7

‘ಸಂವಿಧಾನ ಬದಲಾಯಿಸುವ ಅಧಿಕಾರ ಯಾರಿಗೂ ಇಲ್ಲ’

Published:
Updated:
‘ಸಂವಿಧಾನ ಬದಲಾಯಿಸುವ ಅಧಿಕಾರ ಯಾರಿಗೂ ಇಲ್ಲ’

ಚಿಕ್ಕಮಗಳೂರು: ‘ಸಂವಿಧಾನ ಬದಲಾಯಿಸುತ್ತೇವೆ’ ಎಂದು ಕೇಂದ್ರ ಸಚಿವರೊಬ್ಬರು ಹೇಳಿದ್ದಾರೆ. ಅವರಿಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ. ಸಂವಿಧಾನ ಬದಲಾವಣೆಗೆ ಯಾರಿಗೂ ಅಧಿಕಾರ ಇಲ್ಲ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ಹೇಳಿದರು.

ಕರ್ನಾಟಕ ಕೋಮು ಸೌಹಾರ್ದ ವೇದಿಕೆಗೆ 15 ವರ್ಷ ಸಂದ ನಿಮಿತ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಿದ ‘ಸೌಹಾರ್ದ ಮಂಟಪ: ಹಿಂದಣ ನೋಟ... ಮುಂದಣ ಹೆಜ್ಜೆ...’ ರಾಷ್ಟ್ರೀಯ ಸಮಾವೇಶದಲ್ಲಿ ಸಮ್ಮಿಲನ– ನೆನಪು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಅಂಬೇಡ್ಕರ್‌ ನೇತೃತ್ವದಲ್ಲಿ ರಚಿಸಿದ ಈ ಸಂವಿಧಾನದಲ್ಲಿ ದಲಿತರು, ಅಲ್ಪಸಂಖ್ಯಾತರು, ರೈತರು ಸಹಿತ ಎಲ್ಲ ಸಮುದಾಯದವರ ಸಹಬಾಳ್ವೆ, ಏಳಿಗೆಯ ಕನಸು ಇದೆ. ಸಂವಿಧಾನ ಬದಲಿಸಲು ಜನ ಯಾರಿಗೂ ಅಧಿಕಾರ ನೀಡಿಲ್ಲ’ ಎಂದು ಹೇಳಿದರು.

‘ಗುಜರಾತ್‌ನಲ್ಲಿ ಹಿಂದುತ್ವದ ಹೆಸರಿನಲ್ಲಿ ಸಾಮಾಜಿಕ, ಸಾಂಸ್ಕೃತಿಕ ದಬ್ಬಾಳಿಕೆ 22 ವರ್ಷಗಳಿಂದ ನಡೆದಿದೆ. ಈಗ ಅದಕ್ಕೆ ಕಡಿವಾಣ ಬೀಳುತ್ತಿದೆ. ಅಲ್ಲಿ ಹಿಂದುತ್ವ ಅಲೆ ಸಡಿಲಗೊಂಡಿದೆ. ಅಲ್ಲಿನ ಚುನಾವಣೆಯಲ್ಲಿ ಜಿಗ್ನೇಶ್ ಮೇವಾನಿ ಗೆಲುವು ಇದಕ್ಕೆ ಸಾಕ್ಷಿ’ ಎಂದರು.

‘ಚುನಾವಣೆ ಅಂಗವಾಗಿ ‘ಚಲೋ ಗುಜರಾತ್‌’ ಚಳವಳಿ ಕೈಗೊಂಡಿದ್ದೆವು. ಜಿಗ್ನೇಶ್‌ ಅದರ ಭಾಗವಾಗಿದ್ದರು. ಜಿಗ್ನೇಶ್ ಗೆಲುವು ವೈಯಕ್ತಿಕ ಅಲ್ಲ, ಅದು ಚಳವಳಿಗೆ ಸಂದ ಜಯ. ಕರ್ನಾಟಕವು ಚುನಾವಣೆಯ ಹೊಸ್ತಿಲಲ್ಲಿದೆ. ಗುಜರಾತ್‌ನ ಪ್ರಯೋಗ ಕರ್ನಾಟಕದ 25 ಕ್ಷೇತ್ರಗಳಲ್ಲಿ ನಡೆಯಬೇಕು’ ಎಂದು ಆಶಿಸಿದರು.

ದೇಶದಲ್ಲಿನ ಸುಮಾರು 200 ವಿದ್ಯಾರ್ಥಿ ನಾಯಕರ ಮೇಲೆ 5 ರಿಂದ 15 ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗಿದೆ. ಸಂವಿಧಾನದ ಆಶಯ, ಮಾನವ ಹಕ್ಕುಗಳಿಗಾಗಿ ಧ್ವನಿ ಎತ್ತಿರುವ ಈ ವಿದ್ಯಾರ್ಥಿ ನಾಯಕರ ಶಕ್ತಿಗುಂದಿಸುವ ಕೆಲಸವನ್ನು ಸರ್ಕಾರಗಳು ಮಾಡುತ್ತಿವೆ.

ವೇದಿಕೆಯು 15 ವರ್ಷಗಳಲ್ಲಿ ಕಠಿಣ ಹಾದಿ ಸವೆಸಿದೆ. ಗೌರಿ ಲಂಕೇಶ್‌ ಅವರ ಹೋರಾಟವನ್ನು ಜೀವಂತವಾಗಿಟ್ಟಿದೆ.ಸೌಹಾರ್ದ ಮಂಟಪದಂಥ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿ ಗ್ರಾಮದಲ್ಲೂ ಆಯೋಜಿಸಬೇಕು ಎಂದರು.

* * 

ಅಗಲಿದ ಸಂಗಾತಿಗಳ ಆಶಯ ಈಡೇರಿಸೋಣ. ಅವರ ಹೋರಾಟವನ್ನು ಮುಂದುವರಿಸುವ ಸಂಕಲ್ಪ ತೊಡೋಣ

ಸುರೇಶ್‌ ಭಟ್‌ ಬಾಕ್ರಬೈಲು

ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry