ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆಯೇ ಸರಿಯಾದ ದಾರಿ

Last Updated 29 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ಸಣ್ಣಪುಟ್ಟ ಸ್ವಾಮೀಜಿಗಳೊಂದಿಗೆ, ಹಿರಿಯರು, ಬೌದ್ಧಿಕ ಪ್ರೌಢಿಮೆ ಹೊಂದಿರುವ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಚರ್ಚೆ ನಡೆಸುವುದು ಸರಿಯಲ್ಲ’ (ಪ್ರ.ವಾ., ಡಿ.29) ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಈ ಸ್ವಾಮಿಜಿ ಯಾವ ಮಾನದಂಡದಿಂದ ‘ಹೊರಟ್ಟಿ ಪ್ರೌಢರು, ದಿಂಗಾಲೇಶ್ವರ ಸ್ವಾಮಿಗಳು ಪ್ರೌಢರಲ್ಲ’ ಎಂದು ಹೇಳುತ್ತಾರೆ? ‘ಜ್ಞಾನ ಎಂಬುದು ಯಾರ ಗುತ್ತಿಗೆಯೂ ಅಲ್ಲ. ಅದು ಕಷ್ಟಪಟ್ಟವನ ಸ್ವತ್ತು. ಅಲ್ಲದೆ ಕಷ್ಟಕರವಾದದ್ದೆ ಶ್ರೇಯಸ್ಕರ’ ಎಂದು ಡಿ.ವಿ.ಜಿ. ಹೇಳುತ್ತಾರೆ.

ಬಸವಣ್ಣನಂತೂ, ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎಂದಿದ್ದಾರೆ. ‘ಅರಿವಿಂಗೆ ಹಿರಿದು ಕಿರಿದುಂಟೇ?’ ಎನ್ನುತ್ತಾರೆ ಚನ್ನಬಸವಣ್ಣ, ಸಿದ್ದರಾಮ ಮುಂತಾದ ಶರಣರು. ‘ಪ್ರಾಯಂ ಕೂಸಾದಡೆ ಅಭಿಪ್ರಾಯಂ ಕೂಸಕ್ಕುಮೇ?, ಅಬ್ಧಿಗೆ ಮಿತಿಯುಂಟು, ಬುದ್ಧಿಗೆ ಮಿತಿಯಿಲ್ಲ’ ಎಂದೆಲ್ಲ ತಿಳಿದವರು ಹೇಳುತ್ತಾರೆ.

ಮೇಲು- ಕೀಳೆನ್ನದೆ, ಬಡವ-ಬಲ್ಲಿದ ಎನ್ನದೆ, ಜ್ಞಾನಿ-ಅಜ್ಞಾನಿ ಎನ್ನದೆ, ಹಿರಿಯ-ಕಿರಿಯ ಎನ್ನದೆ ಅನುಭವ ಮಂಟಪದಲ್ಲಿ ಎಲ್ಲಾ ವರ್ಗದವರು ಹಲವು ವಿಚಾರಗಳ ಬಗ್ಗೆ ಚರ್ಚಿಸಿ ವಚನಗಳನ್ನು ರಚಿಸುತ್ತಿದ್ದರು. ಅವರು ನಡೆ-ನುಡಿಯಲ್ಲಿ ನಿಖರವಾಗಿರುತ್ತಿದ್ದರು.

ವೀರಶೈವ-ಲಿಂಗಾಯಿತದ ಬಗ್ಗೆ ಮುಕ್ತ ಚರ್ಚೆಗಳು ನಡೆದು ಕೊನೆಗೆ ಒಂದು ತೀರ್ಮಾನಕ್ಕೆ ಬರುವುದು ಸೂಕ್ತ. ಈ ರೀತಿಯಲ್ಲಿ ಅನೇಕ ಚರ್ಚೆಗಳು ನಡೆದು, ಲಿಂಗಾಯತವೋ, ವೀರಶೈವವೋ ಯಾವುದಾದರೊಂದು ಧರ್ಮವಾಗಬಹುದು. ಹೀಗೆ ಮಾಡಿದರೆ ನಾವು ಅಣ್ಣ, ಅಲ್ಲಮ, ಅಕ್ಕ ಮುಂತಾದವರಿಗೆ ಗೌರವ ಕೊಟ್ಟಂತಾಗುತ್ತದೆ.

-ಕೆ.ಪಿ. ದೇವೇಂದ್ರಯ್ಯ, ಸಾಸ್ವೆಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT