7

ರಸಗೊಬ್ಬರ ಖರೀದಿಗೆ ಆಧಾರ್‌ ಕಡ್ಡಾಯ!

Published:
Updated:
ರಸಗೊಬ್ಬರ ಖರೀದಿಗೆ ಆಧಾರ್‌ ಕಡ್ಡಾಯ!

ದಾವಣಗೆರೆ: ರಸಗೊಬ್ಬರ ಖರೀದಿಗೆ ಜನವರಿ 1ರಿಂದ ಆಧಾರ್‌ ಕಡ್ಡಾಯಗೊಳಿಸಲಾಗಿದ್ದು, ಜಿಲ್ಲೆಯ ರೈತರಿಗೆ ಸಮಪರ್ಕವಾಗಿ ಗೊಬ್ಬರ ವಿತರಿಸಲು ಕೃಷಿ ಇಲಾಖೆ ಸಜ್ಜುಗೊಂಡಿದೆ.

ಜಿಲ್ಲೆಯಲ್ಲಿ 735 ರಸಗೊಬ್ಬರ ವ್ಯಾಪಾರಿಗಳಿದ್ದು, ಈಗಾಗಲೇ 535 ಮಂದಿಗೆ ‘ಪಾಯಿಂಟ್‌ ಆಫ್‌ ಸೇಲ್‌’ (ಪಿಒಎಸ್‌) ಸಾಧನ ವಿತರಿಸಲಾಗಿದೆ. ಪಿಒಎಸ್‌ ಬಳಸುವ ಬಗ್ಗೆ ಮೂರು ಸುತ್ತಿನ ತರಬೇತಿಯನ್ನೂ ನೀಡಲಾಗಿದೆ. ಒಂದು ತಿಂಗಳಿನಿಂದ ಪಿಒಎಸ್‌ ಬಳಸುವ ಬಗ್ಗೆ ಅಭ್ಯಾಸವನ್ನೂ ಮಾಡಿಸಲಾಗುತ್ತಿದೆ. ಇನ್ನೂ 200 ವ್ಯಾಪಾರಿಗಳಿಗೆ ಶೀಘ್ರದಲ್ಲೇ ಪಿಒಎಸ್‌ ಸಾಧನ ವಿತರಿಸಲಾಗುವುದು ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಡಾ.ವಿ.ಸದಾಶಿವ.

ಪ್ರತಿ ಬಾರಿ ರಸಗೊಬ್ಬರ ಖರೀದಿಸುವಾಗಲೂ ರೈತರು ಆಧಾರ್‌ ಸಂಖ್ಯೆ ನೀಡಬೇಕು. ಹಾಗೆಯೇ ಬೆರಳಚ್ಚನ್ನೂ. ಚಿಲ್ಲರೆ ವ್ಯಾಪಾರಿಗಳು ಪಿಒಎಸ್‌ ಸಾಧನದಲ್ಲಿ ರೈತರ ಮಾಹಿತಿ ಮತ್ತು ವ್ಯವಹಾರದ ವಿವರ ದಾಖಲಿಸಿ, ಬಿಲ್‌ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ರಸಗೊಬ್ಬರ ಅಗತ್ಯತೆಯ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಲಾಗುವುದು ಎನ್ನುತ್ತಾರೆ ಅವರು.

ಸಬ್ಸಿಡಿ ಉತ್ಪನ್ನಗಳಿಗೆ ಮಾತ್ರ: ಪ್ರೋತ್ಸಾಹಧನ (ಸಬ್ಸಿಡಿ) ನೀಡುವ ಉತ್ಪನ್ನಗಳಾದ ಎನ್‌ಪಿಕೆ ಸಂಯುಕ್ತಗಳನ್ನು ಒಳಗೊಂಡ ರಸಗೊಬ್ಬರಗಳ ಖರೀದಿಗಷ್ಟೇ ಆಧಾರ್‌ ಕಡ್ಡಾಯಗೊಳಿಸಲಾಗಿದೆ. ಲಘು ಪೋಷಕಾಂಶಗಳು, ಕ್ರಿಮಿ–ಕಳೆ ನಾಶಕಗಳ ಖರೀದಿಗೆ ನಿಯಮ ಅನ್ವಯಿಸುವುದಿಲ್ಲ.

ಜಮೀನು ಹೊಂದಿರುವವರೇ ಗೊಬ್ಬರ ಖರೀದಿಸಲು ಅಂಗಡಿಗೆ ಬರಬೇಕು ಎಂಬ ನಿಯಮ ಜಾರಿಯಾಗಿಲ್ಲ. ರೈತ ಕುಟುಂಬದ ಯಾವ ಸದಸ್ಯರು ಬೇಕಾದರೂ ಆಧಾರ್‌ ಸಂಖ್ಯೆ ಹಾಗೂ ಬೆರಳಚ್ಚು ಗುರುತು ನೀಡಿ, ರಸಗೊಬ್ಬರ ಖರೀದಿಸಬಹುದು.

ಸದ್ಯಕ್ಕೆ ಆಧಾರ್‌ ಸಂಖ್ಯೆ ನೀಡುವುದನ್ನು ಮಾತ್ರ ಕಡ್ಡಾಯಗೊಳಿಸಲಾಗಿದೆ. ಈಗ ರಸಗೊಬ್ಬರ ಕಂಪೆನಿಗಳಿಗೆ ಪ್ರೋತ್ಸಾಹಧನ ನೀಡಲಾಗುವುದು. ಮುಂದೆ ರೈತರು ಪೂರ್ಣ ಹಣ ನೀಡಿ ಗೊಬ್ಬರ ಕೊಂಡುಕೊಳ್ಳಬೇಕು. ಒಂದೆರಡು ದಿನಗಳಲ್ಲಿ ಅವರ ಖಾತೆಗೆ ಸಬ್ಸಿಡಿ ಹಣ ಜಮೆ ಆಗಲಿದೆ ಎಂದು ಸದಾಶಿವ ಮಾಹಿತಿ ನೀಡಿದ್ದಾರೆ.

ರಸಗೊಬ್ಬರ ಕೊರತೆಯಿಲ್ಲ

ಜಿಲ್ಲೆಯ ಉಗ್ರಾಣಗಳಲ್ಲಿ ಅಂದಾಜು 20 ಸಾವಿರ ಟನ್‌ನಷ್ಟು ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ಸಗಟು ಹಾಗೂ ಚಿಲ್ಲರೆ ಮಾರಾಟಗಾರರ ಬಳಿ ಸುಮಾರು 50 ಸಾವಿರ ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನು ಇದೆ. ಬೇಸಿಗೆ ಬೆಳೆಗೆ ಸಾಕಾಗುವಷ್ಟು ಗೊಬ್ಬರ ಸಂಗ್ರಹ ಜಿಲ್ಲೆಯಲ್ಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಣ್ಣು ಆರೋಗ್ಯ ಕಾರ್ಡ್‌ ಜೋಡಣೆ

ಆಧಾರ್‌ ಸಂಖ್ಯೆ ಜತೆಗೆ ಮಣ್ಣು ಆರೋಗ್ಯ ಕಾರ್ಡ್‌ ಮಾಹಿತಿಯನ್ನೂ ಜೋಡಣೆ ಮಾಡುವ ಉದ್ದೇಶ ಸರ್ಕಾರದ ಮುಂದಿದೆ. ಈಗಾಗಲೇ ಮಣ್ಣು ಆರೋಗ್ಯ ಕಾರ್ಡ್‌ ಅನ್ನು ಬಹುತೇಕ ರೈತರಿಗೆ ನೀಡಲಾಗಿದೆ.

ಮಣ್ಣಿನ ಗುಣ, ಹವಾಮಾನ, ಋತುಮಾನ ಹಾಗೂ ಬೆಳೆಯನ್ನು ಆಧರಿಸಿ ಯಾವ ಗೊಬ್ಬರ, ಎಷ್ಟು ಪ್ರಮಾಣದಲ್ಲಿ ಬೇಕಾಗುತ್ತದೆ ಎಂಬ ಶಿಫಾರಸು ಮಾಡಲಾಗುವುದು. ಶಿಫಾರಿತ ಪ್ರಮಾಣದ ಗೊಬ್ಬರವನ್ನು ಮಾತ್ರ ರೈತರಿಗೆ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎನ್ನುತ್ತಾರೆ ಸದಾಶಿವ.

ಶಿಫಾರಿತ ಪ್ರಮಾಣದ ಗೊಬ್ಬರ ಮಾತ್ರ ನೀಡುವುದರಿಂದ ಬೇಕಾಬಿಟ್ಟಿಯಾಗಿ ರಾಸಾಯನಿಕಗಳನ್ನು ಬಳಕೆ ಮಾಡುವುದು ತಪ್ಪಲಿದೆ. ರೈತರಿಗೂ ಹಣ ಉಳಿಯಲಿದೆ. ನಷ್ಟ ತಪ್ಪಲಿದೆ. ಮಣ್ಣಿನ ಆರೋಗ್ಯ ಸುಧಾರಣೆ ಆಗಲಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry