ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗರೇಟಿನಂಥ ಪ್ಯಾಂಟು ಇದು

Last Updated 29 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಈ ಪ್ಯಾಂಟು ಹೆಸರಿಗೆ ತಕ್ಕಂತೆಯೇ ಇದೆ. ಥೇಟ್‌ ಸಿಗರೇಟಿನ ಹಾಗೆ. ‘ತಲೆಯಿಂದ ಕಾಲಿನ’ವರೆಗೂ ಒಂದೇ ರೀತಿ ದಪ್ಪ. ನೇರ ಕಟ್‌ (ಸ್ಟ್ರೈಟ್‌). ಪ್ಯಾಂಟ್‌ನದೇ ಮಾದರಿಯಲ್ಲಿರುವ ಸಿಗರೇಟು ಪ್ಯಾಂಟ್‌ಗೆ ಯಾವುದೇ ಫ್ಯಾಬ್ರಿಕ್‌ನಲ್ಲೂ ಒಪ್ಪವಾಗಿ ಹೊಂದಿಕೊಳ್ಳುತ್ತದೆ. ಮೇಲುಡುಗೆ ಯಾವುದೇ ಇದ್ದರೂ ಪರವಾಗಿಲ್ಲ. ಈ ಎರಡು ಗುಣಗಳಿಂದಲೇ ಈ ಪ್ಯಾಂಟ್ 2017ರ ಉತ್ತರಾರ್ಧದಲ್ಲಿ ಅತ್ಯಂತ ಜನಪ್ರಿಯಗೊಂಡಿತು.

‘ಮಹಿಳೆಯರು ಪ್ಯಾಂಟು ಧರಿಸುವುದನ್ನು 1950ರ ದಶಕದಲ್ಲಿ ಹೆಚ್ಚು ಇಷ್ಟಪಡಲು ಆರಂಭಿಸಿದರು. ಆಗ ಪರಿಚಯವಾದದ್ದು ಕ್ಯಾಪ್ರಿ ಮತ್ತು ಸಿಗರೇಟು ಪ್ಯಾಂಟು’ ಎಂದು ಫ್ಯಾಷನ್‌ ಜಗತ್ತಿನ ಇತಿಹಾಸ ಪುಟಗಳು ಹೇಳುತ್ತವೆ.

ಆಗಿನ ಕಾಲದ ಸಿಗರೇಟು ಪ್ಯಾಂಟುಗಳ ಸೊಂಟ ಹೊಕ್ಕುಳಿಗಿಂತಲೂ ಮೇಲಿರುತ್ತಿತ್ತು. ಅಂದರೆ ಹೈ ವೇಸ್ಟ್‌. ಸೊಂಟದ ಒಂದು ಬದಿಯಲ್ಲಿ ಅಥವಾ ಹಿಂಭಾಗದಲ್ಲಿ ಜಿಪ್‌ ಇರುತ್ತಿತ್ತು. ಮುಂಭಾಗದಲ್ಲಿ ನೆರಿಗೆ ಇಲ್ಲದೆ ಚಪ್ಪಟೆಯಾಗಿ ಹಾಗೂ ಸೊಂಟದ ಭಾಗದಲ್ಲಿ ಸ್ವಲ್ಪ ಸಡಿಲವಾಗಿ ಇರುತ್ತಿತ್ತು. ತೊಡೆಯಿಂದ ಕೆಳಗೆ ಬಿಗಿಯೂ ಅಲ್ಲ, ಸಡಿಲವೂ ಅಲ್ಲದ ನೇರವಾದ ಕಟ್‌. ಕಾಲಿನ ಹಿಮ್ಮಡಿಗೂ ಸ್ವಲ್ಪ ಮೇಲೆ ನಿಲ್ಲುವಷ್ಟು ಉದ್ದ. ಈ ಪ್ಯಾಂಟ್‌ನ ಅಂದ ಇರುವುದೂ ಈ ಶೈಲಿಯಲ್ಲೇ.

2017ರಲ್ಲಿ ಅತ್ಯಧಿಕ ಬಳಕೆಯಾದ ಮತ್ತು ವರ್ಷದುದ್ದಕ್ಕೂ ಪುನರಾವರ್ತನೆಯಾದ ಉಡುಪು ಈ ಸಿಗರೇಟು ಪ್ಯಾಂಟು. ಬ್ರ್ಯಾಂಡೆಡ್‌ ಉಡುಪುಗಳ ಮಳಿಗೆಗಳಲ್ಲಿ, ಮಾಲ್‌ಗಳಲ್ಲಿ ಸಿಗರೇಟು ಪ್ಯಾಂಟುಗಳಿಗೆ ವರ್ಷವಿಡೀ ಬೇಡಿಕೆ ಇತ್ತು. ರೆಡಿಮೇಡ್‌ ಪ್ಯಾಂಟುಗಳು ಬೇಕಾದ ಬಣ್ಣ, ಅಳತೆ ಮತ್ತು ಫ್ಯಾಬ್ರಿಕ್‌ನಲ್ಲಿ ಸಿಕ್ಕಿದರೆ, ಚೂಡಿದಾರ್‌ ಪ್ಯಾಂಟುಗಳನ್ನೂ ಸಿಗರೇಟು ಶೈಲಿಯಲ್ಲಿ ಹೊಲಿಸುವುದು ಹೆಚ್ಚಾಯಿತು. ನೇರ ಕಟ್‌ನ ಸ್ಲಿಮ್‌ ಸೂಟ್‌ ಸಲ್ವಾರ್‌ ಕಮೀಜ್‌ಗೆ ಸಿಗರೇಟು ಶೈಲಿಯ ಪ್ಯಾಂಟು ಹಾಕುವುದು ಯುವತಿಯರ ನೆಚ್ಚಿನ ಆಯ್ಕೆಯಾಯಿತು.

ಉದ್ಯೋಗಸ್ಥ ಹೆಣ್ಣುಮಕ್ಕಳಿಗೆ ವಾರದುದ್ದಕ್ಕೂ ಧರಿಸಲು ಸಿಗರೇಟು ಪ್ಯಾಂಟು ಆರಾಮದಾಯಕ. ಶರ್ಟು, ಟಿ ಶರ್ಟು, ಸಡಿಲವಾದ ಟಾಪ್‌, ಲಾಂಗ್‌ ಕುರ್ತಾ ಕೂಡಾ ಈ ಪ್ಯಾಂಟ್‌ಗೆ ಹೊಂದುತ್ತದೆ. ಅಚ್ಚ ಬಿಳಿ ಬಣ್ಣದ ಪ್ಯಾಂಟ್‌ ಜೊತೆ ಬಿಗಿಯಾದ ಇಲ್ಲವೇ ಸಡಿಲವಾದ ಟೀ ಶರ್ಟು ಧರಿಸಬಹುದು. ಅರ್ಧ ಇಂಚು ಅಗಲದ ಸ್ಲಿಮ್‌ ಬೆಲ್ಟ್‌ ಹಾಕಿ ಇನ್‌ಶರ್ಟ್‌ ಮಾಡಿದರಂತೂ ಎಲ್ಲರ ನೋಟ ಸೆಳೆಯುವಷ್ಟು ಆಧುನಿಕ ನೋಟ ದಕ್ಕುತ್ತದೆ. ಹಿಮ್ಮಡಿ ಬಳಿ ಜಿಪ್‌ ಇರುವ ಪ್ಯಾಂಟ್‌ ಆದರೆ ಕುರ್ತಾಗಿಂತ ಟೀ ಶರ್ಟು, ಶರ್ಟು ಹೆಚ್ಚು ಸೂಕ್ತ.

ಮಾರುಕಟ್ಟೆಗೆ ಹೊಸದಾಗಿ ಪರಿಚಯವಾಗುವ ಉಡುಪುಗಳು ಮಳಿಗೆಗಳಿಗೆ ತಲುಪುವುದು ತಡವಾದೀತು. ಆದರೆ ಆನ್‌ಲೈನ್‌ನಲ್ಲಿ ಬೇಗನೆ ಲಭ್ಯವಾಗುತ್ತವೆ.

ರಾಜರಾಜೇಶ್ವರಿನಗರದ ವಿ.ಆರ್. ಛಾಯಾ ಮಾಡುವುದು ಹೀಗೇ.

‘ಎಲ್ಲಾ ಬಗೆಯ ಆಧುನಿಕ ಉಡುಗೆ ತೊಡುಗೆಗಳನ್ನು ನಾನು ಖರೀದಿಸುತ್ತಿರುತ್ತೇನೆ. ಸಿಗರೇಟು ಪ್ಯಾಂಟು ನನ್ನ ಅಚ್ಚುಮೆಚ್ಚಿನ ಉಡುಗೆ. ಟೀ ಶರ್ಟು, ಶರ್ಟು ಹಾಕಿ ಇನ್‌ಶರ್ಟ್‌ ಮಾಡುವುದು ನನ್ನಿಷ್ಟದ ಸ್ಟೈಲ್‌. ಜೀನ್ಸ್‌ ಪ್ಯಾಂಟ್‌ಗಿಂತ ಸಿಗರೇಟು ಪ್ಯಾಂಟು ನನಗೆ ಹೆಚ್ಚು ಆರಾಮದಾಯಕ. ಅದರ ಮೇಲೆ ಯಾವುದೇ ಬಗೆಯ ಮೇಲುಡುಗೆ ಧರಿಸಿದರೂ ಹೊಂದುತ್ತದೆ. ಹಾಗಾಗಿ ಬಿಳಿ, ಕಪ್ಪು, ಮರೂನ್‌, ಕೆಂಪು ಮತ್ತು ನೀಲಿ ಬಣ್ಣದವುಗಳನ್ನು ಇಟ್ಟುಕೊಂಡಿದ್ದೇನೆ. ತೆಳುವಾದ ಬೆಲ್ಟ್‌ ಹಾಕಬೇಕು. ಬೆಲ್ಟ್‌ ಇರುವ ಚಪ್ಪಟೆ ಚಪ್ಪಲಿ ಧರಿಸಿದರೆ ಇನ್ನಷ್ಟು ಸ್ಟೈಲಿಶ್‌ ಆಗಿರುತ್ತದೆ. ಎತ್ತರದ ಹಿಮ್ಮಡಿಯ ಪಾದರಕ್ಷೆ ಇದಕ್ಕೆ ಅಷ್ಟೊಂದು ಹೊಂದಿಕೊಳ್ಳುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಹಿಮ್ಮಡಿಗಿಂತ ನಾಲ್ಕಿಂಚು ಮೇಲಕ್ಕಿದ್ದರೇ ಸಿಗರೇಟ್‌ ಪ್ಯಾಂಟ್‌ನ ಅಂದ ಗೊತ್ತಾಗುವುದು’ ಎಂದು ಹೇಳುತ್ತಾರೆ.

ಮೊದಲೇ ಹೇಳಿದಂತೆ ಹಲವು ಫ್ಯಾಬ್ರಿಕ್‌ಗಳಲ್ಲಿ ಸಿಗರೇಟ್‌ ಪ್ಯಾಂಟ್‌ ಲಭ್ಯ. ಕಾಟನ್‌ ಸಿಲ್ಕ್‌ ಮತ್ತು ಸ್ಯಾಟಿನ್‌ ಬಟ್ಟೆಯಲ್ಲಿ ಹೊಲಿಸಿಕೊಂಡರೆ ಕುರ್ತಾ ಮತ್ತು ಗೌನ್‌ಗಳಿಗೆ ಮಾತ್ರ ಸೂಕ್ತ ಎನಿಸುತ್ತದೆ. ಆನ್‌ಲೈನ್‌ನಲ್ಲಿ ಸಿಗರೇಟು ಪ್ಯಾಂಟುಗಳ ಬೆಲೆ ₹400ರಿಂದ ಆರಂಭವಾಗಿ ₹2000ದ ವರೆಗೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT