ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು, ಹಾಸನ ರೈಲು ಸಂಚಾರ ಹೆಚ್ಚಿಸಿ

Last Updated 29 ಡಿಸೆಂಬರ್ 2017, 9:39 IST
ಅಕ್ಷರ ಗಾತ್ರ

ಹಾಸನ : ಬೆಂಗಳೂರು-ಹಾಸನ-ಮಂಗಳೂರು ವಿಭಾಗಗಳ ನಡುವೆ ರೈಲುಗಳ ಸಂಚಾರ ಸೇವೆಗಳನ್ನು ಹೆಚ್ಚಿಸಬೇಕೆಂದು ಸಂಸದ ಎಚ್‌.ಡಿ. ದೇವೇಗೌಡ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಗುರುವಾರ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಗೆ ಮನವಿ ಪತ್ರ ಸಲ್ಲಿಸಿದ ಅವರು, ಈ ವರ್ಷದ ಆರಂಭದಲ್ಲಿ ಬೆಂಗಳೂರು-ಹಾಸನ (ಕುಣಿಗಲ್, ಶ್ರವಣಬೆಳಗೊಳ ಮಾರ್ಗವಾಗಿ) ನಡುವೆ ಹೊಸ ಬ್ರಾಡ್ ಗೇಜ್ ಮಾರ್ಗ ಉದ್ಘಾಟನೆಯಾಗಿದೆ. ಕೃಷಿ ಆಧಾರಿತ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳ ಜನರಿಗೆ ಇದರಿಂದ ಸಾಕಷ್ಟು ಪ್ರಯೋಜನವಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಈ ಹೊಸ ಮಾರ್ಗದಲ್ಲಿ ಮೂರು ಎಕ್ಸ್ ಪ್ರೆಸ್‌ಮತ್ತು ಒಂದು ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತಿವೆ. ಇದು ಬಾಲಗಂಗಾಧರ ನಾಥನಗರ, ಶ್ರವಣಬೆಳಗೊಳ ಮತ್ತು ಅದರಾಚೆ ಇರುವ ಪವಿತ್ರ ಸ್ಥಳಗಳು, ಯಾತ್ರಾ ತಾಣಗಳಿಗೆ ಹೋಗುವ ಜನರಿಗೆ ಅನುಕೂಲವಾಗುತ್ತದೆ. ಆದ ಕಾರಣ ಈ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಚಿವರು ಈ ಅಂಶಗಳನ್ನು ಪರಿಗಣಿಸಿ ಬೆಂಗಳೂರು-ಹಾಸನ ಹೊಸ ಮಾರ್ಗದ ನಡುವೆ ಹೆಚ್ಚಿನ ರೈಲು ಸಂಚಾರ ಆರಂಭಿಸಬೇಕು ಎಂದರು. ಚೆನ್ನೈ ಮತ್ತು ಮಂಗಳೂರು (ಹಾಸನ ಮತ್ತು ಬೆಂಗಳೂರು ಮಾರ್ಗವಾಗಿ) ನಡುವೆ ಎಕ್ಸ್ ಪ್ರೆಸ್, ಸೂಪರ್ ಫಾಸ್ಟ್ ರೈಲುಗಳನ್ನು ಆರಂಭಿಸಬೇಕು. ಇದರಿಂದ ಬಂದರು ನಗರಿಗಳ ನಡುವೆ ಅಂತರವೂ ಕಡಿಮೆಯಾಗುತ್ತದೆ ಹಾಗೂ ಸಂಪರ್ಕ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಬೆಂಗಳೂರು ಮತ್ತು ಕಾರವಾರ ನಡುವೆ (ಕುಣಿಗಲ್ ಮತ್ತು ಹಾಸನ ಮಾರ್ಗವಾಗಿ) ಪ್ರತ್ಯೇಕ ರೈಲು ಹಾಗೂ ಹಾಸನ ಮತ್ತು ಕುಣಿಗಲ್ ಮಾರ್ಗವಾಗಿ ಮೈಸೂರು ಮತ್ತು ಬೆಂಗಳೂರು ನಡುವೆ ರೈಲು ಸೇವೆ ಹೆಚ್ಚಿಸಬೇಕು ಎಂದು ಅವರು ಹೇಳಿದರು.

ಹಾಗೆಯೇ ಫೆಬ್ರವರಿಯಲ್ಲಿ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಭಕ್ತರು ಮತ್ತು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರು-ಹಾಸನ ನಡುವೆ ವಿಶೇಷ ರೈಲುಗಳ ಸಂಚಾರ ಕಲ್ಪಿಸಬೇಕು. ಬೆಳಿಗ್ಗೆ 5 ರಿಂದ ರಾತ್ರಿ 11ರ ವರೆಗೆ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಪ್ರತಿದಿನ ಗಂಟೆಗೆ ಒಂದು ರೈಲು ಸಂಚರಿಸುವಂತಾಗಬೇಕು ಎಂದು ಮನವಿ ಮಾಡಿದರು. ಶಾಸಕ ಎಚ್.ಡಿ. ರೇವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT