ರುಚಿರುಚಿ ಮೀನಿನ ಸವಿರುಚಿ ಅಡುಗೆ

7

ರುಚಿರುಚಿ ಮೀನಿನ ಸವಿರುಚಿ ಅಡುಗೆ

Published:
Updated:
ರುಚಿರುಚಿ ಮೀನಿನ ಸವಿರುಚಿ ಅಡುಗೆ

ಮಾಂಸಾಹಾರಗಳಲ್ಲಿ ಅಗ್ಗವಾಗಿ ಸಿಗುವ ಮಾಂಸಾಹಾರದಲ್ಲಿ ಮೀನು ಒಂದು. ಮೀನಿನಿಂದ ಫ್ರೈ, ಸಾರು, ಮೀನಿನ ಮೊಟ್ಟೆಯ ಫ್ರೈ ಮುಂತಾದವುಗಳನ್ನು ತಯಾರಿಸುವ ವಿಧಾನವನ್ನು ಇಲ್ಲಿ ತಿಳಿಸಿದ್ದಾರೆ, ಎಂ.ಎಸ್. ಧರ್ಮೇಂದ್ರ ದೊಡ್ಡಮಗ್ಗೆ.

ಮೀನಿನ ಗ್ರೀನ್ ತವಾ ಫ್ರೈ 

ಬೇಕಾಗುವ ಸಾಮಗ್ರಿಗಳು:
ಮೀನು – 4ತುಂಡು, ಕಡಲೆಹಿಟ್ಟು – 1ಚಮಚ, ಹಸಿಮೆಣಸಿನಕಾಯಿ – 4, ಕೊತ್ತಂಬರಿ ಸ್ವಲ್ಪ, ಪುದೀನ ಸ್ವಲ್ಪ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಸ್ವಲ್ಪ, ಜೋಳದಹಿಟ್ಟು – ಸ್ವಲ್ಪ, ಹುಣಸೆಹುಳಿ  – 2ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಕೊತ್ತಂಬರಿ, ಪುದೀನ, ಹಸಿಮೆಣಸಿನಕಾಯಿ, ಪುದೀನ ರುಬ್ಬಿಟ್ಟುಕೊಳ್ಳಿ. ಚೆನ್ನಾಗಿ ತೊಳೆದ ಮೀನಿಗೆ ಕಡಲೆಹಿಟ್ಟು, ಜೋಳದಹಿಟ್ಟು, ರುಬ್ಬಿದ ಮಿಶ್ರಣ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪನ್ನು ಹಾಕಿ ನೀರನ್ನು ಬೆರಸದೆ ಹುಣಸೆಹುಳಿಯಲ್ಲಿ ಕಲಸಿ ಅರ್ಧ ಗಂಟೆ ರೆಫ್ರಿಜರೇಟರ್‌ನಲ್ಲಿಡಿ.

ತವಾಗೆ ಎಣ್ಣೆ ಹಾಕಿ ಖಾದ ನಂತರ ಮೀನನ್ನು ಇಟ್ಟು ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಎರಡು ಕಡೆ ತಿರುಗಿಸುತ್ತಾ ಚೆನ್ನಾಗಿ ಬೇಯಿಸಿ.

****

ಮೀನಿನ ಸಾರು

ಬೇಕಾಗುವ ಸಾಮಗ್ರಿಗಳು: ಮೀನು – 1ಕೆ.ಜಿ., ಶುಂಠಿ  – 2ಇಂಚು ಉದ್ದದ್ದು, ಬೆಳ್ಳುಳ್ಳಿ  – 1ಉಂಡೆ, ಕೊತ್ತಂಬರಿ ಸ್ವಲ್ಪ, ಕರಿಬೇವು  –2ಕಡ್ಡಿ, ಗರಂಮಸಾಲೆ – 2ಚಮಚ (ಮನೆಯಲ್ಲಿ ತಯಾರಿಸಿದ್ದು), ದನಿಯಾಪುಡಿ  – 3ಚಮಚ, ಖಾರದಪುಡಿ – 3ಚಮಚ, ಅರಿಶಿಣಪುಡಿ – ಸ್ವಲ್ಪ, ಈರುಳ್ಳಿ – 3, ಟೊಮೆಟೊ – 3, ಹುಣಸೆಹಣ್ಣು  – 1ಕಪ್, ಗಸೆಗಸೆ ಸ್ವಲ್ಪ, ಕಾಯಿ – 1/2ಹೋಳು, ಎಣ್ಣೆ, ನಂದಿನಿ ತುಪ್ಪ, ತುಪ್ಪ (ಡಾಲ್ಡಾ) ಸ್ವಲ್ಪ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಚೆನ್ನಾಗಿ ತೊಳೆದ ಮೀನಿಗೆ ಹುಣಸೆಹುಳಿ 1ಚಮಚ, ಅರಿಶಿಣಪುಡಿ ಮತ್ತು ಉಪ್ಪನ್ನು ಹಾಕಿ ಕಲಸಿ ಎರಡು ಗಂಟೆ ರೆಫ್ರಿಜರೇಟರ್‌ನಲ್ಲಿಡಿ. ದನಿಯಾಪುಡಿ, ಖಾರದಪುಡಿ, ಶುಂಠಿ, ಬೆಳ್ಳುಳ್ಳಿ, ಗರಂಮಸಾಲೆ, ಗಸೆಗಸೆ, ಅರಿಶಿಣಪುಡಿ, ಈರುಳ್ಳಿ, ಟೊಮೆಟೊ, ಕೊತ್ತಂಬರಿ, ಕಾಯಿಗಳನ್ನು ಸ್ವಲ್ಪ ತರಿತರಿ ಇರುವಂತೆ ರುಬ್ಬಿಟ್ಟುಕೊಳ್ಳಿ.

ತೆರೆದ ಪಾತ್ರೆಗೆ ನಂದಿನಿ ತುಪ್ಪ ಹಾಕಿ ಸಾಸಿವೆ ಸಿಡಿಸಿ ಕರಿಬೇವು ಹಾಕಿ ಫ್ರೈ ಮಾಡಿದ ಮೇಲೆ ಕಿವುಚಿದ ಹುಣುಸೆಹುಳಿ ಹಾಕಿ ಕುದಿಯುವಾಗ ರುಬ್ಬಿದ ಮಸಾಲೆ ಮತ್ತು ಉಪ್ಪು ಹಾಕಿ ಕುದಿಸಿ, ರುಚಿ ನೋಡಿ ಸಾರು ಚೆನ್ನಾಗಿ ಬೆಂದ ಮೇಲೆ ರೆಫ್ರಿಜರೇಟರ್‌ನಲ್ಲಿಟ್ಟಿದ್ದ ಮೀನು, ಎಣ್ಣೆ ಮತ್ತು ಡಾಲ್ಡಾ ಹಾಕಿ ಎರಡು ನಿಮಿಷ ಬೇಯಿಸಿ ಬೇಕೆಂದರೆ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಉದುರಿಸಿ.

***

ಮೀನಿನ ತತ್ತಿ ಫ್ರೈ

ಬೇಕಾಗುವ ಸಾಮಗ್ರಿಗಳು: 1 ಮೀನಿನಲ್ಲಿರುವ ತತ್ತಿ, ಶುಂಠಿ ಪೇಸ್ಟ್ ಸ್ವಲ್ಪ, ಕೊತ್ತಂಬರಿ ಸ್ವಲ್ಪ, ಗರಂಮಸಾಲೆ ಸ್ವಲ್ಪ, ದನಿಯಾಪುಡಿ ಸ್ವಲ್ಪ, ಖಾರದ ಪುಡಿ ಸ್ವಲ್ಪ, ಈರುಳ್ಳಿ – 2, ಟೊಮೆಟೊ – 1, ಹುಣಸೆಹಣ್ಣು  – ಸ್ವಲ್ಪ, ಕಾಯಿ ಸ್ವಲ್ಪ, ಕರಿಬೇವು  – 1ಕಡ್ಡಿ, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಹುಣಸೆಹುಳಿ, ದನಿಯಾಪುಡಿ, ಖಾರದಪುಡಿ, ಶುಂಠಿಪೇಸ್ಟ್, ಗರಂಮಸಾಲೆ, 1ಈರುಳ್ಳಿ, ಕೊತ್ತಂಬರಿ, ಕಾಯಿಗಳನ್ನು ರುಬ್ಬಿಟ್ಟುಕೊಳ್ಳಿ. ಈರುಳ್ಳಿ 1, ಟೊಮೆಟೊ, ಕೊತ್ತಂಬರಿ ಮತ್ತು ಕರಿಬೇವು ಕತ್ತರಿಸಿಟ್ಟುಕೊಳ್ಳಿ.

ತೆರೆದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಕರಿಬೇವು, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿದ ಮೇಲೆ ಟೊಮೆಟೊ, ಕೊತ್ತಂಬರಿ, ಉಪ್ಪು ಮತ್ತು ರುಬ್ಬಿದ ಮಿಶ್ರಣ ಹಾಕಿದ ನಂತರ ಚೆನ್ನಾಗಿ ತೊಳೆದು ಕತ್ತರಿಸಿದ ತತ್ತಿ ಹಾಕಿ ಬೇಯುವ ತನಕ ತಿರುಗಿಸುತ್ತಾ ಸಣ್ಣ ಉರಿಯಲ್ಲಿ ಬೇಯಿಸಿ.

***

ನಿಂಬೆ ತವಾ ಫ್ರೈ

ಬೇಕಾಗುವ ಸಾಮಗ್ರಿಗಳು: ಮೀನು – 1/2ಕೆ.ಜಿ., ನಿಂಬೆಹಣ್ಣು – 1, ಗರಂಮಸಾಲೆ, ಉಪ್ಪು, ಮೊಟ್ಟೆ – 1, ಕಡಲೆಹಿಟ್ಟು – ಸ್ವಲ್ಪ, ಖಾರದ ಪುಡಿ, ಎಣ್ಣೆ.

ತಯಾರಿಸುವ ವಿಧಾನ: ಮೊಟ್ಟೆ, ಖಾರದಪುಡಿ, ಗರಂಮಸಾಲೆ, ನಿಂಬೆಹುಳಿ, ಕಡಲೆಹಿಟ್ಟು, ಉಪ್ಪನ್ನು ಹಾಕಿ ಕಲೆಸಿ ಚೆನ್ನಾಗಿ ತೊಳೆದ ಮೀನಿಗೆ ಸವರಿ ಎರಡು ಗಂಟೆ ರೆಫ್ರಿಜರೇಟರ್‌ನಲ್ಲಿಡಿ. ತವಾಗೆ ಎಣ್ಣೆ ಹಾಕಿ ಖಾದ ನಂತರ ಮೀನನ್ನು ತವಾ ಮೇಲಿಟ್ಟು ಸಣ್ಣ ಉರಿಯಲ್ಲಿ ತಿರುಗಿಸುತ್ತಾ ಚೆನ್ನಾಗಿ ಬೇಯಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry