ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನಕ್ಕೆ ಯುವ ಜನರ ಹಿಂದೇಟು

Last Updated 29 ಡಿಸೆಂಬರ್ 2017, 9:40 IST
ಅಕ್ಷರ ಗಾತ್ರ

ಹಾಸನ : ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯ ಈಡೇರಬೇಕಾದರೆ ಗರಿಷ್ಠ ಪ್ರಮಾಣದ ಮತದಾನ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗದ ಆಶ್ರಯದಲ್ಲಿ ಏರ್ಪಡಿಸಿದ್ದ ಯುವ ಮತ್ತು ಭಾವಿ ಮತದಾರರಲ್ಲಿ ಚುನಾವಣೆ ಮತ್ತು ಮತದಾರರ ನೋಂದಣಿ, ಮತದಾರರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಜಿಲ್ಲಾ ಮಟ್ಟದ ರಸಪ್ರಶ್ನೆ, ಪ್ರಬಂಧ ರಚನೆ ಮತ್ತು ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಮತದಾನ ಪ್ರಜಾಪ್ರಭುತ್ವದ ಅಡಿಪಾಯ. ಅದು ಗಟ್ಟಿಯಾಗಿದ್ದರೇ ಮಾತ್ರ ಸದೃಢ ರಾಷ್ಟ್ರ ಕಟ್ಟಲು ಸಾಧ್ಯ. ಇತ್ತೀಚಿನ ಮತದಾನ ಪ್ರಕ್ರಿಯೆಯನ್ನು ಗಮನಿಸಿದಾಗ ನಿರೀಕ್ಷಿತ ಪ್ರಮಾಣದಲ್ಲಿ ಮತದಾನವಾಗುತ್ತಿಲ್ಲ. ಜನರ ಭಾಗವಹಿಸುವಿಕೆ ಕಡಿಮೆ ಇರುವುದರಿಂದ ಪ್ರಜಾಪ್ರಭುತ್ವದ ಆಶಯ ಈಡೇರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಗರಿಷ್ಠ ಮತದಾನ ಪ್ರಮಾಣ ಶೇ 60 ದಾಟಿಲ್ಲ. ಶೇ 60ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆದಾಗ ಮಾತ್ರ ಪ್ರಜಾಪ್ರಭುತ್ವ ನೆಲೆ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.

ಮತದಾನದ ಪ್ರಕ್ರಿಯೆಯಲ್ಲಿ ಯುವ ಜನರು ಹಾಗೂ ನಗರ ವಾಸಿಗಳ ಪಾಲ್ಗೊಳ್ಳುವಿಕೆ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಇದು ಬದಲಾಗಬೇಕು ಹಾಗೂ ಮತದಾನ ಹಕ್ಕು ಹೊಂದಿರುವ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕರೆ ನೀಡಿದರು.

ಯುವ ಜನ ಮತ್ತು ಭಾವಿ ಮತದಾರರು ತಮ್ಮ ಪೋಷಕರಲ್ಲಿ ಹಾಗೂ ಸುತ್ತಮುತ್ತಲಿನ ಜನರಿಗೆ ಮತದಾನದ ಮಹತ್ವದ ಬಗ್ಗೆ ತಿಳಿಸುವ ಮೂಲಕ ಮತದಾನದಲ್ಲಿ ಭಾಗವಹಿಸುವಂತೆ ಪ್ರೇರಪಿಸಬೇಕು.

ಚುನಾವಣೆ ಪ್ರಕ್ರಿಯೆ, ನೋಂದಣಿ, ಮತದಾನದ ಹಕ್ಕುಗಳು ಕುರಿತು ಆಯೋಜಿಸಿರುವ ವಿವಿಧ ಸ್ಪರ್ಧೆಗಳಲ್ಲಿ ಯುವತಿಯರ ಪಾಲ್ಗೊಳ್ಳುವಿಕೆ ದೊಡ್ಡ ಸಂಖ್ಯೆಯಲ್ಲಿ ಇರುವುದು ಶ್ಲಾಘನೀಯ ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿ ಕೆ.ಎಂ. ಜಾನಕಿ ಅವರು, ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಿಗೆ ಭಾಗವಹಿಸಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸಕಲೇಶಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ನಿಶ್ಚಿತಾ ಮತ್ತು ಜೆ.ಎಂ.ಸಂಗೀತಾ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರು. ಉಪವಿಭಾಗಾಧಿಕಾರಿ ಎಚ್.ಎಲ್. ನಾಗರಾಜ್ ವಿವಿಧ ಸ್ವರ್ಧೆ ನಡೆಸಿಕೊಟ್ಟರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಸಿ. ಜಯದೇವಯ್ಯ, ಶಿಕ್ಷಕರು, ಕಾಲೇಜು ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT