7

ಎಲ್ಲೆಂದರಲ್ಲಿ ನಿಲ್ಲುತ್ತಿರುವ ಬಸ್‌ಗಳು

Published:
Updated:
ಎಲ್ಲೆಂದರಲ್ಲಿ ನಿಲ್ಲುತ್ತಿರುವ ಬಸ್‌ಗಳು

ಅವಿನ್‌ ಪ್ರಕಾಶ್‌

ಕೊಳ್ಳೇಗಾಲ: ನಗರದ ಬಹುನಿರೀಕ್ಷಿತ ಹೈಟೆಕ್‌ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿದೆ. ಇಲ್ಲಿನ ಜನರ ದಶಕಗಳ ಆಸೆ ಕೊನೆಗೂ ಈಡೇರು ತ್ತಿದೆ. ಆದರೆ,  ಅವೈಜ್ಞಾನಿಕ ಯೋಜನೆಯಿಂದಾಗಿ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ದಿನನಿತ್ಯ ಬಸ್‌ಗಾಗಿ ಪರದಾಡುವಂತಾಗಿದೆ.

ಹೈಟೆಕ್ ಬಸ್‌ನಿಲ್ದಾಣ ಕಾಮಗಾರಿಯ ನಕ್ಷೆ ಮತ್ತು ನಿಲ್ದಾಣವನ್ನು ಈಗಾಗಲೇ ಗುತ್ತಿಗೆದಾರರಿಗೆ ಹಸ್ತಾಂತರಿಸಲಾಗಿದೆ. ಜ. 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸ್ ನಿಲ್ದಾಣ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ನಗರದಲ್ಲಿ ಈಗಿರುವ ಬಸ್‌ ನಿಲ್ದಾಣ ನಿರ್ಮಾಣ ಕಾಮಗಾರಿಗೆ 1994ರಲ್ಲಿ ಶಾಸಕ ಎಸ್. ಜಯಣ್ಣ ಚಾಲನೆ ನೀಡಿದ್ದರು. ಆದರೆ, ವಿವಿಧ ಕಾರಣಗಳಿಂದ 3 ವರ್ಷಗಳ ಕಾಲ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಬಳಿಕ 1997ರಲ್ಲಿ ಪ್ರಾರಂಭವಾದ ಕಾಮಗಾರಿ 1999ರಲ್ಲಿ ಪೂರ್ಣಗೊಂಡಿತು. ಶೆಲ್ಟರ್ ನಿಲ್ದಾಣ, ಸಾರ್ವಜನಿಕ ಶೌಚಾಲಯ ಹಾಗೂ ಶೌಚಾಲಯ ಹೊಂದಿದ್ದ ಬಸ್‌ನಿಲ್ದಾಣವನ್ನು ಅಂದಿನ ಶಾಸಕ ಜಿ.ಎನ್. ನಂಜುಂಡಸ್ವಾಮಿ ಉದ್ಘಾಟಿಸಿದ್ದರು.

ನಗರ ಮತ್ತು ಗ್ರಾಮಾಂತರ ಪ್ರದೇಶಗಳು ಬೆಳೆದಂತೆ ಬಸ್‌ಗಳ ಸಂಖ್ಯೆಯೂ ಹೆಚ್ಚಳವಾಯಿತು. ಕಾಡಂಚಿನ ಗ್ರಾಮಗಳಿಗೆ ಮತ್ತು ಪ್ರಮುಖ ಪ್ರದೇಶಗಳಿಗೆ ಹೆಚ್ಚುವರಿ ಬಸ್‌ ಸೌಲಭ್ಯ ಒದಗಿಸುವಂತೆ ಬೇಡಿಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಪ್ರಸ್ತುತ ಇರುವ ನಿಲ್ದಾಣವು ಬಸ್‌ ನಿಲುಗಡೆಗೆ ಕಿರಿದಾಗಿದೆ. ಅಲ್ಲದೆ, ನಿರ್ವಹಣೆ ಇಲ್ಲದೆ ಹದಗೆಟ್ಟಿರುವ ನಿಲ್ದಾಣದ ವ್ಯವಸ್ಥೆ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಹಳೆಯ ಬಸ್‌ ನಿಲ್ದಾಣ ನಿರ್ಮಾಣವಾಗಿ 17 ವರ್ಷಗಳ ಬಳಿಕ ನಗರಕ್ಕೆ ಹೈಟೆಕ್ ಬಸ್ ನಿಲ್ದಾಣ ಭಾಗ್ಯ ಒದಗಿ ಬಂದಿದೆ. ಆದರೆ, ಕಾಮಗಾರಿಯಿಂದಾಗಿ ತೆರವಾದ ನಿಲ್ದಾಣಕ್ಕೆ ಪರ್ಯಾಯ ವ್ಯವಸ್ಥೆ ಇನ್ನೂ ಕಲ್ಪಿಸಿಲ್ಲ. ಚಾಲಕರು ರಸ್ತೆಯಲ್ಲಿಯೇ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತಾತ್ಕಾಲಿಕ ನಿಲ್ದಾಣಗಳ ನಿರ್ಮಾಣಕ್ಕಾಗಿ ಶಾಸಕರು ಸಾಕಷ್ಟು ಭಾರಿ ಸ್ಥಳಗಳ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಮಲೆಮಹದೇಶ್ವರ ಬೆಟ್ಟದ ಮಾರ್ಗವಾಗಿ ತೆರಳುವ ಬಸ್‌ಗಳಿಗೆ ನ್ಯಾಯಾಲಯದ ಮುಂಭಾಗದ ಸ್ಥಳ, ಬೆಂಗಳೂರು ಕಡೆಗೆ ತೆರಳುವ ಬಸ್‌ಗಳಿಗೆ ಬಸವೇಶ್ವರ ಮಿಲ್ ಸಮೀಪದ ಸ್ಥಳ ಹಾಗೂ ಮೈಸೂರು ಕಡೆ ಹೋಗುವ ಬಸ್‌ಗಳಿಗೆ ಮುಡಿಗುಂಡ ಬಳಿ ಸ್ಥಳವನ್ನು ಗುರುತಿಸಲಾಗಿದೆ.

ಆದರೆ, ನಿಗದಿಪಡಿಸಿರುವ ಸ್ಥಳಗಳಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗದಿರುವುದು ಇಷ್ಟೆಲ್ಲ ಅವಾಂತರಗಳಿಗೆ ಕಾರಣ. ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಬಸ್‌ಗಾಗಿ ಕಾದು ದಿನನಿತ್ಯ ಹೈರಾಣಾಗುತ್ತಿದ್ದಾರೆ. ಎಲ್ಲೆಂದರಲ್ಲಿ ನಿಲ್ಲುವ ಬಸ್‌ಗಳು ಯಾವ ಮಾರ್ಗಗಳಿಗೆ ತೆರಳುತ್ತವೆ ಎಂಬುದರ ಬಗ್ಗೆ ಮಾಹಿತಿಯಿಲ್ಲದೆ ಪ್ರಯಾಣಿಕರು ಪೇಚಿಗೆ ಸಿಲುಕುವಂತಾಗಿದೆ.

‘ರಸ್ತೆ ಅಭಿವೃದ್ಧಿ ಕಾಮಗಾರಿ ಕೂಡ ನಡೆಯುತ್ತಿದೆ. ಇತ್ತ ನಿಲ್ದಾಣದ ಒಳಗೂ ಹೋಗುವಂತಿಲ್ಲ. ರಸ್ತೆಯಲ್ಲಿಯೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಬೇಕಿದೆ. ಇದರಿಂದ ಸಂಚಾರ ದಟ್ಟಣೆಯೂ ಹೆಚ್ಚಾಗುತ್ತಿದೆ’ ಎಂದು ಬಸ್ ಚಾಲಕರೊಬ್ಬರು ಸಮಸ್ಯೆ ಹೇಳಿಕೊಂಡರು.

‘ಸದ್ಯದಲ್ಲಿಯೇ ಚಿಕ್ಕಲ್ಲೂರು ಜಾತ್ರೆ ಪ್ರಾರಂಭವಾಗುತ್ತಿದೆ. ಜಾತ್ರೆಗೆ ಇದೇ ಮಾರ್ಗವಾಗಿ ತೆರಳಬೇಕು. ಲಕ್ಷಾಂತರ ಸಂಖ್ಯೆಯಲ್ಲಿ ಪ್ರಯಾಣಿಕರು ಬರುವುದರಿಂದ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶೀಘ್ರವೇ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿ ಅನುಕೂಲ ಕಲ್ಪಿಸಿಕೊಡಬೇಕು’ ಎನ್ನುವುದು ನಾಗರಿಕರ ಒತ್ತಾಯ.

* * 

ಶೀಘ್ರದಲ್ಲೇ ತಾತ್ಕಾಲಿಕ ಬಸ್‌ನಿಲ್ದಾಣ ನಿರ್ಮಿಸಲಾಗುವುದು ಹೈಟೆಕ್‌ ಬಸ್‌ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಸಹಕರಿಸಬೇಕು

ಶಾಂತರಾಜು ನಗರಸಭೆ ಅಧ್ಯಕ್ಷ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry