ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂವೈಕುಂಠ ದರ್ಶನಕ್ಕೆ ಭಕ್ತರಿಗೆ ಮುಕ್ತ ಅವಕಾಶ

Last Updated 29 ಡಿಸೆಂಬರ್ 2017, 9:09 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಐತಿಹಾಸಿ ಸಣ್ಣಕ್ಕಿಬಾಗೂರಿನಲ್ಲಿ ಡಿ.29ರಂದು ನಡೆಯಲಿರುವ ವೈಕುಂಠ ಏಕಾದಶಿ ಮಹೋತ್ಸವಕ್ಕೆ ಇಲ್ಲಿನ ಚನ್ನಕೇಶವಸ್ವಾಮಿ ದೇಗುಲ ಸಜ್ಜಾಗಿದೆ.

ಬೆಳಿಗ್ಗೆ 7 ರಿಂದ ರಾತ್ರಿ 9.30 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ದೇಗುಲದ ಮಹಾದ್ವಾರ, ಪ್ರಾಂಗಣ, ತುಳಸಿ ಕಟ್ಟೆ, ಬೃಂದಾವನ ವಸಂತವಾಟಿಕೆ. ಕೈಸಾಲಿ, ಯಾಗಲಾಸಿ. ತುಲಾಭಾರ ಸ್ತಂಭವನ್ನು ವಿದ್ಯುತ್‌ ದೀಪ ಹಾಗೂ ಬಣ್ಣ, ಬಣ್ಣದ ಹೂಗಳಿಂದ ಸುಂದರವಾಗಿ ಅಲಂಕರಿಸಲಾಗಿದೆ. ಬರುವ ಭಕ್ತರಿಗೆ ತಿರುಪತಿ ಮಾದರಿಯಲ್ಲಿ ಲಾಡು ಉಂಡೆ ವಿತರಿಸಲು ಸುಮಾರು 10 ಸಾವಿರ ಲಾಡು ಉಂಡೆ ತಯಾರಿಸಲಾಗಿದೆ.

ಭಕ್ತರಿಗೆ ಭೂವೈಕುಂಠ ದರ್ಶನದ ಮಾರ್ಗ ಸೂಚನಾ ಫಲಕದಲ್ಲಿ ತಿಳಿಸಲಾಗುತ್ತದೆ. ಪ್ರಮುಖ ಮಹಾದ್ವಾರದಿಂದ ಮೊದಲು ಆಂಜನೇಯಸ್ವಾಮಿ ದರ್ಶನ, ನಂತರ ಗರುಡಸ್ವಾಮಿ, ಚನ್ನಕೇಶವಸ್ವಾಮಿ ದರ್ಶನ ನೀಡಿಲಾಗುತ್ತದೆ. ಉತ್ತರ ದಿಕ್ಕಿಗೆ ವಿಶೇಷ ಅಲಂಕಾರ ಮಂಟಪದಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಅಲ್ಲಿ ಭಕ್ತರು ತಮ್ಮ ಸಂಕಲ್ಪವನ್ನು ಪ್ರಾರ್ಥಿಸಿ ನಂತರ ದೇವರ ದರ್ಶನ ಪಡೆದು ಮುಂದೆ ಸಾಗಬೇಕು. ನಂತರ ವೈಕುಂಠ ನಾರಾಯಣ ಸ್ವಾಮಿ ದರ್ಶನ ಪಡೆದು ಸೌಮ್ಯ ನಾಯಕಿ ದೇವಿ ದರ್ಶನ ಪಡೆದು ನಂತರ ತೀರ್ಥ ಪ್ರಸಾದ ಪಡೆದು ಮುಂದೆ ಸಾಗುವ ವ್ಯವಸ್ಥೆ ಮಾಡಲಾಗಿದೆ.

ಬಾಗೂರು ಗ್ರಾಮದ ಸುತ್ತಲ 80 ಹಳ್ಳಿಗಳ ಭಕ್ತ ಸಮೂಹ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರ ಸಮೂಹ ಬರಲಿದೆ. ಭಕ್ತರ ಅನುಕೂಲಕ್ಕಾಗಿ ಸರದಿ ಸಾಲಿನಲ್ಲಿ ಭಕ್ತರು ಸಾಗಲು ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ವಾಹನ ನಿಲುಗಡೆಗೆ ಪ್ರತ್ಯೇಕವಾಗಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಹೊಸದುರ್ಗದಿಂದ ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ವೈಕುಂಠ ಏಕಾದಶಿ ದಿನದಂದು ಇರುವುದರಿಂದ ಭಕ್ತರು ಬೆಳಿಗ್ಗೆಯಿಂದ ರಾತ್ರಿ 9.30ರ ವರೆಗೆ ದೇವರ ದರ್ಶನಕ್ಕೆ ಅವಕಾಶವಿರುತ್ತದೆ.

ಧನುರ್ಮಾಸದಲ್ಲಿ ಬರುವ ಶುಕ್ಲಪಕ್ಷದ ಏಕಾದಶಿಯಂದು ಉಪವಾಸವಿದ್ದು, ಮಹಾವಿಷ್ಣು ಆರಾಧಿಸುವುದು ವಿಶೇಷ. ಈ ಪವಿತ್ರ ದಿನದೊಂದು ವೈಕುಂಠ ದ್ವಾರ ತೆರೆಯುವುದರಿಂದ ವಿಷ್ಣು ದೇವಾಲಯಗಳಲ್ಲಿ ಉತ್ತರ ದಿಕ್ಕಿಗೆ ದೇವರ ಉತ್ಸವ ಮೂರ್ತಿ ಅಲಂಕರಿಸಿ ವೈಕುಂಠ ದ್ವಾರ ನಿರ್ಮಿಸಲಾಗುತ್ತದೆ. ಅಂದು ಮಾಹಾವಿಷ್ಣು ದೇವರ ದರ್ಶನ ಮಾಡುವುದರಿಂದ ಭಕ್ತರ ಇಷ್ಟಾರ್ಥ ಈಡೇರಲಿದೆ. ಇಲ್ಲಿನ ವಿಷ್ಣು ದೇವಾಲಯದಲ್ಲಿ ಉತ್ತರ ದಿಕ್ಕಿಗೆ ಚನ್ನಕೇಶವಸ್ವಾಮಿ ಹಾಗೂ ಗರುಡನ ಮೇಲೆ ಲಕ್ಷ್ಮೀ ಸಮೇತರಾಗಿ ಕುಳಿತಿರುವ ವೈಕುಂಠ ನಾರಾಯಣ ಸನ್ನಿಧಿಯಲ್ಲಿ ಲೋಕ ಕಲ್ಯಾಣಕ್ಕಾಗಿ ಈ ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಧಾನ ಅರ್ಚಕ ಬಿ.ಕೆ. ಶ್ರೀನಿವಾಸನ್ ‘ಪ್ರಜಾವಾಣಿ’ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT