ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠವನ್ನು ಸಮಾಜಮುಖಿ ಮಾಡಿದ ಶ್ರೀಗಳು

Last Updated 29 ಡಿಸೆಂಬರ್ 2017, 9:44 IST
ಅಕ್ಷರ ಗಾತ್ರ

ಹಾವೇರಿ: ‘ಹಾನಗಲ್‌ ಕುಮಾರ ಸ್ವಾಮೀಜಿ ಮತ್ತು ಹಾವೇರಿಯ ಶಿವಬಸವ ಸ್ವಾಮೀಜಿಗಳು ಸಮಾಜದ ಅಭ್ಯುದಯಕ್ಕಾಗಿ ತಮ್ಮನ್ನೇ ತಾವು ಅರ್ಪಿಸಿಕೊಂಡು, ಮಠಗಳನ್ನು ಸಮಾಜಮುಖಿಯಾಗಿಸಿದವರು’ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಬಣ್ಣಿಸಿದರು.

ಶಿವಬಸವ ಮತ್ತು ಶಿವಲಿಂಗ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವದ ನಿಮಿತ್ತ ಹುಕ್ಕೇರಿ ಮಠದಲ್ಲಿ ನಡೆ ಯುತ್ತಿರುವ ‘ನಮ್ಮೂರು ಜಾತ್ರೆ’ಯ ಬುಧ ವಾರದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘ಅಂದು ಮಠಾಧೀಶರು ಮಠಗಳನ್ನು ಸಮಾಜಮುಖಿ ಮಾಡುತ್ತಿದ್ದರೆ, ಇಂದು ಕೆಲವರು ರಾಜಕಾರಣಕ್ಕಾಗಿ ಸಮಾಜ ವನ್ನು ಒಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.

‘ಸಮಾಜದ ಎಲ್ಲರನ್ನೂ ‘ಇವ ನಮ್ಮವ ಇವ ನಮ್ಮವ’ ಎಂದು ಒಳಗೊಳ್ಳುವುದೇ 12 ನೇ ಶತಮಾನದ ಅನುಭವ ಮಂಟಪದ ಉದ್ದೇಶವಾಗಿತ್ತು. ನಮ್ಮ ಸಂಸತ್ತಿನಲ್ಲಿಯೂ ‘ವಸುದೈವ ಕುಟುಂಬಕಂ’ ಎಂಬುದನ್ನು ಕಾಣುತ್ತೇವೆ. ಅಂತೆಯೇ ವೀರಶೈವ–ಲಿಂಗಾಯತ ಧರ್ಮವು ಸಮಾಜದ ಎಲ್ಲರನ್ನೂ ಒಗ್ಗೂಡಿಸುತ್ತದೆಯೇ ಹೊರತು ಭಕ್ತರಲ್ಲಿ ಭೇದಭಾವ ಮಾಡುವುದಿಲ್ಲ’ ಎಂದು ಹೇಳಿದರು.

‘ನಿಜವಾದ ಸ್ವಾಮೀಜಿಗಳು ಮಠದ ಆಸ್ತಿಯನ್ನು ಪರಭಾರೆ ಮಾಡುವುದಿಲ್ಲ, ಯಾವುದೇ ಆಸ್ತಿಗಳ ಅಧಿಪತ್ಯಕ್ಕೆ ಆಸೆ ಪಡುವುದಿಲ್ಲ. ಮಸೀದಿ, ಚರ್ಚ್, ಬಸದಿಗಳಲ್ಲೂ ಇದೇ ಪರಂಪರೆ ಇದೆ. ಆದರೆ. ಕೆಲವು ಸ್ವಾಮೀಜಿಗಳು ತಮ್ಮ ಐಶರಾಮಿ ಜೀವನಕ್ಕಾಗಿ ಭಕ್ತರು ಮಾಡಿಟ್ಟ ಆಸ್ತಿಯನ್ನು ಮಾರುತ್ತಿದ್ದಾರೆ’ ಎಂದು ಆಪಾದಿಸಿದರು.

‘ಅಖಿಲ ಭಾರತ ವೀರಶೈವ ಮಹಾಸಭಾವು ಹಲವಾರು ಪೂಜ್ಯರ ಮತ್ತು ಮಹನೀಯರ ಪ್ರಯತ್ನದಿಂದ ಅಸ್ತಿತ್ವಕ್ಕೆ ಬಂದಿದ್ದು, ಇತ್ತೀಚೆಗೆ ಕೆಲವರು ಇದರ ಹೆಸರನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.

‘ವೀರಶೈವ ಲಿಂಗಾಯತ ಸಮಾಜವು ಬೃಹತ್ ವೃಕ್ಷವಾಗಿದ್ದು, ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಆದರೆ, ಧರ್ಮದ ಪರಂಪರೆ, ತತ್ವಗಳ ಬಗೆಗಿನ ಅಲ್ಪಜ್ಞಾನಿಗಳು ವಿಷ ಬೀಜವನ್ನು ಬಿತ್ತುವ ಮೂಲಕ ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ’ ಎಂದು ಆರೋಪಿಸಿದರು.

ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಇಂದು ಬಹುತೇಕ ರಂಗಗಳು ಕಲುಷಿತಗೊಡಿವೆ. ತಾವು ಒಪ್ಪಿಕೊಂಡ ತತ್ವಗಳನ್ನೆ ಮರೆತು ಬಿಡುತ್ತಾರೆ. ಇಂತಹ ಮನಸ್ಸುಗಳ ಕಲ್ಮಶ ತೊಳೆಯಲು ಅನುಭಾವ ಮತ್ತು ಅನುಭವು ಸಹಾಯಕವಾಗುತ್ತದೆ ಎಂದರು. ಪರಿಸರದ ಸಂರಕ್ಷಣೆಯು ಇಂದಿನ ಅಗತ್ಯವಾಗಿದೆ. ನಾವೆಲ್ಲರೂ ಸೇರಿ ಜಾತ್ರೆಯನ್ನು ಪರಿಸರ ಮಾಲಿನ್ಯ ಮುಕ್ತವಾಗಿ ಆಚರಿಸಬೇಕಾಗಿದೆ ಎಂದು ಹೇಳಿದರು.

ರಟಗಲ್‌ ಮತ್ತು ನಾಗನೂರಿನ ವಿರಕ್ತಮಠಗಳ ಸಿದ್ಧರಾಮ ಸ್ವಾಮೀಜಿ ಮತ್ತು ಅಲ್ಲಮಪ್ರಭು ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಷ್ಣಪ್ಪ ಪುರದವರನ್ನು ಸನ್ಮಾನಿಸಲಾಯಿತು. ಬೆಂಗಳೂರಿನ ಕಲಾವಿದ ಪಂಚಮ್ ಹಳಬಂಡಿ ಮತ್ತು ಸ್ಮಿತಾ ರಾಯ್ಕರ ಜಾನಪದ ಸಂಗೀತದ ಸುಧೆ ಹರಿಸಿದರು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಮಾಜಿ ಶಾಸಕ ನೆಹರೂ ಓಲೇಕಾರ, ರಾಚಪ್ಪ ಮಾಗನೂರ, ಶಿವಬಸಪ್ಪ ತುಪ್ಪದ, ಗಣೇಶ ಹೂಗಾರ, ನಗರಸಭೆ ಸದಸ್ಯೆ ಗಂಗಮ್ಮ ಯರೇಶೀಮಿ, ಮೌನೇಶ ಅಳ್ಳಪ್ಪನವರ, ವನಿತಾ ಹಿತ್ತಲಮನಿ, ವಿರೂಪಾಕ್ಷಪ್ಪ ಹತ್ತಿಮತ್ತೂರ, ವೆಂಕಟೇಶ ನಾರಾಯಣಿ, ಕುಸಲವ್ವ ಕಲ್ಲಮ್ಮನವರ, ಶಿವಕುಮಾರ ಮುದಗಲ್ಲ, ನಿವೃತ್ತ ಪಾಚಾರ್ಯ ಬಿ.ಬಸವರಾಜ, ಎಸ್.ವಿ ಹಿರೇಮಠ ಮತ್ತು ಜಿ.ಎನ್ ಚಟ್ರಮ್ಮನವರ, ಕೆ.ಬಿ ಭಿಕ್ಷಾವರ್ತಿಮಠ, ಎಸ್.ಸಿ ಮರಳಿಹಳ್ಳಿ ಇದ್ದರು. ಆಕಾಶವಾಣಿ ಕಲಾವಿದ ಶಿವಕುಮಾರ ಹಡಗಲಿ ಪ್ರಾರ್ಥನೆ ಹಾಡಿದರು.

ಮೆರವಣಿಗೆ ಇಂದು

ಹುಕ್ಕೇರಿಮಠದ ಉಭಯ ಲಿಂಗೈಕ್ಯ ಶ್ರೀಗಳ ಭಾವಚಿತ್ರದ ಮೆರವಣಿಗೆಯ ರಥೋತ್ಸವ ಡಿ.29ರಂದು ಸಂಜೆ 4 ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಕುಪ್ಪೇಲೂರಿನ ವೀರಗಾಸೆ ತಂಡ, ಹುಕ್ಕೇರಿಮಠದ ಸದಾಶಿವ ಗೊಂಬೆ ಬಳಗ, ಕೇರಳದ ಚಂಡಿಮೇಳ, ಮಹಿಳೆಯರ ವೀರಗಾಸೆ, ಮಂಡ್ಯದ ಮಹಿಳಾ ಡೊಳ್ಳು, ಕಮಡೊಳ್ಳಿಯ ಮಲ್ಲಕಂಬ, ಆರಕೇರೆಯ ಕೀಲು ಕುದುರೆ ತಂಡಗಳು ಹಾಗೂ ಆನೆ, ಕುದುರೆ ಇತ್ಯಾದಿಗಳು ಮೆರವಣಿಗೆಗೆ ಮೆರುಗು ನೀಡಲಿವೆ ಎಂದು ಪ್ರಕಟಣೆ ತಿಳಿಸಿದೆ. ಡಿ.30ರಂದು ಶಿವಲಿಂಗೇಶ್ವರ ಮಹಿಳಾ ವಿದ್ಯಾಲಯ ಆವರಣದಲ್ಲಿ ‘ಸಂತ ಶಿಶುನಾಳ ಷರೀಫ ಸಾಹೇಬರ ಮಹಾತ್ಮೆ’ ನಾಟಕ ಇದೆ.

*  * 

ಭಕ್ತರ ಭಕ್ತಿ ಮತ್ತು ಸ್ವಾಮೀಜಿ ವ್ಯಕ್ತಿತ್ವವು ಒಂದು ಮಠ ಅಭಿವೃದ್ಧಿಯ ಪ್ರಮುಖ ಗುಣಲಕ್ಷಣ, ಅಂತಹ ಮಠ ಸಮಾಜಕ್ಕೆ ದಾರಿ ದೀಪವಾಗುತ್ತದೆ
ಶಿವಬಸವ ಸ್ವಾಮೀಜಿ ಅಕ್ಕಿಆಲೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT