಯಾಣದಲ್ಲಿ ಈಗಾಗಲೇ ನಮ್ಮ ಪಕ್ಷದವರೇ ಶಾಸಕರಾಗಿದ್ದಾರೆ. ಎರಡನೇ ಹಂತದ ನಾಯಕರು ಜಿಲ್ಲೆಯಲ್ಲಿ ಬೆಳೆಯಬೇಕು ಎನ್ನುವುದು ನನ್ನ ಉದ್ದೇಶ’ ಎಂದು ತಿಳಿಸಿದರು.

ಅಬ್ದುಲ್ ಖದೀರ್‌ ಜಿಲ್ಲೆಯಲ್ಲಿ ಶಿಕ್ಷಣ ತಜ್ಞರೆಂದೇ ಗುರುತಿಸಿಕೊಂಡಿದ್ದಾರೆ. ಜಾತ್ಯತೀತ ವಿಚಾರಗಳಲ್ಲಿ ನಂಬಿಕೆ ಉಳ್ಳವರಾಗಿದ್ದಾರೆ. ವಿವಿಧ ಪಕ್ಷಗಳ ರಾಜಕಾರಣಿಗಳೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದಾರೆ. ಕಾಶೆಂಪುರ ಅವರನ್ನು ಭೇಟಿ ಮಾಡಿರುವುದು ಬೀದರ್ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಲೆಕ್ಕಾಚಾರಗಳಿಗೆ ಎಡೆಮಾಡಿಕೊಟ್ಟಿದೆ. ಜೆಡಿಎಸ್‌ ಪರ ಒಲವು ಹೊಂದಿದ್ದಾರೆಯೇ ಅಥವಾ ಇಲ್ಲವೇ ಎನ್ನುವನಿಲುವಿನ ಬಗೆಗೆ ವಿಚಾರಿಸಲು ಅಬ್ದುಲ್‌ ಖದೀರ್‌ ಅವರು ಮೊಬೈಲ್‌ ಸಂಪರ್ಕಕ್ಕೆ ದೊರೆಯಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry