ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಶ್ರಮವೇ ಅಂಗಸೌಷ್ಠವದ ಗುಟ್ಟು

Last Updated 29 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಮೊದಲ ಚಿತ್ರ ‘ಸ್ಟೂಡೆಂಟ್‌ ಆಫ್‌ ದಿ ಇಯರ್‌’ನಲ್ಲಿಯೇ ಯುವತಿಯರ ಮನಕ್ಕೆ ಲಗ್ಗೆ ಇಟ್ಟವರು ನಟ ವರುಣ್‌ ಧವನ್‌. ಈ ಚಿತ್ರದಲ್ಲಿ ವರುಣ್‌ ಅವರ ಕಟ್ಟುಮಸ್ತಾದ ದೇಹವನ್ನೂ ಕಂಡು ಯುವಕರೂ ಹೊಟ್ಟೆ ಉರಿದುಕೊಂಡಿದ್ದರು. ಕಿರುನಗೆ, ಕಣ್ಣಿನಲ್ಲೇ ಮಾತನಾಡುವ ಹಾಗೂ ಆಕರ್ಷಕ ಅಂಗಸೌಷ್ಠವ ಹೊಂದಿರುವ ವರುಣ್‌ ಧವನ್ ಈಗ ಬಾಲಿವುಡ್‌ನ ಸುಂದರ ನಟರಲ್ಲಿ ಒಬ್ಬರು.

ಶಾಲಾದಿನಗಳಲ್ಲಿ ಕ್ರೀಡಾಪಟು ಆಗಿದ್ದ ವರುಣ್‌ ನಟನಾದ ಮೇಲೆ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಹೆಚ್ಚು ಸಮಯ ನೀಡುತ್ತಿದ್ದಾರೆ. ದೇಹದ ಶಕ್ತಿ ಹೆಚ್ಚಿಸಿಕೊಳ್ಳಲು ಕಠಿಣ ವ್ಯಾಯಾಮಗಳನ್ನು ಮಾಡುತ್ತಾರೆ. ವರುಣ್ ಉತ್ತಮ ಈಜುಪಟುವೂ ಹೌದು. ಈಗಲೂ ಸಮಯ ಸಿಕ್ಕಾಗಲೆಲ್ಲಾ ಈಜುಕೊಳದಲ್ಲಿ ಈಜುತ್ತಾರೆ.

‘ದೇಹ ಹಾಗೂ ಮನಸಿನ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆಗಳು ಪೂರಕ. ನಾನು ನಿತ್ಯವೂ ಈಜಾಡುತ್ತೇನೆ. ದಿನಕ್ಕೆ ಕನಿಷ್ಠ 15 ನಿಮಿಷವಾದರೂ ನಾನು ಈಜಲೇ ಬೇಕು. ಆಗಾಗ ಕ್ರಿಕೆಟ್‌ ಆಡುತ್ತೇನೆ. ಇಂಥ ಚಟುವಟಿಕೆಗಳು ದೇಹತೂಕದಲ್ಲಿ ಸಮತೋಲನ ಕಾಪಾಡಿಕೊಳ್ಳಲು ನೆರವಾಗುತ್ತವೆ’ ಎನ್ನುತ್ತಾರೆ ವರುಣ್.

ಪ್ರತಿಮುಂಜಾನೆ 15 ನಿಮಿಷಗಳ ಕಾಲ ಜಾಗಿಂಗ್, ಜಂಪಿಂಗ್‌ ಮಾಡುತ್ತಾರೆ. ಬಳಿಕ ಎದೆ ಹಾಗೂ ಭುಜಗಳ ವ್ಯಾಯಾಮ ಮಾಡುವುದು ಅವರ ಅಭ್ಯಾಸ. ಶಾರುಖ್‌ ಖಾನ್‌ ಹಾಗೂ ಅಜಯ್‌ ದೇವಗನ್‌ ಅವರ ತರಬೇತುದಾರರಾಗಿರುವ ಸೆಲಬ್ರಿಟಿ ತರಬೇತುದಾರ ಪ್ರಶಾಂತ್‌ ಸಾವಂತ್‌ ವರುಣ್‌ ಅವರಿಗೂ ತರಬೇತಿ ನೀಡುತ್ತಾರೆ. ವಾರದ ಐದು ದಿನಗಳಲ್ಲಿ ಪ್ರತಿದಿನ ಸುಮಾರು ಒಂದೂವರೆ ಗಂಟೆ ಮಾರ್ಷಲ್‌ ಆರ್ಟ್‌ ಹಾಗೂ ಹೆಚ್ಚು ಸಾಮರ್ಥ್ಯ ಬೇಡುವ ಕಾರ್ಡಿಯೊ ಮಾಡುತ್ತಾರೆ. ವ್ಯಾಯಾಮ ತಂತ್ರಗಳನ್ನು ಪ್ರತಿದಿನ ಬದಲಿಸುತ್ತಾರೆ.

ಆರೋಗ್ಯಕರ ಡಯೆಟ್‌ ವರುಣ್‌ ಅವರ ಆಯ್ಕೆ. ಉಪ್ಪು, ಸಕ್ಕರೆ ಹಾಗೂ ಎಣ್ಣೆ ಪದಾರ್ಥಗಳನ್ನು ಇವರು ಸೇವಿಸುವುದಿಲ್ಲ. ಕಾರ್ಬೊಹೈಡ್ರೇಟ್‌ ಹೆಚ್ಚು ಇರುವ ಆಹಾರ ಸೇವನೆ, ಪ್ರತಿ ಎರಡು– ಮೂರು ಗಂಟೆಗೊಮ್ಮೆ ತರಕಾರಿ, ಹಣ್ಣು ಹಾಗೂ ಜ್ಯೂಸ್‌ಗಳನ್ನು ಸೇವಿಸುವುದು ವರುಣ್‌ ಸುಂದರ ಶರೀರದ ಗುಟ್ಟು. ದಿನಕ್ಕೆ 6 ಲೀಟರ್‌ ನೀರು ಕುಡಿಯುತ್ತಾರೆ.

ಬೆಳಿಗ್ಗೆ ಉಪಾಹಾರಕ್ಕೆ ಆಮ್ಲೆಟ್, ಬ್ರೆಡ್‌ ಸ್ಯಾಂಡ್‌ವಿಚ್‌ ಹಾಗೂ ಗ್ರೀನ್‌ ಟೀ ಸೇವಿಸುತ್ತಾರೆ. ಮಧ್ಯಾಹ್ನ ಒಂದು ಬೌಲ್‌ ಬ್ರೌನ್‌ ರೈಸ್‌, ಮೂರು ಚಪಾತಿ, ಕೋಳಿ ಖಾದ್ಯ, ಬ್ರೊಕೊಲಿ ಹಾಗೂ ಹಸಿ ತರಕಾರಿಗಳನ್ನು ತಿನ್ನುತ್ತಾರೆ. ರಾತ್ರಿ ಮೀನಿನ ಖಾದ್ಯದ ಜೊತೆ ಚಪಾತಿ ಸೇವಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT